ವ್ಯಾಪ್ತಿಗೆ ಬಂದರೂ 'ಕ್ಷೇಮ'ವಿಲ್ಲ!

ಮಂಗಳೂರು: ರಾಜ್ಯದ ವಸತಿ ಶಾಲೆ ಶಿಕ್ಷಕರಿಗೆ ಕ್ಷೇಮ ನಿಧಿ ಸೌಲಭ್ಯವೇನೋ ಬಂತು, ಆದರೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್) ಹೊಸ ಮಾನದಂಡ ಸೃಷ್ಟಿಸಿ ಕ್ಷೇಮನಿಧಿಯ ಕ್ಷೇಮವನ್ನು ಕಿತ್ತುಕೊಂಡಿದೆ.
ಸರ್ಕಾರಿ ಶಾಲಾ ಶಿಕ್ಷಕರಂತೆ ಮೂಲವೇತನದ ಬದಲು ಅರ್ಧ ವೇತನದಿಂದ ತುಂಬಿಸಿಕೊಡುವ ಲೆಕ್ಕಾಚಾರ ಹಾಕಿದೆ. ಇದರಿಂದ ಇಪಿಎಫ್ (ಉದ್ಯೋಗಿಗಳ ಕ್ಷೇಮನಿಧಿ) ವಿಚಾರದಲ್ಲೂ ವಸತಿ ಶಾಲೆ ಶಿಕ್ಷಕರು ಅನ್ಯಾಯಕ್ಕೊಳಗಾಗಲಿದ್ದಾರೆ.
ಇದು ಕ್ರೈಸ್ ಲೆಕ್ಕಾಚಾರ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಸಿಕ ಮೂಲ ವೇತನ ರು. 17,650 ಮತ್ತು ಆಂಶಿಕ ವೆಚ್ಚ ಸೇರಿ ಒಟ್ಟು ರು. 22,525 ಸಿಗುತ್ತದೆ. ಅದರಲ್ಲಿ ಇಪಿಎಫ್ಗೆ ಶೇ.10 ಶಿಕ್ಷಕರು ಹಾಗೂ ಶೇ.10 ಮೊತ್ತವನ್ನು ಇಲಾಖೆ ಭರಿಸುತ್ತದೆ. ಒಟ್ಟು ಶೇ.20 ಮೊತ್ತ ಅಂದರೆ ತಲಾ ರು. 2,136 ಮೊತ್ತ ಇಪಿಎಫ್ಗೆ ಪಾವತಿಗೊಳ್ಳುತ್ತದೆ.
ಆದರೆ ವಸತಿ ಶಾಲೆ ಶಿಕ್ಷಕರಿಗೆ ಹೊಸ ಮಾನದಂಡ ಸೃಷ್ಟಿಸಲಾಗಿದೆ. ಕಾಯಂಗೊಂಡ ವಸತಿ ಶಾಲೆ ಶಿಕ್ಷಕರಿಗೆ ಮೂಲವೇತನ ಸರ್ಕಾರಿ ಶಾಲಾ ಶಿಕ್ಷಕರಷ್ಟೇ ಇದೆ. ಆದರೆ ಕ್ರೈಸ್ ಮೂಲವೇತನ ರು. 6,500ಕ್ಕೆ ಸೀಮಿತಗೊಳಿಸಿ, ಅದರ ಮೇಲೆ ಶೇ.12 ಮೊತ್ತ ಪಾವತಿಸುವುದಾಗಿ ಎಲ್ಲ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದೆ. ಅಂದರೆ ಕ್ರೈಸ್ ಕೇವಲ ರು. 780 ಪಾವತಿಸುವುದು, ಶಿಕ್ಷಕರು ಬೇಕಾದರೆ ಶೇ.12ಕ್ಕಿಂತ ಜಾಸ್ತಿ ಮೊತ್ತ ಇಪಿಎಫ್ಗೆ ಪಾವತಿಸಬಹುದು ಎಂದು ತಿಳಿಸಿದೆ.
ತಾರತಮ್ಯ ಯಾಕೆ?: ಸರ್ಕಾರಿ ಶಾಲಾ ಶಿಕ್ಷಕರು ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ಕರ್ತವ್ಯ ನಿರ್ವಹಿಸಿದರೆ, ವಸತಿ ಶಾಲೆ ಶಿಕ್ಷಕರು ಬೆಳಗ್ಗೆ 7.40ರಿಂದ ರಾತ್ರಿ 10.30ರ ವರೆಗೆ ಕೆಲಸ ಮಾಡಬೇಕು. ವಸತಿ ಶಾಲೆ ಶಿಕ್ಷಕರಿಗೆ ಪಾಠದ ಜತೆ ವಸತಿ ಶಾಲೆ ಜವಾಬ್ದಾರಿ. ಒಂದು ರೀತಿಯಲ್ಲಿ ಇವರದು ದಿನದ 24 ಗಂಟೆ ಕರ್ತವ್ಯ ನಿರ್ವಹಣೆ ಎಂದರೂ ತಪ್ಪಾಗದು.
ಸರ್ಕಾರಿ ನೌಕರರಿಗೆ ಇರುವಂತೆ ಇವರಿಗೂ ಸೌಲಭ್ಯ ನೀಡುವಂತೆ ನೇಮಕ ಸಂದರ್ಭ ಕರ್ನಾಟಕ ಸೇವಾ ನಿಯಮ ತಿಳಿಸುತ್ತದೆ. ಅದಕ್ಕೂ ತನಗೂ ಸಂಬಂಧ ಇಲ್ಲ ಎಂಬಂತೆ ಕ್ರೈಸ್ ವರ್ತಿಸುವುದು ವಸತಿ ಶಾಲೆ ಶಿಕ್ಷಕರು ಹೈರಾಣಾಗುವಂತೆ ಆಗಿದೆ. ಸರಾಸರಿ 21 ವರ್ಷ ಕರ್ತವ್ಯ ನಿರ್ವಹಿಸುವುದನ್ನು ಲೆಕ್ಕಹಾಕಿದರೂ ಸರ್ಕಾರಿ ಶಾಲಾ ಶಿಕ್ಷಕರು ನಿವೃತ್ತರಾಗುವಾಗ ರು. 20 ಲಕ್ಷ ಪಿಇಎಫ್ ಪಡೆದರೆ, ವಸತಿ ಶಾಲೆ ಶಿಕ್ಷಕರು ರು. 4 ಲಕ್ಷಕ್ಕೆ ತೃಪ್ತಿಪಟ್ಟುಕೊಳ್ಳಬೇಕು.
'ಮೂಲವೇತನವನ್ನು ಕಡಿಮೆ ತೋರಿಸಿ ತನ್ನ ಪಾಲಿನ ಮೊತ್ತ ಅತ್ಯಲ್ಪ ಪಾವತಿಸುವ ಕ್ರೈಸ್ ನಿರ್ಧಾರ ಸರಿಯಲ್ಲ. ಸರ್ಕಾರಿ ಶಾಲಾ ಶಿಕ್ಷಕರಂತೆ ಮೂಲವೇತನ ಮೇಲೆ ಪಿಇಎಫ್ ಪಾವತಿಗೆ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ನಾವು ಒಟ್ಟಾಗಿ ಕ್ರೈಸ್ಗೆ ಮನವಿ ಸಲ್ಲಿಸುತ್ತೇವೆ' ಎನ್ನುತ್ತಾರೆ ವಸತಿ ಶಿಕ್ಷಕರು.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


