ಪ್ರಧಾನ ಸುದ್ದಿ

ಕಾನೂನು ವಿವಿ ವ್ಯಾಪ್ತಿಗೆ ಬಾರದ ಕಾಲೇಜುಗಳು

ಕಾನೂನು ವಿವಿ ವ್ಯಾಪ್ತಿಗೆ ಬಾರದ ಕಾಲೇಜುಗಳು
Published On :

ಶಿವಮೊಗ್ಗ: ಕಾನೂನು ವಿಶ್ವವಿದ್ಯಾಲಯ ಆರಂಭವಾಗಿ 5 ವರ್ಷವಾಗುತ್ತಾ ಬಂದಿದ್ದರೂ ರಾಜ್ಯದ ಐದು ವಿಶ್ವವಿದ್ಯಾಲಯ ಕೇಂದ್ರ ಸ್ಥಾನದಲ್ಲಿರುವ ಕಾನೂನು ವಿಭಾಗಗಳನ್ನು ಸೇರ್ಪಡೆ ಮಾಡಲು ಮೀನಾಮೇಷ ಎಣಿಸುತ್ತಿವೆ.
ಕಾನೂನು ವಿವಿ ಕಾಯ್ದೆಯ 9ನೇ ಕಲಂ ಪ್ರಕಾರ ಕಾನೂನು ಪದವಿ ನೀಡುವ ಅರ್ಹತೆ ಹೊಂದಿರುವುದು ಕಾನೂನು ವಿವಿ ಮಾತ್ರ. ಆದರೆ ಗುಲ್ಬರ್ಗ ವಿವಿ, ಬೆಂಗಳೂರು ವಿವಿ, ಮೈಸೂರು ವಿವಿ, ಕರ್ನಾಟಕ ವಿವಿ, ಹಾಗೂ ಕುವೆಂಪು ವಿಶ್ವವಿದ್ಯಾಲಯಗಳು ಇನ್ನೂ ಸ್ನಾತಕೋತ್ತರ ಕಾನೂನು ಪದವಿ ನೀಡುತ್ತಿವೆ. ಬೆಂಗಳೂರು, ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯಗಳು ಇದರ ಜತೆಗೆ ಬ್ಯಾಚುಲರ್ ಪದವಿಗಳನ್ನೂ ನೀಡುತ್ತಿವೆ. ಕಾನೂನು ವಿಶ್ವವಿದ್ಯಾಲಯ ಕಾಯ್ದೆ ಪ್ರಕಾರ ಯಾರಾದರೂ ನ್ಯಾಯಾಲಯಕ್ಕೆ ಎಡೆತಾಕಿದರೆ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅನಗತ್ಯ ಸಂಕಷ್ಟಕ್ಕೆ ಬೀಳುತ್ತಾರೆ.
ಈಗಾಗಲೇ ರಾಜ್ಯದಲ್ಲಿರುವ 106 ಕಾಲೇಜುಗಳು ವಿವಿ ವ್ಯಾಪ್ತಿಗೆ ಬಂದಿವೆ. ಇದನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್, ಹಾಗೂ ಖಾಸಗಿ ವಿವಿಗಳಾದ ಅಲೆಯನ್ಸ್ ವಿವಿ, ಜೈನ್ ವಿವಿ ಹಾಗೂ ಕ್ರೈಸ್ಟ್ ವಿವಿಯ ಕಾನೂನು ಕಾಲೇಜುಗಳು ಮಾತ್ರ.
ಆದರೆ ವಿವಿ ಕಾನೂನು ಪ್ರಕಾರ ವಿವಿಯ ಕೇಂದ್ರ ಸ್ಥಾನದಲ್ಲಿರುವ ಕಾನೂನು ವಿಭಾಗಗಳೂ ಕಾನೂನು ವಿವಿ ವ್ಯಾಪ್ತಿಗೆ ಸೇರಬೇಕು. ಆದರೆ ಕನಿಷ್ಠ ಕಾನೂನು ವಿವಿ ಜತೆ ಒಪ್ಪಂದಕ್ಕೂ ಈ ಐದು ಸಾಂಪ್ರದಾಯಿಕ ವಿವಿಗಳು ಮುಂದಾಗಿಲ್ಲ.
ಸಂಯೋಜನೆ ಬೇಕು: ನ್ಯಾಷನಲ್ ಲಾ ಸ್ಕೂಲ್ 1989ರಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವಾಗಿ ಆರಂಭವಾಯಿತು. ಶಿಕ್ಷಣದ ಶ್ರೇಷ್ಠತೆಗಾಗಿ ಸ್ಥಾಪನೆಯಾಗಿರುವ ಈ ವಿವಿಯು ಬೇರೆ ಕಾಲೇಜುಗಳನ್ನು ಹತ್ತಿರ ಸೇರಿಸಿಕೊಳ್ಳುತ್ತಿಲ್ಲ.
ಈ ಬಗ್ಗೆ ಕಾನೂನು ವಿವಿ ಮಾಜಿ ಕುಲಪತಿ, ಶಿವಮೊಗ್ಗದ ರಾಷ್ಟ್ರೀಯ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ. ಜಿ.ಆರ್. ಜಗದೀಶ್‌ರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ನ್ಯಾಷನಲ್ ಲಾ ಸ್ಕೂಲ್ ಪ್ರತ್ಯೇಕ ವಿಭಾಗ ತೆರೆದು ಕಾಲೇಜುಗಳಿಗೆ ಸಂಯೋಜನೆ ನೀಡಿದರೆ ಕಾಲೇಜುಗಳ ಗುಣಮಟ್ಟ ಖಂಡಿತಾ ಸುಧಾರಿಸುತ್ತದೆ. ಕಾಲೇಜುಗಳು ಸ್ಪರ್ಧಾತ್ಮಕವಾಗಿ ಬೆಳೆಯುತ್ತವೆ. ಕಾನೂನು ವಿವಿಯೂ ಈ ಸ್ಪರ್ಧೆಯಲ್ಲಿ ಅನಿವಾರ್ಯವಾಗಿ ಪಾಲ್ಗೊಳ್ಳಬೇಕಾಗುತ್ತದೆ. ಈ ಬಗ್ಗೆ ಕಾನೂನು ಇಲಾಖೆ ಚಿಂತಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಏನಾಗಬೇಕು?    
- ಎಲ್ಲ ಶಿಕ್ಷಣಕ್ಕೂ ಪ್ರತ್ಯೇಕ ನಿರ್ದೇಶನಾಲಯವಿದೆ. ಆದರೆ ಕಾನೂನು ಶಿಕ್ಷಣಕ್ಕೆ ಮಾತ್ರ ಇಲ್ಲ. ಕಾನೂನು ಇಲಾಖೆಯೇ ಇದರ ದೇಖಾರೇಖಿ ನೋಡಿಕೊಳ್ಳುತ್ತಿದೆ. ಅವರಿಗೇ ಸಮಯವಿಲ್ಲದಷ್ಟು ಕೆಲಸವಿರುವಾಗ ಶಿಕ್ಷಣದತ್ತ ಗಮನ ಹರಿಸಲು ಹೇಗೆ ಸಾಧ್ಯ? ತಕ್ಷಣವೇ ಕಾನೂನು ಶಿಕ್ಷಣಕ್ಕೆ ಪ್ರತ್ಯೇಕ ನಿರ್ದೇಶನಾಲಯದ ಅಗತ್ಯವಿದೆ.
- ರಾಜ್ಯದ 19 ಕಾನೂನು ಕಾಲೇಜುಗಳು ಅನುದಾನಕ್ಕೊಳಪಟ್ಟು ಎರಡು ವರ್ಷವಾಗುತ್ತಾ ಬಂದಿದ್ದು, ಇನ್ನೂ ಅನುದಾನ ಬಿಡುಗಡೆ ಆಗಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು.
- ಜ್ಞಾನ ಆಯೋಗದ ಶಿಫಾರಸಿನಂತೆ 50 ಕಾಲೇಜುಗಳಿಗೆ ಒಂದು ವಿವಿಯಿರಬೇಕು. ಆದರೆ ರಾಜ್ಯದ ಎಲ್ಲೆಡೆ ಹಂಚಿಹೋಗಿರುವ 106 ಕಾಲೇಜುಗಳು ಒಂದೇ ವಿವಿ ವ್ಯಾಪ್ತಿಯಲ್ಲಿವೆ. ಕನಿಷ್ಠ ಎರಡು ಕಾನೂನು ವಿವಿ ಸ್ಥಾಪನೆ ಅಗತ್ಯವಿದೆ.

 ಹೊನ್ನಾಳಿ ಚಂದ್ರೇಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.