ರಾಜಧಾನಿಯಲ್ಲಿ ರೈತ ಶಕ್ತಿ ಪ್ರದರ್ಶನ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ಪ್ರತಿಭಟನಾಕಾರರಿಂದ ನಗರ ರೇಲ್ವೆ ನಿಲ್ದಾಣ, ಮೆಜೆಸ್ಟಿಕ್, ಶೇಷಾದ್ರಿ ರಸ್ತೆ, ಸ್ವಾತಂತ್ರ್ಯ ಉದ್ಯಾನ ಸೋಮವಾರ ತುಂಬಿ ತುಳುಕಿದ್ದವು.
ವಿಧಾನಮಂಡಲ ಅಧಿವೇಶನ ವೇಳೆ ಸರ್ಕಾರದ ಗಮನ ಸೆಳೆದು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಗರದಲ್ಲಿ ರೈತ ಶಕ್ತಿ ಪ್ರದರ್ಶನ ನಡೆಸಿದವು.
'ರೈತರ ನಡಿಗೆ ವಿಧಾನಸೌಧ ಕಡೆಗೆ' ಘೋಷಣೆಯೊಂದಿಗೆ ಬೆಳಗ್ಗೆ ಸಾವಿರಾರು ರೈತರು ನಗರ ರೇಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ 'ವಚನ ಭ್ರಷ್ಟ'ರಾಗಿದ್ದಾರೆ ಎಂದು ಆರೋಪಿಸಿದರು.
ಟ್ರಾಫಿಕ್ ಜಾಮ್
ಸಾವಿರಾರು ರೈತರು ರೇಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವರೆಗೂ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಬೆಳಗ್ಗೆ 10.30ರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಮಾಗಡಿ ರಸ್ತೆ, ಮಲ್ಲೇಶ್ವರ, ಗೂಡ್ಸ್ ಶೆಡ್ ರಸ್ತೆಗಳಿಂದ ಬರುವ ವಾಹನ ಸವಾರರು ಪರದಾಡುವಂತಾಯಿತು. ಶೇಷಾದ್ರಿ ರಸ್ತೆ ಆನಂದರಾವ್ ಮೇಲ್ಸೇತುವೆಯಿಂದ ಕೆ.ಆರ್.ವೃತ್ತದವರೆಗೆ ದಟ್ಟಣೆ ಉಂಟಾಗಿತ್ತು. ಒಂದೆರಡು ಕಿ.ಮೀ ಚಲಿಸುವಷ್ಟರಲ್ಲಿ ವಾಹನ ಸವಾರರು, ಬಿಎಂಟಿಸಿ ಬಸ್ ಪ್ರಯಾಣಿಕರು ಪರದಾಡಿದರು.
ಮುತ್ತಿಗೆ ಯತ್ನ, ಬಂಧನ, ಅಸ್ವಸ್ಥ
ವಿಧಾನಸೌಧ ಸುತ್ತಮುತ್ತ ಪ್ರತಿಬಂಧಕಾಜ್ಞೆ ಜಾರಿ ಇದ್ದರೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ 500ಕ್ಕೂ ಅಧಿಕ ರೈತರನ್ನು ಪೊಲೀಸರು ಬಂಧಿಸಿ ಕೋರಮಂಗಲ ಕೆಎಸ್‌ಆರ್‌ಪಿ ಮೈದಾನಕ್ಕೆ ಕರೆದೊಯ್ದಿದ್ದರು. ಈ ವೇಳೆ ಮೂವರು ರೈತರು ಅಸ್ವಸ್ಥರಾಗಿ ಬಿದ್ದರು. ಇವರಿಗೆ ಸ್ಥಳದಲ್ಲಿದ್ದ ಆ್ಯಂಬುಲೆನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿ ಸಂಜೆ ಬಿಡುಗಡೆ ಮಾಡಲಾಯಿತು.
ತಪ್ಪಿದ ಅನಾಹುತ
ಪ್ರತಿಭಟನಾಕಾರರನ್ನು ಕರೆದೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮಾಧ್ಯಮಗಳ ಛಾಯಾಚಿತ್ರಗಾಹಕರು ಹಾಗೂ ಪತ್ರಕರ್ತರತ್ತ ಏಕಾಏಕಿ ಹಿಂಬದಿ ಚಲಿಸಿತು. ಆದರೆ, ಪಕ್ಕದಲ್ಲೇ ನಿಂತಿದ್ದ ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದು ನಿಂತಿತು. ಜೀಪ್ ಇಲ್ಲದಿದ್ದರೆ ಅನಾಹುತ ಸಂಭವಿಸುತ್ತಿತ್ತು.
ಒತ್ತಾಯಗಳು
- ರೈತ ಸಂಘದ ಪ್ರತಿನಿಧಿಗಳನ್ನು ಒಳಗೊಂಡಿರುವ ಕೃಷಿ ಬೆಲೆ ಆಯೋಗ ಶೀಘ್ರ ರಚನೆ.
- ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಬಿಡುಗಡೆ
- ಸಮಗ್ರ ನೀರಾವರಿ ಯೋಜನೆ ಜಾರಿ, ಕಳಸ ಬಂಡೂರಿ, ಎತ್ತಿನ ಹೊಳೆ ಕೈ ಬಿಟ್ಟು ಪರಮಶಿವಯ್ಯ ವರದಿ ಜಾರಿ ಮಾಡಬೇಕು.
-ಬೆಂಗಳೂರಿನಲ್ಲಿ ಉಪಯೋಗಿಸಿ ಹೊರಬಿಡುವ ಸುಮಾರು 10ರಿಂದ 12 ಟಿಎಂಸಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಯ 300ಕ್ಕೂ ಅಧಿಕ ಕೆರೆಗಳನ್ನು ತುಂಬಿಸಬೇಕು.
- ದಾವಣಗೆರೆ, ಕೊಪ್ಪಳ, ಶಿವಮೊಗ್ಗ ಹಾಗೂ ರಾಜ್ಯದ ಅನೇಕ ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳ ಖರೀದಿಸಲಾಗಿದ್ದು ಹಣ ಪಾವತಿಸಬೇಕು.
-ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ
- ರೈತರು ಕೆಲಸದ ವೇಳೆ ಮರಣ ಹೊಂದಿದರೆ 1 ಲಕ್ಷ ಪರಿಹಾರ
- ಜಾನುವಾರುಗಳ ಆಕಸ್ಮಿಕ ಮರಣಕ್ಕೆ 25 ಸಾವಿರ ಪರಿಹಾರ
-ಸಮಾನ ವಿದ್ಯುಚ್ಛಕ್ತಿ ನೀತಿ ಜಾರಿಯಾಗಬೇಕು. ಹಳ್ಳಿ, ಪಟ್ಟಣಗಳಿಗೆ ತಾರತಮ್ಯ ಇರಬಾರದು. ಪಂಪ್‌ಸೆಟ್‌ಗಳಿಗೆ ಕನಿಷ್ಠ 16 ತಾಸು 3 ಫೇಸ್ ಗುಣಮಟ್ಟದ ವಿದ್ಯುತ್ ಕೊಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


