ಈ ಹೆಗ್ಗಣಗಳಿಗೆ ಶವಗಳೇ ಬೇಕಂತೆ!
ಕನ್ನಡಪ್ರಭ ವಾರ್ತೆ, ಹಾಸನ, ಜೂ. 25
ಹಾಸನದಲ್ಲಿ 'ಹೆಗ್ಗಣಕ್ಕೆ ಚೆಲ್ಲಾಟ, ವೈದ್ಯರಿಗೆ ಪ್ರಾಣ ಸಂಕಟ' ಎಂಬ ಲೇಟೆಸ್ಟ್ ಗಾದೆ ಹುಟ್ಟಿಕೊಂಡಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಮಗುವಿನ ಬಲಗೈ ತಿಂದ 'ಹೆಗ್ಗಣ'ಗಳ ಆಟ ಆಸ್ಪತ್ರೆ ವೈದ್ಯಾಧಿಕಾರಿಗಳು, ಸಿಬ್ಬಂದಿಯನ್ನು ಪೀಕಲಾಟದಲ್ಲಿ ಸಿಲುಕಿಸಿದೆ. ಹೆಗ್ಗಣಗಳ ನಿರ್ನಾಮಕ್ಕೆ ಸಂಕಲ್ಪ ತೊಟ್ಟಿದ್ದ ಆಸ್ಪತ್ರೆ ಸಿಬ್ಬಂದಿ ವಿಷವಿಕ್ಕಿದ ಕೆಜಿಗಟ್ಟಲೆ ಕೇಕ್ ಹಾಗೂ ವಡೆಗಳನ್ನು ಇಟ್ಟರು. ಆದರೆ ಹೆಣದ ರುಚಿ ನೋಡಿದ ಈ ಹೆಗ್ಗಣಗಳು ಅವುಗಳನ್ನು ಮೂಸಿ ಕೂಡ ನೋಡಲಿಲ್ಲ. ಹೋಗಲಿ ಹಿಡಿಯೋಣ ಎಂದು ಬೋನ್‌ಗಳನ್ನು ತಂದಿಟ್ಟರೆ ಅದನ್ನೇ
ಹೊತ್ತೊಯ್ದು ಹುಬ್ಬೇರಿಸುವಂತೆ ಮಾಡಿವೆ.
ರಾತ್ರಿ ವೇಳೆ ಶವಾಗಾರ ಕಾಯುವ ಸಿಬ್ಬಂದಿ ಸ್ವಲ್ಪ ಆಚೀಚೆ ಹೋಗಿ ಬರುವುದರೊಳಗೆ ಮೃತದೇಹದ ಕೆಲ ಭಾಗಗಳು ಇವುಗಳಿಗೆ ಆಹಾರವಾಗುತ್ತವೆ. ಸೋಮವಾರ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ 2 ತಿಂಗಳ ಗಂಡು ಹಸುಳೆಯನ್ನು ಶವಾಗಾರದಲ್ಲಿಟ್ಟ ಸಂದರ್ಭದಲ್ಲಿ ಹೆಗ್ಗಣಗಳು ಬಲಗೈ ತಿಂದ ಪ್ರಕರಣದಿಂದ ಈ ವಿಷಯ ಬೆಳಕಿಗೆ ಬಂದಿದೆ.
ಸ್ಥಳಾಂತರಿಸಬೇಕು: ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಶಿವಶೈಲಂ ಅವರನ್ನು 'ಕನ್ನಡಪ್ರಭ' ಪ್ರಶ್ನಿಸಿದಾಗ, ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ವೈದಕೀಯ ಕಾಲೇಜಿನ ನಿರ್ದೇಶಕರು ಈ ಮರಿ ಹಂದಿಯಂತಿರುವ ಹೆಗ್ಗಣಗಳನ್ನು ಹಿಡಿಯಲು ಬೇಕಾದ ಪ್ರಯತ್ನವನ್ನೆಲ್ಲ ಮಾಡಲಾಗಿದೆ. ಶವದ ರುಚಿ ಕಂಡುಕೊಂಡಿರುವ ಅವುಗಳಿಗೆ ಬೇರೇನೂ ಬೇಡವಾಗಿದೆ. ಜತೆಗೆ ಶವಗಾರ ಹಳೆಕಟ್ಟಡದಲ್ಲಿದೆ. ಸಮೀಪವೇ ಒಳ ಚರಂಡಿ ಇದೆ. ಇದು ಈ ಬೃಹತ್ ಗಾತ್ರದ ಹೆಗ್ಗಣಗಳ ಸುರಕ್ಷಿತ ತಾಣವಾಗಿದೆ. ಹೀಗಾಗಿ ಶವಾಗಾರವನ್ನು ಸ್ಥಳಾಂತರಿಸಬೇಕಾಗಿದೆ ಎಂದಿದ್ದಾರೆ.
ಇದೇ ಮೊದಲಲ್ಲ: ಈ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಹೆಗ್ಗಣಗಳು ತಿಂದು ಹಾಕಿರುವುದು ಇದೇ ಮೊದಲಲ್ಲ. ಎರಡು ವರ್ಷಗಳಿಂದಲೂ ತಿನ್ನುತ್ತಲೇ ಇವೆ. 8 ತಿಂಗಳ ಹಿಂದೆ ಕಾರಾಗೃಹದಲ್ಲಿ ಮೃತಪಟ್ಟ ವಿಚಾರಣಾಧೀನ ಕೈದಿಯ ಶವವನ್ನೂ ಈ ಹೆಗ್ಗಣಗಳು ಊಹಿಸದಷ್ಟು ಮಟ್ಟಿಗೆ ತಿಂದಿದ್ದವು. ಇದನ್ನು ಕಂಡ ನ್ಯಾಯಾಧೀಶರು ಹೌಹಾರಿದ್ದಲ್ಲದೇ, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಇವುಗಳ ಕಾಟ ತಡೆಯಲು ಅವಿರತ ಶ್ರಮ ಹಾಕಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಕೂಡಲೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿವಶೈಲಂ ಅವರಿಗೆ ತಿಳಿಸಲಾಗಿದೆ ಎಂದು ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ರಾಚಪ್ಪ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಅಮಾನತು: ಮರಣೋತ್ತರ ಪರೀಕ್ಷೆಗಾಗಿ ತರಲಾಗಿದ್ದ ಎರಡು ತಿಂಗಳ ಮಗುವಿನ ಶವವನ್ನು ದುರಸ್ತಿಯಾಗದ ಶೀಥಲ ಶವಪೆಟ್ಟಿಗೆಯಲ್ಲಿ ಇಟ್ಟ ಆರೋಪದ ಮೇರೆಗೆ ಗ್ರೂಪ್ ಡಿ ನೌಕರ ಪರಮೇಶ್ ಎಂಬುವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸ್ವಯಂಪ್ರೇರಿತ ಪ್ರಕರಣ: ಹಾಸನಕ್ಕೆ ಬುಧವಾರ ಭೇಟಿ ನೀಡಿದ್ದ ಲೋಕಾಯುಕ್ತ ಡಾ. ಭಾಸ್ಕರ್‌ರಾವ್‌ರನ್ನು ಮಗುವಿನ ತಾಯಿ ಯೋಗವ್ಮು ಭೇಟಿ ಮಾಡಿ ನೋವು ತೋಡಿಕೊಂಡಿದ್ದಾರೆ. ಜತೆಗೆ, ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧಾರದ ಮೇಲೆ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಹೆಚ್ಚುವರಿ ಎಸ್ಪಿ ಜೈನಹಳ್ಳಿ ರಶ್ಮಿ ಅವರಿಗೆ ಆದೇಶಿಸಿದ್ದಾರೆ.
ತನಿಖೆ, ವರದಿಗೆ ಸೂಚನೆ: ಈ ಪ್ರಕರಣ ವಿಧಾನಸೌಧದಲ್ಲಿ ಚರ್ಚೆಯಾಗಿದ್ದರಿಂದ ತನಿಖೆ ನಡೆಸಿ 3 ದಿನಗಳಲ್ಲಿ ವರದಿ ನೀಡುವಂತೆ ಶಿವಶೈಲಂ ಆಸ್ಪತ್ರೆ ವೈದ್ಯಾಧಿಕಾರಿಗೆ ಸೂಚಿಸಿದ್ದಾರೆ.
ಅನುದಾನ ಇಲ್ಲ: ಆಸ್ಪತ್ರೆ ಪಕ್ಕದಲ್ಲೇ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಬೇಕಾದ ಉಪಕರಣ ಖರೀದಿಸಲು ಅನುದಾನ ನೀಡಿಲ್ಲ. ಹಿಂದೆ ಹಾಸನಕ್ಕೆ ಬಂದಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, 10 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಹೀಗೆ ಹೇಳಿ 10 ತಿಂಗಳಾದರೂ 10 ಕೂಡಾ ಬಂದಿಲ್ಲ.
-ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

