ಸುಪಾ; ಮಳೆಯಾಗದಿದ್ರೆ ಕತ್ತಲೆಯ ಕೂಪ!

ಕಾರವಾರ: ನಾಡಿನ ಪ್ರಮುಖ ಜಲಾಶಯಗಳಲ್ಲೊಂದಾದ ಸುಪಾ ಬರಿದಾಗಲು ಇನ್ನು 10 ಮೀಟರ್ ಮಾತ್ರ ಬಾಕಿ ಇದೆ. ನೀರು ಖಾಲಿಯಾಗಲು ಬೆರಳೆಣಿಕೆಯಷ್ಟು ದಿನಗಳು ಸಾಕು. ಸುಪಾ ಬರಿದಾಗುತ್ತಿದ್ದಂತೆ ಕೊಡಸಳ್ಳಿ, ಕದ್ರಾ ಜಲಾಶಯಗಳೂ ಬರಿದಾಗಿ ಕಾಳಿ ಕೊಳ್ಳದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ರಾಜ್ಯದ ಕತ್ತಲೆ ಇನ್ನಷ್ಟು ದೀರ್ಘವಾಗಲಿದೆ.
ನಾಡಿನ ಕತ್ತಲೆ ನೀಗಲು ಈಗಲೂ ಕಾಳಿ ಜಲ ವಿದ್ಯುತ್ ಯೋಜನೆಗಳಾದ ಸುಪಾ, ನಾಗಝರಿ, ಕದ್ರಾ ಹಾಗೂ ಕೊಡಸಳ್ಳಿಗಳಲ್ಲಿ ಹಗಲು-ರಾತ್ರಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಆದರೆ, ಮಳೆ ಇಲ್ಲದಿರುವುದರಿಂದ ಒಳ ಹರಿವಿನ ಪ್ರಮಾಣ ತುಂಬ ಕಡಿಮೆಯಾಗಿದೆ. ಹೀಗಾಗಿ, ಸುಪಾ, ಕದ್ರಾ, ಕೊಡಸಳ್ಳಿ ಜಲಾಶಯಗಳು ಬರಿದಾಗುತ್ತಿವೆ. ಬೆಳಕು ಇನ್ನಷ್ಟು ದೂರವಾಗಲಿದೆ.
ಪ್ರಮುಖ ಜಲಾಶಯವಾದ ಸುಪಾದ ಗರಿಷ್ಠ ಮಟ್ಟ 564 ಮೀಟರ್ ಇದೆ. ಅಣೆಕಟ್ಟೆಯ ಈಗಿನ ಮಟ್ಟ 526.0 ಮೀಟರ್. ನೀರಿನ ಮಟ್ಟ 515 ಮೀಟರ್ಗೆ ಬಂದಾಗ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಜಲಾಶಯದಲ್ಲಿ ಈಗ ಕೇವಲ 11 ಮೀಟರ್ನಷ್ಟು ನೀರನ್ನು ಮಾತ್ರ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು. ಒಟ್ಟು ಜಲಾಶಯ ಪ್ರಮಾಣದ ಶೇ. 19ರಷ್ಟು ಮಾತ್ರ ನೀರು ಈಗಿದೆ. ಜಲಾಶಯದಿಂದ 8021 ಕ್ಯುಸೆಕ್ ಹೊರಹರಿವು ಇದ್ದರೆ, ಒಳಹರಿವು ಕೇವಲ 503 ಕ್ಯುಸೆಕ್ ಇದೆ.
ಹೆಚ್ಚಿದ ಬೇಡಿಕೆ: ರಾಜ್ಯದಲ್ಲಿ ಈಗ ವಿದ್ಯುತ್ಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ಪೀಕ್ ಅವರ್ ಜನರೇಟರ್ಗಳಾದ ಸುಪಾ, ಕದ್ರಾ, ಕೊಡಸಳ್ಳಿಗಳಲ್ಲಿ ಹಗಲು-ರಾತ್ರಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಸುಪಾದಲ್ಲಿ ತಲಾ 50 ಮೆ.ವ್ಯಾ.ಗಳ ಎರಡು ವಿದ್ಯುತ್ ಘಟಕಗಳಿದ್ದು, ಪ್ರತಿದಿನ 80 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ನಾಗಝರಿ ಪವರ್ ಹೌಸ್ನಲ್ಲಿ ತಲಾ 135 ಮೆ.ವ್ಯಾ.ಗಳ 5 ಘಟಕಗಳು ಹಾಗೂ 150 ಮೆ.ವ್ಯಾ.ಗಳ 1 ಘಟಕ ಇದೆ. ನಾಗಝರಿಯಲ್ಲಿ ಪ್ರತಿದಿನ 1.296 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕದ್ರಾದಲ್ಲಿ ತಲಾ 50 ಮೆ.ವ್ಯಾ.ಗಳ ಎರಡು ವಿದ್ಯುತ್ ಘಟಕಗಳು ಹಾಗೂ ಕೊಡಸಳ್ಳಿಯಲ್ಲಿ ತಲಾ 40 ಮೆ.ವ್ಯಾ.ಗಳ ಮೂರು ವಿದ್ಯುತ್ ಘಟಕಗಳು ನಿರಂತರವಾಗಿ ವಿದ್ಯುತ್ ಉತ್ಪಾದಿಸುತ್ತಿವೆ.
ನಿಲ್ಲಲಿದೆ ಉತ್ಪಾದನೆ
ಒಂದೆಡೆ ವಿದ್ಯುತ್ಗೆ ಬೇಡಿಕೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಮಳೆಯಾಗದೆ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಜಲಾಶಯ ದಿನದಿಂದ ದಿನಕ್ಕೆ ಖಾಲಿಯಾಗುತ್ತಿದೆ. ಸುಪಾ ಜಲಾಶಯದಿಂದ ಹೊರ ಬಿಟ್ಟ ನೀರನ್ನು ಅವಲಂಬಿಸಿ ಕದ್ರಾ, ಕೊಡಸಳ್ಳಿಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಮಳೆ ಇಲ್ದಿದ್ರೆ ಕತ್ತಲು
ಮಳೆ ಬಾರದಿದ್ದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಸುಪಾ ಜಲಾಶಯ ಬರಿದಾಗಲಿದೆ. ಆಗ ಸುಪಾ, ನಾಗಝರಿ, ಕದ್ರಾ, ಕೊಡಸಳ್ಳಿಗಳಲ್ಲೂ ವಿದ್ಯುತ್ ಘಟಕಗಳು ಸದ್ದು ನಿಲ್ಲಿಸಲಿವೆ. ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಭಾರಿ ಇಳಿಮುಖವಾಗಿ ಕತ್ತಲೆ ಆವರಿಸಲಿದೆ. 2003-04ರಲ್ಲಿ ಮಾತ್ರ ಸುಪಾ ಜಲಾಶಯದ ನೀರಿನ ಪ್ರಮಾಣ ಈಗಿರುವುದಕ್ಕಿಂತ ಕಡಿಮೆ ಇತ್ತು. ಈ ಬಾರಿ ಮಳೆಯಾಗದೆ ಇರುವುದರಿಂದ ನೀರಿನ ಪ್ರಮಾಣ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಮಳೆ ಬಂದರೆ ಜಲ ವಿದ್ಯುತ್ ಘಟಕಗಳು ನಿರಾತಂಕವಾಗಿ ವಿದ್ಯುತ್ ಉತ್ಪಾದಿಸಬಹುದು. ಇಲ್ಲದಿದ್ದರೆ ನಾಡಿನ ಜನತೆಗೆ ಕತ್ತಲೆಯೇ ಗತಿ.
ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


