ಪ್ರಸಕ್ತ ವರ್ಷ ರಾಜ್ಯದಲ್ಲಿ 100 ಹೊಸ ಐಟಿಐ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಹೊಸದಾಗಿ ನೂರು ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ) ತೆರೆಯುವುದಾಗಿ ಕಾರ್ಮಿಕ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಹೇಳಿದರು.
ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ, ಕರ್ನಾಟಕ ವೃತ್ತಿ ತರಬೇತಿ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಶನಿವಾರ ನಗರದ ಸರ್ಕಾರಿ ಐಟಿಐ ಕೇಂದ್ರದಲ್ಲಿ ಏರ್ಪಡಿಸಿದ್ದ 'ಕರ್ನಾಟಕ, ಫ್ರಾನ್ಸ್ ಸಹಭಾಗಿತ್ವದಲ್ಲಿ ವಿದ್ಯುತ್ ಕೌಶಲ್ಯ' ತರಬೇತಿ ಹಾಗೂ 'ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಸಿಟಿ ಅಂಡ್ ಎನರ್ಜಿ ಮ್ಯಾನೇಜ್ಮೆಂಟ್'(ಐಇಇಎಂ) ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಿಂದೆ 151 ಐಟಿಐ ಸಂಸ್ಥೆಗಳಿದ್ದ ಕಾರಣ ಯುವಕರಿಗೆ ಅವಕಾಶ ಸಿಗುತ್ತಿರಲಿಲ್ಲ. ಹಾಗಾಗಿ ನಿರುದ್ಯೋಗಿ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹೊಸ ಸಂಸ್ಥೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 196 ಅನುದಾನಿತ, 1151 ಖಾಸಗಿ ಸೇರಿ ಒಟ್ಟು 1605 ಐಟಿಐ ಸಂಸ್ಥೆಗಳಿವೆ ಎಂದರು.
ಫ್ರಾನ್ಸ್ ಸರ್ಕಾರ, ಶ್ನೈಡರ್ ಎಲೆಕ್ಟ್ರಿಕ್ ಇಂಡಿಯಾ ಹಾಗೂ ರಾಜ್ಯ ಸರ್ಕಾರದ ತ್ರಿಪಕ್ಷೀಯ ಒಪ್ಪಂದದಡಿ ಐಇಇಎಂ ದೇಶದಲ್ಲೇ ಮೊದಲ ಬಾರಿಗೆ ಈ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುತ್ತಿದೆ. ಅದಕ್ಕಾಗಿ ಫ್ರಾನ್ಸ್ ಸರ್ಕಾರ ರು. 2.5 ಕೋಟಿ ಹಾಗೂ ರಾಜ್ಯ ಸರ್ಕಾರ ರು. 1.5 ಕೋಟಿ ಹಣ ನೀಡಲಿದೆ ಎಂದರು.
ಗಿರಿಜನರಿಗೆ ತರಬೇತಿ: ಗಿರಿಜನರ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗಿರಿಜನರಿಗಾಗಿ ಕೌಶಲ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.ಬಳ್ಳಾರಿ, ಮಂಗಳೂರು, ಉಡುಪಿ, ತೀರ್ಥಹಳ್ಳಿ, ಶಿವಮೊಗ್ಗ ಸೇರಿದಂತೆ 6 ಜಿಲ್ಲೆಗಳಲ್ಲಿನ ಗಿರಿಜನರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುವುದು. ಗೃಹ ಮತ್ತು ಕಾರ್ಮಿಕ ಇಲಾಖೆ ಹಾಗೂ ಟಾಟಾ ಸಮೂಹ ಸೇರಿ ತ್ರಿಪಕ್ಷೀಯ ಒಪ್ಪಂದದಂತೆ ಈ ಯೋಜನೆ ಹಮ್ಮಿಕೊಳ್ಳಲಾಗುವುದು. ಪ್ಲಂಬಿಂಗ್ ಕೆಲಸ ಕಲಿತವನಿಗೂ ಎಲೆಕ್ಟ್ರಿಷಿಯನ್, ಹೋಟೆಲ್ ಮ್ಯಾನೇಜ್ಮೆಂಟ್ ಮಾಡಿದವನಿಗೂ ಅಡುಗೆ ಕೆಲಸದಲ್ಲಿ ಪರಿಣತಿ ನೀಡಲಾಗುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶ್ನೈಡರ್ ಎಲೆಕ್ಟ್ರಿಕ್ ಇಂಡಿಯಾದ ಡಾ.ಶಾಲಿನಿ ಸರೀನ್, ಫ್ರಾಂಕೈಸ್ ಮಿಲಿಯೋನಿ, ಫ್ರಾನ್ಸ್ನ ಚಂದ್ರಿಕಾ ಕಸಲಿ, ಪಾಲಿಕೆ ಸದಸ್ಯರಾದ ಗಂಗಾಂಬಿಕೆ, ಉದಯಶಂಕರ್ ಉಪಸ್ಥಿತರಿದ್ದರು.
ಬಿಡದಿ ಬಳಿ ವಿದ್ಯುತ್
ಸ್ಥಾವರಕ್ಕೆ ಕೇಂದ್ರದ ನೆರವು
ಬೆಂಗಳೂರಿನ ವಿದ್ಯುತ್ ಸಮಸ್ಯೆ ನಿವಾರಿಸಲುಬಿಡದಿ ಬಳಿ ಅನಿಲ ಆಧಾರಿತ ವಿದ್ಯುತ್ ಘಟಕ ತೆರೆದಲ್ಲಿ, ಕೇಂದ್ರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ಕುಮಾರ್ ಹೇಳಿದರು. ಕಾರ್ಮಿಕ ಇಲಾಖೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಚೆನ್ನೈ, ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಪ್ರತ್ಯೇಕ ವಿದ್ಯುತ್ ಕೇಂದ್ರಗಳಿವೆ. ಅದೇ ರೀತಿ ಬೆಂಗಳೂರಿಗೂ ಒಂದು ಪ್ರತ್ಯೇಕ ವಿದ್ಯುತ್ ಉತ್ಪಾದನಾ ಕೇಂದ್ರ ತೆರೆಯುವುದು ನನ್ನ ಬಹುದಿನಗಳ ಕನಸಾಗಿದೆ. ಅದಕ್ಕೆ ಬಿಡದಿ ಬಳಿ ಸ್ಥಳ ನಿಗದಿಪಡಿಸಲಾಗಿದ್ದು, 1250 ಮೆ.ವ್ಯಾಟ್ನ ಅನಿಲ ವಿದ್ಯುತ್ ಸ್ಥಾವರ ಅಗತ್ಯವಿದೆ. ಈ ಹಿಂದೆಯೇ ದಾಮೋದರ್ ವ್ಯಾಲಿಯಿಂದ ಅನಿಲದ ಒಂದು ಪೈಪ್ಲೈನ್ ಕೂಡ ಇಲ್ಲಿಗೆ ಬಂದಿದೆ. ಹಾಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಿ ವಿದ್ಯುತ್ ಉತ್ಪಾದನಾ ಕೇಂದ್ರ ತೆರೆಯಬೇಕು. ವಿದ್ಯುತ್ ಉತ್ಪಾದನಾ ಕೇಂದ್ರ ತೆರೆದಲ್ಲಿ ನಗರದ ಪ್ರಮುಖ ಕಾರ್ಖಾನೆಗಳಿಗೆ, ಐಟಿ-ಬಿಟಿ ಕಂಪನಿಗಳಿಗೆ ಅಲ್ಲದೇ ಸಾರ್ವಜನಿಕರಿಗೂ ದಿನದ 24 ಗಂಟೆ ವಿದ್ಯುತ್ ಸಿಗಲಿದೆ ಎಂದರು.
ಮೂರು ವರ್ಷ ಕೌಶಲ ತರಬೇತಿ
ಕೌಶಲ ತರಬೇತಿ 3 ವರ್ಷ ನಡೆಯಲಿದೆ. ಫ್ರಾನ್ಸ್ ಅಧಿಕಾರಿ ಎರಿಕ್ ಡುಪಾಂಟ್ 3 ವರ್ಷಗಳ ಕಾಲ ಇಲ್ಲಿನ ಆಯ್ದ ಅಧ್ಯಾಪಕರಿಗೆ ತರಬೇತಿ ನೀಡುತ್ತಾರೆ. ಜುಲೈ 7ರಂದು ತರಬೇತಿ ಕಾರ್ಯಾಗಾರ ಆರಂಭವಾಗಲಿದೆ. ಮೊದಲ ತಂಡಕ್ಕೆ 15 ದಿನ 5 ಮಾಡ್ಯೂಲ್ಗಳಲ್ಲಿ ತರಬೇತಿ ನೀಡಲಾಗುತ್ತದೆ. ಸೌರವಿದ್ಯುತ್ ತಯಾರಿಸುವುದು, ಅದಕ್ಕೆ ಗ್ರಿಡ್ ಅಳವಡಿಸುವುದು, ವಿದ್ಯುತ್ ತಾಂತ್ರಿಕತೆ, ಸ್ವಯಂಚಾಲಿತ ವಿದ್ಯುತ್ ವ್ಯವಸ್ಥೆಗಳಲ್ಲಿ ನೈಪುಣ್ಯದ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ನವೀನ್ ರಾಜ್ ಸಿಂಗ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


