ರಾಜಕೀಯ ರಕ್ಷಣೆಗಾಗಿ ರಾಜ್ಯಸಭೆ ಪ್ರವೇಶ
ವಿಧಾನಪರಿಷತ್ತು: ಅಕ್ರಮ, ಅವ್ಯವಹಾರಗಳನ್ನು ಮುಚ್ಚಿಟ್ಟು, ರಾಜಕೀಯ ರಕ್ಷಣೆ ಪಡೆದುಕೊಳ್ಳುವವರು ವಿಧಾನಪರಿಷತ್ತು ಮತ್ತು ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಎಂ.ಸಿ. ನಾಣಯ್ಯ ಸಿಟ್ಟಿನಿಂದ ಹೇಳಿದ್ದಾರೆ.
ನಾಣಯ್ಯ ಹೇಳಿದ್ದಿಷ್ಟು: ಪರಿಷತ್ ಸದಸ್ಯತ್ವದ ಕೊನೆ ದಿನದ ಅಂಗವಾಗಿ ಮಾತನಾಡಿದ ಅವರು, ಇತ್ತೀಚಿಗೆ ಅಧಿವೇಶನಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿಲ್ಲ. ನಿಯಮ ಎನ್ನುವ ಕಾರಣಕ್ಕೆ ಒಂದಷ್ಟು ದಿನ ನಡೆಸಿ ಕೈತೊಳೆದುಕೊಳ್ಳಲಾಗುತ್ತಿದೆ. ಸದಸ್ಯರೂ ಅಂಥವರೇ.
ಈ ಸದನಕ್ಕೆ ಬರುವವರು ಯಾರು, ಚುನಾವಣೆಯಲ್ಲಿ ಅಷ್ಟೆಲ್ಲ ಹಣ ವೆಚ್ಚ ಮಾಡಿ ಏಕೆ ಬರಬೇಕು. ಅವರು ಬಂದು ಇಲ್ಲಿ ಮಾಡುವುದಕ್ಕೆ ಏನಿದೆ?
ಕೆಲವರಿಗೆ ವಿಧಾನಪರಿಷತ್, ರಾಜ್ಯಸಭಾ ಸದಸ್ಯ ಎನಿಸಿಕೊಳ್ಳಬೇಕು ಎನ್ನುವುದಷ್ಟೇ ಉದ್ದೇಶ. ರಾಜಕೀಯ ರಕ್ಷಣೆಗಾಗಿ, ಮಾಡಿದ ಅವ್ಯವಹಾರಗಳಿಂದ ತಪ್ಪಿಸಿಕೊಳ್ಳಲು ಸದನಕ್ಕೆ ಬರುತ್ತಿದ್ದಾರೆ. ಸದನ ಬಳಸಿಕೊಳ್ಳುತ್ತಿದ್ದಾರೆ. ಎಲ್ಲ ಪಕ್ಷಗಳು ಇಂದು ವಾಜಪೇಯಿ ಅವರನ್ನು ಮಾದರಿಯಾಗಿಟ್ಟುಕೊಳ್ಳಬೇಕು. ಅವರ ಸಂಸತ್ನಲ್ಲಿ ವಿಶ್ವಾಸ ಮತ ಯಾಚಿಸುವ ಮುನ್ನ ಒಂದು ಮತದ ಕೊರತೆ ಇರುವುದು ಗೊತ್ತಿತ್ತು. ಆದರೂ ಸದಸ್ಯರನ್ನು ಖರೀದಿಸುವ ಪ್ರಯತ್ನ ಮಾಡಲಿಲ್ಲ.
ಉಭಯ ಸದನಗಳು ಅಗತ್ಯ: ವಿಧಾನಪರಿಷತ್ತಿನ ಅಗತ್ಯ, ಅನಗತ್ಯದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು, ವಿಧಾನಸಭೆ ಸದಸ್ಯರು ಸಮಯ ಬಂದಾಗ ಪರಿಷತ್ತನ್ನು ತೆಗೆದು ಹಾಕುತ್ತೇವೆ ಎಂದಿದ್ದಾರೆ. ಅವರು ಯಾವ ವಿಚಾರ ಇಟ್ಟುಕೊಂಡು ಹೇಳಿದ್ದಾರೋ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲಿಯೂ ಕೆಳಮನೆ ಮತ್ತು ಮೇಲ್ಮನೆ ಎಂಬ ವಿಂಗಡಣೆ ಇಲ್ಲ. ಇಲ್ಲಿ ಏನಿದ್ದರೂ ಪ್ರತ್ಯಕ್ಷ ಮತ್ತು ಪರೋಕ್ಷ ಆಯ್ಕೆಯಾದವರು ಎಂದಷ್ಟೇ.
ಬ್ರಿಟೀಷ್ ಐತಿಹ್ಯ: ಹಾಗೆ ನೋಡಿದರೆ ರಾಜ್ಯ ವಿಧಾನಪರಿಷತ್ತಿಗೆ ವಿಶೇಷ ಇತಿಹಾಸವಿದೆ. 1881ರಲ್ಲಿ ಬ್ರಿಟಿಷರ ಆಳ್ವಿಕೆ ಇದ್ದಾಗ ಪ್ರಜಾಪ್ರತಿನಿಧಿ ಸಭೆ ಆರಂಭಿಸಲಾಯಿತು. 8 ಜಿಲ್ಲೆಗಳ ಪ್ರತಿನಿಧಿಗಳು ಸಭೆಯಲ್ಲಿ ಪ್ರಶ್ನೆ ಮಾಡುವ ಅಧಿಕಾರ ನೀಡಲಾಗಿತ್ತು. ಅದೇ ಈಗಿನ ಪರಿಷತ್ತು. ಸಂವಿಧಾನದ 79ನೇ ವಿಧಿ ಪ್ರಕಾರ ಹೇಗೆ ಸಂಸತ್ನಲ್ಲಿ ಉಭಯ ಸದನ ಮುಖ್ಯ ಆಗುತ್ತವೆಯೊ, ಅದೇ ರೀತಿ ರಾಜ್ಯಗಳಲ್ಲೂ. ಈ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ.
ಗಳಿಸಿದ್ದು ಹೋಯ್ತು
1965ರಲ್ಲಿ ವಕೀಲಿ ವೃತ್ತಿಯಿಂದ ಸುಮಾರು 21ಸಾವಿರವರೆಗೂ ಗಳಿಸಿದ್ದೆ. ಆದರೆ ಒತ್ತಾಯದ ಮೇಲೆ ಚುನಾಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿ ಕಳಕೊಂಡೆ.
ನಾ ಕಂಡ ಮುಖ್ಯಮಂತ್ರಿ
ನೆನಪು ಮಾಸುವ ಮುನ್ನ ಎಂಬ ಹೆಸರಿನಲ್ಲಿ 2004ರ ವರೆಗಿನ 11 ಮುಖ್ಯಮಂತ್ರಿಗಳ ಬಗ್ಗೆ ಅನುಭವ ಮತ್ತು ವಿಶ್ಲೇಷಣೆ ಮಾಡಿದ್ದೇನೆ. ಆ ಪುಸ್ತಕ ಈಗಾಗಲೇ ಬಿಡುಗಡೆ ಆಗಿದೆ. ಅದೇ ರೀತಿ ಇನ್ನುಳಿದ ಮುಖ್ಯಮಂತ್ರಿಗಳ ಬಗ್ಗೆಯೂ ಬರೆಯಬೇಕಿದೆ ಎಂದು ನಾಣಯ್ಯ ಸದನಕ್ಕೆ ತಿಳಿಸಿದರು. ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಅಲ್ಲದೆ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯನ್ನೂ ಪುಸ್ತಕಕ್ಕೆ ಸೇರಿಸಬೇಕಿದೆ. ಹೀಗಾಗಿ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು.
ಹಿಂಬಾಗಿಲ ಪ್ರವೇಶ ಎಂಬ ಮೂದಲಿಕೆ ಬೇಡ
ಪರಿಷತ್ತು ಎಂದರೆ ಹಿರಿಯರು, ವಿವಿಧ ಕ್ಷೇತ್ರಗಳ ತಜ್ಞರು, ಚಿಂತಕರು, ಬುದ್ಧಿ ಜೀವಿಗಳು ಹಾಗೂ ಅನುಭವಿಗಳ ಸದನ. ವಿಧಾನಸಭೆಯಲ್ಲಿ ಅವಸರದಲ್ಲಿ ಮಾಡಿ ವಿಧೆಯಕಗಳ ಬಗ್ಗೆ ಚರ್ಚಿಸಿ ಸೂಕ್ತ ನೀತಿ ರೂಪಿಸುವ ಮನೆ. ಆದ್ದರಿಂದ ಪರಿಷತ್ತಿಗೆ ಆಯ್ಕೆಯಾದವನ್ನು ಹಿಂಬಾಗಿಲಿನಿಂದ ಬಂದವರು ಎಂದು ಹೀಯಾಳಿಸುವುದು ಬೇಡ ಎಂದು ನಾಣಯ್ಯ ವಿನಂತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

