ಪ್ರಧಾನ ಸುದ್ದಿ

ಸುದೀರ್ಘ ಚರ್ಚೆಗೆ ನಿರ್ಧಾರ ಕಸಬ್ ನಿಯಂತ್ರಣ

Published On :

ವಿಧಾನಸಭೆ: ಬೆಂಗಳೂರು ನಗರದ ಕಸ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದ್ದು, ಈ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆ ನಡೆದ ನಂತರವೇ ಉತ್ತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಸ ಸಮಸ್ಯೆ ಬಗ್ಗೆ ಕಾಂಗ್ರೆಸ್‌ನ ಹ್ಯಾರಿಸ್ ಅವರು ಅರ್ಧಗಂಟೆ ಚರ್ಚೆಗೆ ಅವಕಾಶ ಕೇಳಿದ್ದರು. ವಿಷಯ ಪ್ರಸ್ತಾಪಿಸಿದ ಹ್ಯಾರಿಸ್, ಕಸ ನಿರ್ವಹಣೆಯನ್ನು ಒಂದು ಉದ್ಯಮವಾಗಿ ಪರಿಗಣಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಾಧ್ಯ. ಜತೆಗೆ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಕ್ರಮ ಕೈಗೊಳ್ಳಿ: ಕಸ ವಿಲೇವಾರಿ ಮಾಡುವುದಕ್ಕೆ ಸರ್ಕಾರ ಬಿಬಿಎಂಪಿಗೆ ತುರ್ತು ಜಾಗಕೊಡಬೇಕು. ಮಾತ್ರವಲ್ಲ ಗಾಯತ್ರಿ ಶ್ರೀನಿವಾಸ್ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಸಂಸ್ಥೆ ಬಿಬಿಎಂಪಿ ನೀಡಿದ ಜಾಗವನ್ನು ಅಕ್ರಮವಾಗಿ ಅಡವಿಟ್ಟು ಸಾಲ ಪಡೆದಿದೆ. 2004ರಲ್ಲೇ ಕಾರ್ಯಾರಂಭ ಮಾಡಿದ ಈ ಸಂಸ್ಥೆ ವಿರುದ್ಧ ಹಲವು ಆರೋಪಗಳಿವೆ ಎಂದು ಬಿಜೆಪಿಯ ಅರವಿಂದ ಲಿಂಬಾವಳಿ ಆರೋಪಿಸಿದರು.
ಕಸದ ಸಮಸ್ಯೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಉಳಿದ ಮಹಾನಗರ ಹಾಗೂ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ಇದೆ. ಎಲ್ಲ ಶಾಸಕರು ಮಾತನಾಡಲು ಇಚ್ಛೆ ತೋರಿದ್ದಾರೆ. ಹೀಗಾಗಿ ಇಲಾಖೆ ಚರ್ಚೆ ಸಂದರ್ಭದಲ್ಲಿ ಮತ್ತೆ ಮಾತಾಡೋಣ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಆಗ ಸುದೀರ್ಘವಾಗಿ ಚರ್ಚಿಸೋಣ. ನೀವು ಏನು ಮಾಡಿದ್ದೀರಿ, ನಾವು ಏನು ಮಾಡಿದ್ದೇವೆ ಎಂಬುದನ್ನು ಹೇಳುತ್ತೇನೆ. ನಿಮಗೆ ಹೊಳೆದ ಸಲಹೆಗಳನ್ನೆಲ್ಲ ನೀಡಿ ಎಂದು ಚರ್ಚೆಗೆ ತೆರೆ ಎಳೆದರು.

-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್
ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ಅರ್ಧಗಂಟೆಯಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ. ಈ ಬಗ್ಗೆ ಕನಿಷ್ಠ 3ರಿಂದ 4 ಗಂಟೆ ಚರ್ಚೆಯಾಗಬೇಕು. 2004ರಿಂದ 2014ರ ವರೆಗಿನ ಕರ್ಮಕಾಂಡದ ಬಗ್ಗೆ ಅರ್ಧಗಂಟೆಯಲ್ಲಿ ಬೆಳಕು ಚೆಲ್ಲುವುದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಅಧಿಕಾರಕ್ಕೆ ಬಂದರೆ 6 ತಿಂಗಳಲ್ಲಿ ಕಸದ ಸಮಸ್ಯೆಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಆ ಬಗ್ಗೆಯೂ ಚರ್ಚೆಯಾಗಬೇಕು.

- ಅರವಿಂದ ಲಿಂಬಾವಳಿ, ಬಿಜೆಪಿ
ಮಂಡೂರು ನನ್ನ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. 2006ರಲ್ಲಿ ಇಲ್ಲಿ ಕಸ ಹಾಕುವುದಕ್ಕೆ ಲ್ಯಾಂಡ್ ಫಿಲ್ಲಿಂಗ್ ಕಾರ್ಯ ಆರಂಭಿಸಲಾಯಿತು. ಇಲ್ಲಿಯವರೆಗೆ 25 ಸಾವಿರ ಲಕ್ಷ ಟನ್ ಕಸ ಸಂಗ್ರಹಣೆಯಾಗಿದೆ. ಹಸಿ ಕಸದ ಕೊಳೆ ನೀರು ಸುತ್ತಲಿನ ಕೆರೆಗಳಿಗೆ ಸೇರಿ ಅಂತರ್ಜಲ ಕಲುಷಿತವಾಗಿದೆ. ದನಕರುಗಳು ಕೂಡಾ ಇಲ್ಲಿಯ ನೀರು ಕುಡಿಯುತ್ತಿಲ್ಲ. ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾದರೆ ಜನ ಏನು ಮಾಡಬೇಕು? ಇನ್ನು 6 ತಿಂಗಳು ನಂತರ ಮಂಡೂರಿನಲ್ಲಿ ಕಸ ಹಾಕುವುದನ್ನು ನಿಲ್ಲಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ ಪರ್ಯಾಯ ಸ್ಥಳಗಳಲ್ಲಿ ಜಾಗ ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆಯೇ? ಈಗಾಗಲೇ ಸಂಗ್ರಹವಾಗಿರುವ 25 ಸಾವಿರ ಲಕ್ಷ ಟನ್ ಕಸವನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ 7ರಿಂದ 15 ವರ್ಷ ಬೇಕು. ಇದೆಲ್ಲದರ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ.

- ಡಾ. ಅಶ್ವತ್ಥನಾರಾಯಣ, ಬಿಜೆಪಿ
ಕಸ ವಿಲೇವಾರಿ ಬಗ್ಗೆ ಪ್ರತ್ಯೇಕ ನೀತಿ ರೂಪಿಸಬೇಕಿದೆ. ಸ್ವಚ್ಛತೆ, ಸಾಗಣೆ ಮತ್ತು ವಿಲೇ ಈ ಮೂರು ವಿಚಾರವನ್ನು ಇದುವರೆಗೆ ಸಮಗ್ರವಾಗಿ ಅನುಷ್ಠಾನ ಮಾಡಿಲ್ಲ. ಲ್ಯಾಂಡ್ ಫಿಲ್ಲಿಂಗ್‌ನ್ನು ವೈಜ್ಞಾನಿಕವಾಗಿ ಮಾಡಿಲ್ಲ. ಇಲ್ಲೆಲ್ಲ ಆಗಿರುವ ಲೋಪಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.