ನೈಟ್ಲೈಫ್ ಸಂಕಟ ಕೇಳೋರ್ಯಾರು?

ಹೊಟೇಲ್ನವ್ರಿಗೆ ದುಃಖ, ಬಾರ್ನವರಿಗೆ ಸುಖ
ಬೆಂಗಳೂರು: ನೈಟ್ಲೈಫ್ ಸಾಮಾನ್ಯ ಜನರ ಕೈಗೆಟುಕುತ್ತಿಲ್ಲ!
ಹೌದು, ಹೈಟೆಕ್ ಮಂದಿಯ ಒತ್ತಾ ಯಕ್ಕೆ ಮಣಿದು ನಗರದಲ್ಲಿ ಸರ್ಕಾರ ಮಧ್ಯರಾತ್ರಿ 1ರವರೆಗೆ ನೈಟ್ಲೈಫ್ ಜಾರಿಗೊಳಿಸಿ ಮೂರು ದಿನ ಕಳೆದಿದೆ. ಆದರೆ, ಸಾಮಾನ್ಯ ಜನರಿಗೆ ಅಗತ್ಯವಾದ ದರ್ಶಿನಿಗಳು-ಹೊಟೇಲ್ಗಳು ಎಂದಿನಂತೆ ತಮ್ಮ ಕಾರ್ಯವನ್ನು ರಾತ್ರಿ 10.30ಕ್ಕೇ ಮುಗಿಸುತ್ತಿವೆ. ಆದರೆ, ತಾರಾ ಹೊಟೇಲ್ಗಳು, ಹೈಟೆಕ್ ಹೊಟೇಲ್ಗಳು, ಪಿಜ್ಜಾ ಮಳಿಗೆಗಳು ಈಗಾಗಲೇ ತಡರಾತ್ರಿವರೆಗೂ ಕಾರ್ಯನಿರ್ವಹಿಸುತ್ತಿದ್ದು ಕೆಲವೇ ಕೆಲವು ಹೊಟೇಲ್ಗಳು ಈ 'ನೈಟ್ಲೈಫ್' ಅನ್ನು ಅಳವಡಿಸಿಕೊಂಡಿವೆ. ಹೊಟೇಲ್-ರೆಸ್ಟೋರೆಂಟ್ಗಳ ಅವಧಿ ಮಾಲೀಕರಿಗೆ ಖುಷಿ ತಂದಿದ್ದರೂ ಮತ್ತೊಂದೆಡೆ ಸಂಕಟ ಎದುರಾಗಿದೆ. ನಗರದ ದರ್ಶಿನಿ, ಹೊಟೇಲ್, ಬಾರ್, ರೆಸ್ಟೋರೆಂಟ್ಗಳಲ್ಲಿ ಸಾಕಷ್ಟು ಕಾರ್ಮಿಕರ ಕೊರತೆ ಇದಕ್ಕೆ ಪ್ರಮುಖ ಕಾರಣ. ಹಗಲಿನಲ್ಲೇ ಕೆಲಸ ಮಾಡಲು ಕಾರ್ಮಿಕರ ಕೊರತೆ ಇದ್ದು, ಇನ್ನು ರಾತ್ರಿ ಕೆಲಸ ಮಾಡುವವರು ಸಿಗುವ ಬಗ್ಗೆ ಹೊಟೇಲ್ ಮಾಲೀಕರು ಶಂಕಿಸಿದ್ದಾರೆ. ಹೊಟೇಲ್, ಬಾರ್ ಅವಧಿ ವಿಸ್ತರಣೆ ಮಾಡಿದರೆ ಮತ್ತಷ್ಟು ಕಾರ್ಮಿಕರ ಕೊರತೆ ಎದುರಾಗಲಿದೆ ಎಂಬುದು ಹೊಟೇಲ್ ಮಾಲೀಕರಿಗೆ ಸಂತಸದ ನಡುವೆಯೂ ತಲೆನೋವಾಗಿ ಪರಿಣಿಸಿದೆ. ಬಾರ್, ರೆಸ್ಟೋರೆಂಟ್ ಮಾಲೀಕರಿಗೆ ಮಾತ್ರ ಇದರಿಂದ ಹೆಚ್ಚು ಉಪಯೋಗವಾಗಲಿದೆ.
ಸಣ್ಣಪುಟ್ಟ ಹೊಟೇಲ್ಗಳಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಅವಧಿ ವಿಸ್ತರಣೆ ಬಗ್ಗೆ ಇವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ದರ್ಶಿನಿ, ಹೊಟೇಲ್ಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿವರೆಗೆ ಕೆಲಸ ಮಾಡುವ ಕಾರ್ಮಿಕರು 9 ಗಂಟೆ ನಂತರ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಪರಿಸ್ಥಿತಿ ಹೀಗಿರುವಾಗ ಇನ್ನು ತಡರಾತ್ರಿವರೆಗೆ ಹೊಟೇಲ್ ನಡೆಸುವುದು ಹೇಗೆ ಎಂಬ ಚಿಂತೆ ಮಾಲೀಕರಲ್ಲಿದ್ದು. ಕಾರ್ಮಿಕರಿಗೆ ಸಂಬಳ ಹೆಚ್ಚಳ, ಪಾಳಿ ಬದಲು ಸೇರಿದಂತೆ ಹಲವು ಮಾರ್ಪಾಡು ಮಾಡಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಇದಕ್ಕೆ ಮಾಲೀಕರು ಇನ್ನೂ ಅಣಿಯಾಗಿಲ್ಲ. ಸರ್ಕಾರದ ಈ ಆದೇಶ ಸಾಮಾನ್ಯ ಹೊಟೇಲ್ಗಳಿಗೆ ಪ್ರಯೋಜನವಿಲ್ಲ. ಕೇವಲ ಮದ್ಯಪಾನಿಗಳಿಗಷ್ಟೇ ಉಪಯೋಗ ಎಂಬ ಆರೋಪ ಕೇಳಿಬರುತ್ತಿದೆ.
ಶೇ.50ರಷ್ಟು ಕೊರತೆ: ಬಿಬಿಎಂಪಿ ವ್ಯಾಪ್ತಿಯ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳು ಈಗಾಗಲೇ ಸುಮಾರು ಶೇ.50ರಷ್ಟು ಕಾರ್ಮಿಕರ ಕೊರತೆ ಎದುರಿಸುತ್ತಿವೆ.. ಸಸ್ಯಾಹಾರಿ ಹೊಟೇಲ್ಗಳಲ್ಲಿ ಬೆಳಗ್ಗೆ ಕೆಲಸಕ್ಕೆ ಬಂದವರು ರಾತ್ರಿ 9 ಗಂಟೆವರೆಗೆ ಕೆಲಸ ಮಾಡುವಲ್ಲಿ ಸುಸ್ತಾಗುತ್ತಾರೆ. ಆದರೆ, ಮಾಂಸಾಹಾರಿ ಹೊಟೇಲ್, ಬಾರ್, ಪಬ್ಗಳಲ್ಲಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಸದ್ಯ 2 ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಅದನ್ನು ಮೂರು ಪಾಳಿ ಮಾಡುವ ಸಾಧ್ಯತೆ ಇದೆ. ಇರುವ ಕಾರ್ಮಿಕರಿಂದಲೇ ಹೆಚ್ಚು ಕೆಲಸ ಮಾಡಿಸಿ, ಸಂಬಳ ಹೆಚ್ಚಿಸುವುದು ಇದಕ್ಕೆ ಪರಿಹಾರ ಎನ್ನುತ್ತಾರೆ ಬಿಬಿಎಂಪಿ ವ್ಯಾಪ್ತಿ ಹೊಟೇಲ್ ಮಾಲೀಕರ ಸಂಘದ ಉಪಾಧ್ಯಕ್ಷ ರಾಜೀವ್ ಶೆಟ್ಟಿ. ತಡರಾತ್ರಿವರೆಗೆ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್ ತೆರೆಯುವುದು ಒಂದೆಡೆ ಅನುಕೂಲ. ಆದರೆ, ಇದರಿಂದ ಸಾಮಾನ್ಯ ಜನರಿಗೆ ಕಿಂಚಿತ್ತು ಪ್ರಯೋಜನವಿಲ್ಲ. ಮೇಲ್ವರ್ಗದವರಿಗೆ, ಕೆಲವು ಪ್ರವಾಸಿಗರಿಗೆ ಮಾತ್ರ ಅನುಕೂಲವಾಗಲಿದೆ. ಈ ಹಿಂದೆ ಜನರು ಸೆಕೆಂಡ್ ಶೋ ಸಿನಿಮಾ ನೋಡಲು ರಾತ್ರಿ ಹೋಗುತ್ತಿದ್ದರು. ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಆ ಪ್ರದರ್ಶನವನ್ನೇ ನಿಷೇಧಿಸಲಾಯಿತು. ಈಗ ರೆಸ್ಟೋರೆಂಟ್ ತೆರೆಯುವುದು ಕೂಡ ಅದಕ್ಕೆ ಹೊರತಲ್ಲ ಎನ್ನುತ್ತಾರೆ ರಾಜೀವ್.
ತೆರೆಯುವುದು ಸಂದೇಹ
ಸರ್ಕಾರದ 'ನೈಟ್ಲೈಫ್' ಆದೇಶದ ಪ್ರಕಾರ ಎಲ್ಲ ಪ್ರಕಾರ ಬಿಬಿಎಂಪಿಯಿಂದ ಅನುಮತಿಪಡೆದಿರುವ ದರ್ಶಿನಿಗಳಿಂದ ಹಿಡಿದು ಎಲ್ಲ ಹೊಟೇಲ್ಗಳು ಮಧ್ಯರಾತ್ರಿ 1 ಗಂಟೆವರೆಗೆ ತೆರೆಯಬಹುದು. ಆದರೆ, ಸಾಮಾನ್ಯ ಜನರು ರಾತ್ರಿ 11ರೊಳಗೆ ಮನೆ ಸೇರುವುದರಿಂದ ಸಸ್ಯಾಹಾರಿ ಹೊಟೇಲ್ಗಳಿಗೆ ಲಾಭವಿಲ್ಲ. ಇದೇನಿದ್ದರೂ ರಾತ್ರಿ ಪಾರ್ಟಿ ಮಾಡುವವರಿಗೆ ಅನ್ವಯವಾಗುತ್ತದೆ. ಇದರಿಂದ ಮಾಂಸಾಹಾರಿ ಹೊಟೇಲ್ಗಳಿಗೆ, ಪಬ್ಗಳಿಗೆ ಅನುಕೂಲವಾಗಲಿದೆ. ಹಾಗಾಗಿ ಸಸ್ಯಾಹಾರಿ ಹೊಟೇಲ್ಗಳು ರಾತ್ರಿ 11ರ ನಂತರ ಸೇವೆ ಸಲ್ಲಿಸುವುದೇ ಅನುಮಾನವಾಗಿದೆ. ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಸದಸ್ಯರು.
ಬಾರ್ ಮತ್ತು ರೆಸ್ಟೋರೆಂಟ್ಗೆ ಬರುವ ಗ್ರಾಹಕರನ್ನು ಅನಿವಾರ್ಯವಾಗಿ 11 ಗಂಟೆಗೇ ಕಳುಹಿಸಬೇಕು. ಇನ್ನು ಮಧ್ಯರಾತ್ರಿ 1ರವರೆಗೆ ಆದರೆ, ಅವರನ್ನು ಕಳುಹಿಸುವುದು ಕಷ್ಟ. ಆದರೆ, ಗಿರಾಕಿಗಳು ಹೆಚ್ಚುತ್ತಾರೆಂಬುದು ಸಂತಸ. ಕಾರ್ಮಿಕರ ತೊಂದರೆ ಇದೆ. 1 ಗಂಟೆಯವರೆಗೆ ರೆಸ್ಟೋರೆಂಟ್ ತೆರೆಯುವುದನ್ನು ಇನ್ನೂ ನಾವು ನಿರ್ಧರಿಸಿಲ್ಲ.
ಅಜಿತ್ ಶೆಟ್ಟಿ, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ
ಈಗಾಗಲೇ ನಗರದ ಸಾಕಷ್ಟು ಮಂದಿ ಯಾಂತ್ರಿಕ ಜೀವನ ನಡೆಸುತ್ತಿದ್ದು, ಈ ಯೋಜನೆ ಜಾರಿಗೆ ಬಂದರೆ ಅವರದ್ದು ಸಂಪೂರ್ಣ ಯಾಂತ್ರಿಕ ಜೀವನವಾಗುತ್ತದೆ. ವಾರಾಂತ್ಯದಲ್ಲಿ ಗರಿಷ್ಠ ಮಧ್ಯರಾತ್ರಿ 12 ಗಂಟೆಗೆ ಮನೆ ಸೇರುತ್ತಿದ್ದ ಸಾಕಷ್ಟು ಪುರುಷರು, ಇನ್ನು ಮುಂದೆ ಮುಂಜಾನೆ ಮನೆ ಸೇರುವ ಅನುಮಾನವಿದೆ. ಕುಟುಂಬ ಸದಸ್ಯರ ಆತಂಕಕ್ಕೆ ಇದು ಕಾರಣ.
- ದೀಪ್ತಿ ಮಣಿಕಂಠ, ಗೃಹಿಣಿ
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


