ಪ್ರಧಾನ ಸುದ್ದಿ

ಅತ್ತ ವೇಳಾಪಟ್ಟಿ ಪ್ರಕಟ ಇತ್ತ ನಾಯಕರ ಪರದಾಟ

Published On :

ಬೆಂಗಳೂರು: ಅತ್ತ ದಿಲ್ಲಿಯಲ್ಲಿ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಇತ್ತ ರಾಜ್ಯದ ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳಿಗೆ ನೀತಿ ಸಂಹಿತೆ ಬಿಸಿ ತಟ್ಟಿತು.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸೇರಿದಂತೆ ಕೆಲವು ನಾಯಕರು ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿದರೆ, ಇನ್ನು ಕೆಲವರು ಸರ್ಕಾರಿ ವಾಹನ ಪಕ್ಕಕ್ಕಿಟ್ಟು ಖಾಸಗಿ ವಾಹನ ಬಳಸಿದರು. ಕೆಲವೆಡೆ ಉದ್ಘಾಟನಾ ಕಾರ್ಯಕ್ರಮಗಳು 'ಕಾಂಗ್ರೆಸ್ ಕಾರ್ಯಕರ್ತರ ಸಭೆ'ಯಾದವು.
ಚಾಮರಾಜನಗರದಲ್ಲಿ ಕೇಂದ್ರೀಯ ವಿದ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಧ್ರುವನಾರಾಯಣ, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಶಾಸಕ ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮ ರದ್ದುಗೊಳಿಸಿ ಖಾಸಗಿ ಕಾರಿನಲ್ಲಿ ತೆರಳಿದರು. ಸೂಲಿಬೆಲೆ ಹೋಬಳಿಯ ಕಂಬಳೀಪುರ ಗ್ರಾಮದಲ್ಲಿ ರಾಜೀವ್ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಹತ್ತೇ ನಿಮಿಷದಲ್ಲಿ ಚಾಲನೆ ನೀಡಿ ಕಾರ್ಯಕ್ರಮ ಬರ್ಖಾಸ್ತುಗೊಳಿಸಿದ್ದಾರೆ.
ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಆರೋಗ್ಯ ಸಹಾಯಕರ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ ಹಾಗೂ ಸಿ.ಎಸ್. ಶಿವಳ್ಳಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ನಿರೂಪಕರನ್ನು ಅರ್ಧದಲ್ಲೇ ತಡೆದು ಅವಸರದಲ್ಲಿಯೇ ಭಾಷಣ ಮುಗಿಸಿದರು.
'ಕಾಂಗ್ರೆಸ್ ಕಾರ್ಯಕರ್ತರ ಸಭೆ': ಕುಣಿಗಲ್‌ನಲ್ಲಿ ಬೆಸ್ಕಾಂ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಚನ್ನಪಟ್ಟಣದಲ್ಲಿ ಬೆಸ್ಕಾಂ ಕಚೇರಿ ಉದ್ಘಾಟನೆ, ಅಥಣಿಯಲ್ಲಿ ಸಿಎಂ ಭಾಗವಹಿಸಬೇಕಿದ್ದ ಕಾರ್ಯಕ್ರಮಗಳನ್ನು ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ 'ಕಾಂಗ್ರೆಸ್ ಕಾರ್ಯಕರ್ತರ ಸಭೆ'ಯಾಗಿ ಮಾರ್ಪಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.