ಟಾಪ್ 9 ಸ್ಲೋಗನ್ಸ್
ರಾಜಕೀಯ ಭಾಷಣಗಳು, ರ್ಯಾಲಿಗಳು, ಪಕ್ಷದ ಬಾವುಟಗಳು, ಫ್ಲೆಕ್ಸ್ಗಳಷ್ಟೇ ಅಲ್ಲ, ಆಕರ್ಷಕ ಉದ್ಘೋಷಗಳೂ ಮತಬೇಟೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಬಿಜೆಪಿ 'ಅಬ್ ಕೀ ಬಾರ್, ಮೋದಿ ಸರ್ಕಾರ್' ಎಂಬ ಉದ್ಘೋಷದ ಮೂಲಕ ಈ ಬಾರಿ 'ಲೋಕ'ಸಮರಕ್ಕೆ ಮುನ್ನುಡಿ ಬರೆದಿದೆ. ದೇಶದ ರಾಜಕೀಯ ಇತಿಹಾಸದಲ್ಲಿ ಇಂತಹ ಎಷ್ಟೋ ಉದ್ಘೋಷಗಳು ಹುಟ್ಟಿ, ಕಣ್ಮರೆಯಾಗಿವೆ. ಕೆಲ ರಾಜಕೀಯ ಪಕ್ಷಗಳ ಹಣೆಬರಹವನ್ನೇ ಬದಲಾಯಿಸಿರುವ ಉದ್ಘೋಷಗಳ ವಿವರ ಇಲ್ಲಿದೆ.
1965
ಜೈ ಜವಾನ್, ಜೈ ಕಿಸಾನ್
'ಜೈ ಜವಾನ್, ಜೈ ಕಿಸಾನ್' ಎಂಬ ಸ್ಲೋಗನ್ ಬಳಸಿದ್ದು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಒಂದು ಕಡೆ ದೇಶದ ವೀರ ಯೋಧರನ್ನು ಹುರಿದುಂಬಿಸುವ, ಮತ್ತೊಂದೆಡೆ ರೈತರನ್ನು ಪ್ರೋತ್ಸಾಹಿಸುವ ಉದ್ಘೋಷವಿದು. ದೇಶ ರಕ್ಷಣೆಯ ಮಹಾನ್ ಕಾರ್ಯಕ್ಕೆ ಯೋಧರನ್ನು ಉತ್ತೇಜಿಸಿದರೆ, ರೈತರಿಗೆ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಿ, ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಎಂಬ ಸಂದೇಶವನ್ನು ಸಾರಿದರು. ಈ ಪರಿಣಾಮಕಾರಿ ಉದ್ಘೋಷವೇ 1967ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರಲು ಕಾರಣವಾಯಿತು.
1971
ಗರೀಬಿ ಹಟಾವೋ
ಇಂದಿರಾ ಗಾಂಧಿ ಅವರು ರೂಪಿಸಿದ 'ಗರೀಬಿ ಹಟಾವೋ' ಉದ್ಘೋಷ ಇಡೀ ದೇಶದಲ್ಲೇ ಪ್ರತಿಧ್ವನಿಸತೊಡಗಿತು. ಇದು ಜನರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಮತಗಳಿಂದ ಜಯಗಳಿಸಿತು. ನಂತರದ ದಿನಗಳಲ್ಲೂ ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಸೀತಾರಾಂ ಕೇಸರಿ ಮತ್ತಿತರ ನಾಯಕರುಗಳು ಚುನಾವಣಾ ರ್ಯಾಲಿಗಳಲ್ಲಿ ಇದೇ ಉದ್ಘೋಷವನ್ನು ಬಳಸತೊಡಗಿದರು.
1977
ಇಂದಿರಾ ಹಟಾವೋ, ದೇಶ್ ಬಚಾವೋ
ಲೋಕಸಭೆ ಚುನಾವಣೆ ವೇಳೆ ಜಯಪ್ರಕಾಶ್ ನಾರಾಯಣ ಅವರು ರಚಿಸಿದ ಸ್ಲೋಗನ್ ಇದು. ಇಂದಿರಾರನ್ನು ತೊಲಗಿಸಿ, ದೇಶವನ್ನು ಉಳಿಸಿ ಎಂಬ ಉದ್ಘೋಷವು ಜನರ ಮನೆಮನದಲ್ಲಿ ಹೊಕ್ಕಿದ್ದಷ್ಟೇ ಅಲ್ಲ, ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. ತುರ್ತು ಪರಿಸ್ಥಿತಿ ನಿರ್ಧಾರದಿಂದ ಆಕ್ರೋಶಗೊಂಡಿದ್ದ ಜನ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಿ, ಜನತಾ ಪಕ್ಷವನ್ನು ಅಧಿಕಾರದ ಗದ್ದುಗೆಗೇರಿಸಿದರು.
1978
ಏಕ್ ಶೇರ್ನಿ, ಸೌ ಲಂಗೂರ್, ಚಿಕ್ಕಮಗಳೂರ್, ಚಿಕ್ಕಮಗಳೂರ್
ಚಿಕ್ಕಮಗಳೂರಿನ ಉಪಚುನಾವಣೆಗೆ ಇಂದಿರಾಗಾಂಧಿ ಅವರು ಸ್ಪರ್ಧಿಸಿದ್ದ ಸಮಯವದು. ದೇವರಾಜ್ ಅರಸು ಅವರು ರಚಿಸಿದ 'ಏಕ್ ಶೇರ್ನಿ, ಸೌ ಲಂಗೂರ್, ಚಿಕ್ಕಮಗಳೂರ್, ಚಿಕ್ಕಮಗಳೂರ್' ಉದ್ಘೋಷದ ಪ್ರಭಾವ ಚುನಾವಣಾ ಫಲಿತಾಂಶದಲ್ಲಿ ಕಂಡುಬಂತು. ಭಾರಿ ಬಹುಮತಗಳಿಂದ ಗೆದ್ದ ಇಂದಿರಾರಿಗೆ 1980ರಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಇದುವೇ ತಳಪಾಯ ಹಾಕಿಕೊಟ್ಟಿತು.
1984
ಜಬ್ ತಕ್ ಸೂರಜ್ ಚಾಂದ್ ರಹೇಗಾ, ಇಂದಿರಾ ತೇರಾ ನಾಮ್ ರಹೇಗಾ
ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಚುನಾವಣೆಯಲ್ಲಿ 'ಎಲ್ಲಿಯವರೆಗೆ ಸೂರ್ಯ ಚಂದ್ರರಿರುತ್ತಾರೋ, ಅಲ್ಲಿಯವರೆಗೂ ಇಂದಿರಾ ಹೆಸರು ಇರುತ್ತದೆ' ಎಂಬ ಉದ್ಘೋಷ ದೇಶದೆಲ್ಲಡೆ ಹೊಸ ಹವಾ ಸೃಷ್ಟಿಸಿತು. ಜನರ ಅನುಕಂಪದ ಅಲೆ 1984ರಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಲು ನೆರವಾಯಿತು.
1996
ಬಾರಿ ಬಾರಿ ಸಬ್ಕೀ ಬಾರಿ, ಅಬ್ಕೀ ಬಾರಿ ಅಟಲ್ ಬಿಹಾರಿ
1996ರಲ್ಲಿ ಲಖನೌನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮೊಳಗಿದ ಈ ಉದ್ಘೋಷವು ಬಿಜೆಪಿಯನ್ನು 13 ದಿನಗಳ ಮಟ್ಟಿಗೆ ಅಧಿಕಾರದ ಗದ್ದುಗೆಯೇರಿಸಿತು. ಅಟಲ್ ಬಿಹಾರಿ ವಾಜಪೇಯಿ ಅವರ ಭ್ರಷ್ಟಾಚಾರ ಮುಕ್ತ ವ್ಯಕ್ತಿತ್ವ ಅವರನ್ನು ಒಬ್ಬ ಮಾದರಿ ಪ್ರಧಾನಿ ಅಭ್ಯರ್ಥಿಯನ್ನಾಗಿಸಿತು.
2004
ಇಂಡಿಯಾ ಶೈನಿಂಗ್
ಬಿಜೆಪಿ ಬಳಸಿದ 'ಇಂಡಿಯಾ ಶೈನಿಂಗ್' (ಭಾರತ ಪ್ರಕಾಶಿಸುತ್ತಿದೆ) ಉದ್ಘೋಷವು ಪಕ್ಷ ಯೋಚಿಸಿದಷ್ಟು ಯಶಸ್ಸು ಕಾಣಲಿಲ್ಲ. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಮತ್ತೆ ಅಧಿಕಾರ ಹಿಡಿಯಲು ವಿಫಲವಾಗುವುದಕ್ಕೆ ಈ ಉದ್ಘೋಷವೇ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿತ್ತು.
2004
ಕಾಂಗ್ರೆಸ್ ಕಾ ಹಾಥ್, ಆಮ್ ಆದ್ಮಿ ಕೆ ಸಾಥ್
2004ರಲ್ಲಿ ಬಿಜೆಪಿಯ 'ಇಂಡಿಯಾ ಶೈನಿಂಗ್' ಉದ್ಘೋಷ ವಿಫಲವಾದರೆ, ಕಾಂಗ್ರೆಸ್ನ 'ಕಾಂಗ್ರೆಸ್ ಕಾ ಹಾಥ್, ಆಮ್ ಆದ್ಮಿ ಕೆ ಸಾಥ್' ಸ್ಲೋಗನ್ ಜನಮಾನಸದಲ್ಲಿ ಹೊಸ ಅಲೆ ಎಬ್ಬಿಸಿತು. ಮತ್ತೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

