ಪ್ರಧಾನ ಸುದ್ದಿ

ಬಿಜೆಪಿ 20 ಅಭ್ಯರ್ಥಿಗಳ ಪಟ್ಟಿ

ಬಿಜೆಪಿ 20 ಅಭ್ಯರ್ಥಿಗಳ ಪಟ್ಟಿ
Published On :

-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಕರ್ನಾಟಕದ ನಾಲ್ವರು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ 20 ಹುರಿಯಾಳುಗಳ ಪಟ್ಟಿಯನ್ನು ಶನಿವಾರ ಅಖೈರುಗೊಳಿಸಿದೆ.
ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂದು ಇತ್ತೀಚೆಗೆ ಬಿಜೆಪಿಗೆ ಮರಳಿರುವ ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದಿರುವ ಹಿನ್ನೆಲೆ ಮತ್ತು ಬಿಎಸ್‌ಆರ್ ಕಾಂಗ್ರೆಸ್ ವಿಲೀನ ವಿಳಂಬದ ಹಿನ್ನೆಲೆಯಲ್ಲಿ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಮುಂದೂಡಲಾಗಿದೆ. ಮಾರ್ಚ್ 13ರಂದು ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ಕ್ಷೇತ್ರಗಳ ಹುರಿಯಾಳುಗಳನ್ನು ಅಖೈರುಗೊಳಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಚುನಾವಣಾ ಸಮಿತಿ ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದರು.
ಚಿಕ್ಕಮಗಳೂರು- ಉಡುಪಿ, ಮೈಸೂರು, ತುಮಕೂರು, ಬೀದರ್, ಕೋಲಾರ, ಮಂಡ್ಯ, ಹಾಸನ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ. ಚಿಕ್ಕಮಗಳೂರು- ಉಡುಪಿ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ, ತುಮಕೂರಿನಲ್ಲಿ ಜಿ.ಎಸ್. ಬಸವರಾಜು ಮತ್ತು ಬೀದರ್ ಕ್ಷೇತ್ರದಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಟಿಕೆಟ್ ನೀಡಬೇಕೆಂಬುದು ಯಡಿಯೂರಪ್ಪ ಒತ್ತಾಯ.
ಮೈಸೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಕಣಕ್ಕಿಳಿಯಬೇಕೆಂಬುದು ರಾಜ್ಯ ಬಿಜೆಪಿ ನಾಯಕರ ಒತ್ತಾಯ.

ಆದರೆ, ಬಿಎಸ್‌ವೈಗೆ ತಮ್ಮ ಆಪ್ತೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುವುದು ಇಷ್ಟವಿಲ್ಲ. ಬಿಜೆಪಿ ಅಂದಾಜಿಸಿರುವ ಪ್ರಕಾರ ಗೆಲ್ಲಲಾಗದ ಕ್ಷೇತ್ರಗಳಲ್ಲಿ ಅದೂ ಒಂದು. ಹೀಗಾಗಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲೇ ಶೋಭಾಗೆ ಟಿಕೆಟ್ ನೀಡಬೇಕೆಂಬ ಪಟ್ಟು ಯಡಿಯೂರಪ್ಪ ಅವರದ್ದು. ಮೈಸೂರಿನಲ್ಲಿ ಶೋಭಾ ಕರಂದ್ಲಾಜೆ ಹರಕೆಯ ಕುರಿಯಾಗುವುದು ಯಡಿಯೂರಪ್ಪ ಅವರಿಗೆ ಇಷ್ಟವಿಲ್ಲ. ಅದನ್ನು ವರಿಷ್ಠರಿಗೆ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆನ್ನಲಾಗಿದೆ. ಆದರೆ, ಆ ಕ್ಷೇತ್ರ ವ್ಯಾಪ್ತಿಯ ಶಾಸಕ ಸಿ.ಟಿ.ರವಿ ಅವರು ಶೋಭಾ ಸ್ಪರ್ಧಿಸುವುದಕ್ಕೆ ವಿರೋಧಿಸಿದ್ದಾರೆ. ಅಲ್ಲದೇ ಪಕ್ಷ ಬಯಸಿದರೆ ತಾವೂ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು.
ತುಮಕೂರು ಕ್ಷೇತ್ರದಲ್ಲೂ ತಮ್ಮ ಬೆಂಬಲಿಗ ಜಿ.ಎಸ್. ಬಸವರಾಜು ಅವರಿಗೆ ಟಿಕೆಟ್‌ಗಾಗಿ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ರಾಜ್ಯ ನಾಯಕರು ಅದಕ್ಕೆ ವಿರೋಧಿಸಿದ್ದಾರೆ. ಹೀಗಾಗಿ ಆ ಕ್ಷೇತ್ರವೂ ಕಗ್ಗಂಟಾಗಿದೆ. ಬೀದರ್ ಕ್ಷೇತ್ರದಲ್ಲಿ ರಾಜ್ಯ ನಾಯಕರು ಗುರುಪಾದಪ್ಪ ನಾಗಮಾರಪಳ್ಳಿ ಅವರನ್ನೇ ಕಣಕ್ಕಿಳಿಸಲು ಬಯಸಿದ್ದಾರೆ. ಗುರುಪಾದಪ್ಪ ತಮ್ಮ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಯಡಿಯೂರಪ್ಪ ಅವರ ಒತ್ತಾಯಕ್ಕೆ ಒತ್ತಾಸೆಯಾಗಿದ್ದಾರೆ. ಕೋಲಾರದಿಂದ ಡಿ.ಎಸ್. ವೀರಯ್ಯ ಟಿಕೆಟ್ ಬಯಸಿದ್ದಾರೆ. ಮಂಡ್ಯ, ಹಾಸನ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳಿಗಾಗಿ ತಲಾಷ್ ಮುಂದುವರೆದಿದೆ.
ಆರಂಭದಲ್ಲಿ, ಬಿಜೆಪಿಗೆ ಮರಳಲಿರುವ ಶ್ರೀರಾಮುಲು ಅವರಿಗೆ ಬಳ್ಳಾರಿ ಕ್ಷೇತ್ರದ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ, ಶನಿವಾರ ಘೋಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಳ್ಳಾರಿ ಕ್ಷೇತ್ರ ಇಲ್ಲ. ಅದಕ್ಕೆ ಮುಖ್ಯ ಕಾರಣ ಬಿಎಸ್‌ಆರ್ ಕಾಂಗ್ರೆಸ್ ಬಿಜೆಪಿ ಜತೆ ವಿಲೀನ ಆಗುವುದಕ್ಕೆ ಸುಷ್ಮಾ ಸ್ವರಾಜ್ ಮತ್ತು ಲಾಲಕೃಷ್ಣ ಆಡ್ವಾಣಿ ಅವರ ವಿರೋಧ. ಈ ಹಿನ್ನೆಲೆಯಲ್ಲಿ ತರಾತುರಿ ನಿರ್ಧಾರ ಕೈಗೊಳ್ಳುವುದು ಬೇಡ ಎಂಬ ಕಾರಣಕ್ಕೆ ನಿರ್ಧಾರ ಮುಂದೂಡಲಾಗಿದೆ. ರಾಜ್ಯ ನಾಯಕರು ಮಾತ್ರ ಶ್ರೀರಾಮುಲು ಮರಳಿ ಬರುವುದರಿಂದ ಬಳ್ಳಾರಿ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ  ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ. ಆದರೆ, ಶನಿವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಆಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಶ್ರೀರಾಮುಲು ಸೇರ್ಪಡೆಗೆ ಅಪಸ್ವರ ಎತ್ತಿದ್ದಾರೆ.
ರಾಜ್ಯ ನಾಯಕರ ಚರ್ಚಿಸಿ ತೀರ್ಮಾನ: ಕಗ್ಗಂಟಾಗಿರುವ ಉಡುಪಿ- ಚಿಕ್ಕಮಗಳೂರು, ಬೀದರ್, ಮೈಸೂರು, ತುಮಕೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಮಾರ್ಚ್ 13ರಂದು ಚುನಾವಣಾ ಸಮಿತಿ ಸಭೆ ಸೇರುವ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ರಾಜ್ಯದ ನಾಯಕರಾದ ಅನಂತಕುಮಾರ್, ಯಡಿಯೂರಪ್ಪ, ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ, ಕೆ.ಎಸ್. ಈಶ್ವರಪ್ಪ ಮತ್ತಿತರರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳುವ ರಾಜನಾಥ್ ಸಿಂಗ್ ಅಲ್ಲಿಯೇ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯದ ಅಭ್ಯರ್ಥಿಗಳ ಪಟ್ಟಿ
-ಬೆಂ.ದಕ್ಷಿಣ- ಅನಂತಕುಮಾರ್
-ಬೆಂ. ಕೇಂದ್ರ - ಪಿ.ಸಿ.ಮೋಹನ್
-ಚಿಕ್ಕಬಳ್ಳಾಪುರ - ಬಿ.ಎನ್. ಬಚ್ಚೇಗೌಡ
-ಬೆಂ. ಗ್ರಾಮಾಂತರ- ಮುನಿರಾಜು (ಯುವಮೋರ್ಚಾ ಅಧ್ಯಕ್ಷ)
-ಬೆಂ.ಉತ್ತರ- ಸದಾನಂದಗೌಡ
-ಶಿವಮೊಗ್ಗ- ಯಡಿಯೂರಪ್ಪ
-ಮಂಗಳೂರು- ನಳೀನ್ ಕುಮಾರ್ ಕಟೀಲ್
-ಉತ್ತರ ಕನ್ನಡ - ಅನಂತಕುಮಾರ್ ಹೆಗಡೆ
-ಬೆಳಗಾವಿ - ಸುರೇಶ ಅಂಗಡಿ
-ಚಿಕ್ಕೋಡಿ - ರಮೇಶ ಕತ್ತಿ
-ಬಿಜಾಪುರ- ರಮೇಶ ಜಿಗಜಿಣಗಿ
-ಬಾಗಲಕೋಟೆ- ಪಿ.ಸಿ. ಗದ್ದಿಗೌಡರ
-ಗುಲ್ಬರ್ಗ - ರೇವುನಾಯಕ್ ಬೆಳಮಗಿ
-ರಾಯಚೂರು - ಕೆ. ಶಿವನಗೌಡ ನಾಯಕ್
-ಚಾಮರಾಜನಗರ - ಎ.ಆರ್.ಕೃಷ್ಣಮೂರ್ತಿ
-ದಾವಣಗೆರೆ- ಜಿ.ಎಂ.ಸಿದ್ದೇಶ್ವರ
-ಚಿತ್ರದುರ್ಗ- ಜನಾರ್ದನ ಸ್ವಾಮಿ
-ಹಾವೇರಿ - ಶಿವಕುಮಾರ ಉದಾಸಿ
-ಧಾರವಾಡ- ಪ್ರಹ್ಲಾದ ಜೋಶಿ
-ಕೊಪ್ಪಳ- ಸಂಗಣ್ಣ ಕರಡಿ

ಬಾಕಿ ಇರುವ ಕ್ಷೇತ್ರಗಳು
-ಮೈಸೂರು-ಬೀದರ್
-ಕೋಲಾರ-ಮಂಡ್ಯ
-ಹಾಸನ-ತುಮಕೂರು
-ಬಳ್ಳಾರಿ-ಉಡುಪಿ-ಚಿಕ್ಕಮಗಳೂರು

194 ಕೈಪಟ್ಟಿ ಅಂತಿಮ
ಕಾಂಗ್ರೆಸ್ ಕೂಡ 194 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಇದರಲ್ಲಿ ಕರ್ನಾಟಕದ 26 ಮಂದಿ ಪಟ್ಟಿಯೂ ಇದೆ. ಈ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಕ್ರಿಕೆಟಿಗ ಮಹಮ್ಮದ್ ಕೈಫ್, ವಾಜಪೇಯಿ ಸೊಸೆ ಕರುಣಾ ಶುಕ್ಲಾ. ನಂದನ್ ನಿಲೇಕಣಿ ಹೆಸರಿದೆ. ಇದಲ್ಲದೇ 194 ಜನರಲ್ಲಿ ಶೇ.35 ರಷ್ಟು ಮಂದಿ 50 ವರ್ಷದೊಳಗಿನವರು ಎಂದಿದೆ. ಈ ಮೂಲಕ ರಾಗಾ ಆಶಯ ಈಡೇರಿದೆ ಎಂದಿದೆ.

ಉತ್ತರ ಪ್ರದೇಶ
ಇಲ್ಲಿ ಗೆದ್ದರೆ ದೆಹಲಿ ಕುರ್ಚಿ ಗೆದ್ದಂತೆ ಎನ್ನುವ ಮಾತೊಂದಿದೆ. ದೇಶದ ಲೋಕಸಭಾ ಚುನಾವಣೆ ಇತಿಹಾಸದ ಮೇಲೊಂದು ಕಣ್ಣಾಡಿಸಿದರೆ ಈ ಮಾತಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶಕ್ಕೆ ಅದರದ್ದೇ ಆದ ಮಹತ್ವವಿದೆ. ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಕ್ಷೇತ್ರ (80 ಕ್ಷೇತ್ರ)ಗಳನ್ನು ಹೊಂದಿರುವ ಹೆಗ್ಗಳಿಗೆ ಉತ್ತರಪ್ರದೇಶದ್ದು. ಇಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಪಕ್ಷವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷದ ಭವಿಷ್ಯವನ್ನು ನಿರ್ಧರಿಸುತ್ತದೆ. ಆದರೆ, ಇಲ್ಲಿ ಪ್ರಾದೇಶಿಕ ಪಕ್ಷಗಳಾದ ಎಸ್ಪಿ ಮತ್ತು ಬಿಎಸ್ಪಿಯದ್ದೇ ಕಾರುಬಾರು. ಆದರೆ ರಾಜ್ಯ ಸರ್ಕಾರದ ವೈಫಲ್ಯ ಎಸ್ಪಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ವರ್ಚಸ್ಸು ಕಳೆದುಕೊಂಡಿದೆ. ಮೋದಿ ಅಲೆ ಇಡೀ ರಾಜ್ಯವನ್ನು ಆವರಿಸಿದೆ. ಹಾಗಾಗಿ ಉತ್ತರಪ್ರದೇಶದಲ್ಲೇನಿದ್ದರೂ ಈ ಬಾರಿ ಬಿಜೆಪಿ ಮತ್ತು ಬಿಎಸ್ಪಿ ನಡುವೆಯೇ ಫೈಟ್.

2004

80 ಸ್ಥಾನಗಳಲ್ಲಿ 10 ಬಿಜೆಪಿ ಜಯಗಳಿಸಿದ್ದರೆ ಕಾಂಗ್ರೆಸ್ 9, ಎಸ್ಪಿ 35, ಬಿಎಸ್ಪಿ 19, ಇತರೆ 7 ಸ್ಥಾನ

2009

ಬಿಜೆಪಿ 10, ಕಾಂಗ್ರೆಸ್ 21, ಎಸ್ಪಿ 23, ಬಿಎಸ್ಪಿ 20, ಇತರೆ ಪಕ್ಷಗಳು 6 ಸ್ಥಾನ.

ಮತ  ಹಂಚಿಕೆ
ಬಿಜೆಪಿ ಶೇ.17.5, ಕಾಂಗ್ರೆಸ್ ಶೇ.18.25, ಎಸ್ಪಿ ಶೇ.23.26, ಬಿಎಸ್ಪಿ 27.42 ಮತ್ತು ಇತರೆ ಶೇ.13.57.

ಪ್ರಮುಖ ವಿಚಾರ
ಮುಜಾಫರ್‌ನಗರ ಗಲಭೆ, ಜಾತಿ, ಎಸ್ಪಿಯ ದತ್ತಿ ಪದ್ಧತಿ ವಿರೋಧ ಮತ್ತು ಕಾನೂನು ಸುವ್ಯವಸ್ಥೆ, ಮೋದಿ ಅಲೆ.

ಮತ  ಹಂಚಿಕೆ
ಬಿಜೆಪಿ ಶೇ.22.17, ಕಾಂಗ್ರೆಸ್ ಶೇ.12.04, ಎಸ್ಪಿ ಶೇ.26.74, ಬಿಎಸ್ಪಿ 24.67 ಮತ್ತು ಇತರೆ ಶೇ.27.91.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.