ಮಲೇಷ್ಯಾ ವಿಮಾನ ದುರಂತ: 239 ಸಾವು

ಮೃತರಲ್ಲಿ ಚೆನ್ನೈ ಮಹಿಳೆ ಸೇರಿ ಐವರು ಭಾರತೀಯರು
ಕೌಲಾಲಂಪುರದಿಂದ ಬೀಜಿಂಗ್ಗೆ ಹೊರಟಿದ್ದ ಬೋಯಿಂಗ್ ವಿಮಾನ
ಶುಕ್ರವಾರ ತಡರಾತ್ರಿ ಸಮುದ್ರ ಮಧ್ಯೆ ಪತನ ಶಂಕೆ
ಬೀಜಿಂಗ್/ಕೌಲಾಲಂಪುರ: ಮಲೇಷ್ಯಾ, ಚೀನಾಗೆ ಭಾರಿ ವಿಮಾನ ದುರಂತದ ಆಘಾತ. ಕೌಲಾಲಂಪುರದಿಂದ ಬೀಜಿಂಗ್ಗೆ ತೆರಳುತ್ತಿದ್ದ ವಿಮಾನವೊಂದು ಶುಕ್ರವಾರ ತಡರಾತ್ರಿ ಸಮುದ್ರದ ಮಧ್ಯೆ ದುರಂತಕ್ಕೀಡಾಗಿದೆ. ವಿಮಾನದಲ್ಲಿದ್ದ ಎಲ್ಲ 239 ಮಂದಿಯೂ ಸಾವಿಗೀಡಾಗಿರುವ ಸಾಧ್ಯತೆಯಿದೆ. ಮೃತರಲ್ಲಿ ಚೆನ್ನೈನ ಮಹಿಳೆ ಸೇರಿದಂತೆ ಐವರು ಭಾರತೀಯರೂ ಸೇರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲೇಷ್ಯಾ ಹಾಗೂ ವಿಯೆಟ್ನಾಂ ಮಧ್ಯೆ ಬೋಯಿಂಗ್ ವಿಮಾನ ಪತನವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇನ್ನೂ ವಿಮಾನದ ಅವಶೇಷ ಸಿಕ್ಕಿಲ್ಲ. ಶೋಧ ಕಾರ್ಯ ಮುಂದುವರಿದಿದೆ. ಇದೇ ವೇಳೆ ಮಲೇಷ್ಯಾ ಅಧಿಕಾರಿಗಳು ಮಾತ್ರ ವಿಮಾನ ದುರಂತಕ್ಕೀಡಾಗಿರುವುದನ್ನು ಖಚಿತ ಪಡಿಸಿಲ್ಲ.
ವಿಮಾನ ನಾಪತ್ತೆ: ವಿಮಾನವು ಶುಕ್ರವಾರ ಕೌಲಾಲಂಪುರದಿಂದ ಬೀಜಿಂಗ್ಗೆ ಹೊರಟಿತ್ತು. ಇದರಲ್ಲಿ ಎರಡು ಶಿಶುಗಳು ಸೇರಿದಂತೆ 227 ಮಂದಿ ಪ್ರಯಾಣಿಕರು, 12 ಮಂದಿ ಸಿಬ್ಬಂದಿ ಇದ್ದರು. ದಕ್ಷಿಣ ಚೀನಾ ಸಮುದ್ರದ ಕೋಟಾ ಬರುವಿನ ಪೂರ್ವದಲ್ಲಿ 120 ನೌಕಾಮೈಲಿಗಳಷ್ಟು ದೂರದಲ್ಲಿರುವಾಗ ವಿಮಾನವು ಸಂಪರ್ಕ ಕಡಿದುಕೊಂಡಿತು. ನಂತರ ವಿಮಾನ ಎಲ್ಲಿ ಹೋಯಿತೆಂದೇ ಗೊತ್ತಾಗಲಿಲ್ಲ. ವಿಮಾನವು ಶನಿವಾರ ಬೆಳಗ್ಗೆ 6.30ಕ್ಕೆ ಬೀಜಿಂಗ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಬೇಕಿತ್ತು. ವಿಮಾನ ಕಾಣೆಯಾಗಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಬೀಜಿಂಗ್ ಏರ್ಪೋರ್ಟ್ನಲ್ಲಿ ಕೋಲಾಹಲ ಉಂಟಾಯಿತು. ಪ್ರೀತಿ ಪಾತ್ರರ ಬರುವಿಕೆಗಾಗಿ ಕಾಯುತ್ತಿದ್ದ ಸಂಬಂಧಿಕರು ಆಘಾತಕ್ಕೊಳಗಾದರು.
ಯಾವ್ಯಾವ ದೇಶದವರು?
ದುರಂತಕ್ಕೀಡಾದ ವಿಮಾನದಲ್ಲಿ 14 ರಾಷ್ಟ್ರಗಳ ಪ್ರಜೆಗಳಿದ್ದರು ಎಂದು ಏರ್ಲೈನ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ತಿಳಿಸಿದೆ. ಅದರಲ್ಲಿ 5 ಮಂದಿ ಭಾರತೀಯರು, 152 ಚೀನೀಯರು, 38 ಮಲೇಷ್ಯನ್ನರು, 7 ಮಂದಿ ಇಂಡೋನೇಷ್ಯನ್ನರು, 6 ಆಸ್ಟ್ರೇಲಿಯನ್ನರು, 3 ಮಂದಿ ಫ್ರಾನ್ಸ್ ಪ್ರಜೆಗಳು, 4 ಮಂದಿ ಅಮೆರಿಕನ್ನರು (ಒಂದು ಶಿಶು), ನ್ಯೂಜಿಲೆಂಡ್ನ ಇಬ್ಬರು, ಉಕ್ರೇನ್ನ ಇಬ್ಬರು, 2 ಮಂದಿ ಕೆನಡಿಯನ್ನರು ಹಾಗೂ ರಷ್ಯಾ, ಇಟಲಿ, ತೈವಾನ್, ನೆದರ್ಲೆಂಡ್, ಆಸ್ಟ್ರಿಯಾದ ತಲಾ ಒಬ್ಬರು ಸೇರಿದ್ದಾರೆ.
ಮೃತರಲ್ಲಿ ಭಾರತೀಯರು ಇದ್ದಾರೆ
ಚೆನ್ನೈನ ಮಹಿಳೆ ಸೇರಿದಂತೆ ಕನಿಷ್ಠ ಐವರು ಭಾರತೀಯರು ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ವಿಷಯ ಬಹಿರಂಗವಾಗಿದೆ. ಅವರೆಂದರೆ, ಚಂದ್ರಿಕಾ ಶರ್ಮಾ, ಪ್ರಹ್ಲಾದ್ ಶಿರ್ಸಾತ್, ಚೇತನಾ ವಿನೋದ್ ಕೋಲೇಕರ್, ವಿನೋದ್ ಸುರೇಶ್ ಕೋಲೇಕರ್ ಹಾಗೂ ಸ್ವಾನಂದ್ ವಿನೋದ್ ಕೋಲೇಕರ್. ಇವರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಒಬ್ಬರು ಭಾರತೀಯ ಮೂಲದ ಕೆನೆಡಿಯನ್ ಎಂದು ಬೀಜಿಂಗ್ನಲ್ಲಿನ ಭಾರತದ ರಾಯಭಾರ ಕಚೇರಿ ತಿಳಿಸಿದೆ.
ತಪ್ಪಿದ ಮತ್ತೊಂದು ದುರಂತ
ಕಠ್ಮಂಡು: ಮಲೇಷ್ಯಾ ವಿಮಾನ ದುರಂತಕ್ಕೀಡಾದ ಬೆನ್ನಲ್ಲೇ ಮತ್ತೊಂದು ವಿಮಾನ ದುರಂತಕ್ಕೀಡಾಗುವುದು ಕೂದಲೆಳೆ ಅಂತರದಿಂದ ತಪ್ಪಿದೆ. ದೆಹಲಿಯಿಂದ ಹೊರಟಿದ್ದ ಇಂಡಿಗೋ ವಿಮಾನ ಕಠ್ಮಂಡುವಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 182 ಮಂದಿ ಇದ್ದರು. ಶನಿವಾರ ಮಧ್ಯಾಹ್ನ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ವಿಮಾನ ಲ್ಯಾಂಡಿಂಗ್ ಆಗಿದೆ. ಪ್ರಯಾಣಿಕರು ಇಳಿಯುತ್ತಿದ್ದಂತೆ, ಏರ್ ಬಸ್ 320ರ ಬಲಬದಿಯ ಬ್ರೇಕ್ನ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಎಂಜಿನಿಯರ್ಗಳು ಗಮನಿಸಿದ್ದಾರೆ. ತಕ್ಷಣವೇ ತುರ್ತು ಬಾಗಿಲುಗಳ ಮೂಲಕ ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ಲ್ಯಾಂಡಿಂಗ್ ವೇಳೆ ಜೋರಾಗಿ ಬ್ರೇಕ್ ಹಾಕಿದ ಕಾರಣ ಹೈಡ್ರಾಲಿಕ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತನಿಖೆ ಆರಂಭಿಸಿದೆ.
ಚೀನಾದಲ್ಲಿ ಪುಟ್ಟ ವಿಮಾನ ಪತನ
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಗ್ರಾಮವೊಂದರಲ್ಲಿ ಪುಟ್ಟ ವಿಮಾನವೊಂದು ಪತನಗೊಂಡ ಘಟನೆಯೂ ಶನಿವಾರ ನಡೆದಿದೆ. ಈ ದುರಂತದಿಂದ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ದುರಂತಕ್ಕೆ ಕಾರಣವೇನು ಎಂದು ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


