ಪ್ರಧಾನ ಸುದ್ದಿ

ಹೇಮೆಯ ಹರಿಸಿದ ಭಗೀರಥ

Published On :

ತುಮಕೂರು: ರಾಜ್ಯದ 41 ವಿವಿಧ ನೀರಾವರಿ ಯೋಜನೆಗಳ ಅಂದಾಜು ವರದಿ ತಯಾರಿಸಿದ ಪರಮಶಿವಯ್ಯ ಅಕ್ಷರಶಃ ನೀರಾವರಿ ಬ್ರಹ್ಮರಾಗಿದ್ದರು.
ನೀರಿನ ಮೂಲ ಹುಡುಕುವುದು, ಅದನ್ನು ಹೇಗೆ ತರುವುದು, ಸಮದ್ರಕ್ಕೆ ಅನವಶ್ಯಕವಾಗಿ ಹೋಗುವ ನೀರನ್ನು ಹೇಗೆ ಬಳಸಿಕೊಳ್ಳುವುದು ಎಂಬ ಸ್ಪಷ್ಟ ಮಾಹಿತಿ ಇದ್ದ ಪರಮಶಿವಯ್ಯ, ನೀರಾವರಿ ವಿಷಯದಲ್ಲಿ ಅಪ್ಪಟ ತನಿಖಾಧಿಕಾರಿಯೇ ಆಗಿದ್ದರು. ಸರ್ಕಾರಿ ಇಲಾಖೆಯಲ್ಲಿ ನೀರಾವರಿಗೆ ಸಂಬಂಧಪಟ್ಟಂತೆ ಎಷ್ಟು ಕೆಲಸ ಮಾಡಿದರೋ ಅಷ್ಟೆ ಕೆಲಸವನ್ನು ನಿವೃತ್ತರಾದ ಮೇಲೂ ಮಾಡಿದ್ದರು. ಸಾಯುವ ಹಿಂದಿನ ದಿನವೂ ಎತ್ತಿನ ಹೊಳೆ ಯೋಜನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರಂತೆ.
ತುಮಕೂರಿಗೆ ಹೇಮಾವತಿ ಯೋಜನೆ ಹರಿದು ಬರುವುದಕ್ಕೆ ಅವರ ಪಾತ್ರವೂ ಕಾರಣವಾಗಿದೆ. ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರಿಗೆ ಹೇಮಾವತಿ ನೀರು ತರುವ ಬಗ್ಗೆ ಯೋಜನಾ ವರದಿಯನ್ನು ಸಿದ್ಧಪಡಿಸಿ ಕೊಟ್ಟಿದ್ದರು.
ಈ ವರದಿ ನೋಡಿದ ನಿಜಲಿಂಗಪ್ಪ ಅವರು ಇದು ಸಾಧ್ಯವೇ ಇಲ್ಲ. ಇಂಥ ಅಸಂಬದ್ಧ ವರದಿ ಕೊಟ್ಟಿದ್ದೀರ ಎಂದು ದೂರಿ ಶೋಕಾಸ್ ನೋಟಿಸ್ ಕೊಟ್ಟಿದ್ದರು. ಆದರೆ ತುಮಕೂರಿಗೆ ಕಡೆಗೂ ಹೇಮಾವತಿ ನೀರು ಹರಿದು ಬಂತು. ಜಿಲ್ಲೆಯ ಜನ ಕುಡಿಯಲು ಈ ನೀರನ್ನು ಬಳಸುವಂತಾಯಿತು. ನೀರಾವರಿ ವಿಷಯದಲ್ಲಿ ಪರಮಶಿವಯ್ಯನವರು ಹಿಡಿದ ಹಠ ಬಿಡುತ್ತಿರಲಿಲ್ಲ. ನೀರಾವರಿ ವಿಷಯದಲ್ಲಿ ಸಮಗ್ರವಾಗಿ ಅಧ್ಯಯನ ಮಾಡಿ 7 ವರದಿಗಳನ್ನು ಸರ್ಕಾರಕ್ಕೆ ನೀಡಿದ್ದರು. ಪಶ್ಚಿಮಾಭಿಮುಖಿಯಾಗಿ ಹರಿಯುವ ನೀರು, ಕಾವೇರಿ ಹೆಚ್ಚುವರಿ ನೀರು, ಪ್ರವಾಹದ ನೀರು, ಕೃಷ್ಣಾ ಜಲಾನಯನದ ನೀರು, ಗೋದಾವರಿ, ಮಹದಾಯಿ ನೀರು ಇವೆಲ್ಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದ ಅಪ್ಪಟ ಪ್ರತಿಭಾ ಸಂಪನ್ನ. ಯಾವ ಸರ್ಕಾರ ಬಂದರೂ ನೀರಾವರಿ ಯೋಜನೆ ಜಾರಿ ಮಾಡುವಾಗ ಪರಮಶಿವಯ್ಯನವರ ವರದಿಯ ಒಂದು ಭಾಗವನ್ನು ಅನುಷ್ಠಾನಗೊಳಿಸುತ್ತಿದ್ದರು. ಈಗ ಎತ್ತಿನಹೊಳೆ ಯೋಜನೆ ಕೂಡ ಪರಮಶಿವಯ್ಯ ವರದಿಯ ಒಂದು ಭಾಗವೇ ಆಗಿದೆ. ಸಮಗ್ರ ನೀರಾವರಿ ಯೋಜನೆ ಜಾರಿಯಾಗುವವರೆಗೂ ನಾನು ಸಾಯುವುದಿಲ್ಲ ಎಂದು ಸದಾ ತಮ್ಮ ಆಪ್ತರ ಬಳಿ ಹೇಳುತ್ತಿದ್ದರು. ಆದರೆ ಕಾಲ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದರೆ ಅವರು ರೂಪಿಸಿದ ಹಲವಾರು ನೀರಾವರಿ ಯೋಜನೆಗಳು ಮಾತ್ರ ರೈತರು, ಜನಸಾಮಾನ್ಯರ ಮನದಲ್ಲಿ ಹಸಿರಾಗಿಯೇ ಇರುತ್ತದೆ.


-ಉಗಮ  ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.