ಎ. ಮಂಜುಗೆ ಟಿಕೆಟ್, ವಿನಯ್ ಗಾಂಧಿ ತಗಾದೆ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶಾಸಕ ಅರಕಲಗೂಡು ಮಂಜು ಅವರಿಗೆ ಟಿಕೆಟ್ ನೀಡಬಾರದು ಎಂದು ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ. ಅರಕಲಗೂಡು ಮಂಜು ಅವರು ದೇವೇಗೌಡರ ದೂರದ ಸಂಬಂಧಿ. ಕಳೆದ ಚುನಾವಣೆಯಲ್ಲೂ ದೇವೇಗೌಡರ ಪರವಾಗಿ ಕೆಲಸ ಮಾಡಿದ್ದರು. ಈ ಚುನಾವಣೆಗೂ ಅವರು ದೇವೇಗೌಡರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಮಂಜುಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ತಮಗೆ ಟಿಕೆಟ್ ನೀಡಬೇಕೆಂದು ವಿನಯ್ ಗಾಂಧಿ ಬೇಡಿಕೆ ಇಟ್ಟಿದ್ದಾರೆ. ನಾನು ದಾಸ ಒಕ್ಕಲಿಗ, ನನ್ನ ಪತ್ನಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ವೃತ್ತಿಯಿಂದ ನಾನು ವಕೀಲ. ಹೀಗಾಗಿ ದಾಸ ಒಕ್ಕಲಿಗರ ಮತ, ಮುಸ್ಲಿಂ ಸಮುದಾಯದ ಮತ ಹಾಗೂ ವಕೀಲರ ವೃಂದದ ಮತಗಳು ನನಗೆ ಬರುತ್ತವೆಂದೂ ಅವರು ಹೇಳಿಕೊಂಡಿದ್ದಾರೆ.
ಕೆಲಸ ಮಾಡಿಸಿಕೊಂಡವರೇ ತಿರುಗಿ ಬಿದ್ದಿದ್ದಾರೆ: ರಮ್ಯಾ
ಶ್ರೀರಂಗಪಟ್ಟಣ: ನನ್ನಿಂದ ಕೆಲಸ ಮಾಡಿಸಿಕೊಂಡವರೆಲ್ಲ ಇಂದು ನನ್ನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನನಗೆ ಟಿಕೆಟ್ ಕೊಡಬೇಡಿ ಎಂದು ಹೇಳುವವರಿಗೆ, ಟೀಕೆ ಮಾಡುವವರಿಗೆ ನಾನು ಯಾವುದೇ ಪ್ರತ್ಯುತ್ತರ ನೀಡಲಾರೆ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಸಂಸದೆ ರಮ್ಯಾ ಹೇಳಿದ್ದಾರೆ. ತಾಲೂಕಿನ ಎಂ.ಶೆಟ್ಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಜನರ ಸಮಸ್ಯೆ ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಂಬರೀಷ್ ಅಂಕಲ್ ಬಗ್ಗೆ ಹೇಳಿದ್ದೆಲ್ಲವೂ ನಿಜ. ವೈದ್ಯರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ನನ್ನ ತಂದೆ ಜತೆ ಅಂಬರೀಷ್ ಅಂಕಲ್ ಇಟ್ಟಿಕೊಂಡಿರುವ ಒಡನಾಟವನ್ನು ಹೇಳಿದ್ದೇನೆಯೇ ಹೊರತು ಯಾವುದನ್ನೂ ತಪ್ಪಾಗಿ ಹೇಳಿಲ್ಲ. ಇದನ್ನೆ ದೊಡ್ಡದಾಗಿ ಮಾಡಿ ತಪ್ಪು ಸಂದೇಶ ಬರುವಂತೆ ಮಾಡುತ್ತಿರುವುದು ನನಗೆ ಸರಿ ಕಾಣುತ್ತಿಲ್ಲ. ಏನೇ ಆಗಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಡನೆ ಸಮನ್ವಯ ಸಾಧಿಸಿ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡುತ್ತೇನೆ. ನಾನು ಯಾರನ್ನೂ ಬಿಟ್ಟು ಪ್ರಚಾರಕ್ಕೆ ಹೋಗಿಲ್ಲ. ಹೋಗುವುದೂ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.
ಈ ಚುನಾವಣೆ ನನಗೀಗ ಸತ್ವಪರೀಕ್ಷೆ ಕಾಲ: ಬಿಎಸ್ವೈ
ಶಿಕಾರಿಪುರ: ಈ ಬಾರಿಯ ಲೋಕಸಭಾ ಚುನಾವಣೆ ನನಗೆ ಸತ್ವಪರೀಕ್ಷೆಯ ಕಾಲವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮಂಗಳವಾರ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಸಂಸದನಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪುತ್ರ ರಾಘವೇಂದ್ರ ಪುನಃ ಸ್ಪರ್ಧಿಸಲು ಎಲ್ಲಾ ರೀತಿಯ ಅರ್ಹತೆ ಹೊಂದಿದ್ದರೂ ಪಕ್ಷದ ವರಿಷ್ಠರ ಒತ್ತಡಕ್ಕೆ ಮಣಿದು ನಾನೇ ಸ್ಪರ್ಧಿಸಬೇಕಾಗಿದೆ. ಈ ಬಾರಿಯ ಚುನಾವಣೆ ಅತ್ಯಂತ ಭಿನ್ನವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ರೀತಿಯಲ್ಲಿ ಈ ಬಾರಿ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ ತಲುಪಿದ್ದೇವೆ ಎಂದರು.
ಪಕ್ಷ ಬಯಸಿದರೆ ಕಚೇರಿ ಕಾಯಲು ಸಿದ್ಧ: ಆಂಜನೇಯ
ಚಿತ್ರದುರ್ಗ: ಮಂತ್ರಿ, ಶಾಸಕ ಸ್ಥಾನ ತ್ಯಜಿಸಿ ಪಕ್ಷದ ಕಚೇರಿ ಕಾಯುವ ಕೆಲಸ ಮಾಡು ಎಂದು ಪಕ್ಷ ಹೇಳಿದರೆ ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದ್ದು ನಿಜ. ಆದರೆ, ಪಕ್ಷದಲ್ಲಿ ನನಗಿಂತ ಸಮರ್ಥರು ಬಹಳಷ್ಟು ಜನರಿದ್ದಾರೆ. ಅವರಿಗೂ ಒಂದು ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಬೇರೆಯವರಿಗೆ ಟಿಕೆಟ್ ನೀಡಿ ಎಂದು ಹೇಳಿದ್ದೇನೆ. ಕೆಲಸ, ದಕ್ಷತೆ, ನಡೆ, ನುಡಿ ಯಾವುದರಲ್ಲೂ ನನ್ನ ಕಡೆಗೆ ಬೆರಳು ಮಾಡಿ ಯಾರೂ ತೋರಿಸಲು ಸಾಧ್ಯವಿಲ್ಲ. ಆದರೆ, ಪಕ್ಷ ಯಾವುದೇ ಜವಾಬ್ದಾರಿ ವಹಿಸಿದರೂ ನಿರ್ವಹಿಸಲು ಸಿದ್ಧ. ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಪರ ತನು, ಮನ, ಧನದಿಂದ ಕೆಲಸ ಮಾಡುತ್ತೇನೆ ಎಂದರು. ಪಕ್ಷದ ಟಿಕೆಟ್ಗಾಗಿ ಯಾವುದೇ ರೀತಿಯ ಲಾಬಿ ಮಾಡಿಲ್ಲ. ಯಾರದಾದರೂ ಹೆಸರು ಶಿಫಾರಸು ಮಾಡಬಹುದೇ ಹೊರತು ಇಂಥ ಜಾತಿಯವರಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ. ಯಾವುದೇ ಜಾತಿಯವರಾದರೂ ಒತ್ತಾಯದಿಂದ ಟಿಕೆಟ್ ತೆಗೆದುಕೊಳ್ಳಲು ಆಗುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

