ಹೈ-ಕದಲ್ಲಿ 'ಕೈ'ಗೆಟುಕದ ಜಾತಿ ಗಣಿತ
ಗುಲ್ಬರ್ಗ: ಸಾಮಾಜಿಕ ನ್ಯಾಯದ ಮಂತ್ರ ಪಠಿಸುವ ಕಾಂಗ್ರೆಸ್ಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ 5 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಾತಿ ಸಮೀಕರಣ ಪಾಲನೆ ಕಗ್ಗಂಟಾಗಿ ಪರಿಣಮಿಸಿದೆ.
ಹೈ-ಕ ವ್ಯಾಪ್ತಿಯ 5 ಕ್ಷೇತ್ರಗಳ ಪೈಕಿ ಗುಲ್ಬರ್ಗ ಎಸ್ಸಿ ಮೀಸಲಾದರೆ, ರಾಯಚೂರು ಹಾಗೂ ಬಳ್ಳಾರಿ ಎಸ್ಟಿ ಮೀಸಲು. ಸಾಮಾನ್ಯರಿಗಿರುವ ಕೊಪ್ಪಳ ಹಾಗೂ ಬೀದರ್ನಲ್ಲಿ ಕಾಂಗ್ರೆಸ್ ಒಬಿಸಿ ಹಾಗೂ ಇತರೆ ಜಾತಿ ಸಮುದಾಯದವರನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಇದು ಇಲ್ಲಿನ ಪ್ರಬಲ ಲಿಂಗಾಯತ, ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಹೊಗೆಯಾಡುವಂತೆ ಮಾಡಿದೆ.
ತಪ್ಪಿದ 'ಕೈ' ಲೆಕ್ಕಾಚಾರ: ಹಾಲಿ ಸಂಸದರನ್ನು ಕಣಕ್ಕಿಳಿಸಲೇಬೇಕೆಂದು ಕಾಂಗ್ರೆಸ್ ತೀರ್ಮಾನಿಸಿದ್ದರಿಂದ ಸಾಮಾನ್ಯ ಕ್ಷೇತ್ರ ಬೀದರ್ನಿಂದ ಮಾಜಿ ಸಿಎಂ ಧರಂಸಿಂಗ್ ಪುನರಾಯ್ಕೆ ಬಯಸಿದರೆ, ಕೊಪ್ಪಳದಿಂದ ಯಾರು ಹುರಿಯಾಳು ಎಂಬುದು ಇನ್ನೂ ಅಖೈರಾಗಿಲ್ಲ. ಆದರೂ ಹಿಂದುಳಿದ ವರ್ಗ(ಒಬಿಸಿ) ಕುರುಬ ಸಮಾಜಕ್ಕೆ ಸೇರಿರುವ ಬಸವರಾಜ ಹಿಟ್ನಾಳ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕೆಂಬ ತೀರ್ಮಾನವನ್ನು ಕಾಂಗ್ರೆಸ್ ವರಿಷ್ಠರೇ ಕೈಗೊಂಡಿದ್ದರಿಂದ ವಯೋಸಹಜ ಕಾರಣ ಹೇಳಿ ಧರಂಸಿಂಗ್ ಅವರಿಗೆ ಟಿಕೆಟ್ ನಿರಾಕರಣೆಯಾದಲ್ಲಿ ಸಾಮಾನ್ಯ ಕ್ಷೇತ್ರ ಬೀದರ್ನಿಂದ ಪ್ರಬಲ ಲಿಂಗಾಯಿತ ಕೋಮಿಗೆ ಪ್ರಾತಿನಿಧ್ಯ ನೀಡಬಹುದೆಂಬ ಕಾಂಗ್ರೆಸ್ ಲೆಕ್ಕಾಚಾರ ಹುಸಿಯಾಗಿದೆ.
ಈ ಅಸಮಾಧಾನದಿಂದ ಪಾರಾಗಲು ಕಾಂಗ್ರೆಸ್ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರನ್ನೇ ಕೊಪ್ಪಳದಿಂದ ಕಣಕ್ಕಿಳಿಸಲು ಮುಂದಾಗಿದೆ ಎನ್ನಲಾಗುತ್ತಿದೆಯಾದರೂ ಪಕ್ಷದ ಆಹ್ವಾನವನ್ನು ಅಮರೇಗೌಡರು ಇನ್ನೂ ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ. ಅಸೆಂಬ್ಲಿಯಲ್ಲಿ ಸೋತವರಿಗೆ ಎಂಪಿ ಟಿಕೆಟ್ ಬೇಡ ಎಂಬ ರಾಹುಲ್ ಸೂತ್ರಗಳಿಗೆ ತಿಲಾಂಜಲಿ ಇಟ್ಟಾದರೂ ಲಿಂಗಾಯಿತರ ಕೋಪ ಶಮನ ಮಾಡಲು ಅಮರೇಗೌಡರಿಗೆ ಕೊಪ್ಪಳ ಟಿಕೆಟ್ ಕೊಡಿಸುವ ಅನಿವಾರ್ಯತೆ ಕಾಂಗ್ರೆಸ್ಗೆ ಎದುರಾಗಿದೆ.
ಮುಸ್ಲಿಂಮರಿಗೂ ಕೋಪ: ಬೀದರ್ ಮುಸ್ಲಿಮರ ಪ್ರಾಬಲ್ಯದ ಕ್ಷೇತ್ರ. ಅಂತೆಯೇ ಕೇಂದ್ರದ ಅನೇಕ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಿಗೆ ಆಯ್ಕೆಯಾಗಿದೆ. ಮುಸ್ಲಿಂ ಸಮುದಾಯದವರನ್ನು ಇಲ್ಲಿಂದ ಕಣಕ್ಕಿಳಿಸುವ ಬಗ್ಗೆಯೂ ಕಾಂಗ್ರೆಸ್ನಲ್ಲಿ ಬಲವಾದ ಚಿಂತನೆಗಳು ಸಾಗಿದ್ದವು. ಕ್ರಿಕೆಟರ್ ಅಜರುದ್ದೀನ್, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಹೆಸರುಗಳು ಚರ್ಚೆಗೆ ಬಂದವಾದರೂ ಹಾಲಿ ಸಂಸದರಿಗೆ ಟಿಕೆಟ್ ನಿಶ್ಚಿತವಾಗುತ್ತಿದ್ದಂತೆಯೇ ಇವೆಲ್ಲ ಹೆಸರುಗಳು ನೇಪಥ್ಯಕ್ಕೆ ಸರಿದವು.
ತಮ್ಮದೇ ಪ್ರಾಬಲ್ಯವಿದ್ದರೂ ಮುಸ್ಲಿಂ ಸಮಾಜದವರಿಗೆ ಟಿಕೆಟ್ ನೀಡಲಾಗಲಿಲ್ಲವಲ್ಲ... ಎಂದು ಮುಸ್ಲಿಂ ಸಮುದಾಯದಲ್ಲೂ 'ಕೈ'ಪಡೆ ವಿರುದ್ಧ ಅಸಮಾಧಾನ ಹೆಪ್ಪುಗಟ್ಟಲಾರಂಭಿಸಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲವೆಂದು ಗುಡುಗಲಾಗಿತ್ತು. ಇದೀಗ ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿಯೂ ಮುಸ್ಲಿಂ ಬಾಂಧವರು ತಮಗೆ ಅನ್ಯಾಯವಾಗಿದೆ ಎಂದು ಮುನಿಸಿಕೊಂಡಿದ್ದು, ಚುನಾವಣೆಯಲ್ಲಿ ಅದ್ಯಾವ ಸ್ವರೂಪ ತಾಳುವುದೋ ಎಂಬ ಆತಂಕ ಪಕ್ಷವನ್ನು ಕಾಡಲಾರಂಭಿಸಿದೆ.
ಸೆಂಟ್ರಲ್ ಬೆಂಗಳೂರು, ಹಾವೇರಿ, ಧಾರವಾಡಗಳಲ್ಲಿ ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡುವಂತೆ ಕೇಳಿಕೊಂಡಿದ್ದು, ಇನ್ನೂ ಬೇಡಿಕೆ ಈಡೇರಿಲ್ಲ. ಇದೂ ಮುಸ್ಲಿಂ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.
ಮೀಸಲು ಕ್ಷೇತ್ರಗಳದ್ದೇ ಮೇಲುಗೈ
ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಬೀದರ್ ವ್ಯಾಪ್ತಿಯ ಹೈ-ಕ ಪ್ರಾಂತದಲ್ಲಿ ಮೀಸಲು ಕ್ಷೇತ್ರಗಳದ್ದೇ ಮೇಲುಗೈ. ಗುಲ್ಬರ್ಗ ಎಸ್ಸಿಗೆ ಮೀಸಲು. ಯಾದಗಿರಿ ಸೇರಿದಂತಿರುವ ರಾಯಚೂರು ಹಾಗೂ ಬಳ್ಳಾರಿಗಳಂತೂ ಎಸ್ಟಿಗಳಿಗೆ ಮೀಸಲು. 5ರಲ್ಲಿ 3 ಕ್ಷೇತ್ರಗಳು ಎಸ್ಸಿ- ಎಸ್ಟಿಗೆ ಮೀಸಲು. ಬೀದರ್, ಕೊಪ್ಪಳ ಮಾತ್ರ ಸಾಮಾನ್ಯ ಕ್ಷೇತ್ರಗಳಾಗಿವೆ. ಗುಲ್ಬರ್ಗ ಎಸ್ಸಿ ಮೀಸಲು ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ, ಬಳ್ಳಾರಿ(ಎಸ್ಟಿ)ಯಿಂದ ಎನ್.ವೈ. ಹನುಮಂತಪ್ಪ, ಬೀದರ್ನಿಂದ ಧರಂಸಿಂಗ್ ಹೆಸರು ಅಂತಿಮಗೊಂಡಿವೆ. ಇನ್ನೇನು ಕೊಪ್ಪಳ(ಸಾಮಾನ್ಯ) ಹಾಗೂ ರಾಯಚೂರು(ಎಸ್ಟಿ) ಕ್ಷೇತ್ರಗಳಿಗೆ ಯಾರನ್ನು ಕಣಕ್ಕಿಳುವುದು ಎಂಬುದೇ ಈಗಿನ ಕುತೂಹಲ. ರಾಯಚೂರಿನಿಂದ ಚಿತ್ರನಟ ಶಿಕುಮಾರ್, ಕೊಪ್ಪಳದಿಂದ ಬಸವರಾಜ ಹಿಟ್ನಾಳ್ ಅಥವಾ ಅಮರೇಗೌಡ ಬಯ್ಯಾಪುರ ಹೆಸರುಗಳು ಕೇಳಿಬರುತ್ತಿವೆ.
- ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

