ಪ್ರಧಾನ ಸುದ್ದಿ

ಆರು ಬೆರಳಿನ ಶಿಶುವಿಗೆ ಭಾರೀ ಬೇಡಿಕೆ

Published On :

ಗಂಗಾವತಿ: ಆರು ಬೆರಳುಗಳೊಂದಿಗೆ ಜನಿಸಿದ್ದ ಮಗು ಕಂದಾಚಾರಕ್ಕೆ ಬಲಿಯಾಗುವುದು ವೃದ್ಧೆ ಶಾಂತಮ್ಮ ಅವರಿಂದ ತಪ್ಪಿದೆ. ಈಗ ಆ ಮಗುವನ್ನು ತಾವು ಪ್ರೀತಿಯಿಂದ ಸಾಕುತ್ತೇವೆ, ನಮಗೆ ಕೊಡಿ ಎಂದು ಅನೇಕರು ಬೆನ್ನು ಬಿದ್ದಿದ್ದಾರೆ.
ಗುರುವಾರ 'ಕನ್ನಡಪ್ರಭ'ದಲ್ಲಿ 'ಅದೃಷ್ಟ ತಂದ ಆರು ಬೆರಳು, ಶಿಶು ಉಳಿಸಿದ ಅಜ್ಜಿ ನೆರಳು' ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿರುವುದನ್ನು ಗಮನಿಸಿರುವ ಮಹಿಳೆಯರು, ಈಗ ಮಗುವನ್ನು ಕಾಪಾಡಿದ ಅಜ್ಜಿ ಶಾಂತಮ್ಮ ಅವರನ್ನು ಸುತ್ತುವರಿದಿದ್ದಾರೆ. ನಗರದ ಭಗತ್ ಸಿಂಗ್ ಕಾಲನಿಯಲ್ಲಿರುವ ಅಜ್ಜಿ ಶಾಂತಮ್ಮಳ ಮನೆಗೆ ಮಹಿಳಾ ಕಾರ್ಯಕರ್ತೆಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಗುವಿನ ಕೈಯಲ್ಲಿ ಆರು ಬೆರಳುಗಳಿವೆ. ಕಿವಿಯ ಜಾಗದಲ್ಲಿ ಎರಡು ಚಿಕ್ಕ ರಂಧ್ರಗಳು ಮಾತ್ರ ಕಾಣುತ್ತಿವೆ. ಇದು ಅದೃಷ್ಟವಂತ ಮಗು ಎಂದು ಭಾವಿಸಿದ ಅಜ್ಜಿ, ಗುಡಿಸಲಿನಲ್ಲಿ ಯಾರಿಗೂ ತಿಳಿಯದಂತೆ ಅದನ್ನು ಜೋಪಾನ ಮಾಡುತ್ತಿದ್ದರು. ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈಗ ಹಸುಗೂಸನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ತಪಾಸಣೆ ಮಾಡಿಸಿದ್ದಾರೆ.
ಮಗು ನಮಗೆ ನೀಡಿ: ದಿಕ್ಕು ಕಾಣದೆ ಸ್ಮಶಾನದಲ್ಲಿ ಅನಾಥವಾಗಿ ಬಿದ್ದಿದ್ದ ನವಜಾತ ಶಿಶುವನ್ನು ಸಾಕಲು ನಮಗೆ ನೀಡಿ ಎಂದು ನಗರ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ತಮಗೆ 10 ವರ್ಷದಿಂದ ಮಕ್ಕಳಾಗಿಲ್ಲ, ಆ ಮಗುವನ್ನು ನಾವು ಸಾಕುತ್ತೇವೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಗಂಗಾವತಿ ನಗರದ ಪಂಪಾನಗರ, 25ನೇ ವಾರ್ಡ್, ಶ್ರೀರಾಮನಗರ, ಕಲ್ಗುಡಿ, ವಿದ್ಯಾನಗರದಿಂದಲೂ ಮಹಿಳೆಯರು ಬಂದಿದ್ದರು.
ಶಿಶು ಬಾಲಮಂದಿರಕ್ಕೆ: ಗಂಗಾವತಿಯಲ್ಲಿ ಪತ್ತೆಯಾಗಿರುವ ನವಜಾತು ಶಿಶುವನ್ನು ಬಾಲಮಂದಿರಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತ ಪ್ರೇಮ ತಿಳಿಸಿದರು. ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುವಿನ ಆರೋಗ್ಯ ವಿಚಾರಿಸಲಾಗಿದ್ದು, 1 ಕೆಜಿ 30 ಗ್ರಾಂ ತೂಕ ಇದೆ. ಆರು ಬೆರಳುಗಳಿವೆ. ಕಿವಿಗಳು ಚಿಕ್ಕದಾಗಿವೆ. ಈಗ ಶಿಶುವನ್ನು  ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಬಾಲಮಂದಿರಕ್ಕೆ ಕಳುಹಿಸುತ್ತೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.