ಪ್ರಧಾನ ಸುದ್ದಿ

ಎಸ್. ಮಲ್ಲಿಕಾರ್ಜುನಯ್ಯ ನಿಧನ

ಎಸ್. ಮಲ್ಲಿಕಾರ್ಜುನಯ್ಯ ನಿಧನ
Published On :

ತುಮಕೂರು: ಲೋಕಸಭೆಯ ಮಾಜಿ ಡೆಪ್ಯೂಟಿ ಸ್ಪೀಕರ್ ಹಾಗೂ ಬಿಜೆಪಿ ಹಿರಿಯ ಮುಖಂಡ ಎಸ್.ಮಲ್ಲಿಕಾರ್ಜುನಯ್ಯ (83) ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗಿನ ಜಾವ ನಿಧನರಾದರು. ಮೃತರಿಗೆ ಪತ್ನಿ, ಒಬ್ಬ ಪುತ್ರ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ದೀರ್ಘ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು. 2013ರ ಜುಲೈ 28 ರಂದು ತುಮಕೂರಿನ ಸ್ವಗೃಹದಲ್ಲಿ ಜಾರಿ ಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.      
1956ರಲ್ಲಿ ತುಮಕೂರು ಪುರಸಭೆ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. 1972ರಿಂದ 1990ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಇದೇ ವೇಳೆ ವಿಧಾನ ಪರಿಷತ್ ಉಪಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಈ ಮಧ್ಯೆ 1977ರಿಂದ 80ರವರೆಗೆ ಜನತಾಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದರು. 1971-77ರವರೆಗೆ ಜನಸಂಘದ ಅಧ್ಯಕ್ಷರಾಗಿದ್ದರು. 1991-96ರವರೆಗೆ 11ನೇ ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1998 ಮತ್ತು 2004ರಲ್ಲಿ ತುಮಕೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ಮುಖಂಡರಾದ ರಾಮಚಂದ್ರಗೌಡ, ಸಿ.ಟಿ. ರವಿ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸದ ಜಿ.ಎಸ್. ಬಸವರಾಜ್, ಮುದ್ದಹನುಮೇಗೌಡ, ಮುಂತಾದವರು ಅಂತಿಮ ನಮನ ಸಲ್ಲಿಸಿದರು. ಶುಕ್ರವಾರ ಮಧ್ಯಾಹ್ನ 1 ಗಂಟೆ ನಂತರ ಸ್ವಗ್ರಾಮ ಹೊನಸಗೆರೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಗಣ್ಯರ ಕಂಬನಿ: ಮಲ್ಲಿಕಾರ್ಜುನಯ್ಯ ಅವರ ನಿಧನಕ್ಕೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ, ಪಿ.ಜಿ.ಆರ್. ಸಿಂಧ್ಯ ಕಂಬನಿ ಮಿಡಿದಿದ್ದಾರೆ. ಬಸವ ಸಮಿತಿಯೂ ಸಂತಾಪ ಸೂಚಿಸಿದೆ.

ಎಸ್.ಎಂ. ನಿಧನಕ್ಕೆ ಗಣ್ಯರ ಕಂಬನಿ
ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ, ರಾಷ್ಟ್ರ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ, ಮುತ್ಸದ್ದಿ ನಾಯಕನ ಸಾವಿನಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಹೋರಾಟದ ಮೂಲಕವೇ ನೂರಾರು ನಾಯಕರನ್ನು ಬೆಳೆಸಿದ ನೆಚ್ಚಿನ ನಾಯಕನ ಸಾವು ನೋವು ತಂದಿದೆ.
- ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ
ಎಂಎಲ್‌ಸಿಯಾಗಿ, ಎಂಪಿಯಾಗಿ, ಸೇವೆ ಸಲ್ಲಿಸಿದ ಎಸ್.ಮಲ್ಲಿಕಾರ್ಜುನಯ್ಯನವರ ಕೊಡುಗೆ ಅಪಾರ. ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಅವರ ಶ್ರಮ ಅಪಾರ. ಅಂದಿನ ಕ್ಲಿಷ್ಟ ರಾಜಕೀಯದ ನಡುವೆ ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿ ಎಸ್. ಮಲ್ಲಿಕಾರ್ಜುನಯವರದ್ದು. ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದ್ದ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಟ್ಟುವಲ್ಲಿ ಎಸ್.ಎಂ. ಶ್ರಮಿಸಿದರು. ಬಿಜೆಪಿ ಹಿರಿಯ, ರಾಷ್ಟ್ರೀಯ ಮುಖಂಡರಾದ ವಾಜಪೇಯಿ, ಆಡ್ವಾಣಿಯವರೊಂದಿಗಿನ ಒಡನಾಟ, ಕಷ್ಟದ ಸ್ಥಿತಿಯಲ್ಲೂ ಪಕ್ಷ ಮುನ್ನಡೆಸಿದ ನಾಯಕ ಅಗಲಿರುವುದು ಅಪಾರ ನೋವು ತಂದಿದೆ. ಪಕ್ಷಕ್ಕೆ ನಷ್ಟವುಂಟಾಗಿದೆ.
- ಡಿ.ಎಚ್. ಶಂಕರಮೂರ್ತಿ, ವಿಧಾನಪರಿಷತ್ ಸಭಾಪತಿ

ಅಂತ್ಯಕ್ರಿಯೆಗೆ ಆಡ್ವಾಣಿ
ಬೆಂಗಳೂರು: ಶುಕ್ರವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ದಿಲ್ಲಿಯಿಂದ ತುಮಕೂರಿಗೆ ಆಗಮಿಸಲಿರುವ ಬಿಜೆಪಿ ಹಿರಿಯ ಮುಖಂಡ ಲಾಲ್‌ಕೃಷ್ಣ ಆಡ್ವಾಣಿ ಅವರು ಮಲ್ಲಿಕಾರ್ಜುನಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.