ಮಣ್ಣುಮುಕ್ಕಿರುವ ಘಟಾನುಘಟಿಗಳು!
ಕ.ಪ್ರ.ವಾರ್ತೆ , ಕಾರವಾರ , ಮಾ.16
ಚಿತ್ರರಂಗದಲ್ಲಿ ಲಕ್ಷಾಂತರ ಜನರ ಮನಸ್ಸು ಗೆದ್ದ ಅನಂತನಾಗ್, ಕಡಲ ತಡಿಯ ಭಾರ್ಗವ ಎಂದೇ ಬಿಂಬಿತರಾದ ಶಿವರಾಮ್ ಕಾರಂತ, ಅದೆಷ್ಟೋ ಜನರ ಮೆಚ್ಚುಗೆ ಗಳಿಸಿದ್ದ ರಾಮಕೃಷ್ಣ ಹೆಗಡೆ... ಊಹೂಂ ಇವರಾರಿಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಗೆಲ್ಲಲಾಗಲಿಲ್ಲ!
ಇಲ್ಲಿಗೆ ಕಾಲಿಟ್ಟ ಸೆಲೆಬ್ರಿಟಿಗಳು, ಸಾಹಿತಿಗಳು, ಘಟಾನುಘಟಿಗಳು ಸೋತು ಹೋಗುವಂತಾಯಿತು. ಉತ್ತರ ಕನ್ನಡದ ಮತದಾರ ಇಂಥ ಅಚ್ಚರಿಯ ಫಲಿತಾಂಶ ನೀಡುತ್ತಲೇ ಬಂದಿದ್ದಾನೆ. ಹಿಂದೆ ಕೆನರಾ ಕ್ಷೇತ್ರವಾಗಿದ್ದ ಇದು ಕ್ಷೇತ್ರ ವಿಂಗಡಣೆ ತರುವಾಯ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವಾಗಿ ಪರಿವರ್ತಿತವಾಯಿತು. ಉತ್ತರ ಕನ್ನಡದ ಜತೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಖಾನಾಪುರ ವಿಧಾನಸಭೆ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದಲ್ಲಿರುವುದು ವಿಶೇಷ.
ಶಿವರಾಮ ಕಾರಂತರಿಗೂ ಸಿಗದ ಗೆಲವು: ಅದು 1989ರ ಚುನಾವಣೆ. ಪರಿಸರ ಹೋರಾಟ ತೀವ್ರವಾಗಿದ್ದ ದಿನಗಳು. ಶರಾವತಿ ಟೇಲರೇಸ್, ಕೈಗಾ ವಿರೋಧಿ ಹೋರಾಟ ತೀವ್ರಗೊಂಡಿತ್ತು. ಆ ಚುನಾವಣೆಯಲ್ಲಿ ಪರಿಸರವಾದಿಗಳು, ಸಾಮಾಜಿಕ ಮುಖಂಡರು, ಹೋರಾಟಗಾರರು ಸೇರಿ ಶಿವರಾಮ ಕಾರಂತ ಅವರನ್ನು ಓಲೈಸಿ ಚುನಾವಣಾ ಕಣಕ್ಕಿಳಿಸಿದರು. ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಉತ್ತರ ಕನ್ನಡದವರೇ ಆದ ಅನಂತನಾಗ್ ಜನತಾದಳದ ಅಭ್ಯರ್ಥಿಯಾಗಿದ್ದರು. ಆಗ ಜನತಾದಳ ಜಿಲ್ಲೆಯಲ್ಲಿ ಬಲವಾಗಿ ಬೇರೂರಿತ್ತು. ಕಾಂಗ್ರೆಸ್ನಿಂದ ಸಾಮಾನ್ಯ ಅಭ್ಯರ್ಥಿ ದೇವರಾಯ ನಾಯ್ಕ ಕಣಕ್ಕಿಳಿಸಲಾಗಿತ್ತು. ಚುನಾವಣಾ ಪ್ರಚಾರ, ಅಭ್ಯರ್ಥಿಗಳನ್ನು ನೋಡಿದಾಗ ಅನಂತನಾಗ್ ಅಥವಾ ಶಿವರಾಮ್ ಕಾರಂತ ಪೈಕಿ ಒಬ್ಬರು ಗೆಲ್ಲುವುದು ಖಚಿತ ಎಂಬ ಭಾವನೆ ಮೂಡಿತ್ತು. ಆದರೆ, ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ದೇವರಾಯ ನಾಯ್ಕ 2,40,571 ಮತಗಳಿಸಿ ಜಯಭೇರಿ ಬಾರಿಸಿದರೆ, ಅನಂತನಾಗ್ 2,09,003 ಮತ ಗಳಿಸಿ ಎರಡನೇ ಸ್ಥಾನ ಗಳಿಸಿದ್ದರು. ಶಿವರಾಮ ಕಾರಂತ 58,902 ಮತ ಗಳಿಸುವಲ್ಲಿ ಮಾತ್ರ ಸಫಲರಾಗಿದ್ದರು.
ಹೆಗಡೆಗೂ ಸೋಲು: 1977ರ ಚುನಾವಣೆ ಮತ್ತೊಂದು ಅಚ್ಚರಿಗೆ ಕಾರಣವಾಯಿತು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ರಾಮಕೃಷ್ಣ ಹೆಗಡೆ ಬಿಎಲ್ಡಿ ಪಕ್ಷದಿಂದ ಕೆನರಾ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕಿಳಿದಾಗ ಎದುರು ಕಾಂಗ್ರೆಸ್ನ ಬಿ.ಪಿ. ಕದಂ ಇದ್ದರು. ಹೆಗಡೆ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಫಲಿತಾಂಶದಲ್ಲಿ 34 ಸಾವಿರ ಮತಗಳ ಅಂತರದಿಂದ ಕದಂ ಗೆಲುವಿನ ಕೇಕೆ ಹಾಕಿದ್ದರು.
1971ರಲ್ಲಿ ಚುಟುಕು ಬ್ರಹ್ಮ, ಸಮಾಜ ಸೇವಕ, ಶಿಕ್ಷಣ ಕ್ರಾಂತಿಯ ಹರಿಕಾರ ದಿನಕರ ದೇಸಾಯಿ ಕಾಂಗ್ರೆಸ್ನ ಬಿ.ವಿ. ನಾಯಕ ಎದುರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ದಿನಕರ ದೇಸಾಯಿ ಸುಲಭವಾಗಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಬಿ.ವಿ. ನಾಯಕ ಸುಮಾರು 97 ಸಾವಿರ ಮತಗಳ ಅಂತರದಿಂದ ಗೆದ್ದು ಬಂದರು. 1980ರಲ್ಲಿ ಜನತಾ ಪಕ್ಷದಿಂದ ಆರ್.ವಿ.ದೇಶಪಾಂಡೆ ಚುನಾವಣೆಗೆ ಧುಮುಕಿದಾಗ ಅವರಿಗೆ ಎದುರಾಳಿಯಾಗಿದ್ದವರು ಕಾಂಗ್ರೆಸ್ನ ದೇವರಾಯ ನಾಯ್ಕ. ದೇಶಪಾಂಡೆಗೆ ಅವರು ಸುಲಭದ ತುತ್ತು ಎಂದುಕೊಂಡಿದ್ದವರಿಗೆ ಫಲಿತಾಂಶ ಆಘಾತ ತಂದಿತ್ತು. ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ದೇವರಾಯ ನಾಯ್ಕ ಗೆದ್ದಿದ್ದರು. 1991ರಲ್ಲೂ ಜನತಾದಳದಿಂದ ಸ್ಪರ್ಧಿಸಿದ್ದ ದೇಶಪಾಂಡೆ ಸೋತರು.
ಕ್ಷೇತ್ರದಲ್ಲಿ ಒಟ್ಟು ಮತದಾರರು 1417184
ಬೆಳಗಾವಿ ಜಿಲ್ಲೆಯ ಖಾನಾಪುರ, ಕಿತ್ತೂರ ಹಾಗೂ ಉ.ಕ. ದ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ.
ಮೂರು ಸಲ ಸೋತ ಆಳ್ವ
2004ರಲ್ಲಿ ಚಿತ್ರನಟ, ಜಿಲ್ಲೆಯವರೇ ಆದ ನೀರ್ನಳ್ಳಿ ರಾಮಕೃಷ್ಣ ಸ್ಪರ್ಧಿಸಿದಾಗಲೂ ಸೋಲನ್ನೇ ಕಾಣಬೇಕಾಯಿತು. ಬಿಜೆಪಿಯ ಅನಂತಕುಮಾರ ಹೆಗಡೆ ಗೆಲವು ಕಂಡರು. ಇನ್ನು ಈಗ ರಾಜ್ಯಪಾಲೆಯಾಗಿರುವ ಮಾರ್ಗರೆಟ್ ಆಳ್ವ 1998, 2004 ಹಾಗೂ 2008ರಲ್ಲಿ ಅನಂತಕುಮಾರ ಹೆಗಡೆ ಅವರಿಂದ ಸೋಲನ್ನು ಅನುಭವಿಸಬೇಕಾಯಿತು.
-ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

