ಪ್ರಧಾನ ಸುದ್ದಿ

ವೈಯಕ್ತಿಕ 'ಕಿಚ್ಚಿ'ಗೆ ಭಸ್ಮವಾದವೇ ಅಭಯಾರಣ್ಯ?

Published On :

ಬೆಂಗಳೂರು: ರಾಷ್ಟ್ರೀಯ ಉದ್ಯಾನಗಳಾದ ಬಂಡೀಪುರ ಮತ್ತು ನಾಗರಹೊಳೆ ಬೆಂಕಿ ಪ್ರಕರಣಗಳನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆ ಇದೆ.
ವಾಸ್ತವದಲ್ಲಿ ಅಭಯಾರಣ್ಯಗಳನ್ನು ನುಂಗಲು ಯತ್ನಿಸಿದ್ದು ಆಕಸ್ಮಿಕ ಬೆಂಕಿ ಅಲ್ಲ. ಅದು ಸ್ಥಳೀಯ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ 'ಹಾಕಿದ ಬೆಂಕಿ' ಎಂದು ಶಂಕಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ವರದಿ ಸಲ್ಲಿಸುತ್ತಿದ್ದಾರೆ. ಅಲ್ಲದೆ ಪ್ರಕರಣವನ್ನು ಸಿಐಡಿಗೆ ವಹಿಸುವಂತೆಯೂ ಶಿಫಾರಸು ಮಾಡಿದ್ದಾರೆ.
ಹೀಗಾಗಿ ಸರ್ಕಾರದ ಉನ್ನತ ಮಟ್ಟದ ಸಭೆ ಮಂಗಳವಾರ ನಡೆಯಲಿದ್ದು, ನಂತರ ತೀರ್ಮಾನ ಹೊರ ಬೀಳಲಿದೆ.
ಅನೇಕ ವಿಚಾರಗಳಲ್ಲಿ ಕಿಡಿಗೇಡಿಗಳು ಅರಣ್ಯ ಇಲಾಖೆ ಮೇಲಿನ ಕೋಪ ಮತ್ತು ಅಧಿಕಾರಿಗಳ ಮೇಲಿನ ದ್ವೇಷವನ್ನು ಬೆಂಕಿ ಮೂಲಕ ಕಾರಿದ್ದಾರೆ. ಒಣಗಿದ್ದ ಬಿದಿರಿನಿಂದಾಗಿ ಬೆಂಕಿ ಬಹುಬೇಗ ವ್ಯಾಪಿಸಿ 1000ಕ್ಕೂ ಹೆಚ್ಚು ಎಕರೆ ಅರಣ್ಯವನ್ನು ಭಸ್ಮ ಮಾಡಿದೆ.
ಬೆಂಕಿ ಕೆನ್ನಾಲಿಗೆ ಲಕ್ಷಾಂತರ ಜೀವರಾಶಿಯನ್ನು ನಾಶ ಮಾಡಿದ್ದು, ಭಾರಿ ಜೀವವೈವಿಧ್ಯವೇ ಬೂದಿಯಾಗಿದೆ.
ಇದರಿಂದಾದ ನಷ್ಟವನ್ನು ಈತನಕ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಆದರೆ, ಇದಕ್ಕೆ ಕಾರಣರಾದವರು ಯಾರು, ಏಕೆ ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಗುರುವಾರ ಬಂಡೀಪುರ ಅರಣ್ಯದ ಮಂಗಲ ಚೈನ್‌ಗೇಟ್ ಬಳಿ ಬೆಂಕಿ ಕಾಣಿಸಿಕೊಂಡು ನಂತರ ರಾಷ್ಟ್ರೀಯ ಹೆದ್ದಾರಿ 67ರ ಸುತ್ತಮುತ್ತ ಕಾಡು ಹೊತ್ತಿ ಉರಿದಿದೆ. ಅದೇರೀತಿ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಆನೆಚೌಕೂರು ಮತ್ತು ಹುಣಸೂರು ವಿಭಾಗದ ಮಾವುಕಲ್ ಅರಣ್ಯದಲ್ಲಿ ಬಂಕಿ ಕಾಣಿಸಿಕೊಂಡಿದೆ. ಅಲ್ಲಿ 300 ಎಕರೆಗೂ ಹೆಚ್ಚು ಅರಣ್ಯ ಬಸ್ಮವಾಗಿದೆ.
ಈಗ ಎರಡೂ ಕಡೆ ತಲಾ 300ಕ್ಕೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದ್ದು, ದಿನವೀಡೀ ವಾಚ್ ಟವರ್ ಮೂಲಕ ಸಿಬ್ಬಂದಿ ಗಸ್ತು ನಡೆಸುವಂತೆಯೂ ಸೂಚಿಸಲಾಗಿದೆ.
ಕೆರೆ ವಿವಾದ ಕಾರಣವೇ ?: ಬಂಡೀಪುರ ಅರಣ್ಯ ವ್ಯಾಪ್ತಿ ಬೆಂಕಿಗೆ ಕೆರೆ ವಿವಾದ ಮತ್ತು ಮೀನುಗಾರಿಕೆ ಅಕ್ರಮಗಳು ಥಳುಕು ಹಾಕಿಕೊಂಡಿವೆ. ಅಂದರೆ ಇಲ್ಲಿರುವ ಕೆರೆಗಳಲ್ಲಿ ಮೀನುಗಾರಿಕೆ ಅವಕಾಶ ನೀಡಬೇಕೆನ್ನುವ ಬಗ್ಗೆ ಅರಣ್ಯ ಇಲಾಖೆಗೂ ಮತ್ತು ಕೆಲವು ಸ್ಥಳೀಯರಿಗೂ ಘರ್ಷಣೆ ನಡೆಯುತ್ತಿದೆ. ಹೀಗಾಗಿ ಇಲಾಖೆಯನ್ನು ವಿರೋಧಿಸುವ ಸ್ಥಳೀಯರಿಗೆ ಕಾಡಂಚಿನ ವಾಸಿಗಳ ಬೆಂಬಲವೂ ಇತ್ತು. ಏಕೆಂದರೆ, ಅವರಿಗೆ ದನ ಮೇಯಿಸಲು ಮತ್ತು ಕಾಡು ಪ್ರವೇಶಕ್ಕೆ ಅರಣ್ಯ ಸಿಬ್ಬಂದಿ ಅವಕಾಶ ನೀಡುವುದಿಲ್ಲ ಎಂಬ ಕೋಪವಿದೆ. ಈ ಹಿನ್ನೆಲೆಯಲ್ಲಿ ಕಿಡಿಕೇಡಿಗಳು ಸ್ಥಳೀಯರ ಬೆಂಬಲದೊಂದಿಗೆ ಬೆಂಕಿ ಹೊತ್ತಿಸಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಹುಲಿ ಗಲಾಟೆ ಇರಬಹುದೇ?: ನಾಗರಹೊಳೆ ಅರಣ್ಯ ಅಂಚಿನಲ್ಲಿ ನಡೆದ ಹುಲಿ ದಾಳಿ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸ್ಥಳೀಯರಿಗೂ ಇಲಾಖೆ ಅಧಿಕಾರಿಗಳಿಗೆ ಸೀತಲ ಘರ್ಷಣೆ ನಡೆಯುತ್ತಲೇ ಇದೆ. ಇದರ ಫಲವೇ ಶುಕ್ರವಾರ ಅಭಯಾರಣ್ಯ ನುಂಗುವಂತೆ ಬೆಂಕಿ ಕಾಣಿಸಿಕೊಂಡಿದ್ದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.
ಎರಡೂ ಅರಣ್ಯಗಳಲ್ಲೂ ಸಾಕಷ್ಟು ಒಣಗಿನ ಬಿದಿರು ಇದೆಯಾದರೂ ಅವು ಪರಸ್ಪರ ತಿಕ್ಕಾಟದಿಂದ ಬೆಂಕಿ ಹೊತ್ತಿಕೊಳ್ಳುವ ಸನ್ನಿವೇಶ ಇಲ್ಲ. ಅಷ್ಟೇ ತೀವ್ರತೆ ಬೇಸಿಗೆಯೂ ಅಲ್ಲಿಲ್ಲ. ಹೀಗಾಗಿ ಇದು ಪಕ್ಕಾ ಸ್ಥಳೀಯ ಕಿಡಿಗೇಡಿಗಳ ಕೃತ್ಯ ಇರಬಹುದೆಂದು ಶಂಕಿಸಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ದೂರನ್ನೂ ಸಲ್ಲಿಸಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ತನಿಖೆಯನ್ನೂ ನಡೆಸಿದ್ದು, ಉನ್ನತ ಮಟ್ಟದ ಸಭೆ ನಂತರ ಎರಡೂ ಬೆಂಕಿ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸುವ ಸಾಧ್ಯತೆಯೂ ಇದೆ.
ಸದ್ಯದಲ್ಲೇ ಸ್ಯಾಟಲೈಟ್ ವರದಿ ?: ರಾಷ್ಟ್ರೀಯ ಉದ್ಯಾನಗಳಲ್ಲಿ ವ್ಯಾಪಿಸಿದ್ದ ಬೆಂಕಿ ಎಷ್ಟು ಅರಣ್ಯವನ್ನು ನುಂಗಿದೆ ಎನ್ನುವ ಬಗ್ಗೆ ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಸದ್ಯದಲ್ಲೇ ಚಿತ್ರ ಸಹಿತ ವರದಿ ನೀಡಲಿದೆ. ಇದರಿಂದ ಎಷ್ಟು ವ್ಯಾಪ್ತಿಯಲ್ಲಿ ಅರಣ್ಯ ನಾಶವಾಗಿದೆ. ಅರಣ್ಯ ಸಂಪತ್ತಿನ ನಷ್ಟ ಎಷ್ಟು ಎಂದು ಅಂದಾಜು ಮಾಡಲು ಸಾಧ್ಯವಾಗಲಿದೆ.
ಅಭಯಾರಣ್ಯದಲ್ಲಿ ಬೆಂಕಿ ತನಿಖೆಗೆ ಆದೇಶ
ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯದಲ್ಲಿ ಸಂಭವಿಸಿರುವ ಬೆಂಕಿ ಅನಾಹುತ ಸಂಬಂಧ ತನಿಖೆ ನಡೆಸಲು ಆದೇಶಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಸಾವಿರಾರು ಎಕರೆ ಅರಣ್ಯ ಸಂಪತ್ತು, ವನ್ಯಜೀವಿಗಳು ನಾಶವಾಗಿವೆ. ಈ ಪ್ರಕರಣ ಕುರಿತು ಸೂಕ್ತ ತನಿಖೆ ಆದೇಶಿಸಲಾಗಿದೆ. ಈವರೆಗೂ ಯಾರನ್ನು ಸಹ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.


-ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.