'ಆಧಾರ್' ಈಗ ಅಬ್ಬೇಪಾರಿ

ವಿಶೇಷ ವರದಿ
ಬೆಂಗಳೂರು: ಲೋಕಸಭಾ ಚುನಾವಣೆ ಭರಾಟೆಯಲ್ಲಿ 'ಆಧಾರ್' ಅಲ್ಲಾಡುತ್ತಿದೆ.
ಇತ್ತೀಚಿಗೆ ಆಧಾರ್ ನೋಂದಣಿ ಕೇಂದ್ರಗಳು ಜನರಿಲ್ಲದೆ ಸೊರಗುತ್ತಿದ್ದು, ನೋಂದಣಿ ಕಾರ್ಯ ಕುಂಟುತ್ತಿದೆ. ಅಷ್ಟೇ ಅಲ್ಲ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಧಾರ್ ನೋಂದಣಿ ಕಾರ್ಯ ಸ್ಥಗಿತವಾದರೂ ಅಚ್ಚರಿ ಇಲ್ಲ. ಈತನಕ ಆಧಾರ್ ಕಾರ್ಡ್ ನೋಂದಣಿಗಾಗಿ ಜನ ಸೇವಾ ಕೇಂದ್ರಗಳಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುತ್ತಿದ್ದರು. ಆದರೆ ಈಗ ಜನ ಸೇವಾ ಕೇಂದ್ರಗಳತ್ತ ಸುಳಿಯುತ್ತಲೂ ಇಲ್ಲ. ಇದರಿಂದ ತಮಗೆ ನಷ್ಟವಾಗುತ್ತಿದೆ ಎಂದು ನೋಂದಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳು ಹೇಳುತ್ತಿವೆ. ಜನ ಸಿಗುವ ಕಡೆ ಸೇವಾ ಕೇಂದ್ರಗಳನ್ನು ಎತ್ತಂಗಡಿ ಮಾಡಿಸುತ್ತಿವೆ.
ಈ ಮಧ್ಯೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ನಂದನ್ ನಿಲೇಕಣಿ, ಆಧಾರ್ ಯೋಜನೆಯ ಲಾಭ ಪಡೆಯುವ ಬಗ್ಗೆ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರು, ಎನ್ಡಿಎ ಅಧಿಕಾರಕ್ಕೆ ಬಂದರೆ ಆಧಾರ್ ಯೋಜನೆಯನ್ನೇ ಪುನರ್ ಪರಿಶೀಲಿಸುವ ಪ್ರಸ್ತಾಪ ಮಾಡುತ್ತಿದ್ದಾರೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಸರ್ಕಾರದ ಆಧಾರ್ ಯೋಜನೆ ಆಮಿಷಕ್ಕೇನಾದರೂ ದಾರಿ ಮಾಡಬಹುದೇ ಎಂದು ಚಿಂತಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಆಧಾರ್ ತಾತ್ಕಾಲಿಕವಾಗಿ ಸ್ಥಗಿತವಾದರೂ ಅಚ್ಚರಿಯಿಲ್ಲ.
ನೋವಿನಲ್ಲಿ ನೋಂದಣಿ ಕಾರ್ಯ: ಬಹು ಬಳಕೆಯ ಯೂನಿಕ್ ಐಡೆಂಟಿಫಿಕೇಷನ್ ಪ್ರಾಧಿಕಾರದ ಆಧಾರ್ ಯೋಜನೆ ರಾಜ್ಯದಲ್ಲಿ ಭಾಗಶಃ ಮುಗಿಯುವ ಹಂತಕ್ಕೆ ಬರುತ್ತಿದೆ. ಈಗಾಗಲೇ 4.86ಕೋಟಿ ಜನರನ್ನು ಇದರಲ್ಲಿ ನೋಂದಣಿ ಮಾಡಿಸಲಾಗಿದ್ದು, 4.32ಕೋಟಿ ಕಾರ್ಡ್ಗಳ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಉಳಿದ 1.5ಕೋಟಿಗೂ ಹೆಚ್ಚು ಜನರ ನೋಂದಣಿ ಮಾಡುವ ಹೊರಗುತ್ತಿಗೆಯನ್ನು 7 ಪ್ರಮುಖ ಐಟಿ ಸಂಸ್ಥೆಗಳಿಗೆ ನೀಡಲಾಗಿದೆ.
ಈ ಸಂಸ್ಥೆಗಳು ರಾಜ್ಯದ್ಯಾಂತ 2000 ನೋಂದಣಿ ಕೇಂದ್ರಗಳನ್ನು ನಡೆಸುತ್ತಿದ್ದವು. ಈತನಕ ನಿತ್ಯ 60,000 ಜನರನ್ನು ನೋಂದಣಿಯೂ ಆಗುತ್ತಿತ್ತು. ಆದರೆ ಈಗ ನೋಂದಣಿ 20,000ಕ್ಕಿಂತಲೂ ಕಡಿಮೆಯಾಗಿದೆ.
ತುಂಬಲಾರದ ನಷ್ಟ: ಒಂದು ನೋಂದಣಿ ಕೇಂದ್ರದಲ್ಲಿ ದಿನಕ್ಕೆ 50ಜನ ನೋಂದಣಿ ಮಾಡಬಹುದು. ಆದರೆ ಈಗ 5ಜನ ಬಂದರೇ ಹೆಚ್ಚು. ಸಾಮಾನ್ಯ ನೋಂದಣಿ ಗುತ್ತಿಗೆ ಕಂಪನಿಗಳು ಸೇವಾ ಕೇಂದ್ರಗಳಲ್ಲಿ ಕನಿಷ್ಠ 3 ಸಿಬ್ಬಂದಿ ಸಹಾಯಕರೊಂದಿಗೆ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಜನರೇಟರ್ ಸೇರಿದಂತೆ ವಿವಿಧ ಯಂತ್ರೋಪಕರಣಗಳನ್ನು ಅಳವಡಿಸಿ ಜನರಿಗಾಗಿ ಕಾಯುತ್ತಿರುತ್ತಾರೆ.
ಅಭ್ಯರ್ಥಿ ನೋಂದಣಿ ಮಾಡಿದ ಪ್ರಕ್ರಿಯೆ ಕಾರ್ಡ್ ಆಗಿ ಹೊರ ಬರುವವರೆಗೂ ನೋಂದಣಿ ಸಂಸ್ಥೆಯದೇ ಹೊಣೆ. ಅಭ್ಯರ್ಥಿಯ ಕಾರ್ಡ್ ಮುದ್ರಣವಾದರೆ ಮಾತ್ರ ನೋಂದಣಿ ಸಂಸ್ಥೆಗೆ ಹಣ ಸಿಗುತ್ತದೆ. ನೋಂದಣಿಯಾಗಿದ್ದು ಕಾರ್ಡ್ ಆಗದಿದ್ದರೆ ಆ ಸಂಸ್ಥೆಗೆ ಯುಐಡಿಎಐ ಹಣ ನೀಡುವುದಿಲ್ಲ.
ಹೀಗಾಗಿ ಚುನಾವಣೆ ಹಿನ್ನೆಲೆಯಲ್ಲಿ ಸೇವಾ ಕೇಂದ್ರಗಳಿಗೆ ಜನರೇ ಹೋಗದ ಕಾರಣ ನೋಂದಣಿ ಸಂಸ್ಥೆಗೆ ನಷ್ಟ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು ಆ ಸಂಸ್ಥೆಗಳು ಜನ ಸಿಗುವ ಕಡೆಗೆ ಎತ್ತಂಗಡಿಯಾಗುತ್ತಿವೆ. ತಿಂಗಳ ಹಿಂದೆ ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ಬಡಾವಣೆಯಲ್ಲಿ ನೋಂದಣಿ ಆರಂಭಿಸಿ ಎಂದು ಆಧಾರ್ ಯೋಜನೆ ಜಾರಿ ಕಚೇರಿಗೆ ಕರೆ ಮಾಡುತ್ತಿದರು. ಆದರೆ ಈಗ ನೋಂದಣಿಗಾಗಿ ಯೂರೂ ಕರೆಗಳು ಮಾಡುತ್ತಿಲ್ಲ. ಹೀಗಾಗಿ ಆಧಾರ್ ಸದ್ದಡಗಿ ಹೋಗಿದ್ದು, ಮುಂದೆ ಏನಾಗುವುದೇ ಗೊತ್ತಿಲ್ಲ ಎಂದು ಆಧಾರ್ ಯೋಜನೆ ಜಾರಿ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.
ವರ್ಷದಿಂದಲೂ ಕಾರ್ಡ್ ಬಂದಿಲ್ಲ
ಯುಐಡಿಎಐ ಪ್ರಾಧಿಕಾರ ರಾಜ್ಯದಲ್ಲಿ 4ಕೋಟಿಗೂ ಹೆಚ್ಚು ಜನರಿಗೆ ಕಾರ್ಡ್ ನೀಡಲಾಗಿದೆ ಎನ್ನುತ್ತಿದೆ. ಆದರೆ ರಾಜ್ಯದ ಅನೇಕ ಕಡೆ ನೋಂದಣಿ ಮಾಡಿಸಿದವರಿಗೆ ವರ್ಷವೇ ಆದರೂ ಕಾರ್ಡ್ ಬಂದಿಲ್ಲ. ಹೀಗೆ ನೋಂದಣಿ ನಂತವೂ ಕಾರ್ಡ್ ಸಿಗದೆ ನೊಂದವರು ಸಾವಿರಾರು. ಇಂಥವರಿಗೆ ಮತ್ತೆ ಹೊಸ ಕಾರ್ಡ್ ಸಿಗುವುದಿಲ್ಲ. ಏಕೆಂದರೆ, ಆಧಾರ್ ನೋಂದಣಿ ಮಾಡುವುದು ಒಂದು ಬಾರಿ ಮಾತ್ರ. ಮತ್ತೆ ನೋಂದಣಿಗೆ ಯತ್ನಿಸಿದರೆ ಅದು ತಿರಸ್ಕೃತವಾಗುತ್ತದೆ. ಹೀಗಾಗಿ ಕಾರ್ಡ್ ಸಿಗದಿದ್ದರೆ ಇ-ಆಧಾರ್ನಲ್ಲಿ ಆಧಾರ್ ಚೀಟಿ ಪಡೆಯಬಹುದು. ಅದನ್ನೇ ಆಧಾರ್ ಕಾರ್ಡ್ ಎಂದು ಪರಿಗಣಿಸಬಹುದು ಎಂದು ರಾಜ್ಯ ಆಧಾರ್ ರಿಜಿಸ್ಟ್ರಾರ್ ನೋಂದಣಿ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


