ಎರಡು ಕ್ಷೇತ್ರ; ಏನಿದರ ಲೆಕ್ಕಾಚಾರ?

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಎರಡೆರಡು ಸ್ಥಾನಗಳಲ್ಲಿ ಸ್ಪರ್ಧಿಸುವ ಅಗತ್ಯವಿದೆಯೇ? ಮೋದಿ ಗುಜರಾತ್ ಹೊರಗೆ ಸ್ಪರ್ಧಿಸುತ್ತಿರುವುದು ಯಾಕೆ? ಸೋಲಿನ ಭೀತಿ ಕಾಡುತ್ತಿದೆಯೇ? ಇಂಥ ಹಲವು ಪ್ರಶ್ನೆಗಳು ಈಗ ಬಹುತೇಕರ ತಲೆ ತಿನ್ನುತ್ತಿದೆ.
ಹೌದು, ಬಹುತೇಕರು ಅಲ್ಲವಾದರೂ ಕೆಲ ಮುಖಂಡರು ಸೋಲುವ ಭೀತಿಯಿಂದಲೇ ಎರಡೆರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ. ಎರಡೂ ಕ್ಷೇತ್ರದಲ್ಲಿ ಗೆದ್ದರೆ ಗೌರವ, ಕೊನೆಗೆ ಒಂದರಲ್ಲಾದರೂ ಗೆದ್ದ ನೆಮ್ಮದಿಯಾದರೂ ಸಿಗುತ್ತದಲ್ವಾ ಎನ್ನುವುದು ಬಹುತೇಕರ ಲೆಕ್ಕಾಚಾರ. ಆದರೆ, ಮೋದಿ ಮತ್ತು ಮುಲಾಯಂ ಅವರು ಸುಲಭಕ್ಕೆ ಅರ್ಥವಾಗದ ಲೆಕ್ಕಾಚಾರ. ಇವರಿಬ್ಬರಿಗೂ ಸ್ವಕ್ಷೇತ್ರದಲ್ಲಿ ಸೋಲುವ ಭೀತಿ ಇಲ್ಲ. ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಹಿಂದಿರುವುದು ಬೇರೆ ತಂತ್ರಗಾರಿಕೆ.
ಶಕ್ತಿ ಪ್ರದರ್ಶನ: ಮೋದಿ ಅಲೆ ಈಗ ಗುಜರಾತ್ಗಷ್ಟೇ ಸೀಮಿತವಲ್ಲ. ದೇಶದ ಮೂಲೆ ಮೂಲೆಯಲ್ಲೂ ಮೋದಿ ಪರ ಅಭಿಮಾನ ಇದೆ. ಹೀಗಾಗಿ ಗುಜರಾತ್ ಅಭಿವೃದ್ಧಿ ಕುರಿತು ಪದೇ ಪದೆ ಮಾತನಾಡುತ್ತಿದ್ದರೂ ಗುಜರಾತ್ನಾಚೆಗೂ ಗೆಲ್ಲುವ ಸಾಮರ್ಥ್ಯ ಇದೆ ಎನ್ನುವ ಸಂದೇಶ ಸಾರುವುದು.
80 ಸೀಟು: ಉತ್ತರಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಕಳೆದ ಲೋಕಸಭೆಯಲ್ಲಿ ಏಳು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ. ಸಮೀಕ್ಷೆಗಳಲ್ಲೂ ಇದು ಸಾಬೀತಾಗಿದೆ. ಮುಜಾಫರನಗರ ಗಲಭೆ ಈಗಾಗಲೇ ಪಶ್ಚಿಮ ಉತ್ತರಪ್ರದೇಶದಲ್ಲಿ ಹಿಂದು ಮತ್ತು ಮುಸ್ಲಿಂ ಮತದಾರರ ಮೇಲೆ ಪರಿಣಾಮ ಬೀರಿದೆ. ಪೂರ್ವದಲ್ಲೂ ಅದೇ ರೀತಿಯ ಪ್ರಚೋದನೆ ಬೇಕಿತ್ತು. ಮೋದಿ ವಾರಾಣಸಿಯಿಂದ ಸ್ಪರ್ಧಿಸುವುದರಿಂದ ಅನಿವಾರ್ಯವಾಗಿ ಬಿಎಸ್ಪಿ ಮತ್ತು ಮುಲಾಯಂ ಸಿಂಗ್ ಯಾದವ್ ಅವರು ಸಹಜವಾಗಿಯೇ ಮುಸ್ಲಿಂ ಮತದಾರರ ಓಲೈಕೆಗೆ ಮುಂದಾಗುತ್ತಾರೆ. ಇದರ ಒಟ್ಟಾರೆ ಪರಿಣಾಮ ಹಿಂದೂ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲುತ್ತದೆ.
ಸೋಮನಾಥದಿಂದ ವಿಶ್ವನಾಥ:
ಗುಜರಾತ್ನ ಸೋಮನಾಥಪುರ ಮತ್ತು ಕಾಶಿ ಎರಡೂ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರಗಳು. ಹಿಂದೂ ರಾಷ್ಟ್ರೀಯವಾದವನ್ನು ಪ್ರತಿಪಾದಿಸುವ ಮೋದಿ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಮತ್ತೊಮ್ಮೆ ಹಿಂದೂಗಳನ್ನು ಒಂದುಗೂಡಿಸುವ ಹಾಗೂ ಪೂರ್ವ ಮತ್ತು ಪಶ್ಚಿಮವನ್ನು ಬೆಸೆಯುವ ಪ್ರಯತ್ನ ಮಾಡಿದ್ದಾರೆ. ರಾಮಮಂದಿರ ನಿರ್ಮಾಣ ಮತ್ತು ಹಿಂದುತ್ವವನ್ನು ಈ ಚುನಾವಣೆಯಲ್ಲಿ ನೇರವಾಗಿ ಪ್ರಸ್ತಾಪಿಸಿಲ್ಲ ನಿಜ. ಆದರೆ, ಮೋದಿ ಅವರ ವಾರಾಣಸಿ ಸ್ಪರ್ಧೆ ಹಿಂದೆ ಹಿಂದುತ್ವದ ನಿಲುವನ್ನು ಸೂಕ್ಷ್ಮವಾಗಿ ತೋರ್ಪಡಿಸುವ ಲೆಕ್ಕಾಚಾರ ಅಡಗಿದೆ.
ಲಖನೌ- ಪಟನಾ ನಡುವೆ ವಾರಾಣಸಿ: ಹಿಂದುಳಿದ ವರ್ಗಕ್ಕೆ ಸೇರಿದ ಮೋದಿ ವಾರಾಣಸಿಯಿಂದ ನಡೆಸುವ ಸ್ಪರ್ಧೆ ಬಿಹಾರದ ಮೇಲೂ ಪರಿಣಾಮ ಬೀರಲಿದೆ. ಕನಿಷ್ಠ ಪಶ್ಚಿಮ ಬಿಹಾರದ ಮತದಾರರ ಮೇಲೆ ಮೋದಿ ಜಾದು ಕೆಲಸ ಮಾಡುವ ನಿರೀಕ್ಷೆ ಇದೆ.
ಮುಲಾಯಂ ಲೆಕ್ಕಾಚಾರ
ಮುಜಾಫರನಗರ ಗಲಭೆ ಬಳಿಕ ಸಮಾಜವಾದಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಮುಸ್ಲಿಂ ಮತಗಳು ಪಕ್ಷದ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. ಮೋದಿ ವಾರಾಣಸಿಯಿಂದ ಸ್ಪರ್ಧಿಸಿದರೆ ಯಾದವ ಮತಗಳೂ ಕೈಬಿಟ್ಟು ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೋದಿ ಅಲೆಯನ್ನು ವಾರಾಣಸಿಗೆ ಸೀಮಿತಗೊಳಿಸಲು, ಮುಸ್ಲಿಂ ಮತಗಳನ್ನು ಹಿಡಿದಿಟ್ಟುಕೊಳ್ಳಲು ಮುಲಾಯಂ ಸ್ವಕ್ಷೇತ್ರ ಮೈಯಿನ್ಪುರಿಯ ಜತೆಗೆ ಅಜಂಗಡದಿಂದಲೂ ಸ್ಪರ್ಧಿಸುತ್ತಿದ್ದಾರೆ. ಅಜಂಗಡ ವಾರಾಣಸಿಗೆ ಸಮೀಪದಲ್ಲೇ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


