'ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕಿತ್ತು'
ಈತ ನಿರೀಶ್ವರವಾದಿ-ದೇವರು ಇದ್ದಾನೆ ಎಂದು ವಾದಿಸುವವರನ್ನು ಗೇಲಿ ಮಾಡಬಲ್ಲ. ಖುಷ್ವಂತ್ ಸಿಂಗ್ ತರಹದವರು ದೇವರು ಇದ್ದಾನೆ, ಇಲ್ಲ ಎಂಬುದರ ನಡುವಿನ ಸಂದಿಗ್ಧತೆಯ ಲಾಭ ಪಡೆದವರು. ಮನುಷ್ಯ ಧ್ಯಾನಿಸಿದರೆ, ಮಾತಾಡಿದರೆ, ಮೋಹಿಸಿದರೆ ದ್ವೇಷಿಸಿದರೆ- ಬೇರೆ ಬೇರೆ ರೀತಿಯಲ್ಲಿ ಕಾಣಬಹುದಾದ ದೇವರು ವಿಚಿತ್ರ. ಖುಷ್ವಂತ್ ಗಡ್ಡ ಪೇಟ ತೆಗೆಯುವುದಿಲ್ಲ; ಸಿಖ್ ವೇಷಭೂಷಣ ಇದ್ದರೇ ತನಗೆ ವ್ಯಕ್ತಿತ್ವ ಎಂದು ನಂಬಿದಾತ. ಇದರಿಂದಾಗಿ ಈತನ ಮಗ ರಾಹುಲ್ ಸಿಂಗ್ ಗಡ್ಡ ಬೋಳಿಸಿಕೊಂಡಾಗ ಆಕ್ಷೇಪಣೆ ಎತ್ತಿ ಜಗಳ ಆಡಿದ್ದ. ಗಡ್ಡ ಇಲ್ಲದಿದ್ದರೆ ನಿನಗೆ ನಿನ್ನತನವೇ ಇಲ್ಲ ಎಂದು ಖಂಡಿಸಿ ಅನೇಕ ದಿನ ಮಾತು ಬಿಟ್ಟ. ಆದರೆ, ಒಬ್ಬನೇ ಮಗ ರಾಹುಲ್; ಬರೆಯಬಲ್ಲವನು ಮತ್ತು ಅಖಂಡ ಬ್ರಹ್ಮಚಾರಿ, ಭಾರತದ ಜನಸಂಖ್ಯೆಯ ಸಮಸ್ಯೆಯ ಬಗ್ಗೆ, ಕುಟುಂಬ ನಿಯಂತ್ರಣದ ಬಗ್ಗೆ ಸಮರ್ಥವಾಗಿ ಬರೆಯಬಲ್ಲವನು. ಆದ್ದರಿಂದ ಮಗನ ಬಗ್ಗೆ ಖುಷ್ವಂತ್ಗೆ ಹೆಮ್ಮೆ; ಹೆಂಡತಿಯ ಒಳ್ಳೆಯತನ, ದಿಲ್ಲಿಯ ಸೌಂದರ್ಯ, ಭಾರತದ ವೈವಿಧ್ಯ, ಬದುಕಿನ ರಸವಂತಿಕೆ, ಬರೆಯುವ ರೋಮಾಂಚನ ಎಲ್ಲ ಖುಷ್ವಂತ್ಗೆ ಇಷ್ಟ.
ಎಂಬತ್ತು ತುಂಬಿದ ಖುಷ್ವಂತ್ ಮೂಲಭೂತವಾಗಿ ಪಂಜಾಬ್ನ ಹಳ್ಳಿಯ ಮನುಷ್ಯ; ಆತನ ಅನೇಕ ಸಮಕಾಲೀನರಂತೆಯೇ ಹಳ್ಳಿಯ ಸರಳತೆ ಮತ್ತು ಮುಗ್ಧತೆಯನ್ನು ಬಿಟ್ಟುಕೊಡದೆ ಪೇಟೆಯ ಆಧುನಿಕತೆಗೆ ಮಾರು ಹೋದವನು. ಈತ ಬದುಕಿಬಂದ ರೀತಿ ಕೂಡ ಈ ದೃಷ್ಟಿಯಿಂದ ಕುತೂಹಲಕರ. ಚಿಕ್ಕವನಿದ್ದಾಗ ವಕೀಲನಾಗಿದ್ದ. ಆದರೆ, ಎಂಥ ಸಾಮಾನ್ಯ ವಕೀಲನೆಂದರೆ ಇವನಲ್ಲಿಗೆ ಕೇಸ್ ತರುತ್ತಿದ್ದವರೇ ಕಮ್ಮಿ. ಹೀಗಾಗಿ ಇಂಗ್ಲಿಷ್ ಸಾಹಿತ್ಯದ ಪದವೀಧರನಾಗಿದ್ದ ಖುಷ್ವಂತ್ ಆರ್.ಕೆ. ನಾರಾಯಣನ್, ಮುಲ್ಕರಾಜ್ ಆನಂದ್ ಮುಂತಾದವರ ಪುಸ್ತಕ ಓದತೊಡಗಿದ. ಕೆಲಸವಿಲ್ಲದೆ ಬಿಡುವು ಹೆಚ್ಚಾಗಿದ್ದರಿಂದ ಪದ್ಯ ಬರೆಯತೊಡಗಿದ. ಈ ಪದ್ಯ ಓದಲು ಲಾಹೋರ್ನ ತನ್ನ ಮಿತ್ರರನ್ನೆಲ್ಲ ಸೇರಿಸಿ ಸಂಘವೊಂದನ್ನು ಕಟ್ಟಿಕೊಂಡ. ಆ ಮೇಲೆ ಆತ ಸರ್ಕಾರಿ ನೌಕರಿಗಾಗಿ ಪ್ರಯತ್ನಿಸಿದ. ಸರ್ದಾರ್ ಪಟೇಲ್ ಕಾರ್ಯದರ್ಶಿಯೊಬ್ಬ ಈತನನ್ನು ಲಂಡನ್ನ ರಾಯಭಾರ ಕಚೇರಿಯ ನೌಕರನನ್ನಾಗಿ ನೇಮಿಸಿದ. ಅಲ್ಲಿ ಕೃಷ್ಣ ಮೆನನ್ ಪರಿಚಯವಾಯಿತು. ಭಾರತಕ್ಕೆ ಕಮ್ಯುನಿಸ್ಟ್, ಸೋಷಲಿಸ್ಟರ ಮಂಕುಬೂದಿ ಬಿದ್ದಿದ್ದಾಗ ಖುಷ್ವಂತ್ ಈ ಕೃಷ್ಣ ಮೆನನ್ನ ಭಂಡತನ, ಕೇಡಿತನ ನೋಡಿ ದಂಗಾದ. ದಿಲ್ಲಿಗೆ ಬಂದ ಮೇಲೆ ಸರ್ಕಾರಿ ಪತ್ರಿಕೆ 'ಯೋಜನಾ'ದ ಸಂಪಾದಕನಾದ. ಸರ್ಕಾರಿ ಪತ್ರಿಕೆಗೆ ಏನು ಮಾಡಿದರೂ ಜೀವ ಬರುವುದಿಲ್ಲವೆಂದು ಕಂಡುಕೊಂಡ ಖುಷ್ವಂತ್ ಅದನ್ನು ಬಿಟ್ಟು 'ಇಲಸ್ಟ್ರೇಟೆಡ್ ವೀಕ್ಲಿ'ಯ ಸಂಪಾದಕನಾದ. ಖುಷ್ವಂತ್ನ ಜನಪ್ರಿಯತೆ ನಿಂತಿರುವುದು ವೀಕ್ಲಿಯ ಸಂಪಾದಕತ್ವದ ಮೇಲೆ.
ಹೆಂಗಸರನ್ನು ಕಂಡು ಈ ಖುಷ್ವಂತ್ ಬಾಯಿ ಬಾಯಿ ಬಿಡುವುದು ನಿಜ. ಅದರಲ್ಲಿ ಬಹುಪಾಲು ತುಂಟತನದ ಹೇಳಿಕೆ. ಇವೆಲ್ಲದರ ಮಧ್ಯೆ ಖುಷ್ವಂತ್ ಬಗ್ಗೆ ಒಂದು ಮಾತು ನಿಜ. ಈತ ಎಲ್ಲ ಆರೋಗ್ಯವಂತ ಮನುಷ್ಯರಂತೆ ಜೀವನವನ್ನು ಬಹುವಾಗಿ ಪ್ರೀತಿಸುತ್ತಾನೆ; ಕುಡಿಯುತ್ತಾನೆ, ಉಣ್ಣುತ್ತಾನೆ, ಹೊಗಳಿದರೆ ಮುದಗೊಳ್ಳುತ್ತಾನೆ, ಹಣ ಕಂಡು ಉಲ್ಲಸಿತನಾಗುತ್ತಾನೆ. ಸುಂದರ ಹೆಂಗಸಿನ ಎದುರು ರೆಕ್ಕೆಪುಕ್ಕ ಬೆಳೆಸಿಕೊಂಡು ಕುಣಿಯುತ್ತಾನೆ. ಎಲ್ಲ ಗಂಡಸರೂ ಹಾಗೆ. ಅದರಲ್ಲಿ ಅಂಥ ವಿಶೇಷವೇನಿಲ್ಲ. ಆದರೆ, ಈ ಸರ್ದಾರ್ಜಿ ಬಗ್ಗೆ ವಿಶೇಷವೇನೆಂದರೆ ಜೀವನವನ್ನು ಬಹುವಾಗಿ ಪ್ರೀತಿಸುವ ಈತ ಎಲ್ಲ ಜಾತಿಯ ಜನರನ್ನು ಪ್ರೀತಿಸುತ್ತಾನೆ. ಈ ಖುಷ್ವಂತ್ ಪಾಕಿಸ್ತಾನ ಮತ್ತು ಭಾರತವನ್ನು ಹತ್ತಿರ ತರುವಲ್ಲಿ, ಸಿಖ್ ಜನ ಭಾರತದಲ್ಲೇ ಉಳಿದು ನೆಮ್ಮದಿಯಾಗಿರುವಲ್ಲಿ ಮಾಡಿದಷ್ಟು ಕೆಲಸ ಯಾವನೂ ಮಾಡಿಲ್ಲ. ಇದನ್ನು ಸರ್ದಾರ್ಜಿ ಗಂಭೀರವಾಗಿ, ಅಳುಮೋರೆಯಿಂದ ಮಾಡಿಲ್ಲ. ಈತ ನಗುನಗುತ್ತಲೇ ಕುಡಿಯುತ್ತಲೇ ಬದುಕನ್ನು ಪ್ರೀತಿಸುತ್ತಲೇ ಮಾಡಿದ್ದಾನೆ. ಈ ದೇಶದಲ್ಲಿ ಶಾಂತಿಗಾಗಿ ನೊಬೆಲ್ ಬಹುಮಾನ ಸಿಗಬೇಕಾಗಿದ್ದರೆ ಅದು ಸಿಗಬೇಕಾದದ್ದು ಖುಷ್ವಂತ್ಗೆ.
ಖುಷ್ವಂತ್ಗೆ ಎಂಬತ್ತು ವರ್ಷ. ಆತನಂತೆ ಬರೆಯುವವರು, ಛೇಡಿಸುವವರು ಕುಡಿಯುವವರು, ಕಲ್ಪಿಸಿಕೊಳ್ಳುವವರು ಬರಬಹುದು. ಆದರೆ, ಈ ಸರ್ದಾರ್ಜಿಯಂತೆ ಲವಲವಿಕೆ, ದೇಶ ಪ್ರೇಮ, ತುಂಟತನ, ಒಳ್ಳೆಯತನ ಇರುವವರು ಬರುವುದು ಕಷ್ಟ.
- ಪಿ. ಲಂಕೇಶ್
(ಖುಷ್ವಂತ್ಸಿಂಗ್ರವರಿಗೆ 80 ವರ್ಷ ತುಂಬಿದಾಗ ಪಿ. ಲಂಕೇಶ್ ಬರೆದ ಲೇಖನ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

