ಪ್ರಧಾನ ಸುದ್ದಿ

ಸುಯತೀಂದ್ರರಿಗೆ ಅಂತಿಮ ನಮನ

ಸುಯತೀಂದ್ರರಿಗೆ ಅಂತಿಮ ನಮನ
Published On :

ಕ.ಪ್ರ.ವಾರ್ತೆ , ರಾಯಚೂರು , ಮಾ.21
ಮಂತ್ರಾಲಯದಲ್ಲಿ ಗುರುವಾರ ತಡ ರಾತ್ರಿ ಹರಿಪಾದೈಕ್ಯರಾದ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಶ್ರೀಸುಯತೀಂದ್ರ ತೀರ್ಥ(80)ರ ಅಂತಿಮ ವಿಧಿ ವಿಧಾನ ಕ್ರಿಯೆಗಳನ್ನು ಶುಕ್ರವಾರ ಶ್ರೀಮಠದಲ್ಲಿ ಭಕ್ತಿ ಭಾವದಿಂದ ಗೌರವಪೂರ್ವಕವಾಗಿ ನೆರವೇರಿಸಲಾಯಿತು.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲಿದ್ದ ಶ್ರೀಸುಯತೀಂದ್ರತೀರ್ಥರು ಗುರುವಾರ ತಡರಾತ್ರಿ 12.10ರ ಸುಮಾರಿಗೆ ಹರಿಪಾದೈಕ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಅವರ ಬೃಂದಾವನ ಪ್ರವೇಶ ಸಂಬಂಧಿ ಅಂತಿಮ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿತ್ತು. ಶ್ರೀಮಠದಲ್ಲಿನ ಹಿರಿಯ ಯತಿಗಳ ಬೃಂದಾವನಗಳಿರುವ ಸಾಲಿನಲ್ಲಿಯೇ ಶ್ರೀಸುಯತೀಂದ್ರತೀರ್ಥರ ಗುರುಗಳಾದ ಶ್ರೀಸುಶಮೀಂದ್ರ ತೀರ್ಥರ ಬೃಂದಾವನದ ಪಕ್ಕದಲ್ಲಿ ಶ್ರೀಸುಯತೀಂದ್ರತೀರ್ಥರ ಅಂತಿಮ ವಿಧಿ ವಿಧಾನಗಳಿಗೆ ಅವಕಾಶ ಕಲ್ಪಿಸಲಾಯಿತು.
ಹಿರಿಯ ಶ್ರೀಗಳು ವಿಧಿವಶರಾದ ಸುದ್ದಿ ತಿಳಿದು ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ದರ್ಶನ ಪಡೆದರು. ಬೆಳಗ್ಗೆ 9.30ರ ಸುಮಾರಿಗೆ ಶ್ರೀಸುಯತೀಂದ್ರತೀರ್ಥರ ಶರೀರಕ್ಕೆ ಅಭ್ಯಂಗ ದೇಹ ಶುದ್ಧೀ ಸ್ನಾನ ನೆರವೇರಿಸ ಲಾಯಿತು. ಆನಂತರ ಅವರ ಉತ್ತರಾಧಿಕಾರಿ ಶ್ರೀಸುಬುಧೇಂದ್ರ ತೀರ್ಥರು ಶ್ರೀಗಳ ಪಾದುಕೆ ಪೂಜೆ ನೆರವೇರಿಸಿದರು.
ನಂತರ ಹಿರಿಯಶ್ರೀಗಳನ್ನು ಶ್ರೀಮಠದ ಪ್ರಾಕಾರದಲ್ಲಿ ಮೆರವಣಿಗೆ ಮಾಡುವ ಮೂಲಕ ಬಂೃದಾವನ ನಿರ್ಮಿಸಲಾಗುವ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ನೂರಾರು ಸಂಖ್ಯೆಯ ಭಕ್ತರು ಪ್ರಾಕಾರದ ಇಕ್ಕೆಲಗಳಲ್ಲಿ ನಿಂತು ಕಂಬನಿ ಮಿಡಿದು ಶ್ರೀಸುಯತೀಂದ್ರ ತೀರ್ಥರಿಗೆ ಜಯವಾಗಲಿ, ಹರಿಸರ್ವೋತ್ತಮ, ವಾಯುಜೀವೋತ್ತಮ ಎಂಬ ಘೋಷಣೆ ಮೊಳಗಿಸಿದರು. ನಂತರ ಶ್ರೀಸುಶಮೀಂದ್ರತೀರ್ಥರ ಬೃಂದಾವನ ಸ್ಥಳದ ಪಕ್ಕದಲ್ಲಿ ಹಿರಿಯ ಶ್ರೀಗಳಿಗೆ ಪೂರ್ವಾಶ್ರಮದ ಪುತ್ರರಾದ ಶ್ರೀಸುಯಮೀಂದ್ರಾಚಾರ್ಯ ಸಹೋದರರು ಗೋಪಿಚಂದನ ಧಾರಣೆ ಮಾಡಿಸಿ, ಮೃತ್ತಿಕಾ ಸಮರ್ಪಣೆ, ಪುರುಷ ಸೂಕ್ತ, ಹಾಗೂ ಓಂಕಾರ ಪಠಣ ಮತ್ತಿತರೆ ಮಂತ್ರೋಚ್ಛಾರಣೆ ಮಾಡಿದರು. ನಂತರ ಶ್ರೀಗಳ ದಂಡಕವನ್ನು ಶ್ರೀಗಳೊಂದಿಗೆ ಇರಿಸಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಕಾರುಣ್ಯ ಮೂರ್ತಿಗೆ ಭಕ್ತಿಪೂರ್ವಕ ಪ್ರಣಾಮ
ನಿನ್ನೆ ವೃಂದಾವನಸ್ಥರಾದ ಮಂತ್ರಾಲಯ ರಾಘವೇಂದ್ರ ಮಠದ ಹಿರಿಯ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀಸುಯತೀಂದ್ರ ತೀರ್ಥರು ಕೇವಲ ಮಂತ್ರಾಲಯ ಮಾತ್ರವಲ್ಲ, ಕರ್ನಾಟಕ, ಆಂಧ್ರ, ತಮಿಳುನಾಡು ಮುಂತಾದ ರಾಜ್ಯಗಳ ಅಸಂಖ್ಯಾತ ಭಕ್ತವರ್ಗಕ್ಕೆ ಮಾರ್ಗದರ್ಶಕರಾಗಿದ್ದವರು. ಅವರ ಅಗಲಿಕೆಯಿಂದಾಗಿ ಅನುಯಾಯಿಗಳಿಗೆ, ಆಸ್ತಿಕ ಭಕ್ತ ವರ್ಗಕ್ಕೆ, ಸಮಾಜಕ್ಕೆ ದೊಡ್ಡ ಆಘಾತವಾಗಿರುವಂತೆಯೇ ವೈಯಕ್ತಿಕವಾಗಿ ನನಗೆ ಅತೀವ ದುಃಖವಾಗಿದೆ. ನಮ್ಮ ನಾಡು ಒಬ್ಬ ಹಿರಿಯ ಆಧ್ಯಾತ್ಮಿಕ ಗುರುಗಳನ್ನು ಕಳೆದುಕೊಂಡಿದೆ.
ಶ್ರೀಸುಯತೀಂದ್ರ ತೀರ್ಥರನ್ನು ನೇರವಾಗಿ ಭೇಟಿಯಾದಾಗ ಅವರ ಅನುಗ್ರಹದ ಜೊತೆಗೆ ಅವರ ಕರುಣೆ ಮತ್ತು ಸಮಾಜದ ಬಗೆಗಿನ ಅವರ ಕಳಕಳಿ ನನ್ನನ್ನು ಹೆಚ್ಚು ಪ್ರಭಾವಿತಗೊಳಿಸಿದವು ಎಂದರೆ ತಪ್ಪಾಗಲಾರದು. 2006ರಲ್ಲಿ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿದ ಮಂತ್ರಾಲಯವನ್ನು ಎಲ್ಲರ ನಿರೀಕ್ಷೆಗಳನ್ನು ಮೀರಿ ಪುನನಿರ್ಮಿಸಿದ ಶ್ರೇಯಸ್ಸು ಪೂಜ್ಯ ಸ್ವಾಮೀಜಿಗಳವರಿಗೇ ಸಲ್ಲುತ್ತದೆ. ನನ್ನ ಪ್ರತಿಷ್ಠಾನದ ಮೂಲಕ ನೆರೆಪೀಡಿತ ಮಂತ್ರಾಲಯದಲ್ಲಿ ಸಂತ್ರಸ್ತರಿಗಾಗಿ ನಿರ್ಮಿಸಲಾದ 175 ಮನೆಗಳಾಗಲಿ, ಯಾತ್ರಿಕರ ಸೌಕರ್ಯ ಕೇಂದ್ರಗಳ ನಿರ್ಮಾಣದಲ್ಲಿನ ಸಹಕಾರಕ್ಕಾಗಲಿ, ವೇದವಿದ್ಯಾಪೀಠದ ನಿರ್ಮಾಣಕ್ಕೆ ನೀಡಲಾದ 5 ಕೋಟಿ ದೇಣಿಗೆಯಲ್ಲಾಗಲಿ ಸ್ವಾಮೀಜಿಗಳ ಆದೇಶ ಮತ್ತು ಅನುಗ್ರಹಗಳ ಪಾತ್ರವೇ ದೊಡ್ಡದಿದೆ. ಹಾಗೆಯೇ ಮಂತ್ರಾಲಯ ಮಠದ ಮಹತ್ವಾಕಾಂಕ್ಷೆಯ ಯೋಜನೆಯಾದ ಗುರುಸಾರ್ವಭೌಮ ವಿದ್ಯಾಪೀಠದ ನಿರ್ಮಾಣದ ಶಿಲಾನ್ಯಾಸ ಸಂದರ್ಭದಲ್ಲಿ ಮಂತ್ರಾಲಯ ಮಠಕ್ಕೆ ನನ್ನನ್ನು ಕರೆಸಿಕೊಂಡು ಹರಸಿದ ಅವರ ನಿಷ್ಕಲ್ಮಶ ಹೃದಯದ ಕಾರುಣ್ಯಕ್ಕೆ ನಾನು ಸದಾ ವಂದಿಸುತ್ತೇನೆ. ಇಂತಹ ಗುರುಗಳಿಂದ ಅನುಗ್ರಹವನ್ನು ಪಡೆದಿರುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ.
ಅನೇಕ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಅತ್ಯಂತ ಸಾಂಪ್ರದಾಯಿಕವಾಗಿಯೂ ಕೂಡ ತಮ್ಮ ಪದ್ದತಿ ಪರಂಪರೆಗಳಿಗೆ ಅನುಗುಣವಾಗಿ ಕರ್ತವ್ಯಗಳನ್ನು ನಿರ್ವಹಿಸುತ್ತಾ ಭಾರತೀಯ ತತ್ವಶಾಸ್ತ್ರ ಮತ್ತು ವೇದಶಾಸ್ತ್ರಾದಿಗಳ ಅಧ್ಯಯನಕ್ಕೆ ವಿಶೇಷ ಕಾಳಜಿಯನ್ನು ಹೊಂದಿ ಅನೇಕ ವಿದ್ಯಾಪೀಠಗಳನ್ನು ಸ್ಥಾಪಿಸಿ, ಆಸಕ್ತ ಮಕ್ಕಳಿಗೆ ಉಚಿತವಾಗಿ ಊಟ ವಸತಿಗಳನ್ನು ಒದಗಿಸಿ ವಿದ್ಯಾದಾನ ಮಾಡುತ್ತಿದ್ದುದ್ದು ಅವರ ವ್ಯಕ್ತಿತ್ವದ ಘನತೆಯನ್ನು ಪರಿಚಯಿಸುತ್ತದೆ.
ಮಂತ್ರಾಲಯದಲ್ಲಿ 2012ರಲ್ಲಿ ನಡೆದ ರಾಘವೇಂದ್ರ ತೀರ್ಥರ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ನನಗೆ ತಮ್ಮ ಸನಾತನ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ಅವಕಾಶವನ್ನು ಕೊಟ್ಟು, ಸ್ವಾಮೀಜಿಗಳು ಆಶೀರ್ವಾದ ಪೂರ್ವಕವಾಗಿ "ಸಾಮ್ರಾಟ್ ವಿದ್ಯಾಪೋಷಕ" ಪ್ರಶಸ್ತಿಯನ್ನು ನೀಡಿ ಅನುಗ್ರಹಿಸಿದ್ದರು. ತಮ್ಮ ಸನಾತನ ಧರ್ಮಪ್ರಚಾರ ಪರಿಷತ್ತಿನಲ್ಲಿ ಕೂಡ ನನಗೆ ಸ್ಥಾನವನ್ನು ನೀಡಿ ದೊಡ್ಡ ಗೌರವವನ್ನು ದಯಪಾಲಿಸಿದ್ದರು. ಸ್ವಾಮೀಜಿಗಳು ಅತ್ಯಂತ ಅಭಿಮಾನಪೂರ್ವಕವಾಗಿ ನೀಡಿದ ಈ ಅನುಗ್ರಹವನ್ನು ಸನಾತನ ಧರ್ಮ ಸಂರಕ್ಷಣೆಯ ನಮ್ಮ ಕರ್ತವ್ಯವನ್ನು ನಿರ್ವಹಿಸುವ ಆದೇಶವೆಂದೇ ನಾನು ಭಾವಿಸಿದ್ದೇನೆ.
ಇಂತಹ ಸ್ವಾಮೀಜಿಯವರ ನಿಧನವು ವೈಯಕ್ತಿಕವಾಗಿ ನನಗೆ ಅತ್ಯಂತ ನೋವನ್ನು ತಂದಿದೆ. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇನೆ.


 -ರಾಜೀವ್ ಚಂದ್ರಶೇಖರ್, ಸಂಸತ್ ಸದಸ್ಯರು, ರಾಜ್ಯಸಭೆ
rajeev.c@sansad.nic.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.