ತೊಳೆದು ಹೋದ ಪಕ್ಷಗಳ ಬಣ್ಣ
ಮಂಗಳೂರು: ರಾಜಕೀಯ ಪಕ್ಷಗಳು ತಮ್ಮ ಚಿಹ್ನೆಗಳಿಗೆ ಬೇಕಾ ಬಿಟ್ಟಿ ಬಣ್ಣ ಬಳಸುವಂತಿಲ್ಲ. ಚುನಾವಣಾ ಆಯೋಗ ಸೂಚನೆ ಮೇರೆಗೆ ಕೇಸರಿ, ಹಳದಿ ಬಣ್ಣದಲ್ಲಿದ್ದ ಬಿಜೆಪಿಯ 'ಕಮಲ' ಮತ್ತು ತ್ರಿವರ್ಣ ಧ್ವಜದಲ್ಲಿ ಮಿಂಚುತ್ತಿದ್ದ ಕಾಂಗ್ರೆಸ್ನ 'ಕೈ' ಕಪ್ಪು ಬಿಳುಪಿಗೆ ತಿರುಗಿದೆ.
ಎಲ್ಲ ಪಕ್ಷಗಳ ಜಾಹೀರಾತುಗಳನ್ನು ಚುನಾವಣಾ ಆಯೋಗ ಪರಿಶೀಲಿಸಿದ ಬಳಿಕ ಈ ಆದೇಶ ಹೊರ ಬಿದ್ದಿದೆ. ಮಾಧ್ಯಮಗಳಿಗೆ ಜಾಹೀರಾತು ನೀಡುವಾಗ ಆಯಾ ರಾಜಕೀಯ ಪಕ್ಷಗಳು ತಮ್ಮ ಸಾಂಪ್ರದಾಯಿಕ ಬಣ್ಣ ಬಳಸುತ್ತಿದ್ದವು. ಇದಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಈ ವರ್ಷ ತಮ್ಮ ಸಾಂಪ್ರದಾಯಿಕ ಬಣ್ಣಗಳಿಗೆ ತಿಲಾಂಜಲಿ ಇಡಬೇಕಾದ ಪ್ರಸಂಗ ಎದುರಾಗಿದೆ. ಆದರೂ ಮತದಾನ ವೇಳೆ ಮತಯಂತ್ರದಲ್ಲಿ ಪಕ್ಷಗಳ ಚಿಹ್ನೆ ಕಪ್ಪು ಬಿಳುಪಲ್ಲಿಯೇ ಇರುವುದರಿಂದ ರಾಜಕೀಯ ಪಕ್ಷಗಳಿಗೆ ಇದು ನೆರವಾಗಲಿದೆ.
ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳಿಗೆ ಆರಂಭದಲ್ಲಿ ನೀಡಿದ ಚಿಹ್ನೆ ಕಪ್ಪು ಬಿಳುಪು. ಆಗ ಸಿನಿಮಾ ಕೂಡಾ ಕಪ್ಪು ಬಿಳುಪು. ಆದರೆ ಕಾಲ ಬದಲಾದಂತೆ ರಾಜಕೀಯ ಪಕ್ಷಗಳು ಬಣ್ಣ ಬಣ್ಣದಿಂದ ಮಿಂಚತೊಡಗಿದವು. ಚುನಾವಣೆ ಪ್ರಚಾರ ವೇಳೆ ಬಿಜೆಪಿ ಕಮಲಕ್ಕೆ ಕೇಸರಿ ಬಣ್ಣ, ಹಿನ್ನೆಲೆಯಲ್ಲಿ ಬಿಳಿ ಬಣ್ಣವನ್ನೇ ಹೆಚ್ಚಾಗಿ ಬಳಸುತ್ತಿತ್ತು. ಆಯಾ ಊರಿನ ಕಲಾವಿದರು ಕಮಲಕ್ಕೆ ಆರ್ಟಿಸ್ಟ್ ಟಚ್ ಕೊಡುವುದೂ ಉಂಟು. ಕಮಲದ ಬಳ್ಳಿಗೆ ಹಸಿರು ಬಣ್ಣ, ಬಣ್ಣಗಳ ಶೇಡ್ ಬಳಸುವುದು ಸಾಮಾನ್ಯ.
ಕಾಂಗ್ರೆಸ್ನ 'ಕೈ' ಚಿಹ್ನೆ ಹೆಚ್ಚಾಗಿ ಬಿಳಿಯೇ ಇದ್ದರೂ ಹಿನ್ನೆಲೆಯಲ್ಲಿ ಕೇಸರಿ, ಬಿಳಿ, ಹಸಿರು ತ್ರಿವರ್ಣ ಬಳಸುತ್ತಾರೆ. ಕೈ ಚಿಹ್ನೆಯನ್ನೂ ತ್ರಿವರ್ಣದಲ್ಲಿ ಚಿತ್ರಿಸುವ ಪರಿಪಾಠವೂ ಇದೆ. ಆದರೆ ಈಗ ಕಪ್ಪು ಬಿಳುಪು ಕೈಯನ್ನೇ ಜಾಹೀರಾತಿನಲ್ಲಿ ಪ್ರಕಟಿಸಬೇಕಾಗಿದೆ. ಆಯಾ ಪಕ್ಷಗಳ ಬಾವುಟದ ಬಣ್ಣದ ಪ್ರಮಾಣವನ್ನು ಬದಲಾಯಿಸುವಂತಿಲ್ಲ. ಬಾವುಟಕ್ಕೆ ನೀಡಿದ ಬಣ್ಣದ ಪ್ರಮಾಣವೂ ಹೆಚ್ಚು ಕಡಿಮೆ ಆಗ ಕೂಡದು. ಆದರೆ ಈ ಬಗ್ಗೆ ಆಯೋಗ ಸದ್ಯಕ್ಕೆ ಅಷ್ಟೇನೂ ಕಟ್ಟುನಿಟ್ಟಾಗಿಲ್ಲ.
ಹಿಡಿಸೂಡಿ ಉಚಿತ ಅಲ್ಲ!
ಚುನಾವಣಾ ಆಯೋಗ ಪಕ್ಷೇತರರಿಗೆ ಉಚಿತವಾಗಿ ನೀಡುವ ಚಿಹ್ನೆಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಇದರಲ್ಲಿ ತೆಂಗಿನಕಾಯಿ, ಕಂದೀಲು ಇತ್ಯಾದಿ ಅನೇಕ ಚಿಹ್ನೆಗಳಿವೆ. ಹಿಡಿಸೂಡಿಯನ್ನು ಅದರಲ್ಲಿ ಪ್ರಕಟಿಸಿದ್ದಾರೆ. ಆದರೆ ಅದರ ಮೇಲೆ ಪೆನ್ನಿಂದ ಗುಣಿಸುವ ಗುರುತು ಹಾಕಿದೆ. ಆಮ್ ಆದ್ಮಿ ಪಕ್ಷಕ್ಕೆ ಹಿಡಿಸೂಡಿ ಚಿಹ್ನೆಯನ್ನು ನೀಡಲಾದ ಹಿನ್ನೆಲೆಯಲ್ಲಿ ಈ ರೀತಿ ಮಾಡಿದ್ದಾರೆ.
ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

