ಪ್ರಧಾನ ಸುದ್ದಿ

ಚಿತ್ತಾಲರಿಲ್ಲದೆ ಅನಾಥವಾದ ಹನೇಹಳ್ಳಿ

ಚಿತ್ತಾಲರಿಲ್ಲದೆ ಅನಾಥವಾದ ಹನೇಹಳ್ಳಿ
Published On :

ಕಾರವಾರ: ಸೌದಿ ಹೊರೆ, ಸೌದಿ ಹೊರೆ ಕೊಡೂದೆ ಎಂಬ ಗೋಕರ್ಣದ ಹಾಲಕ್ಕಿ ಒಕ್ಕಲು ಮಹಿಳೆಯ ಕೂಗು ಉಳಿದವರಿಗೆ ಸಹಜವಾಗಿ ಕಾಣುತ್ತಿದ್ದರೆ, ಅದೆ ಕೂಗು ಯಶವಂತ ಚಿತ್ತಾಲರಲ್ಲಿ ಒಬ್ಬ ಕಥೆಗಾರ ಹುಟ್ಟಿಕೊಳ್ಳಲು ಕಾರಣವಾಗಿದ್ದು ಮಾತ್ರ ವಿಸ್ಮಯ. ಆ ಕೂಗನ್ನು ಕೇಳಿಯೇ ಅದರ ಮೇಲೆ ಮೊದಲ ಕಥೆ ಬರೆದ ಚಿತ್ತಾಲರು ಮತ್ತೆ ಹಿಂತಿರುಗಿ ನೋಡಲಿಲ್ಲ. ನಾಡಿನ ಹೆಸರಾಂತ ಕಥೆಗಾರರಾಗಿ ಬೆಳೆದರು.
ಶನಿವಾರ ರಾತ್ರಿ ಕಾಲನ ಕರೆಗೆ ಓಗೊಡುವ ತನಕವೂ ಹತ್ತಾರು ಮೌಲಿಕ ಕೃತಿಗಳನ್ನು ಬರೆದರು. ಅವರು ಕಟ್ಟಿಕೊಟ್ಟ ನೂರಾರು ಪಾತ್ರಗಳು ಇನ್ನೂ ಜೀವಂತವಾಗಿವೆ. ಕನ್ನಡ ಸಾಹಿತ್ಯ ಲೋಕದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಕಥೆಗಾರರಾಗಿ, ಕಾದಂಬರಿಕಾರರಾಗಿ, ಕವಿಯಾಗಿ, ಪ್ರಬಂಧಕಾರರಾಗಿ, ವಿಮರ್ಶಕರಾಗಿ ಹಾಗೂ ಸಂಶೋಧಕರಾಗಿ ಹೆಸರು ಮಾಡಿದ್ದಾರೆ. ಇವರು ಕನ್ನಡ, ಕೊಂಕಣಿ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಲ್ಲೂ ಪ್ರವೀಣರು.
ಆಬೋಲಿನ, ಆಟ, ಆಯ್ದ ಕಥೆಗಳು, ಕುಮಟೆಗೆ ಬಂದ ಕಿಂದರಜೋಗಿ, ಚಿತ್ತಾಲರ ಸಮಗ್ರ ಕಥೆಗಳು, ಸಿದ್ಧಾರ್ಥ ಕಥಾ ಸಂಕಲನಗಳಲ್ಲಿ ಸುಮಾರು 61 ಕಥೆಗಳಿವೆ. 'ಓಡಿ ಹೋದ ಮುಟ್ಟಿ ಬಂದ' ಕಥಾ ಸಂಕಲನವೂ ಗಮನಾರ್ಹವಾದುದು. ಮೂರು ದಾರಿಗಳು, ಶಿಕಾರಿ, ಪುರುಷೋತ್ತಮ, ಕೇಂದ್ರ ವೃತ್ತಾಂತ ಹಾಗೂ ಛೇದ ಕಾದಂಬರಿಗಳು ಓದುಗರ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. 'ಮೂರು ದಾರಿಗಳು' ಕಾದಂಬರಿಯಲ್ಲಿ ಉತ್ತರ ಕನ್ನಡದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಲಬಸಾದ ಸೃಷ್ಟಿಕರ್ತ: ಚಿತ್ತಾಲರು ಕೆಲವು ವರ್ಷಗಳ ಹಿಂದೆ 'ಲಬಸಾ' ಹೆಸರಿನ ಕಾವ್ಯ ರಚನೆಯನ್ನು ಪರಿಚಯಿಸಿದ್ದರು. ಕನ್ನಡ ಕಾವ್ಯದಲ್ಲೇ ಇದೊಂದು ಹೊಸಬಗೆಯ ಪ್ರಕಾರ. ಕವಿತೆಯ ಬಂಧವಿದ್ದು, ಕವಿತೆಯಂತೆಯೇ ಕಾಣುವ ಇವು ಕವಿತೆಗಳಲ್ಲ. ಕೇವಲ ಲಬಸಾಗಳೆಂದು ಚಿತ್ತಾಲರೇ ವ್ಯಾಖ್ಯಾನಿಸಿದ್ದರು.
ಬ್ಯಾಂಡ್ ಸ್ಟ್ಯಾಂಡ್‌ನಲ್ಲೀಗ ಬರೆ ಎಣಿಸುವವರೇ ಹೆಚ್ಚು
ಕಂಡದ್ದರಲ್ಲಿ ಕೈಹಚ್ಚಿದ್ದರಲ್ಲಿ ಅಂಕೆ ಹುಡುಕುವ ಹುಚ್ಚು
- ಚಿತ್ತಾಲರ ಲಬಸಾಕ್ಕೆ ಇದು ಉತ್ತಮ ಉದಾಹರಣೆ. ಹಾಗೆಯೇ ಪ್ರಬಂಧ, ವಿಮರ್ಶಾತ್ಮಕ ಬರಹಗಳೂ ಪ್ರಸಿದ್ಧವಾಗಿವೆ. ಚಿತ್ತಾಲರ ಕಥೆ, ಕಾದಂಬರಿಗಳು ಜನಪ್ರಿಯತೆಯ ದೃಷ್ಟಿಯಿಂದ ಮಾತ್ರವಲ್ಲದೆ, ಸತ್ವ ಸಾಹಿತ್ಯದ ದೃಷ್ಟಿಯಿಂದಲೂ ಗಮನಾರ್ಹವೆನಿಸುತ್ತವೆ.

ವಸಂತಕುಮಾರ್ ಕತಗಾಲ

ಚಿರನಿದ್ರೆಯ 'ಶಿಕಾರಿ'ಗೆ ಯಶವಂತ ಚಿತ್ತಾಲ
ಬೆಂಗಳೂರು:
ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ ಯಶವಂತ ವಿಠೋಬ ಚಿತ್ತಾಲ ಶನಿವಾರ ರಾತ್ರಿ 11.15ಕ್ಕೆ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ 40 ದಿನಗಳಿಂದ ಮೆದುಳಿನ ರಕ್ತಸ್ರಾವ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ. ಇವರು ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿ ಮಾಲತಿ ಅವರನ್ನು ಅಗಲಿದ್ದಾರೆ. ಭಾನುವಾರ ಬೆಳಗ್ಗೆ ಬಾಂದ್ರಾದ ಬ್ಯಾಂಕ್ ಸ್ಟ್ಯಾಂಡ್‌ನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಬಳಿಕ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ನೆರವೇರಿತು.
ಹಿನ್ನೆಲೆ: 1928ರಲ್ಲಿ ಇವರ ಜನನವಾಗಿದ್ದು, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹನೇಹಳ್ಳಿಯವರಾಗಿದ್ದಾರೆ. ಇವರ ಮನೆ ಭಾಷೆ ಕೊಂಕಣಿ-ಮರಾಠಿ ಆದರೂ ಕನ್ನಡ ಭಾಷೆ ಮೇಲೆ ಹಿಡಿತ ಸಾಧಿಸಿದ್ದರು.  ಹನೇಹಳ್ಳಿಯ ವಿಠೋಬಾ, ರುಕ್ಮಿಣಿ ದಂಪತಿಯ 7 ಮಕ್ಕಳಲ್ಲಿ ಇವರು 5ನೇಯವರಾಗಿದ್ದಾರೆ. ಪ್ರಾರಂಭಿಕ ಶಿಕ್ಷಣವನ್ನು ಅದೇ ಗ್ರಾಮದಲ್ಲಿ ಮುಗಿಸಿದರು. ಕುಮಟಾ, ಧಾರವಾಡ, ಮುಂಬೈ ಹಾಗೂ ನ್ಯೂಜೆರ್ಸಿಯಲ್ಲಿ ಶಿಕ್ಷಣ ಪಡೆದರು.
ಅರ್ಧ ಶತಮಾನದಷ್ಟು ಕಾಲ ಮುಂಬೈನಲ್ಲಿ ತಮ್ಮ ಜೀವನ ಕಳೆದಿದ್ದಾರೆ. ಹುಟ್ಟೂರು ಹನೇಹಳ್ಳಿ ಹಾಗೂ ಮುಂಬೈ ಎರಡೂ ಸಹ ಇವರ ಸಾಹಿತ್ಯಕ್ಕೆ ಜೀವಾಳ. ಇವರು ವಿಜ್ಞಾನ ವಿದ್ಯಾರ್ಥಿಯಾಗಿದ್ದು, ರಾಸಾಯನಿಕ ತಂತ್ರ ವಿಜ್ಞಾನದ ಮಹತ್ವದ ಶಾಖೆಯಾದ ಪಾಲಿಮರ್ ಟೆಕ್ನಾಲಜಿಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದರು. ಮುಂಬೈ ವಿವಿಯ ಪ್ಲಾಸ್ಟಿಕ್ ತಂತ್ರವಿಜ್ಞಾನದ ಬಿಎಸ್‌ಸಿಯಲ್ಲಿ ಪ್ರಥಮ ಸ್ಥಾನ ಸುವರ್ಣ ಪದಕ ಪಡೆದಿದ್ದಾರೆ. 44ನೇ ವಯಸ್ಸಿನಲ್ಲಿ ಅಮೆರಿಕದ ಸ್ಟೂವನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಎ ಪದವಿ ಪಡೆದಿದ್ದಾರೆ.

ಹನೇಹಳ್ಳಿಯಿಂದ ಮುಂಬೈಗೆ
ಉತ್ತರ ಕನ್ನಡದ ಗೋಕರ್ಣದಿಂದ ಕೇವಲ 3 ಕಿ.ಮೀ. ದೂರದ ಹನೇಹಳ್ಳಿ ಚಿತ್ತಾಲರ ಹುಟ್ಟೂರು. ಅವರ ಸಾಹಿತ್ಯದಲ್ಲೂ ಹನೇಹಳ್ಳಿ ಹಾಸುಹೊಕ್ಕಾಗಿದೆ. ನನ್ನ ಭಾವಪ್ರಪಂಚದಲ್ಲಿ ನನ್ನ ಆಂತರಿಕ ವಿಕಾಸದಲ್ಲಿ ಹನೇಹಳ್ಳಿ ಒಂದು ಮಹತ್ವದ ಪಾತ್ರ ವಹಿಸಿದೆ ಎಂದು ಚಿತ್ತಾಲರೇ ಹೇಳಿದ್ದಾರೆ. ಹನೇಹಳ್ಳಿಯ ವಿಠೋಬಾ ರುಕ್ಮಿಣಿ ದಂಪತಿಯ ಏಳು ಮಕ್ಕಳಲ್ಲಿ ಐದನೆಯವರಾಗಿ ಯಶವಂತ ಜನಿಸಿದರು.(ಇವರ ಅಣ್ಣ ಖ್ಯಾತ ಕವಿ ಗಂಗಾಧರ ಚಿತ್ತಾಲ.) ಹನೇಹಳ್ಳಿ ಹಾಗೂ ಕುಮಟಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಚಿತ್ತಾಲರು ಧಾರವಾಡ, ಮುಂಬೈ ಹಾಗೂ ಅಮೆರಿಕದ ನ್ಯೂಜೆರ್ಸಿಯಲ್ಲಿ ಶಿಕ್ಷಣವನ್ನು ಮುಂದುವರಿಸಿದರು. ರಾಸಾಯನಿಕ ತಂತ್ರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. 1949ರಲ್ಲಿ ಚಿತ್ತಾಲರು ಕಾರವಾರ ಸಮೀಪದ ಬಾಡದಲ್ಲಿ ಶಿಕ್ಷಕರಾಗುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. 1951ರಲ್ಲಿ ಮುಂಬೈಗೆ ತೆರಳಿ ಇಂಡಿಯನ್ ಪ್ಲಾಸ್ಟಿಕ್ ಲಿಮಿಟೆಡ್ ಕಂಪನಿಯಲ್ಲಿ ರಿಸರ್ಚ್ ಕೆಮಿಸ್ಟ್ ಆಗ ಕರ್ತವ್ಯಕ್ಕೆ ಹಾಜರಾದರು. 32 ವರ್ಷಗಳ ಸುದೀರ್ಘ ಸೇವೆಯ ಅಂತ್ಯದಲ್ಲಿ ಕಂಪನಿಯ ನಿರ್ದೇಶಕರಾಗಿ ನಿವೃತ್ತರಾದರು. ಪ್ರತಿವರ್ಷವೂ ತಪ್ಪದೆ ಕಾರವಾರಕ್ಕೆ ಆಗಮಿಸಿ ಸಂಬಂಧಿಗಳ ಮನೆಯಲ್ಲಿ ಕೆಲವು ದಿನಗಳ ಮಟ್ಟಿಗೆ ತಂಗುತ್ತಿದ್ದುದು ವಿಶೇಷವಾಗಿತ್ತು. ಇಂದು ಚಿತ್ತಾಲರಿಲ್ಲದೆ ಹನೇಹಳ್ಳಿ ಅನಾಥವಾಗಿದೆ. ಹನೇಹಳ್ಳಿಯ ಬದುಕು, ಬವಣೆಯನ್ನು ಕಥೆ, ಕಾದಂಬರಿ, ಕಾವ್ಯಗಳಲ್ಲಿ ಕಟ್ಟಿಕೊಡುತ್ತಿದ್ದ ಚಿತ್ತಾಲರ ನಿಧನ ಹನೇಹಳ್ಳಿ, ಉತ್ತರ ಕನ್ನಡ, ಕನ್ನಡ ಸಾರಸ್ವತ ಲೋಕಕ್ಕೆ ತುಂಬಾ ನಷ್ಟವನ್ನು ಉಂಟು ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.