ಸೈನಿಕರಿಗೆ ಸ್ಥಳದಲ್ಲೇ ಮತಹಕ್ಕು

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಸೈನಿಕರು ಸೇವೆ ಸಲ್ಲಿಸುತ್ತಿರುವ ಸ್ಥಳಗಳಲ್ಲಿಯೇ ಮತದಾರರನ್ನಾಗಿ ನೋಂದಾಯಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮತ್ತು ನೀಲಾ ಗೋಖಲೆ ಅವರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2014ರ ಲೋಕಸಭಾ ಚುನಾವಣೆಯಲ್ಲೇ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಸೂಚಿಸಿದೆ.
ಕರ್ತವ್ಯ ನಿರತ ಸೈನಿಕರು ಮತ್ತು ಅವರ ಕುಟುಂಬದವರು ಮತದಾನ ಮಾಡಲು ಸಾಧ್ಯವಾಗದ ಕೆಲವು ಸಂದರ್ಭದಲ್ಲಿ ಕಷ್ಟಪಡಬೇಕಾದ ಹಿನ್ನೆಲೆಯಲ್ಲಿ ಮತದಾನ ವ್ಯವಸ್ಥೆಯಲ್ಲಿ ಸುಧಾರಣೆ ತರುವಂತೆ ಕೋರಿ ರಾಜೀವ್ ಚಂದ್ರಶೇಖರ್ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಚುನಾವಣೆಯಿಂದಲೇ: ಸೈನಿಕರನ್ನು ಸಾಮಾನ್ಯ ಮತದಾರರಂತೆ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಮತದಾನದ ಹಕ್ಕು ಚಲಾಯಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಸೂಚಿಸಿದೆ.
ಸುಪ್ರೀಂಕೋರ್ಟ್ನ ಈ ಆದೇಶದಿಂದಾಗಿ ರಾಷ್ಟ್ರದ ವಿವಿಧೆಡೆ ನಿಯೋಜಿಸಲ್ಪಟ್ಟಿರುವ ಸುಮಾರು 14 ಲಕ್ಷ ಸೈನಿಕರು ಮತದಾನ ಮಾಡುವ ಹಕ್ಕು ಪಡೆಯುವಂತಾಗಿದೆ.
ಈಗ ಇದೆ ಅಂಚೆ ಮತ ವ್ಯವಸ್ಥೆ: ಹಾಲಿ ಸೈನಿಕರಿಗೆ ಅಂಚೆ ಮೂಲಕ ಮತದಾನ ಮಾಡುವ ವ್ಯವಸ್ಥೆ ಇದೆ. ಆದರೆ, ಬಹುತೇಕ ಸೈನಿಕರಿಗೆ ಸಕಾಲದಲ್ಲಿ ಅಂಚೆ ಪತ್ರ ಸಿಗದೇ ಅವರು ಮತದಾನದಿಂದ ವಂಚಿತರಾಗುತ್ತಿದ್ದರು. ಮತಪತ್ರ ಸಕಾಲದಲ್ಲಿ ಬಂದರೂ ಚಲಾಯಿಸಿದ ಮತಗಳು ಸಕಾಲದಲ್ಲಿ ತಲುಪದೇ ಹೋಗುತ್ತಿದ್ದವು. ಹೀಗಾಗಿ ಸೈನಿಕರ ಮತದಾನದ ಹಕ್ಕನ್ನು ಕಸಿದುಕೊಂಡಂತಾಗಿತ್ತು.
ಸೈನಿಕರು ತಾವು ಸೇವೆ ಸಲ್ಲಿಸುತ್ತಿರುವ ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗವು ಕೆಲ ನಿರ್ಬಂಧಗಳನ್ನು ವಿಧಿಸಿತ್ತು.
ಆಯೋಗಕ್ಕೆ ಮನವಿ
ಸುಪ್ರೀಂಕೋರ್ಟ್ನಲ್ಲಿ ತೀರ್ಪು ಪ್ರಕಟವಾದ ಬಳಿಕ ಸಂಸದ ರಾಜೀವ್ ಚಂದ್ರಶೇಖರ್ ಸೋಮವಾರ ಸಂಜೆ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಸೈನಿಕರಿಗೆ ಸ್ಥಳದಲ್ಲೇ ಮತಹಾಕುವ ಹಕ್ಕು ನೀಡುವಂತೆ ಒತ್ತಾಯಿಸುವ ಮನವಿ ಸಲ್ಲಿಸಿದರು. ಇದಕ್ಕೆ ಲಕ್ಷ ಮಂದಿ ಸಹಿ ಹಾಕಿದ್ದಾರೆ.
ಹೋರಾಟ ಬೆಂಬಲಿಸಿದ ಪ್ರಮುಖರಿಗೆ ಕೃತಜ್ಞತೆ
ಸೈನಿಕರಿಗೆ ನಿಯೋಜನೆಯ ಸ್ಥಳದಲ್ಲೇ ಮತ ಚಲಾವಣೆ ಹಕ್ಕಿಗೆ ತಾವು ನಡೆಸಿದ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಸಂಸದ ರಾಜೀವ್ ಚಂದ್ರಶೇಖರ್ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕನ್ನಡ ಚಿತ್ರ ನಟರಾದ ಉಪೇಂದ್ರ, ಪುನೀತ್ರಾಜ್ಕುಮಾರ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದರ ಜತೆಗೆ ಅಭಿಯಾನದಲ್ಲಿ ಕೈಜೋಡಿಸಿದ ನಿವೃತ್ತ ಏರ್ಚೀಫ್ ಮಾರ್ಷಲ್ ಫಾಲಿ ಮೇಜರ್, ಜ.ವಿ.ಪಿ.ಮಲಿಕ್ ಮತ್ತು ಇತರ ಗಣ್ಯರು ಹಾಗೂ ಸಾರ್ವಜನಿಕರಿಗೆ ಸಂಸದ ರಾಜೀವ್ ಚಂದ್ರಶೇಖರ್ ಧನ್ಯವಾದ ಸಲ್ಲಿಸಿದರು.
----
ಕೈ ಪಟ್ಟಿ ಪ್ರಕಟ
ನವದೆಹಲಿ: ಅಂತೂ ಇಂತೂ ಕಾಂಗ್ರೆಸ್ ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಹಾವೇರಿಯಿಂದ ಸಲೀಮ್ ಅಹ್ಮದ್ ಮತ್ತು ಧಾರವಾಡದಿಂದ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದೆ. ಆದರೆ ಸೋಮವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೋದಿ ಸ್ಪರ್ಧಿಸುತ್ತಿರುವ ವಾರಾಣಸಿಯ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ. ಇದನ್ನು ಕಾಯ್ದಿರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


