ಮೋದಿಗೆ ಅರ್ಧ ಡಜನ್ ಸ್ಪರ್ಧಿಗಳು

ನವದೆಹಲಿ: ಸತತ ಗೆಲವುಗಳ ಆಶೀರ್ವಾದ ಇದ್ದರೂ, ಬಿಜೆಪಿಗೆ ಈ ಬಾರಿ ವಾರಾಣಸಿ ಸುಲಭ ತುತ್ತು ಆಗುವುದಿಲ್ಲ.
ಕಾರಣ, ಈ ಬಾರಿಯ ಸ್ಪರ್ಧೆ. ಆಪ್ನ ನಾಯಕ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ನಿಂದ ದಿಗ್ವಿಜಯ್ ಸಿಂಗ್ ಸ್ಪರ್ಧಿಸುವ ಸಾಧ್ಯತೆಗಳು ಇದನ್ನು ಸಾರಿ ಸಾರಿ ಹೇಳುತ್ತಿವೆ. ಹೀಗಾಗಿ ದೇಗುಲಗಳ ನಗರಿ ಯಾರ ತುತ್ತಾಗಲಿದೆ ಎಂಬುದು ಕುತೂಹಲದ ವಿಷಯವೇ.
ಇಲ್ಲಿ ಕಾಂಗ್ರೆಸ್ಗಿಂತಲೂ ಅಪಾಯಕಾರಿ ಮಾಜಿ ಭೂಗತ ಪಾತಕಿ ಮುಖ್ತಾರ್ ಅನ್ಸಾರಿ. ಈಗ ಕಳೆದ ಬಾರಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿ ಮುರಳಿ ಮನೋಹರ ಜೋಶಿ ಅವರಿಗೆ ಪ್ರಬಲ ಸ್ಪರ್ಧೆಯನ್ನೇ ಒಡ್ಡಿದ್ದ. ಈ ಬಾರಿ ಈತ ಪಕ್ಷೇತರನಾಗಿ ಸ್ಪರ್ಧಿಸಿದ್ದು, ಅಪಾಯಕಾರಿಯಾಗುವ ಮುನ್ಸೆಚ್ಚರಿಕೆ ನೀಡಿದ್ದಾನೆ.
ಇತಿಹಾಸ ನೋಡಿದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಯೇ ಹೆಚ್ಚು ಬಾರಿ ಗೆದ್ದಿದೆ. ಶಿರಿಶ್ ಚಂದ್ರ 1991ರಲ್ಲಿ ಆಯ್ಕೆಯಾಗಿದ್ದರೆ, 1996, 98, 99ರಲ್ಲಿ ಪ್ರಸಾದ್ಜೈಸ್ವಾಲ್ ಗೆದ್ದಿದ್ದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಆದರೆ 2009ರಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು, ಕಾಂಗ್ರೆಸ್ ಅಭ್ಯರ್ಥಿ 4ನೇ ಸ್ಥಾನಕ್ಕೆ ಕುಸಿದಿದ್ದರು. ವಾರಾಣಸಿ ಒಂದು ರೀತಿಯಲ್ಲಿ ವಿಶಿಷ್ಟ ಕ್ಷೇತ್ರ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕೈಹಿಡಿದೆಯಾದರೂ, ಕಳೆದ 15 ಲೋಕಸಭಾ ಚುನಾವಣೆಗಳಲ್ಲಿ 6 ಪಕ್ಷಗಳಿಗೆ ಮಣೆ ಹಾಕಿದೆ. ಕಾಂಗ್ರೆಸ್ 6 ಬಾರಿ, ಬಿಜೆಪಿ 5 ಬಾರಿ ಗೆದ್ದಿದೆ.
ಬಿಜೆಪಿಗೆ ಸುಲಭವಲ್ಲ: 2009ರ ಚುನಾವಣೆ ಫಲಿತಾಂಶ ಪರಿಗಣಿಸಿದರೆ, ಬಿಜೆಪಿಗೆ ವಾರಾಣಸಿ ಸುರಕ್ಷಿತ ಕ್ಷೇತ್ರವೇನೂ ಅಲ್ಲ. ಆದರೆ, ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ಕಾರಣ ಹೊರತಾಗಿ ಇನ್ನಾವ ಪ್ಲಸ್ ಪಾಯಿಂಟ್ಗಳು ಇಲ್ಲ. ಪವಿತ್ರ ನಗರಿ ವಾರಾಣಸಿಗೆ ಮೂಲಭೂತ ಸೌಲಭ್ಯ ದಕ್ಕಿಸಿಕೊಡುವಲ್ಲಿ ಮುರಳಿ ಮನೋಹರ ಜೋಶಿ ವಿಫಲರಾಗಿದ್ದಾರೆ. ಕಿರಿದಾದ ರಸ್ತೆಗಳು, ಕೊಳೆತು ನಾರುವ ಘಾಟುಗಳು, ಕಟ್ಟಿಕೊಂಡ ಚರಂಡಿಗಳು ಇಡೀ ವಾರಾಣಸಿಯ ಅವ್ಯವಸ್ಥೆಗೆ ಕೈಗನ್ನಡಿ. ಆದರೆ, ಮೋದಿ ಅವರಿಗೆ ಈ ಅಂಶಗಳೇ ಪ್ಲಸ್ ಪಾಯಿಂಟ್. ನರೇಂದ್ರ ಮೋದಿ ಅವರು ಪ್ರಧಾನಿ ಆದರೆ, ವಾರಾಣಸಿಯೂ ಸೂರತ್ ನಗರದಂತೆ ನಳನಳಿಸಬಹುದು ಎಂಬ ನಿರೀಕ್ಷೆ ಜನರಿಗೆ ಇದೆ. ಆ ನಿರೀಕ್ಷೆಯಿಂದಲೇ ಜನರು ಮುರಳಿ ಮನೋಹರ ಜೋಶಿಗಿಂತ ಮೋದಿ ಅವರ ಬಗ್ಗೆಯೇ ಒಲವು ತೋರಿದ್ದಾರೆ.
ಲಕ್ಷಾಂತರ ಪ್ರವಾಸಿಗಳು ಭೇಟಿ ನೀಡುವ ವಾರಾಣಸಿಗೊಂದು ಮಾಸ್ಟರ್ ಪ್ಲಾನ್ ಘೋಷಣೆ ಮಾಡುವ ಸಿದ್ದತೆಯಲ್ಲಿದ್ದಾರೆ ಮೋದಿ. ಗಂಗಾ ಶುದ್ಧೀಕರಣ ಕೇಂದ್ರಿತ ಈ ಯೋಜನೆ ವಾರಾಣಸಿ ಹೊಸ ರೂಪ ನೀಡಲಿದೆಯಂತೆ. ಮೋದಿ ಇಲ್ಲಿ ಗೆದ್ದರೆ ಉಳಿಯುತ್ತಾರೋ ಬಿಡುತ್ತಾರೋ ಆದರೆ, ವಾರಣಾಸಿ ಅಭಿವೃದ್ಧಿ ಆದರೆ ಸಾಕೆಂಬ ಮನೋಭಾವ ಜನರದ್ದು.
ಎಲ್ಲೆಂದರಲ್ಲಿ ದೇವಾಲಯಗಳು, ಮಠಗಳು, ಮಸೀದಿಗಳು ಹಾಗೂ ಘಾಟ್ಗಳೇ. ಇಡೀ ನಗರದಲ್ಲಿ ವರ್ಷವಿಡೀ ಒಂದಿಲ್ಲೊಂದು ಉತ್ಸವ, ಮೆರವಣಿಗೆ, ಇಡೀ ನಗರ ಕೇಸರಿಮಯ.
ಲೋಕಸಭಾ ಕ್ಷೇತ್ರ ಐದು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಈ ಪೈಕಿ ಮೂರು- ವಾರಾಣಸಿ ಉತ್ತರ, ವಾರಾಣಸಿ ದಕ್ಷಿಣ ಮತ್ತು ವಾರಾಣಸಿ ಕಂಟೋನ್ಮೆಂಟ್ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ರೋಹನಿಯಾ ವಿಧಾನಸಭಾ ಕ್ಷೇತ್ರ ಅಪ್ನಾ ದಲ್ ಮತ್ತು ಶಿವಪುರಿ ಕ್ಷೇತ್ರ ಸಮಾಜವಾದಿ ಪಕ್ಷದ ವಶದಲ್ಲಿವೆ.
ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳು ಕಾಂಗ್ರೆಸ್ ಪಕ್ಷಕ್ಕಿಂತ ಗಟ್ಟಿ ನೆಲೆ ಕಂಡುಕೊಂಡಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ.30 ರಷ್ಟು ಮತ ಪಡೆದರೆ, ಬಿಎಸ್ಪಿ ಶೇ. 28, ಎಸ್ಪಿ 18.61, ಕಾಂಗ್ರೆಸ್ ಶೇ.9.98 ರಷ್ಟ ಮಾತ್ರ ಮತಪಡೆದಿದ್ದವು.
ಹುರಿಯಾಳುಗಳು
ಬಿಜೆಪಿ - ನರೇಂದ್ರ ಮೋದಿ
ಬಿಎಸ್ಪಿ- ವಿಜಯ್ ಪ್ರಕಾಶ್ ಜೈಸ್ವಾಲ್
ಎಸ್ಪಿ- ಕೈಲಾಸ್ ಚೌರಾಸಿಯಾ
ಸಿಪಿಐ(ಎಂ) ಹಿರಾಲಾಲ್ ಯಾದವ್
ತೃಣಮೂಲ ಕಾಂಗ್ರೆಸ್- ಇಂದಿರಾ ತಿವಾರಿ
ಆಪ್- ಅರವಿಂದ್ ಕೇಜ್ರಿವಾಲ್
-ರೇಣುಕಾಪ್ರಸಾದ್ ಹಾಡ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


