ಪ್ರಧಾನ ಸುದ್ದಿ

ಪಾಪಿ ಕೆಲಸಕ್ಕೆ ಪಾಕಿಗಳ ನೇಮಕ

Published On :

ನವದೆಹಲಿ: ನಮ್ಮ ದೇಶದ ಮಣ್ಣಲ್ಲಿ ವಿಧ್ವಂಸಕ ಕೃತ್ಯ ಎಸಗಲು ಇಂಡಿಯನ್ ಮುಜಾಹಿದೀನ್ ಪಾಕಿಸ್ತಾನದ ಉಗ್ರರನ್ನು ನೇಮಿಸುವ ಮಟ್ಟಕ್ಕೆ ಹೋಗಿದೆ!
ಹೌದು. ಬುಧವಾರ ರಾತ್ರಿ ಸೆರೆಸಿಕ್ಕ ಇಬ್ಬರು ಪಾಕ್ ಉಗ್ರರೇ ಇದಕ್ಕೆ ಸಾಕ್ಷಿ. ಲೋಕಸಭೆ ಚುನಾವಣೆ ವೇಳೆ ದೇಶದಲ್ಲಿ ಭಾರಿ ಸಾವು ನೋವು ಉಂಟುಮಾಡಿ, ಜನರಲ್ಲಿ ಭಯ ಹುಟ್ಟಿಸಬೇಕು ಎಂಬ ಉದ್ದೇಶ ಈಡೇರಿಸುವುಕ್ಕಾಗಿ ಐಎಂ ಉಗ್ರರು 'ಪಾಪಿ'ಸ್ತಾನದ ಜತೆ ಕೈಜೋಡಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಣಕ್ಕಿಳಿದಿರುವ ವಾರಾಣಸಿಯತ್ತ ಎಲ್ಲರ ಕಣ್ಣುನೆಟ್ಟಿರುವಾಗಲೇ ಅಲ್ಲಿ ವಿಧ್ವಂಸಕ ಕೃತ್ಯ ಎಸಗುವುದು ಈ ಉಗ್ರರ ಇಂಗಿತ. ಇದಕ್ಕೆಂದೇ ನಿಯೋಜಿಸಲಾಗಿದ್ದ ಪಾಕ್ನ ಇಬ್ಬರು ಉಗ್ರರು ಉತ್ತರಪ್ರದೇಶದ ಎಟಿಎಸ್ ಬಲೆಗೆ ಬಿದ್ದಿದ್ದಾರೆ.
ಅಯೋಧ್ಯೆಯತ್ತ ತೆರಳುತ್ತಿದ್ದಾಗ: ಪಾಕಿಸ್ತಾನದ ಫಿದಾಯೀನ್ ದಳದ ಮುರ್ತಾಜಾ ಹಾಗೂ ಒವೈಸ್ನನ್ನು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲಿಕ್ಕೆಂದೇ ಇಂಡಿಯನ್ ಮುಜಾಹಿದೀನ್ ನಿಯೋಜಿಸಿತ್ತು.
ನೇಪಾಳ ಗಡಿಯ ಮೂಲಕ ದೇಶದೊಳಕ್ಕೆ ನುಸುಳಿದ್ದ ಇವರು 15 ದಿನಗಳ ಹಿಂದೆ ಗೋರಖ್ಪುರಕ್ಕೆ ಆಗಮಿಸಿದ್ದರು. ಮಂಗಳವಾರ ಬಂಧಿಸಲಾಗಿದ್ದ ಐಎಂ ಮುಖ್ಯಸ್ಥ ತಹ್ಸೀನ್ ಅಖ್ತರ್ ನೀಡಿದ ಸುಳಿವಿನ ಮೇರೆಗೆ ಈ ಉಗ್ರರನ್ನು ಸೆರೆಹಿಡಿಯಲಾಯಿತು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಗೋರಖ್ಪುರದಿಂದ ಇವರು ಅಯೋಧ್ಯೆಯತ್ತ ತೆರಳುತ್ತಿದ್ದಾಗ ಬಂಧಿಸಲಾಯಿತು. ಜತೆಗೆ, ಸುಮಾರು 100ರಷ್ಟು ಮಂದಿಯನ್ನು ಬಲಿತೆಗೆದುಕೊಳ್ಳುವಷ್ಟು ಸ್ಫೋಟಕಗಳನ್ನು ಇವರಿಂದ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



ತಾಂತ್ರಿಕ ಹಿನ್ನೆಲೆಯವರೇ ಬೇಕು
ತಾಂತ್ರಿಕ ಶಿಕ್ಷಣದ ಹಿನ್ನೆಲೆಯುಳ್ಳವರನ್ನೇ ಐಎಂ ತನ್ನ ಸಂಘಟನೆಗೆ ಸೇರಿಸಿಕೊಳ್ಳುತ್ತಿದೆ ಎಂಬ ವಿಚಾರ ಈಗ ಬಹಿರಂಗವಾಗಿದೆ. ಜೈಪುರದಲ್ಲಿ ಬಂಧಿಸಿರುವ ಐವರಲ್ಲಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು. ತಾಂತ್ರಿಕ ವಿಷಯದಲ್ಲಿ ಪ್ರತಿಭಾವಂತರಾಗಿರುವ ಯುವಕರು ಸುಲಭವಾಗಿ ಐಇಡಿ ತಯಾರಿಕೆಯನ್ನು ಕಲಿಯುತ್ತಾರೆ. ಹಾಗಾಗಿ ಬೇಗನೆ ಇಂಥವರಿಗೆ ಉಗ್ರ ತರಬೇತಿ ನೀಡಬಹುದು ಎನ್ನುವುದು ಐಎಂನ ಪ್ಲ್ಯಾನ್. ಅದರಂತೆ, ಐಐಟಿಗೆ ಸೇರುವ ಕನಸು ಕಂಡಿದ್ದ ಮಹರೂಫ್ ಮತ್ತು ವಖಾರ್ನ ಬ್ರೈನ್ವಾಶ್ ಮಾಡಿ ಅವರನ್ನು ಐಎಂನತ್ತ ಆಕರ್ಷಿಸಿದ್ದು ಪಾಕ್ ಮೂಲದ ಅಫೀಫ್ ಭಟ್ಕಳ್ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ, ಫೇಸ್ಬುಕ್ನಲ್ಲಿ ಜಿಹಾದ್ಗೆ ಸಂಬಂಧಿಸಿದ ವಿಷಯಗಳನ್ನು 'ಲೈಕ್' ಮಾಡುವವರ ಜತೆ ಸಂಪರ್ಕ ಹೊಂದಿ ಅವರನ್ನೂ ಉಗ್ರವಾದದತ್ತ ಸೆಳೆಯುವ ಕೆಲಸವನ್ನು ಅಫೀಫ್ ಮಾಡುತ್ತಿದ್ದ ಎನ್ನಲಾಗಿದೆ.

ಯಾಸೀನ್ ಪತ್ನಿಗೆ 1 ಲಕ್ಷ ತಲುಪಿಸಿದ್ದ ತಹ್ಸೀನ್
ಯಾಸೀನ್ ಭಟ್ಕಳ್ ಬಂಧನಕ್ಕೆ ಸರಿಯಾಗಿ 3 ದಿನ ಮೊದಲು ಉಗ್ರ ತಹ್ಸೀನ್ ದೆಹಲಿಯ ಜಾಮಿಯಾ ನಗರದಲ್ಲಿ ಯಾಸೀನ್ ಪತ್ನಿ ಜಾಹಿದಾಳನ್ನು ಭೇಟಿಯಾಗಿದ್ದ. ಜತೆಗೆ ಆಕೆಗೆ 1 ಲಕ್ಷ ನಗದು ಹಾಗೂ ಮೊಬೈಲ್ ಫೋನ್ವೊಂದನ್ನು ನೀಡಿ ಬಂದಿದ್ದ. ಇದು ತಹ್ಸೀನ್ ಮುಂಬೈನಲ್ಲಿ ಹವಾಲಾ ಮೂಲಕ ಪಡೆದ ಹಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.