ಪ್ರಧಾನ ಸುದ್ದಿ

ದಯವಿಟ್ಟು ನನ್ನನ್ನು 'ಭ್ರಷ್ಟ' ಎನ್ನದಿರಿ

ದಯವಿಟ್ಟು ನನ್ನನ್ನು 'ಭ್ರಷ್ಟ' ಎನ್ನದಿರಿ
Published On :

ಬೆಂಗಳೂರು: ದೇಶದ ಕಾನೂನು ಹೇಳುವ ಪ್ರಕಾರ, 'ಒಬ್ಬ ವ್ಯಕ್ತಿಯು ದೋಷಿ ಎಂದು ಸಾಬೀತಾಗುವವರೆಗೂ ಆತ ಅಮಾಯಕ'. ನನ್ನ ವಿಷಯದಲ್ಲೂ ಅಷ್ಟೆ. ನನ್ನ ವಿರುದ್ಧ ಆರೋಪಗಳಿರಬಹುದು. ಆದರೆ ಕೋರ್ಟ್ ನನ್ನನ್ನು ತಪ್ಪಿತಸ್ಥ ಎಂದು ಸಾಬೀತುಪಡಿಸಿಲ್ಲ. ಹಾಗಾಗಿ ದಯವಿಟ್ಟು ನನ್ನನ್ನು 'ಭ್ರಷ್ಟ' ಎಂದು ಕರೆಯುವುದನ್ನು ನಿಲ್ಲಿಸಿ.
ಇದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾಧ್ಯಮಗಳಿಗೆ ಮಾಡಿಕೊಂಡ ವಿನಂತಿ. ಹೌದು. ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಬಿಎಸ್ವೈ ಅವರು ಶುಕ್ರವಾರ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ 3 ಪುಟಗಳ ಪತ್ರವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಮಾಧ್ಯಮಗಳು ತಮ್ಮ ಚರ್ಚೆ, ಸಂವಾದದ ವೇಳೆ ನನ್ನನ್ನು 'ಭ್ರಷ್ಟ' ಎಂದು ಸಂಬೋಧಿಸುತ್ತಿರುವುದರಿಂದ ನನಗೆ ಅತೀವ ನೋವಾಗಿದೆ. ದಯವಿಟ್ಟು ನನ್ನನ್ನು ಇನ್ನು ಮುಂದೆ ಆ ರೀತಿ ಕರೆಯಬೇಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.
ವ್ಯವಸ್ಥಿತ ಸಂಚು: ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಸ್ಥಾಪಿತ ಹಿತಾಸಕ್ತಿಗಳು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದವು. ಇದೆಲ್ಲ ನನ್ನ ರಾಜಕೀಯ ವಿರೋಧಿಗಳು ನಡೆಸಿದ ವ್ಯವಸ್ಥಿತ ಸಂಚು ಎಂದು ಬಿಎಸ್ವೈ ಆರೋಪಿಸಿದ್ದಾರೆ.  ಜತೆಗೆ, ನಾನು ನನ್ನ ಅಧಿಕಾರಾವಧಿಯಲ್ಲಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಸಿಗುವಂತೆ ನೋಡಿಕೊಂಡಿದ್ದೇನೆ. ನನ್ನ ಪರಿಶ್ರಮ, ಸೇವೆ ಮತ್ತು ತ್ಯಾಗಮನೋಭಾವದ ಮೂಲಕ ಕಳೆದ 4 ದಶಕಗಳಿಂದ ನಾನು ಗಳಿಸಿದ್ದ ವ್ಯಕ್ತಿತ್ವವನ್ನು ಈ ಪಟ್ಟಭದ್ರ ಹಿತಾಸಕ್ತಿಗಳ ಸಂಚಿನಿಂದಾಗಿ ಕಳೆದುಕೊಳ್ಳಬೇಕಾಗಿ ಬಂತು. ಆದರೂ ನನ್ನ ಧೃತಿಗೆಟ್ಟಿಲ್ಲ. ನನ್ನ ಮೇಲಿನ ಎಲ್ಲ ಪ್ರಕರಣಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನನಗಿದೆ ಎಂದಿದ್ದಾರೆ ಯಡಿಯೂರಪ್ಪ.
ಭ್ರಷ್ಟ ಎನ್ನದಿರಿ: ನಾನು ಹಲವು ಪ್ರಕರಣಗಳಲ್ಲಿ ಈಗಾಗಲೇ ರಿಲೀಫ್ ಸಿಕ್ಕಿದೆ. ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಎಲ್ಲ ಆರೋಪಗಳಿಂದ ಮುಕ್ತನಾಗುವ ನಂಬಿಕೆ ನನಗಿದೆ. ಹೀಗಾಗಿ ಮಾಧ್ಯಮಗಳು ದಯವಿಟ್ಟು ನನ್ನನ್ನು 'ಭ್ರಷ್ಟ' ಎಂದು ಕರೆಯುವುದನ್ನು ನಿಲ್ಲಿಸಿ. ಸಂವಾದ ಕಾರ್ಯಕ್ರಮಗಳಲ್ಲಿ ನನ್ನ ವಿರೋಧಿಗಳು 'ಯಡಿಯೂರಪ್ಪ ಭ್ರಷ್ಟ' ಎಂದು ಕರೆದರೆ ನೀವೇನೂ ಮಾಡಲಾಗದು. ಆದರೆ, ನಿಮ್ಮ ಪತ್ರಿಕೆಯಲ್ಲಿ ನನ್ನನ್ನು ಆ ರೀತಿ ಸಂಬೋಧಿಸಬೇಡಿ, ನನ್ನನ್ನು 'ಭ್ರಷ್ಟ' ಎನ್ನದಂತೆ ನಿಮ್ಮ ಆ್ಯಂಕರ್ಗಳಿಗೆ, ವರದಿಗಾರರಿಗೆ ಸೂಚನೆ ನೀಡಿ ಎನ್ನುವುದು ನನ್ನ ಕಳಕಳಿಯ ವಿನಂತಿ ಎಂದೂ ಅವರು ಪತ್ರದಲ್ಲಿ ಕೋರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.