ಬಳ್ಳಾರಿ: ತಂತ್ರ - ಪ್ರತಿತಂತ್ರ ತರಹೇವಾರಿ

ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಬಿಜೆಪಿ ತನ್ನ ಕೈ ವಶ ಪಡಿಸಿಕೊಂಡಿತು. ಆಗಿನಿಂದ ಮತ್ತೆ ತನ್ನ ವಶಕ್ಕೆ ಪಡೆಯಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕಳೆದ ಬಾರಿ ಸ್ವಲ್ಪದರಲ್ಲಿ ಅದರಿಂದ ತಪ್ಪಿಸಿಕೊಂಡಿತು. ಈ ಬಾರಿ ಎನ್. ವೈ. ಹನುಮಂತಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಬಿ. ಶ್ರೀರಾಮಲು ಬಿಜೆಪಿ ಅಭ್ಯರ್ಥಿ. ಇವರಿಬ್ಬರಿಗೂ ಗೆಲವು ಅನಿವಾರ್ಯ. ಇನ್ನು ಜೆಡಿಎಸ್ನಿದಂದ ರವೀಂದ್ರಕುಮಾರ್ ಸ್ಪರ್ಧಿಸಿದ್ದಾರೆ.
- ಯಾವ ಅಂಶಗಳಿಂದ ಮತದಾರ ಕಾಂಗ್ರೆಸ್ಗೆ ಮತ ಹಾಕ್ತಾರೆ? ಬಿಜೆಪಿ ಶಾಸಕರು ಜೈಲಿಗೆ ಹೋಗಿರುವುದು ಕಾಂಗ್ರೆಸ್ಗೆ ವರದಾನವೇ?
ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿರುವುದರಿಂದ, ತಮ್ಮ ಮೇಲೆ ಅನುಕಂಪದ ಅಲೆ ಇದೆ. ಗೆಲವು ದೇವರೇ ನಿರ್ಣಯಿಸಬೇಕು. ಜೈಲಿಗೆ ಹೋಗಿರುವ ಶಾಸಕರ ಬಗ್ಗೆ ಮಾತನಾಡಲಾರೆ. ಅವರ ಬಗ್ಗೆ ನಮ್ಮ ಜನ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪರ ಅಲೆ ಕ್ಷೇತ್ರದಲ್ಲಿದ್ದು, ಜನತೆ ಬದಲಾವಣೆ ಬೇಕೆಂದು ಬಯಸುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ಗೆ ಅನುಕೂಲಕರ ವಾತಾವರಣವಿದೆ.
- ಕಳೆದ ಚುನಾವಣೆಯಲ್ಲಿ ಸೋತ ಮೇಲೆ ಕ್ಷೇತ್ರ ಹಾಗೂ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ ಎಂಬ ಆರೋಪವಿದೆ. ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದೆಯಂತೆ?
ಯಾವ ಕಾರ್ಯಕ್ರಮಗಳಿಗೆ ಕರೆದಿದ್ದಾರೋ, ಅವುಗಳಿಗೆ ಬಂದಿದ್ದೇನೆ. ಕರೆಯದ ಕಾರ್ಯಕ್ರಮಗಳಿಗೆ ಬಂದಿಲ್ಲ, ಈ ಆರೋಪದಲ್ಲಿ ಉರುಳಿಲ್ಲ. ಯಾರೂ ಆರೋಪ ಮಾಡಿಲ್ಲ. ತಮ್ಮ ಬಗ್ಗೆ ಕಾಂಗ್ರೆಸ್ನ ಎಲ್ಲ ಮುಖಂಡರಿಗೆ ಗೌರವವಿದೆ. ತಮ್ಮನ್ನು ಬೆಂಬಲಿಸುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲರೂ ಸಮಾನರಾಗಿ ಪಕ್ಷದ ಗೆಲವಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ.
- ಕೆಲ ಜಾತಿಗಳ ಮತಗಳು ಒಂದು ಪಕ್ಷಕ್ಕೆ ಸೀಮಿತವಾಗಿದೆಯೇ?
ಯಾವುದೇ ಜಾತಿ ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ, ಪಕ್ಷದ ಆಡಳಿತ, ಅಭಿವೃದ್ಧಿಯಾಧಾರದ ಮೇಲೆ ಮತದಾರರ ಮತಗಳು ಹಂಚಿಕೆಯಾಗುತ್ತವೆ ಹೊರತು, ಪಕ್ಷದ ಹಿಂದೆ ಹೋಗುವುದಿಲ್ಲ. ಎಲ್ಲ ಸಮುದಾಯಗಳಲ್ಲಿ ಎಲ್ಲ ಪಕ್ಷದ ಮತದಾರರೂ ಇದ್ದಾರೆ. ಒಂದು ಜಾತಿಯವರು ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆಂಬುದು ಸುಳ್ಳು.
- ಶ್ರೀರಾಮುಲು-ಎನ್.ವೈ. ಹನುಮಂತಪ್ಪನವರ ಸಂಬಂಧ ಉತ್ತಮವಾಗಿದೆಯಂತೆ?
ರಾಜಕೀಯದಲ್ಲಿ ಎದುರಾಳಿ ಆದಾಗಿನಿಂದ ಶ್ರೀರಾಮುಲು ಜತೆ ನಂಟಿಲ್ಲ. ಹಲವು ವರ್ಷಗಳ ಹಿಂದೆ ಅವರೊಂದಿಗೆ ಒಡನಾಟ ಇತ್ತು. ನಾನು ರಾಜಕೀಯಕ್ಕೆ ಬಂದಾಗಲೇ ಅವರ ನನ್ನ ನಂಟು ಕಡಿದು ಹೋಯಿತು. ಈಗೇನಿದ್ದರೂ ಹೋರಾಟ ಮಾತ್ರ.
- ಯಾವ ಅಂಶಗಳನ್ನು ಇಟ್ಟುಕೊಂಡು ಮತದಾರರ ಮುಂದೆ ಹೋಗುತ್ತೀರಾ?
ನನ್ನ ರಾಜಕೀಯ ಜೀವನದಲ್ಲಿ, ಭವಿಷ್ಯದ ರಾಜಕೀಯ ದೃಷ್ಟಿಯಿಂದ ಈ ಚುನಾವಣೆ ಪ್ರಮುಖವಾಗಿದೆ. ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆಗಳು, ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೋಗುತ್ತೇನೆ.
ಕಾಂಗ್ರೆಸ್ ಪರ ಅಲೆ ಬಳ್ಳಾರಿ ಕ್ಷೇತ್ರದಲ್ಲಿದ್ದು, ಜನತೆ ಬದಲಾವಣೆ ಬೇಕೆಂದು ಬಯಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಮುಂದಿಟ್ಟುಕೊಂಡು ಮತ ಕೇಳುತ್ತೇನೆ. ಜನರೂ ಈ ಬಾರಿ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ.
- ವೈ. ಹನುಮಂತಪ್ಪ
- ಬಿಜೆಪಿಗೆ ಶ್ರೀರಾಮುಲು ಅನಿವಾರ್ಯವೇ? ಈ ಚುನಾವಣೆ ರಾಜಕೀಯ ಭವಿಷ್ಯ ನಿರ್ಧರಿಸಲಿದೆಯೇ?
ಬಿಜೆಪಿಗೆ ನಾನು ಅನಿವಾರ್ಯವೋ, ನನಗೆ ಬಿಜೆಪಿ ಅನಿವಾರ್ಯವೋ ಗೊತ್ತಿಲ್ಲ. ದೇಶಕ್ಕಾಗಿ ಎಲ್ಲರೂ ಒಂದಾಗುವುದು ಮಾತ್ರ ಅನಿವಾರ್ಯ. ದೇಶಭಕ್ತ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಬಿಜೆಪಿಗೆ ಹೋಗಿದ್ದೇನೆ. ರಾಷ್ಟ್ರದ ಭವಿಷ್ಯ ಬದಲಾಯಿಸುವ ಈ ಚುನಾವಣೆ ನನ್ನ ರಾಜಕೀಯ ಭವಿಷ್ಯಕ್ಕೂ ನಾಂದಿ ಹಾಡಲಿದೆ.
- ಬಿಜೆಪಿಯಲ್ಲಿ ಶ್ರೀರಾಮುಲುಗೆ ಆದ್ಯತೆ ಸಿಗುವುದೇ? ಮೋದಿ ಪ್ರಧಾನಿಯಾದರೆ ಸಚಿವ ಸ್ಥಾನ ಆಕಾಂಕ್ಷಿಯೇ?
ಖಂಡಿತವಾಗಿಯೂ ಬಿಜೆಪಿಯಲ್ಲಿ ಆದ್ಯತೆ ಸಿಗುತ್ತದೆ. ದೇಶದ 40 ಸ್ಟಾರ್ ಕ್ಯಾಂಪೇನರ್ಗಳಲ್ಲಿ, ರಾಜ್ಯದ 5 ಸ್ಟಾರ್ ಕ್ಯಾಂಪೇನರ್ಗಳಲ್ಲಿ ನನ್ನನ್ನು ಆಯ್ಕೆ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲ ಜನಾಂಗದ ಪ್ರೀತಿ ಗಳಿಸಿಕೊಂಡಿರುವ ಏಕೈಕ ವ್ಯಕ್ತಿ ನಾನು. ಸಚಿವ ಸ್ಥಾನದ ಆಕಾಂಕ್ಷಿಯಾಗಿ ಚುನಾವಣೆಗೆ ನಿಲ್ಲುತ್ತಿಲ್ಲ. ಅನಿವಾರ್ಯವಾಗಿ ಸ್ಪರ್ಧಿಸಿದ್ದೇನೆ. ಮೋದಿ ಪ್ರಧಾನಿಯಾಗಬೇಕೆಂಬ ಆಸೆ ಇದೆ, ಅಷ್ಟೆ.
- ಚುನಾವಣೆಯಲ್ಲಿ ತಂತ್ರಗಾರಿಕೆ ಉಪಯೋಗಿಸುತ್ತೀರಾ? ಗುರು-ಶಿಷ್ಯರ ಮಧ್ಯೆ ಹೋರಾಟ ಅಂತಾರೆ, ಹೌದಾ?
30 ವರ್ಷದ ರಾಜಕಾರಣದಲ್ಲಿ ನಾನು ಜನರ ಮಧ್ಯೆ ಬೆಳೆದಿದ್ದೇನೆ. ಇತ್ತೀಚೆಗಷ್ಟೇ ಮೀಸಲು ಕ್ಷೇತ್ರವಾಗಿದೆ. ರಾಜಕಾರಣದಲ್ಲಿ ನಾನು ಚುನಾವಣೆ ವೇಳೆ ತಂತ್ರಗಾರಿಕೆ ಉಪಯೋಗಿಸಿಲ್ಲ. ಜನರ ಬಳಿ ಹೋಗಿ, ಮನವೊಲಿಸಿ ಮತ ಪಡೆಯುತ್ತಿದ್ದೇನೆ. ನನಗೂ ಹನುಮಂತಪ್ಪನವರಿಗೂ ಯಾವುದೇ ಸಂಬಂಧ ಇಲ್ಲ. ಒಂದು ಸಮಾಜದ ವ್ಯಕ್ತಿಗಳಾಗಿ, ಸಮಾರಂಭದಲ್ಲಿ ಜೊತೆಗೂಡಿರಬಹುದು. ಆದರೆ, ರಾಜಕಾರಣದಲ್ಲಿ ಅವರನ್ನು ವಿರೋಧ ಮಾಡಿಕೊಂಡು ಬಂದಿದ್ದೇನೆ.
- ರೆಡ್ಡಿ ಸಹೋದರರೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಬಿಜೆಪಿ ಷರತ್ತು ವಿಧಿಸಿದೆಯೇ?
ಬಿಜೆಪಿ ಸೇರ್ಪಡೆ ಸಂದರ್ಭ ಷರತ್ತು ವಿಧಿಸಿಲ್ಲ. ರೆಡ್ಡಿ ಸಹೋದರರೊಂದಿಗೆ ಅಂತರ ಕಾಯ್ದುಕೊಳ್ಳುವ ಮಾತು ಆಡಿಲ್ಲ. ಜನಾರ್ದನ ರೆಡ್ಡಿ, ಶಾಸಕರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸುತ್ತಿರುವುದು ನೋವು ತಂದಿದೆ. ಬಿಜೆಪಿಯಲ್ಲಿ ಬಿಎಸ್ಸಾರ್ ವಿಲೀನಕ್ಕೆ ತಾಂತ್ರಿಕ ದೋಷವಿದ್ದುದರಿಂದ ಬಿಎಸ್ಸಾರ್ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಬಿಜೆಪಿ ಸೇರಿದ್ದೇನೆ. ಚುನಾವಣೆ ಬಳಿಕ ಬಿಎಸ್ಸಾರ್ಅನ್ನು ಬಿಜೆಪಿಯಲ್ಲಿ ವಿಲೀನ ಮಾಡುತ್ತೇವೆ.
ಹೈ-ಕಕ್ಕೆ 371ಜೆ ಅನುಷ್ಠಾನವಾದರೂ ಪ್ರಯೋಜನವಾಗಿಲ್ಲ. ಹೆಚ್ಚಿನ ಆದಾಯ ತಂದುಕೊಡುವ ಬಳ್ಳಾರಿಗೆ ರೇಲ್ವೆ ಸೌಲಭ್ಯ ಒದಗಿಸಿಲ್ಲ, ಕೊಟ್ಟೂರು-ಹರಿಹರ ರೈಲು ಚುನಾವಣೆ ಗಿಮಿಕ್ ಅಷ್ಟೇ. ಈ ಎಲ್ಲ ವಿಷಯಗಳನ್ನಿಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತೇನೆ.
- ಶ್ರೀರಾಮುಲು
- ಬಳ್ಳಾರಿ ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವ ಇಲ್ಲ ಎನ್ನುತ್ತಾರೆ. ಹೇಗೆ ಪೈಪೋಟಿ ನೀಡುತ್ತೀರಾ?
ಜಿಲ್ಲೆಯಲ್ಲಿ ತಳಮಟ್ಟದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರನ್ನು ಭೇಟಿಯಾಗಿ, ಸಭೆ ನಡೆಸಿ, ಚುನಾವಣೆಗೆ ಹುರಿದುಂಬಿಸುತ್ತೇವೆ. ಪಕ್ಷದಲ್ಲಿ ತಟಸ್ಥರಾಗಿರುವ ಮುಖಂಡರನ್ನು ಭೇಟಿ ಮಾಡಿ, ಅವರೊಂದಿಗೆ ಚರ್ಚಿಸಿ, ಬೆಂಬಲ ನೀಡುವಂತೆ ತಿಳಿಸುವ ಮೂಲಕ ಕ್ಷೇತ್ರಾದ್ಯಂತ ಸಂಚರಿಸಿ, ಬಿಜೆಪಿ, ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡುತ್ತೇನೆಂಬ ವಿಶ್ವಾಸವಿದೆ.
- ಕಾಂಗ್ರೆಸ್, ಬಿಜೆಪಿ ಪೈಪೋಟಿ ಮಧ್ಯೆ ಮತದಾರ ಜೆಡಿಎಸ್ಗೆ ಒಲಿಯುವನೇ?
ಅಲ್ಪಸಂಖ್ಯಾತರ ಮತಗಳು ಬಿಜೆಪಿ, ಕಾಂಗ್ರೆಸ್ಗೆ ಹೋಗುವುದಿಲ್ಲ. ಮೋದಿ ಅಲೆಯಲ್ಲಿ ತೇಲಿ ಹೋಗುತ್ತಿರುವ ಬಿಜೆಪಿಗೆ ಅಲ್ಪಸಂಖ್ಯಾತರ ಬೆಂಬಲವಿಲ್ಲ. ಕಾಂಗ್ರೆಸ್ ಕಡೆಗೆ ಮುಸ್ಲಿಂ, ಅಲ್ಪಸಂಖ್ಯಾತರ ಮತಗಳು ಹೋಗುವುದಿಲ್ಲ.ಜೆಡಿಎಸ್ ರೈತರ ಪಕ್ಷವಾಗಿದೆ. ರೈತರು ಜೆಡಿಎಸ್ಗೆ ಬೆಂಬಲ ನೀಡುವುದರಿಂದ ಸಹಜವಾಗಿಯೇ ಕಾಂಗ್ರೆಸ್, ಬಿಜೆಪಿಗೆ ಜೆಡಿಎಸ್ ಪೈಪೋಟಿ ನೀಡಲಿದೆ.
- ಬಳ್ಳಾರಿಯಲ್ಲಿ ಜೆಡಿಎಸ್ಗೆ ಅಭ್ಯರ್ಥಿ ಕೊರತೆ ಎದುರಾಗಿತ್ತೆ? ಮೈಸೂರಿನಿಂದ ಬಳ್ಳಾರಿಗೆ ಬಂದು ಸ್ಪರ್ಧಿಸಲು ಕಾರಣ?
ಜೆಡಿಎಸ್ಗೆ ಬಳ್ಳಾರಿಯಲ್ಲಿ ಸ್ಪರ್ಧಿಗಳು ಇದ್ದಾರೆ. ನಾನು ಜೆಡಿಎಸ್ನಿಂದ ಮೈಸೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಆದರೆ, ಮೈಸೂರು ಸಾಮಾನ್ಯ ಕ್ಷೇತ್ರವಾಗಿರುವುದರಿಂದ ಅಲ್ಲಿ ಟಿಕೆಟ್ ನೀಡುವ ಬದಲು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವಾಗಿರುವ ಬಳ್ಳಾರಿಯಲ್ಲಿ ನಿಲ್ಲಲು ಅವಕಾಶ ನೀಡಿದ್ದಾರೆ. ತಾವು ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡನಾಗಿರುವುದರಿಂದ, ಸಹಜವಾಗಿಯೇ ಮತಗಳು ಬರುತ್ತವೆ. ಶ್ರೀರಾಮುಲು ಪರಿಶಿಷ್ಟ ಪಂಗಡದ ಪ್ರಶ್ನಾತೀತ ನಾಯಕನಲ್ಲ. ನಾನು ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
- ಜೆಡಿಎಸ್ ಚುನಾವಣೆ ಪ್ರಚಾರಕ್ಕೆ ಯಾವ ಅಸ್ತ್ರಗಳನ್ನು ಉಪಯೋಗಿಸುತ್ತದೆ?
ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಜೈಲಿಗೆ ಹೋಗಿರುವುದು, ಅಕ್ರಮ ಗಣಿಗಾರಿಕೆ ಆರೋಪಗಳು, ಜಿಲ್ಲೆಯಲ್ಲಿ ಆಡಳಿತ ನಡೆಸಿರುವ ಬಿಜೆಪಿ ಜನಪ್ರತಿನಿಧಿಗಳು ಅಭಿವೃದ್ಧಿಗೆ ಸಹಕರಿಸದಿರುವುದು, ಎನ್.ವೈ. ಹನುಮಂತಪ್ಪ ಬಗ್ಗೆ ಕಾಂಗ್ರೆಸ್ನಲ್ಲಿಯೇ ಇರುವ ಅಸಮಾಧಾನ, ಕಾಂಗ್ರೆಸ್ ಮುಖಂಡರ ಆಂತರಿಕ ಭಿನ್ನಾಭಿಪ್ರಾಯಗಳು, ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಯೋಜನೆ ಮುಂದಿಟ್ಟುಕೊಂಡು ಮತದಾರರಲ್ಲಿ ಮತ ಕೇಳುತ್ತೇನೆ.
ನಾನು ರಾಜ್ಯದ ಮೈಸೂರು ಭಾಗವಾದ ಟಿಪ್ಪು ಸುಲ್ತಾನ್ ನಾಡಿನಿಂದ ಬಂದಿದ್ದೇನೆ. ದೇವೇಗೌಡರು ತೃತೀಯ ರಂಗದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾದರೆ ರಾಜ್ಯದ ಅಭಿವೃದ್ಧಿ ಸುಲಭ ಸಾಧ್ಯವಾಗುತ್ತದೆ. ಇಂಥ ದೃಷ್ಟಿಕೋನದಿಂದ ಮತದಾರರು ಆಲೋಚಿಸಿ, ತಮಗೆ ಮತ ನೀಡುವ ವಿಶ್ವಾಸವಿದೆ.
- ಆರ್. ರವೀಂದ್ರಕುಮಾರ್
-ಸಂದರ್ಶನ:ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


