ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ. 29
ಲೋಕಸಭಾ ಚುನಾವಣೆಗೆ ರಾಜ್ಯದ ಕಣ ಹದವಾಗಿದ್ದು, 435 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ.
ನಾಮಪತ್ರ ವಾಪಾಸ್ ಪಡೆಯುವುದಕ್ಕೆ ಕೊನೆಯ ದಿನವಾದ ಶನಿವಾರ 109 ಮಂದಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಒಟ್ಟು 544 ಅಭ್ಯರ್ಥಿಗಳು ಇದುವರೆಗೆ ನಾಮಪತ್ರ ಸಲ್ಲಿಸಿದ್ದರು. ಈಗ 435 ಮಂದಿ ಕಣದಲ್ಲಿದ್ದು ಇವರಲ್ಲಿ 23 ಮಂದಿ ಮಹಿಳೆಯರು, 412 ಮಂದಿ ಪುರುಷರು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ.
ಕೆನರಾ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯ್ಕ್, ಚಿತ್ರದುರ್ಗದ ಕೆಜೆಪಿ ಅಭ್ಯರ್ಥಿ ಪುರುಷೋತ್ತಮ ನಾಯಕ್, ತುಮಕೂರಿನ ಜೆಡಿಯು ಅಭ್ಯರ್ಥಿ ಇನ್ತಿಯಾಜ್ ಅಹ್ಮದ್ ನಾಮಪತ್ರ ವಾಪಾಸ್ಪಡೆದವರಲ್ಲಿ ಪ್ರಮುಖರು ಎಂದು ಹೇಳಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುಲ್ಬರ್ಗದಲ್ಲಿ ಅತಿ ಕಡಿಮೆ (8) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳ್ಳಾರಿಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲರೂ ಸ್ಪರ್ಧೆಯಲ್ಲಿದ್ದಾರೆ. ಉಳಿದಂತೆ ಬೀದರ್ 24, ಬೆಂಗಳೂರು ದಕ್ಷಿಣ 23, ಕೋಲಾರ್ 22, ಚಿಕ್ಕಬಳ್ಳಾಪುರ 19, ಬೆಂಗಳೂರು ಉತ್ತರ 14, ಬೆಂಗಳೂರು ಗ್ರಾಮಾಂತರ 15, ಚಾಮರಾಜನಗರ 14, ಮೈಸೂರು 15, ಮಂಡ್ಯ 16, ತುಮಕೂರು 16, ಚಿತ್ರದುರ್ಗ 14, ದಕ್ಷಿಣ ಕನ್ನಡ 14, ಹಾಸನ 14, ಉಡುಪಿ- ಚಿಕ್ಕಮಗಳೂರು 11, ಶಿವಮೊಗ್ಗ 13, ದಾವಣಗೆರೆ 13, ಕೆನರಾ 9, ಧಾರವಾಡ 17, ಹಾವೇರಿ 19, ಬಳ್ಳಾರಿ 12, ಕೊಪ್ಪಳ 16, ರಾಯಚೂರು 11, ಬಿಜಾಪುರ 14, ಬಾಗಲಕೋಟೆ 13, ಬೆಳಗಾವಿ 15, ಚಿಕ್ಕೋಡಿಯಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
628 ಪ್ರಕರಣ: ರಾಜ್ಯದಲ್ಲಿ ಇದುವರೆಗೆ 628 ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಬೆಳಗಾವಿಯಲ್ಲಿ 124, ಮೈಸೂರಿನಲ್ಲಿ 119, ಚಿಕ್ಕಬಳ್ಳಾಪುರದಲ್ಲಿ 105, ಗುಲ್ಬರ್ಗ 52, ಬಾಗಲಕೋಟೆ 37, ಧಾರವಾಡ 29, ರಾಮನಗರದಲ್ಲಿ 52 ಇಂಥ ಪ್ರಕರಣಗಳು ದಾಖಲಾಗಿದೆ.
ವಶ: ಇದುವರೆಗೆ ರು. 2.85 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಕೊಪ್ಪಳದಲ್ಲಿ ರು. 50 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಚಿಕ್ಕೋಡಿಯಲ್ಲಿ 1000 ಸೀರೆ ವಶಪಡಿಸಿಕೊಳ್ಳಲಾಗಿದೆ. ಒಟ್ಟು ರು. 1.40 ಕೋಟಿ ಮೊತ್ತದ 35175 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಜಸ್ವಂತ್ ಉಚ್ಚಾಟನೆ?
ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಬಾರ್ಮರ್ನಿಂದ ನಾಮಪತ್ರ ವಾಪಸ್ ಪಡೆಯದೇ ಪಕ್ಷಕ್ಕೆ ತಲೆನೋವು ತಂದಿದ್ದಾರೆ. ಜಸ್ವಂತ್ ಸಿಂಗ್ ಅವರ ಈ ಹಠದಿಂದಾಗಿ ಅವರನ್ನು ಪಕ್ಷದಿಂದ ಹೊರಹಾಕುವ ಸನ್ನಿವೇಶ ಸೃಷ್ಟಿಯಾಗಿದೆ. ಆದರೂ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಉಚ್ಚಾಟನೆ ಮಾಡುವ ಸಂದರ್ಭ ಒದಗಿಬರಲಿಕ್ಕಿಲ್ಲ ಎಂದುಕೊಂಡಿದ್ದೇನೆ ಎಂದಿದ್ದಾರೆ.
ಮಸೂದ್ ಬಂಧನ
ಮೋದಿ ಅವರನ್ನು ಕೊಚ್ಚಿ ಹತ್ಯೆ ಮಾಡುವೆ ಎಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಅವರನ್ನು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಇದೇ ವೇಳೆ ಮಸೂದ್ ಭಾಷಣವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಉತ್ತರ ಕನ್ನಡಕ್ಕೂ ಇಲ್ಲ ಅಭ್ಯರ್ಥಿ
ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯ್ಕ ನಾಮಪತ್ರ ವಾಪಸ್ ಪಡೆದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆರ್ಥಿಕ ಸಹಾಯ ಮಾಡುವುದಾಗಿ ದೇವೇಗೌಡ, ಕುಮಾರಸ್ವಾಮಿ ಭರವಸೆ ನೀಡಿದ್ದರು. ಜೆಡಿಎಸ್ ನಾಯಕರು ನನ್ನ ಕರೆಯನ್ನೂ ಸ್ವೀಕರಿಸಿಲ್ಲ ಎಂದಿದ್ದಾರೆ. ಆದರೆ ಶಿವಾನಂದ ನಾಯ್ಕ ನಾಮಪತ್ರ ವಾಪಸ್ ಪಡೆಯಲು ದೇಶಪಾಂಡೆ, ಬಿ.ಎಸ್. ಯಡಿಯೂರಪ್ಪ ಕಾರಣ ಎಂಬ ಆರೋಪ ಕೇಳಿಬಂದಿದೆ.
ಟಿ ಹೈಕಗಿಲ್ಲ ಬಿಸಿಲ ರಿಯಾಯಿತಿ
ಈ ಬಾರಿಯ ಚುನಾವಣೆ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಬೇಸಿಗೆಯ ಬಿಸಿ ಏರುವಂತೆ ಮಾಡಿದೆ. ಪ್ರತಿ ವರ್ಷವೂ ಇಲ್ಲಿ ಬೆಳಗ್ಗೆ 8.30ರಿಂದ ಕಚೇರಿ ಆರಂಭಗೊಂಡು, ಮಧ್ಯಾಹ್ನ 1.30ಕ್ಕೆಲ್ಲಾ ಮುಗಿಯುತ್ತಿತ್ತು. ಆದರೆ ಈ ಬಾರಿ ರಾಜ್ಯದ ಇತರೆಡೆಯಂತೆಯೇ ಕಚೇರಿಗಳು ಕಾರ್ಯ ನಿರ್ವಹಿಸಬೇಕಾಗಿದೆ.
ಟಿ ಎಷ್ಟು ಓದಿದರೆ ಏನು ಬಂತು!
15 ಪದವಿ ಪಡೆದವನೊಬ್ಬ ಕೊಪ್ಪಳದಿಂದ ಚುನಾವಣಾ ಕಣಕ್ಕೆ ಧುಮುಕಿದ್ದಾನೆ ಎಂಬ ಪಾಸಿಟಿವ್ ಸ್ಟೋರಿಯೊಂದರ ದುರಂತ ಅಂತ್ಯವಿದು. ನಾಮಪತ್ರ ಸಲ್ಲಿಕೆ ವೇಳೆ ಲಿಂಗಸಗೂರಿನ ಹಳ್ಳಿಯೊಂದರಲ್ಲಿ ಮತಚೀಟಿಯಲ್ಲಿ ಹೆಸರಿರುವ ದೃಢೀಕರಣವನ್ನೇ ನಾಗರಾಜ್ ನರಕಲದಿನ್ನಿ ಅವರು ಸಲ್ಲಿಸಿರಲಿಲ್ಲ. ಹೀಗಾಗಿ ನಾಮಪತ್ರ ತಿರಸ್ಕೃತಗೊಂಡಿದೆ. ಈ ಮೂಲಕ ಅವರ ಸ್ಪರ್ಧೆಯ ಆಸೆ ಕಮರಿ ಹೋಗಿದೆ.
ಸಬೀರ್ ಔಟ್
ಬಿಜೆಪಿ ಪಾಲಿಗೆ ಮತ್ತೊಂದು ಮುತಾಲಿಕ್ ಪ್ರಕರಣ. ಶುಕ್ರವಾರವಷ್ಟೇ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದ್ದ ಬಿಹಾರದ ಉಚ್ಛಾಟಿತ ಜೆಡಿಯು ನಾಯಕ ಸಬೀರ್ ಅಲಿಯನ್ನು ಶನಿವಾರವೇ ವಾಪಸ್ ಕಳುಹಿಸಲಾಗಿದೆ. ಆರ್ಎಸ್ಎಸ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಅಸಮಾಧಾನದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇದು ದಿಢೀರ್ ಕದನ ಕಲಿಗಳ ಕ್ಷೇತ್ರವೇ?
ಅವರ ವಿರುದ್ಧ ಯಾರು? ಇದು ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರ ತಲೆ ತಿನ್ನುತ್ತಿರುವ ಪ್ರಶ್ನೆ. ಚುನಾವಣೆಯಲ್ಲಿ ವಾರಾಣಸಿ, ರಾಯ್ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಿಂದ ಹಾಲಿ ಉಮೇದುವಾರರಿಗೆ ಪ್ರಬಲ ಪ್ರತಿಸ್ಪರ್ಧೆಯೊಡ್ಡುವ ಕದನಕಲಿಗಳು ಯಾರೆನ್ನುವುದೇ ನಿರ್ಧಾರವಾಗಿಲ್ಲ. ಹೀಗಾಗಿ, ಈ ಕ್ಷೇತ್ರಗಳಿಗೆ ಪ್ರಬಲರ ಹೆಸರು ದಿಢೀರ್ ಆಗಿ ಘೋಷಣೆಯಾದರೂ ಅಚ್ಚರಿಯಿಲ್ಲ.
ವಾರಾಣಸಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಣಕ್ಕೆ ಇಳಿಯಲಿರುವುದರಿಂದ ಇದು ಈ ಚುನಾವಣೆಯಲ್ಲಿ ಹೈಪ್ರೊಫೈಲ್ ಕ್ಷೇತ್ರ. ಕಾಂಗ್ರೆಸ್ ಇದುವರೆಗೆ ಮೋದಿ ವಿರುದ್ಧ ಕದನ ಕಲಿ ಯಾರು ಎಂದು ಪ್ರಕಟ ಮಾಡಿಲ್ಲ. ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಎಂಬ ವದಂತಿಗಳಿದ್ದರೂ ಅದು ಖಚಿತವಾಗಿಲ್ಲ. ಆದರೆ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರು ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ. ಅವರ ಜತೆ ಜನಾರ್ದನ ದ್ವಿವೇದಿ, ಮೋಹನ್ ಪ್ರಕಾಶ್, ರೀಟಾ ಬಹುಗುಣ ಜೋಶಿ ಪಟ್ಟಿಯಲ್ಲಿದ್ದಾರೆ.
ಅಮೇಠಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರವಿದು. ಇಲ್ಲಿಯೂ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ರಾಜ್ಯಸಭಾ ಸದಸ್ಯೆ ಸ್ಮೃತಿ ಇರಾನಿ ಅವರನ್ನು ಕಣಕ್ಕೆ ಇಳಿಸುವ ಪ್ರಬಲ ಇರಾದೆ ಪಕ್ಷಕ್ಕೆ ಇದೆ. ಆದರೆ ಅವರು ಗಾಂಧಿ ವಂಶದ ಕುಡಿಗೆ ಮರೆಯಲಾಗದ ಸೋಲು ಕೊಡುವರೇ ಎನ್ನುವುದು ಈಗ ಜಿಜ್ಞಾಸೆ. ಜನಪ್ರಿಯ ಧಾರಾವಾಹಿಗಳಿಂದ ಮನೆಮಾತಾಗಿರುವ ಸ್ಮೃತಿ ಪಕ್ಷದಲ್ಲಿಯೂ ಉತ್ತಮ ಹೆಸರು ಗಳಿಸಿದ್ದಾರೆ ಎನ್ನುವುದು ಮುಖಂಡರ ವಾದ.
ರಾಯ್ಬರೇಲಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಕ್ಷೇತ್ರವಿದು. ಅವರ ವಿರುದ್ಧ ಯಾರನ್ನು ಕಣಕ್ಕೆ ಇಳಿಸುವುದು ಎನ್ನುವುದು ಬಿಜೆಪಿಗೆ ಪ್ರಶ್ನೆಯಾಗಿದೆ. ಮಧ್ಯಪ್ರದೇಶದ ಮಾಜಿ ಸಿಎಂ ಉಮಾ ಭಾರತಿ ಸೋನಿಯಾ ವಿರುದ್ಧ ಸ್ಪರ್ಧಿಸುವುದೇ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಅವರಿಗೆ ಉತ್ತರಪ್ರದೇಶದ ಝಾನ್ಸಿಯಿಂದ ಟಿಕೆಟ್ ಕೊಡಲಾಗಿದೆ. ಯೋಗ ಗುರು ಬಾಬಾ ರಾಮ್ದೇವ್ ಉಮಾ ಭಾರತಿ ಹೆಸರು ಸೂಚಿಸಿದ್ದರು. ಆದರೆ ಆ ಪ್ರಸ್ತಾಪಕ್ಕೆ ಉಮಾ ಒಪ್ಪಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


