ಹೊರಗೆ ಮಾತು ಜಾಸ್ತಿ, ಮಕ್ಕಳ ಜತೆ ನಾಸ್ತಿ

ಕ.ಪ್ರ.ವಾರ್ತೆ ಮಂಗಳೂರು ಮಾ.29
'ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ತುಂಬಾ ಮಾತನಾಡುತ್ತಾರೆ.'
ಕಾಂಗ್ರೆಸ್ ಪರ ಮತ್ತು ವಿರೋಧಿಗಳ ಬಾಯಲ್ಲಿ ಇದೇ ಮಾತು. ಆದರೆ ಮನೆಯಲ್ಲಿ ಇದಕ್ಕೆ ವ್ಯತಿರಿಕ್ತ. ಮಕ್ಕಳ ಬಳಿ ತಿಂಗಳುಗಟ್ಟಲೆ ಮಾತನಾಡದೆ ಇದ್ದದ್ದೂ ಉಂಟು!
ಅವರು ಮಗಳ ಜತೆ ಸರಿಯಾಗಿ ಮಾತನಾಡಿದ್ದು ಒಂದೇ ಬಾರಿಯಂತೆ. ಅದು ಮದುವೆಯ ಹಿಂದಿನ ದಿನ, ಭರ್ತಿ ಒಂದು ಗಂಟೆ ಮಾತನಾಡಿದ್ದಾರೆ. ಸೊಸೆಯಂದಿರ ಜತೆ ವರ್ಷಕ್ಕೆ ಒಮ್ಮೆ ಮಾತನಾಡಿದರೆ ಹೆಚ್ಚು. ಮಕ್ಕಳು ಬಿಡಿ ಮೊಮ್ಮಕ್ಕಳ ಜತೆಯೂ ಮಾತನಾಡುವುದಿಲ್ಲ.
ಖುದ್ದು ಅವರ ಕಿರಿ ಮಗ ದೀಪಕ್ ಪೂಜಾರಿ 'ಕನ್ನಡಪ್ರಭ' ಜತೆ ತಂದೆಯ ಅಂತರಂಗ ತೆರೆದಿಟ್ಟ ಬಗೆ.
ತಂದೆ ಮನೆಯಲ್ಲಿ ಮಾತನಾಡುವುದೇ ಅಪರೂಪ. ಸೊಸೆಯಂದಿರ ಬಳಿ ಸರಾಸರಿ ವರ್ಷಕ್ಕೆ ಒಮ್ಮೆ ಮಾತನಾಡುತ್ತಾರೆ. ತಾಯಿ ಬಳಿ ಮನೆ, ಸಂಬಂಧಿಕರ ವಿಚಾರ ಮಾತನಾಡುತ್ತಾರೆ, ಆದರೆ ರಾಜಕೀಯ ಮಾತನಾಡುವುದೇ ಇಲ್ಲ'.
'ಪ್ರೀತಿ ಇಲ್ಲವೆಂದಲ್ಲ. ಬಾಯಿ ಬಿಟ್ಟು ಹೇಳುವುದಿಲ್ಲ. ಪ್ರೀತಿ, ವಿಶ್ವಾಸ ತಂದೆ ಮಾತಲ್ಲಿಲ್ಲ. ಆದರೆ, ಉದಾಹರಣೆ ಮೂಲಕ ತೋರ್ಪಡಿಸಿದ್ದಾರೆ' ಎನ್ನುತ್ತಾರೆ ದೀಪಕ್.
'ಎಲ್ಲ ಕುಟುಂಬದವರು ಒಟ್ಟಾಗಿ ಕಾರ್ನಲ್ಲಿ ವಾರದ ಕೊನೆಯಲ್ಲಿ ಸಮಾರಂಭಗಳಿಗೆ ಹೋಗುವುದು ಮಾಮೂಲು. ಪೂಜಾರಿ ಅವರು ತಮ್ಮ ಪತ್ನಿ, ಮಕ್ಕಳ ಜತೆ ಕಾರ್ನಲ್ಲಿ ಮದುವೆಗೆ ಹೋಗಿದ್ದಾಗಲಿ,ಹೋಟೆಲ್ಗೆ ಹೋಗಿದ್ದಾಗಲಿ ನಾವು ಜೀವಮಾನದಲ್ಲಿ ನೋಡಿಲ್ಲ' ಎನ್ನುತ್ತಾರೆ ಪೂಜಾರಿಯವರ ನೆರೆ ಮನೆಯ ರಿಯಾಜ್.
ನನ್ನ ಎರಡನೇ ಅಣ್ಣ ತೀರಿ ಹೋದಾಗ ತಂದೆ ತುಂಬಾ ಖಿನ್ನರಾಗಿದ್ದರು. ಐದು ವರ್ಷಗಳ ಕಾಲ ದುಃಖದಿಂದ ಹೊರ ಬಂದಿರಲಿಲ್ಲ. ಮಕ್ಕಳ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದು ನಮಗೆ ಆಗ ಸಂಪೂರ್ಣ ಗೊತ್ತಾಗಿತ್ತು ಎನ್ನುತ್ತಾರೆ ದೀಪಕ್.
'ರಾಜಕೀಯ ಮನೆ ಒಳಗೆ ಬಿಡುವುದಿಲ್ಲ. ಕಾರ್ಯಕರ್ತರಿಗೂ ಸರ್ಕ್ಯುಟ್ ಹೌಸ್ಗೆ ಬರ ಹೇಳುತ್ತಾರೆ. ನಮ್ಮ ಹುದ್ದೆ, ಬಡ್ತಿ ಈ ಬಗ್ಗೆ ಕೇಳುವುದೇ ಇಲ್ಲ. ಇನ್ನು ಶಿಫಾರಸು ಕನಸಲ್ಲಿಯೂ ಅಸಾಧ್ಯ. ಬಹಳ ಹಿಂದೆ ನಮ್ಮ ಕಚೇರಿಯ ಸಹಾಯಕರ ಸಂಬಂಧಿಗೆ ಉದ್ಯೋಗ ಬೇಕಾಗಿತ್ತು. ತಂದೆ ಬಳಿ ಹೋದೆ, ಕೆಲಸ ಮಾಡಿಸಿದರು.
ಮತ್ತೊಮ್ಮೆ ಬೇರೊಬ್ಬರಿಗೆ ಉದ್ಯೋಗ ನೀಡುವಂತೆ ಕೇಳಿದಾಗ ಚೆನ್ನಾಗಿ ಬೈಯ್ದರು. 'ನೀನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಂದಿರಬಹುದು. ಆದರೆ ನಿನ್ನ ಬಳಿ ಕೆಲಸ ಮಾಡಿಸಿಕೊಳ್ಳುವವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಇದೇ ಕೊನೆ, ಇನ್ನೊಂದು ಬಾರಿ ಇಂಥ ವಿಚಾರದಲ್ಲಿ ಬರಬೇಡ' ಎಂದು ಗದರಿದ್ದರು. ಇದು ಜೀವನದ ಪಾಠ ನನಗೆ' ಎನ್ನುತ್ತಾರೆ ದೀಪಕ್.
ಸೋನಿಯಾ ಚಪ್ಪಲಿ ಕಾದದ್ದು!
ಕುದ್ರೋಳಿ ದೇವಸ್ಥಾನದಲ್ಲಿ ಶತಮಾನೋತ್ಸವ ಸಂಭ್ರಮಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯೇ ಬಂದಿದ್ದರು. ಸೋನಿಯಾ ಗಾಂಧಿ ಚಪ್ಪಲಿ ಮೇಲೆ ನಿಗಾ ಇರಿಸಲು ಅತ್ಯಂತ ವಿಶ್ವಾಸಿ ಒಬ್ಬನಿಗೆ ಸೂಚಿಸಿ ಎಂದು ಭದ್ರತಾ ಸಿಬ್ಬಂದಿ ಪೂಜಾರಿ ಬಳಿ ಹೇಳಿದರು. ಪೂಜಾರಿ ಆಚೆ ಈಚೆ ನೋಡಿದರು, ಕಾರ್ಯಕರ್ತರ, ನಾಯಕರ ಬಳಿ ಹೇಳಲು ಆಗದು, ಅವರು ಒಪ್ಪಿದರೂ ಭದ್ರತೆ ಸಿಬ್ಬಂದಿಗೂ ನಂಬಿಕೆ ಬಾರದು. ಯಾರಾದರೂ ಚಪ್ಪಲಿ ಅಡಿ ಬಾಂಬ್ ಇಟ್ಟರೆ. ಹೀಗಾಗಿ ತಮ್ಮ ಮಗನನ್ನೇ ಕರೆದು ಚಪ್ಪಲಿ ಕಾಯುವಂತೆ ಹೇಳಿದರು.
'ನಾನು ಚಪ್ಪಲಿಯನ್ನು ಅನೇಕ ಗಂಟೆಗಳ ಕಾಲ ಕಣ್ಣಿಟ್ಟು ಕಾದೆ. ಮರುದಿನ ನನ್ನನ್ನು ಕರೆದ ತಂದೆ, ಬೇಸರ ಆಯಿತೇ' ಎಂದು ಪ್ರಶ್ನಿಸಿದರು. ನಾನು ಸುಮ್ಮನಿದ್ದೆ. ಆದರೆ ನನಗೆ ಬೇಸರವಾಗಿರುವುದು ತಂದೆಗೆ ಅರ್ಥ ಆಗಿತ್ತು.
'ನೋಡು ಕಾರ್ಯಕರ್ತರು, ಮುಖಂಡರಿಗೆ ಹೇಳಿದರೆ ಅವರಿಗೂ ಬೇಸರ ಆಗಬಹುದು. ತನ್ನ ಮಗ ಇರುವಾಗ ಕಾರ್ಯಕರ್ತರಿಗೆ ಹೇಳಿದರು ಎಂಬ ಅಪವಾದವೂ ಬರಬಹುದು. ನೀನಾದರೆ ನನ್ನ ಮಗ, ನಿನಗೆ ಪರಿಸ್ಥಿತಿ ವಿವರಿಸಬಲ್ಲೆ' ಎಂದರು. ಇದು ನಮ್ಮ ತಂದೆ ವಿಶಾಲ ಮನಸ್ಸು ಎನ್ನುತ್ತಾರೆ ದೀಪಕ್.
ಮಕ್ಕಳ ಕರೆಯೋದು ಬೆಲ್ ಮೂಲಕ!
ಎಲ್ಲರೂ ಮಕ್ಕಳನ್ನು ಮುದ್ದಿನ ಹೆಸರು ಹೇಳಿ ಕರೆಯುತ್ತಾರೆ. ಆದರೆ ಪೂಜಾರಿ ತಮ್ಮ ಮಕ್ಕಳನ್ನು ಕರೆಯಲು ಕೈ ಬೆಲ್ ಮಾಡಿಸಿಕೊಂಡಿದ್ದಾರೆ. ಒಂದು ಬೆಲ್ ಮಾಡಿದರೆ ಸಾಕು ಮಕ್ಕಳು ದಡದಡನೆ ಕೆಳಗೆ ಇಳಿದು ಬಂದು ಕೈಕಟ್ಟಿ ನಿಲ್ಲುತ್ತಾರೆ. 'ತಂದೆ ನಮ್ಮನ್ನು ಹೆಸರೆತ್ತಿ ಕರೆಯೋದಿಲ್ಲ. ಬೆಲ್ ಮಾಡುತ್ತಾರೆ, ತಕ್ಷಣ ನಾವು ಹೋಗುತ್ತೇವೆ' ಎನ್ನುತ್ತಾರೆ ದೀಪಕ್.
-ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


