ಪ್ರಧಾನ ಸುದ್ದಿ

ತೊಗರಿ ಕಣಜದ 'ಅಧಿಪತ್ಯ'ಕ್ಕೆ ಹೋರಾಟ

ತೊಗರಿ ಕಣಜದ 'ಅಧಿಪತ್ಯ'ಕ್ಕೆ ಹೋರಾಟ
Published On :

ಉರಿ ಬಿಸಿಲು, ತೊಗರಿ ಹಾಗೂ ಸಿಮೆಂಟ್ನಿಂದಾಗಿ ಸುದ್ದಿಯಲ್ಲಿರುವ ಗುಲ್ಬರ್ಗದಲ್ಲೀಗ ಲೋಕ ಸಮರದ ಕಾವು,. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಇಲ್ಲೀಗ ಪುನರಾಯ್ಕೆ ಬಯಸಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅಖಾಡದಲ್ಲಿದ್ದರೆ, ಇವರ ವಿರುದ್ಧ ತೊಡೆ ತಟ್ಟಿದವರು ಕುಸ್ತಿಪಟು, ಮಾಜಿ ಮಂತ್ರಿ ರೇವುನಾಯಕ ಬೆಳಮಗಿ. ಇನ್ನು ಜೆಡಿಎಸ್ನಿಂದ ಶೋಷಿತ ಸಮುದಾಯದ ಹೋರಾಟಗಾರ ಡಿ.ಜಿ. ಸಾಗರ್ ಕಣದಲ್ಲಿದ್ದಾರೆ.


*   ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ತೊಡೆತಟ್ಟಿದ್ದೀರಿ, ಈ ಬಾರಿಯ ಕುಸ್ತಿಯಲ್ಲಿ ಗೆಲ್ಲೋದಕ್ಕೆ ಅದ್ಯಾವ ಪಟ್ಟು ಬಳಸ್ತೀರಿ?
    ದೇಶಾದ್ಯಂತ ನರೇಂದ್ರ ಮೋದಿ ಗಾಳಿ ಬೀಸ್ಲಿಕತ್ತದ, ಅದೇ ಗಾಳಿಯೊಳಗ ಖರ್ಗೆಯವರು ಸೋಲುಣ್ಣುತ್ತಾರೆ ಅಂತ ನನಗ ಖಾತ್ರಿ ಅದ. ಕ್ಷೇತ್ರದ ಜನ ಸ್ಥಳೀಯ ಅಭಿವೃದ್ಧಿಗಿಂತ ದೇಶದ ಪ್ರಗತಿಗೆ ಹೆಚ್ಚು ಗಮನ ಕೊಡ್ಲಿಕತ್ತಾರ್ರಿ. ಅದ್ಕೇ ಈ ಬಾರಿ ಬೆಳಮಗಿಯವರಿಗೆ ಗೆಲ್ಲಿಸುವ ಮೂಲಕ ಮೋದಿಗೆ ಬಲ ನೀಡಬೇಕು ಅಂತ ತೀರ್ಮಾನ ಮಾಡ್ಯಾರ. 2009ರ ಕುಸ್ತಿಯೊಳ್ಗ 13,400 ಮತಗಳ ಅಂತರದಾಗ ಸೋತಿದ್ದೆ. ಈ ಬಾರಿ ಈ ಕೊರತೆ ಭರಿಸಿಕೊಂಡು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲುವ ಹುಮ್ಮಸ್ಸು ನನ್ನಲ್ಲಿ ಕಾರ್ಯಕರ್ತರು, ಜನ ತುಂಬ್ಲಿಕತ್ತಾರ.

*    ಜಿಲ್ಲೆಯಲ್ಲಿ ಪಕ್ಷ ಗುಂಪುಗಾರಿಕೆಯಿಂದ ನರಳುತ್ತಿದೆಯಲ್ಲ, ಪಕ್ಷದಲ್ಲಿನ ಭಿನ್ನಮತ ಬಗ್ಗೆ ಏನಂತೀರಿ?
    ನೋಡ್ರಿ, ಲೋಕಸಭೆ ಚುನಾವಣೆ ಅಂದ್ರ ಯುದ್ಧದ ಅಖಾಡ ಇದ್ಹಂಗ. ನಾವೆಲ್ಲರೂ ಯುದ್ಧಭೂಮಿಯೊಳಗ ಇದ್ದಾಗ ಪರಸ್ಪರ ಕಿತ್ತಾಟ ಮಾಡ್ಕೊಂತ ಕೂಡಲು ಆಗದು. ಜಿಲ್ಲೆಯ ಬಿಜೆಪಿಯಲ್ಲಿ ಭಿನ್ನಮತ, ಗುಂಪುಗಾರಿಕೆ ಇಲ್ಲ, ಆ ಬಗ್ಗೆ ಈಗ ಚರ್ಚೆ ಬೇಡ. ಈಗೇನಿದ್ದರೂ 'ನಮೋ' ಗಾಳಿಯಲ್ಲಿ ಅದ್ಹೇಗೆ ಜನರ ಆಶೀರ್ವಾದ ಪಡೆಯಬೇಕು ಎಂಬುದೇ ನನ್ನ ಚಿಂತೆ. ಹಳ್ಳಿಯತ್ತ ಹೋಗಿ ಜನಾಶೀರ್ವಾದ ಪಡೆಯುವ ತವಕವಿದೆ. ಹಾಗೇ ಕೆಲಸ ಮಾಡುತ್ತಿರುವೆ.

*    ಗುಲ್ಬರ್ಗ ಜನ ರೇವುನಾಯಕರಿಗೆ ಯಾಕೆ ಮತ ನೀಡಬೇಕು?
    ಸತತ 5 ಬಾರಿ ಶಾಸಕನಾಗಿದ್ದೆ, 7 ವರ್ಷ ಪಶುಸಂಗೋಪನೆ ಸಚಿವನಾಗಿದ್ದೆ. ಡೇರಿ ಕಾಲೇಜು, ಪಶು ವೈದ್ಯವಿದ್ಯಾಲಯಗಳನ್ನು ಸ್ಥಾಪಿಸಿರುವೆ. ಪಶುವೈದ್ಯರ ಕೊರತೆ ನೀಗಿಸಲು ಶ್ರಮಿಸಿರುವೆ. ದೊರಕಿದ ಜವಾಬ್ದಾರಿ ಚೆನ್ನಾಗಿ ನಿಭಾಯಿಸಿರುವೆ. ನನ್ನ ಕೆಲಸಗಳನ್ನು ಜನ ರೇವುನಾಯಕರಿಗೆ ಮತ ಹಾಕಲಿ.

*    2009ರ ಲೋಕಸಭೆ ಚುನಾವಣೆ ಸೋತವರು ನೀವು, ಈ ಚುನಾವಣೆಯಲ್ಲಿ ಅನುಕಂಪದ ಅಲೆ ನೆಚ್ಚಿಕೊಂಡಿದ್ದೀರಾ?
ಹಾಗೇನಿಲ್ಲ, ಅನೇಕ ಚುನಾವಣೆ ಕಂಡಿರುವೆ. ನಾನಿರುವ ಪಕ್ಷದ ಸಿದ್ಧಾಂತ, ಪ್ರಣಾಳಿಕೆ ಆಧಾರದಲ್ಲಿ, ನಾನು ಪಶುಸಂಗೋಪನೆ ಸಚಿವನಾಗಿ ಮಾಡಿರುವ ಸಾಧನೆಗಳ ಮೇಲೆ ಜನರ ಬಳಿ ಹೋಗುತ್ತಿದ್ದೇನೆ. ಅನುಕಂಪದ ಅಲೆ ನೆರವಿಗೆ ಬಂದರೂ ಬರಲಿ, ಅದರಲ್ಲಿ ತಪ್ಪೇನಿದೆ.


ದೇಶಾದ್ಯಂತ ನರೇಂದ್ರ ಮೋದಿ ಗಾಳಿ ಬೀಸ್ಲಿಕತ್ತದ, ಅದೇ ಗಾಳಿಯೊಳಗ ಖರ್ಗೆಯವರು ಸೋಲುಣ್ಣುತ್ತಾರೆ ಅಂತ ನನಗ ಖಾತ್ರಿ ಅದ. ಪಕ್ಷದ ಸಿದ್ಧಾಂತ, ಪ್ರಣಾಳಿಕೆ ಆಧಾರದಲ್ಲಿ, ನಾನೆ ಸಚಿವನಾಗಿ ಮಾಡಿರುವ ಸಾಧನೆಗಳ ಮೇಲೆ ಜನರ ಬಳಿ ಹೋಗುತ್ತಿದ್ದೇನೆ.
- ರೇವುನಾಯಕ ಬೆಳಮಗಿ



*    10 ಚುನಾವಣೆ ಗೆದ್ದವರು, 11ನೇ ಬಾರಿ ಕಣಕ್ಕಿಳಿದಿದ್ದೀರಿ, ಏನನ್ಸುತ್ತೆ ನಿಮಗೆ?
    ಜನರ ವಿಶ್ವಾಸಕ್ಕೆ ನಾನು ಚಿರಋಣಿ. ಒಂದು ಕ್ಷೇತ್ರದಿಂದ ಆಯ್ಕೆಯಾಗುವ ನಾಯಕ ತನ್ನ ಕುಟುಂಬ, ಬಂಧು- ಬಳಗವನ್ನು ಹೇಗೆ ಕಾಳಜಿ, ಕಕ್ಕುಲಾತಿಯಿಂದ ನೋಡಿಕೊಳ್ಳುವನೋ ಅದೇ ರೀತಿ ಕ್ಷೇತ್ರವನ್ನು ಪೋಷಿಸಬೇಕು. ಜನರ ನಂಬಿಕೆ ಗಳಿಸಿದರೆ ಜನರಿಂದ ಏನೆಲ್ಲ ದೊರಕುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ನಮ್ಮ ಪಕ್ಷದ ಸರ್ಕಾರ ಇರ್ಲಿ, ಬಿಡ್ಲಿ ನಾನು ಗೆದ್ದಿರುವೆ. ಗಾಳಿ ಯಾರದೆ ಇರ್ಲಿ, ಅದ್ಯಾವುದು ನನ್ನ ಗೆಲುವಿಗೆ ಅಡಚಣೆಯಾಗಿಲ್ಲ.

*    2009ರ ಪಾರ್ಲಿಮೆಂಟ್ ಚುನಾವಣೆಗೂ, 2014ರ ಈ ಚುನಾವಣೆ ವಾತಾವರಣಕ್ಕೂ ಭಿನ್ನತೆ ಇದೆಯಾ?
    2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ನಾನು ಶಾಸಕನಾಗಿದ್ದೆ. ಮತ್ತೆ ಲೋಕಸಭೆಗೆ ನಿಂತಾಗ ನಿರೀಕ್ಷಿತ ಬೆಂಬಲ ಇರಲಿಲ್ಲ. ಆದಾಗ್ಯೂ ನನ್ನ ಅಭಿವೃದ್ಧಿ ಯೋಜನೆಗಳನ್ನು ಕೇಳಿ ಅರಿತಿದ್ದ ಜನ ಗೆಲ್ಲಿಸಿದರು. ಗೆಲುವಿನ ಅಂತರ ತುಂಬಾ ಕಮ್ಮಿ ಇತ್ತು. ಈಗ ವಾತಾವರಣ ಬದಲಾಗಿದೆ. ಎಂಪಿಯಾಗಿ ಕಾರ್ಮಿಕ, ರೇಲ್ವೆ, ಸಮಾಜ ಕಲ್ಯಾಣ ಮಂತ್ರಿಗಿರಿಗಳನ್ನು ನಿಭಾಯಿಸಿದ್ದೇನೆ.  ಕಲಂ 371(ಜೆ) ಅನುಷ್ಠಾನದಂತಹ ಮಹತ್ವದ ಯೋಜನೆಗಳೂ ಗುಲ್ಬರ್ಗಕ್ಕೊಲಿಯುವಂತೆ ಮಾಡಿರುವೆ.

*    ದೇಶಾದ್ಯಂತ ನಮೋ ಗಾಳಿ ಅಂತಾರೆ, ಗುಲ್ಬರ್ಗದಲ್ಲಿ ಯಾವ ಗಾಳಿ?
    ನಾನಂತೂ ಯಾವ ಗಾಳಿಯನ್ನು ನಂಬೋದಿಲ್ಲ, ಇಂತಹ ಅನೇಕ ಗಾಳಿ ಕಂಡೀನಿ. ಹಿಂದೆಲ್ಲಾ ಹವಾ... ಏಳತಿದ್ವು. ಅಷ್ಟೇ ವೇಗದಲ್ಲಿ ಠುಸ್ ಅಂದಿದ್ದನ್ನು ಕಂಡೀನಿ.   ಗುಲ್ಬರ್ಗದಂತಹ ಪ್ರದೇಶಕ್ಕೆ, ಇಲ್ಲಿನ ಜನತೆಗೆ ಏನೆಲ್ಲಾ ಬೇಕು ಅಂತ ಮೋದಿಗೆ ಗೊತ್ತಾ? ಅವ್ರೇ ಬಂದು ಇಲ್ಲಿ ನೋಡ್ತಾರಾ? ಇಲ್ಲಿನ ಪ್ರತಿನಿಧಿ ಗಟ್ಟಿ ಇದ್ರೆ ಅಲ್ವೆ ಈ ಭಾಗದವರ ಧ್ವನಿ ಗಟ್ಟಿಯಾಗಿ ದೆಹಲಿ ತಲುಪೋದು.

*    ಗುಲ್ಬರ್ಗ ಮಂದಿ ಖರ್ಗೆಯವರಿಗೆ ಯಾಕೆ ಮತ ಹಾಕ್ಬೇಕು?
     ನಾನಂತೂ ಜನಪರ ಕೆಲಸಗಾರ ಎಂದು ಸಾಬೀತು ಮಾಡಿರುವೆ. ಅಭಿವೃದ್ಧಿಗೆ ಬೆಂಬಲಿಸಿರಿ ಅಂತ ಜನರಿಗೆ ಮನವಿ ಮಾಡುತ್ತಿರುವೆ. ಗುಲ್ಬರ್ಗ ಜನ ಮತ್ತೆ ತಮ್ಮ  'ಕೈ' ಹಿಡಿಯುತ್ತಾರೆ ಎಂಬ ಗಟ್ಟಿ ನಂಬಿಕೆ ಇದೆ.

'ಮಂತ್ರಕ್ಕಿಂತ ಉಗಳ ಜಾಸ್ತಿ' ಅನ್ನೋರ ಪೈಕಿ ನಾನಲ್ಲ, ಮಾಡ್ತೀನಿ ಅಂತ ಹೇಳಿ ಕೆಲ್ಸ ಮಾಡೋರ ಪೈಕಿನೂ ಅಲ್ಲ, ಮೊದ್ಲು ಕೆಲ್ಸ ಮಾಡ್ತೀನಿ, ನಂತ್ರ ಹೀಂಗ ಮಾಡೀನ್ರಿ ಅಂತ ಹೇಳತೀನಿ. ಜನರ ನಂಬಿಕೆ ಗಳಿಸಿದರೆ ಜನರಿಂದ ಏನೆಲ್ಲ ದೊರಕುತ್ತದೆ ಎಂಬುದಕ್ಕೆ ನಾನೇ ಉದಾಹರಣೆ.
- ಮಲ್ಲಿಕಾರ್ಜುನ ಖರ್ಗೆ

*    ಗುಲ್ಬರ್ಗದಲ್ಲಿ ಹೇಗಿದೆ ಜೆಡಿಎಸ್ ಟ್ರೆಂಡ್?
    ಚೆನ್ನಾಗಿದೆ, ಅಬ್ಬರದ ಪ್ರಚಾರ ನಮ್ಮದು ಕಾಣದೆ ಹೋದರೂ ಜನತೆ ಜನತಾದಳದ ಬಗ್ಗೆ ತುಂಬ ಕುತೂಹಲದಿಂದ ಇದ್ದಾರೆ. ಪ್ರಧಾನಿಯಾಗಿ ದೇವೇಗೌಡರು ಮಾಡಿರುವ ಸಾಧನೆ, ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಮಾಡಿರುವ ಸಾಧನೆಗಳೇ ಈ ಚುನಾವಣೆಯಲ್ಲಿ ಶ್ರೀರಕ್ಷೆ. ನಾನಂತೂ ಹೋರಾಟಗಾರನಾಗಿ ಬೆಳೆದು ಬಂದವ. ನನ್ನ ಹೋರಾಟದ ಹಿನ್ನೆಲೆಯೂ ಹೆಚ್ಚಿನ ಮತ ಗಳಿಕೆಗೆ ನೆರವಾಗುತ್ತವೆ.
*    ಕಾಂಗ್ರೆಸ್ನ ಖರ್ಗೆ, ಬಿಜೆಪಿಯ ಬೆಳಮಗಿ ತಮಗಿಲ್ಲಿ ಎದುರಾಳಿಗಳು, ಏನಂತೀರಿ?
    ನಾಲ್ಕು ಬಿಲ್ಡಿಂಗ್ ಕಟ್ಟಿ, 2 ಟ್ರೇನ್ ಓಡಿಸಿರುವ ಖರ್ಗೆಯವರನ್ನು ಅಭಿವೃದ್ಧಿ ಹರಿಕಾರ ಅನ್ನಬಹುದೆ? ಬಿಜೆಪಿಯ ರೇವುನಾಯಕರಂತೂ ಪಶುಸಂಗೋಪನೆ ಸಚಿವರಾಗಿದ್ದರೂ ಇಲ್ಲಿನ ಪಶು ಆಸ್ಪತ್ರೆಗಳತ್ತ ಹೆಜ್ಜೆ ಹಾಕಿದವರಲ್ಲ, ಇವರನ್ನು ಗೆಲ್ಲಿಸಿ ಜನ ಏನು ಕಾಣಲು ಸಾಧ್ಯ. ಹೋರಾಟಗಾರನಾಗಿ ನಾವಿಲ್ಲಿ ಕಣದಲ್ಲಿದ್ದೇವೆ. ಸದಾಕಾಲ ಜನಪರ ಧ್ವನಿಯಾಗಿದ್ದೇವೆ. ಚುನಾವಣೆಯಲ್ಲಿ ಜನರ ಬೆಂಬಲ ಜೆಡಿಎಸ್ಗೆ ಸಿಗಲಿದೆ. ಬೂಟಾಟಿಕೆ ಮಾಡುವವರನ್ನು ಬದಿಗೆ ಸರಿಸಲು ಜನರಿಗೆ ಇದು ಸಕಾಲ.
*    ಜೆಡಿಎಸ್ ಇಲ್ಲಿ ಸಿಂಬಾಲಿಕ್ ಫೈಟ್ ಅಂತಾರಲ್ಲ?
    ಹಾಗೇನಿಲ್ಲ, ಪಕ್ಷದ ವರಿಷ್ಠರು ನನಗೆ ಮನ್ನಣೆ ನೀಡಿದ್ದಾರಲ್ಲ. ಹೋರಾಟಗಾರನಿಗೆ ಕಣಕ್ಕಿಳಿಸಿದ್ದೇ ಪಕ್ಷ ಚುನಾವಣೆಯನ್ನು ಅದ್ಹೇಗೆ ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಸಾಕ್ಷಿ. ಪಕ್ಷದ ನಾಯಕರೆಲ್ಲರೂ ಅಖಾಡದಲ್ಲಿದ್ದಾರೆ, ಆ ಕಾರಣಗಳಿಂದಾಗಿ ಪ್ರಚಾರಕ್ಕೆ ವರಿಷ್ಠರು ಬರಬಹುದು, ಬಾರದೆ ಇರಬಹುದು. ಹಾಗಂತ ನಾವು ಇಲ್ಲಿದ್ದವರು ಯಾವುದೇ ಕಾರಣಕ್ಕೂ ಚುನಾವಣೆಯನ್ನು ಸುಲಭದಲ್ಲಿ ಬಿಟ್ಟುಕೊಡೋರಲ್ಲ, ಜಿದ್ದಾಜಿದ್ದಿ ಹಣಾಹಣಿಗೆ ವೇದಿಕೆ ಸಿದ್ಧಪಡಿಸುತ್ತೇವೆ.
*    ಗುಲ್ಬರ್ಗ ಜನತೆ ನಿಮಗೆ ಯಾಕೆ ಬೆಂಬಲಿಸಬೇಕು?
    ನನನ್ನು ಜನತೆ ಲೋಕಸಭೆಗೆ ಆಯ್ಕೆ ಮಾಡಿದರೆ ಈ ಭಾಗದಲ್ಲಿನ ಮಾನವಾಭಿವೃದ್ಧಿಗೆ ಪೂರಕವಾಗುವಂತಹ ಯೋಜನೆಗಳನ್ನು ತರಲು ಯತ್ನಿಸುವೆ. ಜನರನ್ನು ಕಾಡುತ್ತಿರುವ ಬಡತನ, ಅನಕ್ಷರತೆ ಹೊಡೆದೋಡಿಸಲು ಶಕ್ತಿಮೀರಿ ಯತ್ನಿಸುವೆ. 40 ವರ್ಷಗಳ ಕಾಲ ರಾಜಕಾರಣ ಮಾಡಿದವರು ಇಂದಿಗೂ ಈ ಭಾಗದ ಮಾನವಾಭಿವೃದ್ಧಿಗೆ ಮುಂದಾಗಿಲ್ಲ, ನಾನು ಗೆದ್ದರೆ ಈ ಕೊರತೆ ನೀಗಿಸುವೆ. ಜನ ಮೆಚ್ಚುವಂತಹ ಕೆಲಸ, ಕಾರ್ಯಗಳಿಗೆ ಆದ್ಯತೆ ನೀಡುವೆ.


ನಾಲ್ಕು ಬಿಲ್ಡಿಂಗ್ ಕಟ್ಟಿ, 2 ಟ್ರೇನ್ ಓಡಿಸಿರುವ ಖರ್ಗೆಯವರನ್ನು ಅಭಿವೃದ್ಧಿ ಹರಿಕಾರ ಅನ್ನಬಹುದೆ? 40 ವರ್ಷಗಳ ಕಾಲ ರಾಜಕಾರಣ ಮಾಡಿದವರು ಇಂದಿಗೂ ಈ ಭಾಗದ ಮಾನವಾಭಿವೃದ್ಧಿಗೆ ಮುಂದಾಗಿಲ್ಲ, ನಾನು ಗೆದ್ದರೆ ಈ ಕೊರತೆ ನೀಗಿಸುವೆ. ಜನ ಮೆಚ್ಚುವಂತಹ ಕೆಲಸ, ಕಾರ್ಯಗಳಿಗೆ ಆದ್ಯತೆ ನೀಡುವೆ.
- ಡಿ.ಜಿ. ಸಾಗರ


ಸಂದರ್ಶನ: ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.