ಪ್ರಧಾನ ಸುದ್ದಿ

ಸಂವಾದ ಅರ್ಧಕ್ಕೇ 'ಪ್ಯಾಕ್'ಅಪ್

Published On :

ಬೆಂಗಳೂರು: ಮಾತಿನ ಚಕಮಕಿ, ಅಭ್ಯರ್ಥಿಗಳು ಮಾತಿಗಾರಂಭಿಸುತ್ತಿದ್ದಂತೆ ಚೀರಾಡಲು ಆರಂಭಿಸಿದ ವಿವಿಧ ಪಕ್ಷಗಳ ಕಾರ್ಯಕರ್ತರು, ಚುನಾವಣಾ ಅಭ್ಯರ್ಥಿಗಳು ಮತ್ತು ಸಾರ್ವಜನಿಕರ ಜತೆಗಿನ ಮಾತುಕತೆ
ಕಾರ್ಯಕ್ರಮ ಇನ್ನೇನು ಹೊಡೆದಾಟದ ಹಂತಕ್ಕೆ ತಲುಪುತ್ತದೆ ಎಂಬುದು ಖಚಿತವಾದಾಗ ಕಾರ್ಯಕ್ರಮವನ್ನೇ ಸ್ಥಗಿತಗೊಳಿಸಲಾಯಿತು.
ಇದು 'ಬಿ ಪ್ಯಾಕ್' ಎನ್ಎಂಕೆಆರ್ವಿ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೆ ಏರ್ಪಡಿಸಿದ್ದ ಜನರ ಸಂವಾದ ಕಾರ್ಯಕ್ರಮದ ನೋಟ.
ಗೆದ್ದರೆ ಪಾರ್ಲಿಮೆಂಟ್ ಸದಸ್ಯರಾಗಿ ನಗರದ, ದೇಶದ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರ ನೀಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಅನಂತ್ಕುಮಾರ್, ಪ್ರಸ್ತುತ ಆರ್ಥಿಕ ಸ್ಥಿತಿ ನೆಲಕಚ್ಚಲು ಕೇಂದ್ರ ಕಾಂಗ್ರೆಸ್ ಸರ್ಕಾರವೇ ಕಾರಣ. ಮೋದಿ ಸರ್ಕಾರ ಆಡಳಿತಕ್ಕೆ ಬಂದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಮೇಲೆತ್ತುವುದು ಖಂಡಿತ ಎಂದರು.
ಗಡಿಗಳ ರಕ್ಷಣೆ, ಪಾಕ್, ಚೈನಾದಿಂದ ಆಕ್ರಮಣವಾಗುತ್ತಿರುವ ಗಡಿ ಪ್ರದೇಶ, ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಮತ್ತು ವಾಜಪೇಯಿ ಸರ್ಕಾರದ ಕಾಲದಲ್ಲಿದ್ದ ಆರ್ಥಿಕ ಸ್ಥಿತಿಗಳನ್ನು ಹೋಲಿಸಿ ಮಾತನಾಡಿದಾಗ ಸಭೆಯಲ್ಲಿದ್ದ 'ಕೈ' ಕಾರ್ಯಕರ್ತರು ರೊಚ್ಚಿಗೆದ್ದರು. ಅನಂತ್ಕುಮಾರ್ ಮಾತಿಗೆ ಧಿಕ್ಕಾರ ಕೂಗುತ್ತಾ ವೇದಿಕೆ ಬಳಿ ಸಾಗಿದರು. ಈ ನಡುವೆ ಬಿ ಪ್ಯಾಕ್ ಕಾರ್ಯಕರ್ತರು, ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ಜನರಿಗೆ ಎಷ್ಟೇ ಸಮಾಧಾನ ಹೇಳಿ ಕುಳಿತುಕೊಳ್ಳಲು ಹೇಳಿದರೂ ಜನ ಹೊಡೆದಾಟದ ಹಂತಕ್ಕೆ ತಲುಪಿದರು.
ನೂಕಾಟ, ತಳ್ಳಾಟ ಮಾತಿನ ಚಕಮಕಿ, ಧಿಕ್ಕಾರ ಘೋಷಣೆ ಜಾಸ್ತಿಯಾಗುತ್ತಿದ್ದಂತೆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
ಕಾರ್ಯಕ್ರಮ ಆರಂಭದ ನೋಟ:  ಆರಂಭಿಕವಾಗಿ ಬಿ ಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಮ್ದಾರ್ ಷಾ ಅವರು 4 ಪಕ್ಷಗಳ ಅಭ್ಯರ್ಥಿಗಳಿಗೆ ನಗರ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು ಎಂದು ಪ್ರಶ್ನೆ ಕೇಳಿದರು. ಪ್ರಥಮವಾಗಿ ಇದಕ್ಕುತ್ತರಿಸಿದ ಬಿಜೆಪಿ ಅಭ್ಯರ್ಥಿ ಎಚ್.ಎನ್. ಅನಂತಕುಮಾರ್, ತಾವು ವಾಜಪೇಯಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ಮಾಡಿದ ಅನೇಕ ಸಾಧನೆಗಳನ್ನು ವಿವರಿಸಿದರು. ಮೋದಿ ಸರ್ಕಾರ ಆಡಳಿತಕ್ಕೆ ಬಂದರೆ ಬೆಂಗಳೂರಿನಿಂದ ದೆಹಲಿಗೆ ಬುಲೆಟ್ ರೈಲಿನ ವ್ಯವಸ್ಥೆ ಕಲ್ಲಿಸುವುದಾಗಿ ಭರವಸೆ ನೀಡಿದರು. ನಿಲೇಕಣಿಯವರು ಇನ್ಫೋಸಿಸ್ ಜತೆಗೆ ಆರಂಭಿಸಿದ ಸುಲಭ ಶೌಚಾಲಯ ಯೋಜನೆಗೆ ಕೂಡ ಕೇಂದ್ರದಿಂದ ನೆರವು ನೀಡಲು ಸಹಕರಿಸಿದ್ದೇನೆ ಎಂದಾಗ ನಿಲೇಕಣಿ ಬೆಂಬಲಿಗರು ಸ್ವಲ್ಪಮಟ್ಟಿಗೆ ವಿರೋಧ ವ್ಯಕ್ತಪಡಿಸಿದರು.
ನಿಲೇಕಣಿ ಕನ್ನಡದಲ್ಲಿ ಮಾತಾಡಿ: ನಂತರ ನಂದನ್ ನಿಲೇಕಣಿಯವರು ಮಾತನಾಡಲು ಆರಂಭಿಸುವ ಮುನ್ನವೇ ಸಭೆಯಲ್ಲಿ  'ಕನ್ನಡ, ಕನ್ನಡ', ಕನ್ನಡದಲ್ಲೇ ಮಾತನಾಡಬೇಕೆಂಬ ಒತ್ತಾಯ ಕೇಳಿಬಂತು. ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಪರಸ್ಪರ ಜಗಳಕ್ಕೆ ನಿಂತುಕೊಂಡರು. ಈ ಸಂದರ್ಭದಲ್ಲಿ ಅನಂತ್ಕುಮಾರ್ ಸಮಾಧಾನದಿಂದ ವರ್ತಿಸಬೇಕೆಂದು ಮನವಿ ಮಾಡಿದ ನಂತರ ನಿಲೇಕಣಿ ಅರ್ಧ ಕನ್ನಡ, ಅರ್ಧ ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ನಗರಾಭಿವೃದ್ಧಿಗೆ ಏನೆಲ್ಲಾ ಅಗತ್ಯತೆಗಳಿವೆ ಎಂಬುದನ್ನು ವಿವರಿಸಿದರು.
ಜೆಡಿಎಸ್ ಅಭ್ಯರ್ಥಿ ರೂತ್ ಮನೋರಮಾ, ಆಮ್ ಆದ್ಮಿ ಅಭ್ಯರ್ಥಿ ನೀಲಾ ನಾಯಕ್ ಅವರು ಮಾತನಾಡುವಾಗ ನಡು ನಡುವೆ ಒಂದಿಷ್ಟು ಗಲಾಟೆಗಳು ಕೇಳಿಬಂತು. ನಗರದ, ದೇಶದ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರ ನೀಡುತ್ತೀರಿ ಎಂದು ಕೇಳಿದ 2ನೇ ಪ್ರಶ್ನೆಯಲ್ಲೇ ಸಮಾರಂಭಕ್ಕೆ ಮುಕ್ತಾಯ ಹಾಡಲಾಯಿತು.
ಸಮಾರಂಭ ಮುಕ್ತಾಯವಾದ ಸ್ವಲ್ಪ ಹೊತ್ತಿನ ನಂತರ ಮಾಧ್ಯಮಗಳನ್ನುದ್ದೇಶಿಸಿ ಬಿಪ್ಯಾಕ್ನ ಕಿರಣ್ ಮಜುಮ್ದಾರ್ ಷಾ, ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ಮಾತನಾಡಿದರು.
ಜೈರಾಜ್ ಮಾತನಾಡಿ, ಜನರು ತಮ್ಮ ಸಮಸ್ಯೆಗಳೊಂದಿಗೆ ಅಭ್ಯರ್ಥಿಗಳ ಜತೆ ಮಾತುಕತೆಗೆ ವೇದಿಕೆ ಕಲ್ಪಿಸಿ ಒಂದು ಉತ್ತಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾರ್ಯಕರ್ತರು ರಾಜಕೀಯ ವಿಚಾರಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಗಲಾಟೆ ಆರಂಭಿಸಿದರು. ಇದು ನಮ್ಮ ಮುಂದಿನ ಕಾರ್ಯಕ್ಕಮಕ್ಕೆ ಪಾಠ. ಬೆಂಗಳೂರು ಕೇಂದ್ರ ಮತ್ತು ಉತ್ತರ ವಿಭಾಗಗಳಲ್ಲಿ ಈ ರೀತಿಯ ಸಭೆಯನ್ನು ನಡೆಸುವಾಗ ಎಚ್ಚರದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಪಾರ್ಲಿಮೆಂಟ್ನಲ್ಲಿ ಗಲಾಟೆ ಮಾಡುವ ರೀತಿಯಲ್ಲೇ ಇಲ್ಲೂ ಕೂಡ ವರ್ತಿಸಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸುವ ಬದಲು ಪಕ್ಷಗಳ ವಿಚಾರಗಳನ್ನು ಮಾತನಾಡಿದ್ದಾರೆ. ನಿಯಮಗಳನ್ನು ಮೀರಿ ನಡೆದುಕೊಂಡಿದ್ದಾರೆ. ವಿವಿಧ ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಲು, ಮಾತುಕತೆ ನಡೆಸಲು ಅವಕಾಶ ಕಲ್ಪಿಸಿದರೆ ವಿವಿಧ ಪಕ್ಷಗಳ ಕಾರ್ಯಕರ್ತರು ಇದನ್ನು ದುರುಪಯೋಗಪಡಿಸಿಕೊಂಡರು ಎಂದು ಕಿರಣ್ ಮಜುಮ್ದಾರ್ಷಾ ಹೇಳಿದರು.ಬಿಪ್ಯಾಕ್ ಆಯೋಜಿಸಿದ್ದ  ಈ ಕಾರ್ಯಕ್ರಮದಲ್ಲಿ ನಡೆದ ಜಗಳ, ಮಾತಿನ ಚಕಮಕಿಗಳನ್ನು ಖಂಡಿಸಿ ಆಮ್ಆದ್ಮಿ ಕಾರ್ಯಕರ್ತರು ಸಭಾಂಗಣದ ಹೊರಗೆ ಮೌನ ಪ್ರತಿಭಟನೆ ಮಾಡಿದರು.



ಅನಂತ್ ಕುಮಾರ್ ಮಾತ್ರ ಕನ್ನಡಿಗರು!
ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ಆದ್ಮಿ ಪಕ್ಷದ ಅಭ್ಯರ್ಥಿಗಳಲ್ಲಿ ಸರಿಯಾಗಿ ಕನ್ನಡ ಮಾತನಾಡಲು ಬಲ್ಲವರೆಂದರೆ ಅನಂತ್ಕುಮಾರ್ ಒಬ್ಬರೇ ಆಗಿದ್ದರು. ನಂದನ್ ನಿಲೇಕಣಿ, ರೂತ್ ಮನೋರಮಾ, ನೀಲಾ ನಾಯಕ್ ತಮ್ಮ ಅರ್ಧ ಕನ್ನಡ, ಅರ್ಧ ಇಂಗ್ಲೀಷ್ ಮಿಶ್ರಿತ ಭಾಷೆಯಲ್ಲೇ ವಿಚಿತ್ರವಾಗಿ ಮಾತನಾಡಿದರು. ಆಮ್ಆದ್ಮಿ ಪಕ್ಷದ ನೀಲಾನಾಯಕ್ ತಮಗೆ 7-8 ಭಾಷೆ ಬರುತ್ತದೆ ಎಂದು ಹೇಳಿಕೊಂಡರು. ಆದರೆ ಕನ್ನಡ ಇನ್ನೂ ಕಲಿತುಕೊಳ್ಳದೆ ಕನ್ನಡದಲ್ಲಿ ಮಾತನಾಡಲು ಕಷ್ಟಪಟ್ಟರು.



ಇದು ಸಹನೆ ಮೀರಿದ ವರ್ತನೆ. ಗಡಿಗಳ ರಕ್ಷಣೆ ಇಲ್ಲದೆ, ಆರ್ಥಿಕ ಸ್ಥಿತಿ ಸರಿಯಾಗಿರದಿದ್ದರೆ ನಗರ ಕೂಡ  ಸುರಕ್ಷಿತವಾಗಿರುವುದು ಅಸಾಧ್ಯ. ಬಿ ಪ್ಯಾಕ್ ಒಂದು ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾಂಗ್ರೆಸ್ ಸರ್ಕಾರ ಟೀಕೆಗಳನ್ನು ಕೇಳಲು ಪಾರ್ಲಿಮೆಂಟ್ನಲ್ಲೂ ತಯಾರಿರುವುದಿಲ್ಲ. ಇಲ್ಲೂ ಕೂಡ ಅದೇ ರೀತಿಯಾಗಿ ಟೀಕೆಗಳನ್ನು ಕೇಳುವ ತಾಳ್ಮೆ ಇಲ್ಲದೆ ಗಲಾಟೆ ನಡೆಸಿದ್ದಾರೆ.
 ಎಚ್.ಎನ್. ಅನಂತ್ಕುಮಾರ್, ಬಿಜೆಪಿ ಅಭ್ಯರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.