ಟಾಕ್ ಬದಲಾದರೂ ವಾಕ್ ಬದಲಾಗಿಲ್ಲ!

ಶಿವಮೊಗ್ಗ: ಎಷ್ಟೇ ಸುದೀರ್ಘ ರಾಜಕಾರಣ ಮಾಡಿದ್ದರೂ, ಎಷ್ಟೆಲ್ಲಾ ಅಧಿಕಾರ ಅನುಭವಿಸಿದ್ದರೂ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಬದಲಾಗದೆ ಉಳಿದ ಎರಡು ಪ್ರಮುಖ ಅಂಶಗಳೆಂದರೆ ಬೆಳಗಿನ ವಾಕಿಂಗ್ ಮತ್ತು ಬಿಳಿ ಬಣ್ಣದ ಸಫಾರಿ! ಬೆಳಗಿನ ವಾಕಿಂಗ್ ಸಮಯದಲ್ಲೂ ಇದೇ ಸಫಾರಿ!
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರ ಅಕ್ರಮಣಕಾರಿ ಮನೋಭಾವ ಕಡಿಮೆಯಾಗಿದೆ. ಮಾತುಗಳಲ್ಲಿ ಕೂಗಾಟ, ಅಬ್ಬರ ಕಡಿಮೆಯಾಗಿದೆ. 'ಯಾಕೆ ಹೀಗೆ' ಅಂತ ಕೇಳಿದರೆ, 'ನಾನು ಗೆಲ್ಲೋದು ಗ್ಯಾರಂಟಿ. ಯಾಕೆ ಸುಮ್ಮನೆ ಬೇರೆಯವರನ್ನು ಟೀಕಿಸಬೇಕು' ಎನ್ನುತ್ತಾರೆ.
ಮಾ.29ರ ಶನಿವಾರ ಇಡೀ ದಿನವನ್ನು 'ಕನ್ನಡಪ್ರಭ' ಅವರೊಂದಿಗೆ ಕಳೆಯಿತು. ವಿನೋಬ ನಗರ ಬಡಾವಣೆಯಲ್ಲಿರುವ ಪುತ್ರಿ ಅರುಣಾದೇವಿ ಮನೆಯಲ್ಲಿ ವಾಸ್ತವ್ಯ. ಬೆಳಗ್ಗೆ 6.27ಕ್ಕೆ ಸರಿಯಾಗಿ ಬಿಳಿ ಸಫಾರಿ ತೊಟ್ಟು ಕೋಣೆಯಿಂದ ಹೊರಬಂದರು. ಮಗಳು ಕೊಟ್ಟ ಸಕ್ಕರೆರಹಿತ ಚಹ ಕುಡಿಯುತ್ತಲೇ ದಿನಪತ್ರಿಕೆಗಳ ಮೇಲೊಂದು ಗ್ಲಾನ್ಸ್. ಪಿಇಎಸ್ ಕಾಲೇಜು ಮೈದಾನಕ್ಕೆ ವಾಕಿಂಗ್ ಹೊರಟಾಗ ಸಮಯ ಏಳಕ್ಕೆ ಐದು ನಿಮಿಷ ಬಾಕಿ ಇತ್ತು. ಅಲ್ಲಿ ಜತೆಯಾದವರು ಎಸ್. ರುದ್ರೇಗೌಡ ಹಾಗೂ ಪುರುಷೋತ್ತಮ್. ವಾಕಿಂಗ್ ಜತೆಯಲ್ಲೇ ಅವರೊಂದಿಗೆ ಇಡೀ ದಿನದ ಕಾರ್ಯಕ್ರಮ ಚರ್ಚಿಸಿದರು.
ಮನೆಗೆ ವಾಪಸ್ಸಾದಾಗ 7.40. ಆ ಹೊತ್ತಿಗಾಗಲೇ ಅಲ್ಲಿ ಸೇರಿದ್ದ ಜನರೊಂದಿಗೆ ಕುಶಲೋಪರಿ, ಬಳಿಕ ಪುತ್ರ, ಸಂಸದ ಬಿ.ವೈ. ರಾಘವೇಂದ್ರ, ಜ್ಯೋತಿಪ್ರಕಾಶ್ ಸೇರಿದಂತೆ ಅಲ್ಲಿದ್ದ ಮುಖಂಡರ ಜತೆ ಮಾತನಾಡುತ್ತಲೇ ಉಪಹಾರ.
10 ಗಂಟೆಗೆ ಮನೆ ಎದುರಿನಲ್ಲಿಯೇ ಇರುವ ಚಿಕ್ಕ ಸಭಾಂಗಣದಲ್ಲಿ ಬಿಎಸ್ಆರ್ ಪಕ್ಷದ ಯುವಘಟಕದ ಅಧ್ಯಕ್ಷ ಹಾಗೂ ಹತ್ತಾರು ಯುವಕರನ್ನು ಪಕ್ಷಕ್ಕೆ ಸೇರ್ಪಡೆ. ಸುದ್ದಿವಾಹಿನಿಯೊಂದಕ್ಕೆ ಸುದೀರ್ಘ ಸಂದರ್ಶನ. ಆಟೋ ಕಾಂಪ್ಲೆಕ್ಸ್ನಲ್ಲಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ರಕ್ತದಾನ ಕಾರ್ಯಕ್ರಮದಲ್ಲಿ ನಿರಾಳವಾಗಿ ಎರಡು ಗಂಟೆ ಕಳೆದರು. ಎಲ್ಲರೊಂದಿಗೂ ಆಪ್ತವಾಗಿ ಮಾತನಾಡುತ್ತ, ಕೆಲವರ ಹೆಸರು ಹಿಡಿದು ಕರೆಯುತ್ತ, 'ಮೋದಿಗಾಗಿ ನನ್ನನ್ನು ಗೆಲ್ಲಿಸ್ರಪಾ' ಎಂದು ಹೇಳುತ್ತಿದ್ದರು.
1.40ಕ್ಕೆ ಮನೆಗೆ ಮರಳಿ ಊಟ ಮುಗಿಸಿದ ಬಿಎಸ್ವೈ, ಅರ್ಧತಾಸು ವಿರಮಿಸಿದರು. ನಂತರ ವಿವಿಧ ಸಮಾಜಗಳ ಮುಖಂಡರೊಂದಿಗೆ ಮೂರು ಗೌಪ್ಯ ಸಭೆಗಳು. ಪ್ರಚಾರದಲ್ಲಿ ಹೈಟೆಕ್ ಸ್ಪರ್ಶ ಇರಬೇಕು ಹಾಗೂ ಮೇಲುಸ್ತರದವರನ್ನೂ ತಲುಪಬೇಕೆಂಬ ಉದ್ದೇಶದಿಂದ ರೂಪಿಸಿದ್ದ ಗೂಗಲ್ ಹ್ಯಾಂಗ್ ಔಟ್ನಲ್ಲಿ ಕೆಲಹೊತ್ತು ಚರ್ಚೆ. ಇಷ್ಟಾಗುವಾಗ ಸಂಜೆ 5.40 ದಾಟಿತ್ತು.
ಅಸಲಿ ಕಾರ್ಯಕ್ರಮ ಶುರುವಾದದ್ದೇ ಆಗ. ಬಿಜೆಪಿ ಮುಖಂಡರ ಜತೆಗೂಡಿ ಹಸೂಡಿ ಗ್ರಾಮಕ್ಕೆ ಹೊರಟರು. ಅಲ್ಲಿ ಅದ್ಧೂರಿ ಸ್ವಾಗತ. ಮುಂದೆ ಹೊಳೆಹೊನ್ನೂರು, ಆನವೇರಿಗಳಲ್ಲಿ ಸಭೆ ಮುಗಿಸಿಕೊಂಡು ಶಿವಮೊಗ್ಗಕ್ಕೆ ವಾಪಸಾದಾಗ ರಾತ್ರಿ 10.15 ಆಗಿತ್ತು. ಇಷ್ಟಾದರೂ ದೇಹಕ್ಕೆ ದಣಿವಾದರೂ ಒಂದಿನಿತೂ ತೋರಿಸದೇ ಉತ್ಸಾಹ ತೋರ್ಪಡಿಸುತ್ತಾ ಜತೆಗಿದ್ದವರನ್ನೂ ಉತ್ಸಾಹದಲ್ಲಿರುವಂತೆ ನೋಡಿಕೊಂಡಿದ್ದು ವಿಶೇಷ. ಪ್ರತಿ ಸಭೆಯಲ್ಲೂ ತಮ್ಮ ಭಾಷಣಕ್ಕೂ ಮುನ್ನ ಟಿಪ್ಪಣಿ ಬರೆದುಕೊಳ್ಳುತ್ತಲೇ ಇದ್ದರು. ಎಲ್ಲೆಡೆ ಪಕ್ಷದ ಕಾರ್ಯಕರ್ತರ ಹೆಸರು ಹಿಡಿದು ಮಾತನಾಡಿಸುತ್ತಿದ್ದುದು ಕಾರ್ಯಕರ್ತರ ಹುರುಪು ಹೆಚ್ಚಿಸುತ್ತಿತ್ತು.
ಬೆಳಗ್ಗೆ
6.27 ಬಿಳಿ ಸಫಾರಿಯಲ್ಲಿ ಕೋಣೆಯಿಂದ ಹೊರಕ್ಕೆ
6.55-7.40 ವಾಕಿಂಗ್
10ರಿಂದ- ಅಧಿಕೃತ ಕಾರ್ಯಕ್ರಮ
ಮಧ್ಯಾಹ್ನ
1.40- ಭೋಜನ
2.10- ವಿವಿಧ ಸಮಾಜಗಳ ಮುಖಂಡರೊಂದಿಗೆ ಗೌಪ್ಯ ಸಭೆ
ಸಂಜೆ
5.40- 8.20- ವಿವಿಧ ಗ್ರಾಮಗಳಲ್ಲಿ ಪ್ರಚಾರ
ರಾತ್ರಿ
10.15- ಮನೆಗೆ ವಾಪಸ್, ಭೋಜನ, ಕುಟುಂಬ ಸದಸ್ಯರೊಂದಿಗೆ ಒಂದಷ್ಟು ಚರ್ಚೆ ಬಳಿಕ ನಿದ್ರೆ
ಅಡಕೆ ನಿಷೇಧ ಪ್ರಸ್ತಾಪ
ಬಹಿರಂಗ ಸಭೆಗಳಲ್ಲಿ ಸ್ಥಳೀಯ ಸಮಸ್ಯೆಗಳಾದ ಅಡಕೆ ನಿಷೇಧ ಮತ್ತು ಬಗರ್ಹುಕುಂ ಸಾಗುವಳಿ, ಭಾಗ್ಯಲಕ್ಷ್ಮಿ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ವೃದ್ಧಾಪ್ಯ ವೇತನ ಸೇರಿದಂತೆ ತಾವು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಪ್ರಸ್ತಾಪಿಸಿದರು. 'ಈ ಸಲ ಮೋದಿಗಾಗಿ ನನ್ನನ್ನು ಗೆಲ್ಲಿಸಿ' ಎನ್ನುವುದು ಮತದಾರರಿಗೆ ಅವರು ಮಾಡಿಕೊಂಡ ಮನವಿ.
ರಾಜಕೀಯ ನಿವೃತ್ತಿ ಇಲ್ಲ
'ರಾಜಕೀಯ ನಿವೃತ್ತಿ ಬಗ್ಗೆ ಯೋಚನೆ ಮಾಡಿದ್ದೀರಾ ಎಂದಾಗ, 'ನಾನು ಕೊನೆ ಉಸಿರಿರುವವರೆಗೂ ರಾಜಕೀಯದಲ್ಲಿರುತ್ತೇನೆ. ಯಾವತ್ತೂ ನಿವೃತ್ತಿ ಬಗ್ಗೆ ಯೋಚಿಸೋಲ್ಲ' ಎಂದು ಉತ್ತರಿಸಿದರು.
- ಹೊನ್ನಾಳಿ ಚಂದ್ರಶೇಖರ್ / ಶ್ರೀಕಾಂತ್ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


