ಯಾರಿಗೆ ಅಮೃತ ಧಾರೆ?

-ಪಂಜಾಬ್‌ನ ಈ ಕ್ಷೇತ್ರ ರಾಜಕೀಯ ಲೆಕ್ಕಾಚಾರದಲ್ಲಿ ಬಹು ಪ್ರಾಮುಖ್ಯತೆ ಪಡೆದುಕೊಂಡಿದೆ. ಎನ್‌ಡಿಎ ಸರ್ಕಾರದಲ್ಲಿ ಉಪ ಪ್ರಧಾನಿ ಆದರೂ ಆಗಬಹುದು ಎಂಬ ನಿರೀಕ್ಷೆ ಇರುವ ಅರುಣ್ ಜೇಟ್ಲಿ ಸ್ಪರ್ಧೆ ಈ ಕ್ಷೇತ್ರಕ್ಕೆ ಅತಿ ಗಣ್ಯರ ಸ್ಟೇಟಸ್ ತಂದುಕೊಟ್ಟಿದೆ. ಜೇಟ್ಲಿ ವಿರುದ್ಧ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಇದೊಂದು ರೀತಿಯಲ್ಲಿ ಮದಗಜಗಳ ನಡುವಿನ ಕದನ.
ಎನ್‌ಡಿಎ ಅಧಿಕಾರಕ್ಕೆ ಬಂದರೆ ಉಪ ಪ್ರಧಾನಿ ಆಗಬಹುದಾದ ಸಾಧ್ಯತೆ ಮತ್ತು ಆಗಲು ಅರ್ಹತೆ ಇರುವ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಸ್ಪರ್ಧಿಸಿರುವ ಕ್ಷೇತ್ರ ಅಮೃತಸರ.
ಜೇಟ್ಲಿ ರಾಜಕೀಯಕ್ಕೆ ಬಂದು ಮೂರು ದಶಕ ಕಳೆದಿದ್ದರೂ ಅವರು ನೇರ ಹಣಾಹಣಿಗೆ ಇಳಿಯುತ್ತಿರುವುದು ಇದೇ ಮೊದಲು. ಪ್ರಮುಖ ಬಿಜೆಪಿ ನಾಯಕರಂತೆ ಅವರೂ ಸುರಕ್ಷಿತ ಕ್ಷೇತ್ರಕ್ಕೆ ದೆಹಲಿಯಿಂದ ವಲಸೆ ಬಂದವರು. ಖ್ಯಾತ ಕ್ರಿಕೆಟ್ ಆಟಗಾರ ಸಿಕ್ಸರ್ ಸಿದ್ಧು ಪ್ರತಿನಿಧಿಸುತ್ತಿರುವ ಕ್ಷೇತ್ರ ಇದು. ಸಿದ್ಧು ಅರುಣ್ ಜೇಟ್ಲಿ ಅವರಿಗಾಗಿ ಅಮೃತಸರ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಜೇಟ್ಲಿ ಜಯಕ್ಕೆ ಶ್ರಮಿಸಲು ನಿರ್ಧರಿಸಿದ್ದಾರೆ.
ಎರಡು ಅವಧಿಗೆ ಲೋಕಸಭಾ ಸದಸ್ಯರಾಗಿದ್ದ ಸಿದ್ಧು ಈ ಬಾರಿ ಸ್ಪರ್ಧಿಸಿಲ್ಲ. ಹಿಂದಿನ ಐದು ಲೋಕಸಭಾ ಚುನಾವಣೆಗಳಲ್ಲಿ ನಾಲ್ಕು ಬಾರಿ ಬಿಜೆಪಿ ಅಭ್ಯರ್ಥಿಗಳು ಇಲ್ಲಿ ಗೆದ್ದಿದ್ದಾರೆ. ಹೀಗಾಗಿ ಬಿಜೆಪಿ ಪಾಲಿಗೆ ಇದು ಭದ್ರಕೋಟೆ. ಜೇಟ್ಲಿ ಪಾಲಿಗೆ ಸುರಕ್ಷಿತ ಕ್ಷೇತ್ರ.
ಸಿದ್ಧು 2007ರ ಉಪ ಚುನಾವಣೆ ಸೇರಿ ಮೂರು ಬಾರಿ ಗೆಲವಿನ ಸಿಕ್ಸರ್ ಬಾರಿಸಿದ್ದರೂ ಅವರು ಟೀವಿ ಚಾನಲ್‌ಗಳಲ್ಲಿ ದರ್ಶನ ನೀಡಿದಷ್ಟು ಕ್ಷೇತ್ರದಲ್ಲಿ ದರ್ಶನ ನೀಡಿಲ್ಲ, ಲೋಕಸಭಾ ಕಲಾಪಗಳಲ್ಲೂ ಅವರದ್ದು ಅದೇ ಕತೆ ಎಂಬ ಆರೋಪ. ಇಡೀ ರಾಷ್ಟ್ರದಲ್ಲಿ ಯುಪಿಎ ಸರ್ಕಾರದ ಆಡಳಿತ ವಿರೋಧಿ ಅಲೆ ಇದ್ದರೆ ಇಲ್ಲಿ ಸಿದ್ದು ವಿರೋಧಿ ಅಲೆ. ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ. ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದವರು. ಅದಕ್ಕೂ ಮಿಗಿಲಾಗಿ ಸಿಖ್ ಸಮುದಾಯ ಪ್ರತಿನಿಧಿಸುತ್ತಿರುವವರು. ಶೇ.64ರಷ್ಟು ಸಿಖ್ ಸಮುದಾಯ ಇರುವ ಅಮೃತಸರ ಲೋಕಸಭಾ ಕ್ಷೇತ್ರದ ಮತದಾರರ ಪಾಲಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಣ್ಣಿನ ಮಗ. ಜೇಟ್ಲಿ ವಲಸಿಗ. ಆಪರೇಷನ್ ಬ್ಲೂ ಸ್ಟಾರ್ ವಿರೋಧಿಸಿ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು ಅಮರಿಂದರ್ ಸಿಂಗ್.
ಹದಿನೈದು ಲೋಕಸಭಾ ಚುನಾವಣೆಗಳ ಇತಿಹಾಸ ಪರಿಗಣಿಸಿದರೆ ಅಮೃತಸರ ಕಾಂಗ್ರೆಸ್‌ನ ಭದ್ರಕೋಟೆ. ಎಂಟು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ, ಕಳೆದ ಐದು ಚುನಾವಣೆಗಳ ಪೈಕಿ ಬಿಜೆಪಿ ನಾಲ್ಕು ಬಾರಿ (1998, 2004,2007(ಉಪಚುನಾವಣೆ) 2009) ಗೆದ್ದಿದೆ. 1967ರಲ್ಲಿ ಭಾರತೀಯ ಜನಸಂಘ ಮತ್ತು 1977ರಲ್ಲಿ ಜನತಾಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿರುವ ಅಮೃತಸರ ಮತದಾರರು 1989ರಲ್ಲಿ ಪಕ್ಷೇತರ ಅಭ್ಯರ್ಥಿ ಕೃಪಾಸ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದರು. ಉಳಿದಂತೆ 1996ರವರೆಗೆ ಕಾಂಗ್ರೆಸ್ ಪಕ್ಷದ್ದೇ ಆಧಿಪತ್ಯ.
1998ರಲ್ಲಿ ಬಿಜೆಪಿಯ ದಯಾಸಿಂಗ್ ಸೋಧಿ ಗೆದ್ದಿದ್ದರು. 1999ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನ ಅಭ್ಯರ್ಥಿ ರಘುನಂದನ್ ಲಾಲ್ ಭಾಟಿಯ ಆಯ್ಕೆಯಾದರು. ನಂತರ ಸಿದ್ದು ಸಾಮ್ರಾಜ್ಯ.
ಕಳೆದ ಲೋಕಸಭಾ ಚುನಾವಣೆ ಫಲಿತಾಂಶ ಗಮನಿಸಿದರೆ, ಈ ಕ್ಷೇತ್ರ ಬಿಜೆಪಿ ಅಂದುಕೊಂಡಷ್ಟು ಸುರಕ್ಷಿತವೇನಲ್ಲ. 2009ರಲ್ಲಿ ಸಿದ್ದು ಗೆದ್ದದ್ದು ಅತ್ಯಲ್ಪ ಮತಗಳ ಅಂತರದಲ್ಲಿ. ಸಿದ್ಧು 3,92,046 ( ಶೇ48.13) ಮತ ಪಡೆದರೆ, ಕಾಂಗ್ರೆಸ್‌ನ ಓಂಪ್ರಕಾಶ್ ಸೋನಿ 3,85,188 (ಶೇ.47.29) ಮತ ಪಡೆದಿದ್ದರು. ಗೆಲವಿನ ಅಂತರ ಕೇವಲ 6858 ಮತಗಳು. ಮತದಾನದಲ್ಲಿ ಶೇ.1 ರಷ್ಟು ಏರುಪೇರಾದರೂ ಫಲಿತಾಂಶ ಏನಾದರೂ ಆಗಿಬಿಡಬಹುದಾದಷ್ಟು ಅತ್ಯಲ್ಪದ ಪ್ರಮಾಣದ ಗೆಲವಿನ ಅಂತರ ಇದು.
ಆದರೆ, ಪಂಜಾಬ್‌ನಲ್ಲಿ ಬಿಜೆಪಿ-ಎಸ್‌ಎಡಿ ಸರ್ಕಾರ ಇರುವುದರಿಂದ ಗೆಲವಿನ ಹಾದಿ ಸಲೀಸು ಎಂದು ಭಾವಿಸಲಾಗಿದೆ. ಶಿರೋಮಣಿ ಅಕಾಲಿದಳವು ಜೇಟ್ಲಿ ಗೆಲುವಿಗೆ ಕಂಕಣತೊಟ್ಟಿದೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಖ್ ಸಮುದಾಯಕ್ಕೆ ಅನ್ಯಾಯ ಎಸಗಿದ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ನಾವು ಸೌಹಾರ್ದತೆ ಪ್ರತಿನಿಧಿಸುತ್ತಿದ್ದೆವೆ. ಅಮೃತಸರದ ಬೇಕು ಬೇಡಗಳನ್ನು ರಾಜಧಾನಿಗೆ ತಲುಪಿಸಲು ಗಟ್ಟಿದ್ವನಿಯೊಂದರ ಅಗತ್ಯವಿದೆ. ಆ ಅಗತ್ಯವನ್ನು ನಾನು ಪೂರೈಸುತ್ತೇನೆ ಎಂಬ ವಾದ ಬಿಜೆಪಿ ಅಭ್ಯರ್ಥಿ ಜೇಟ್ಲಿ ಅವರದ್ದು.
ಜೇಟ್ಲಿ ಅವರು ವಲಸಿಗ. ಗೆದ್ದು ಹೋದ ಮೇಲೆ ಅವರು ಮತ್ತೆ ಬರುತ್ತಾರೆಂದು ಹೇಗೆ ನಂಬುವುದು, ಈ ನೆಲದ ಮಗ ನಾನು ಎಂದು ಮತ ಬೇಡುತ್ತಿದ್ದಾರೆ ಕ್ಯಾಪ್ಟನ್ ಅಮರಿಂದರ್ ಸಿಂಗ್.
ಶಿರೋಮಣಿ ಅಕಾಲಿದಳ- ಬಿಜೆಪಿ ಒಗ್ಗೂಡಿರುವುದರಿಂದ ಇಲ್ಲಿ ನೇರ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರ ಹಣಾಹಣಿ. ಬಿಎಸ್‌ಪಿ ಸೇರಿದಂತೆ ಉಳಿದ ಪಕ್ಷಗಳು ನಗಣ್ಯ. ಆಮ್‌ಆದ್ಮಿ ಪಕ್ಷ (ಎಎಪಿ) ಡಾ.ದಲ್‌ಜಿತ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಅಮೃತಸರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಡಾ.ದಲ್‌ಜಿತ್ ಸಿಂಗ್ ಅಮೃತಸರದ ಜನಪ್ರಿಯ ನೇತ್ರತಜ್ಞ. ಬಿಜೆಪಿ-ಎಸ್‌ಎಡಿ ಮತ್ತು ಕಾಂಗ್ರೆಸ್ ಅಬ್ಬರದಲ್ಲಿ ಆಮ್‌ಆದ್ಮಿ ಧ್ವನಿ ಮತದಾರರಿಗೆ ಕೇಳಿಸುತ್ತಿಲ್ಲ.
- ರೇಣುಕಾಪ್ರಸಾದ್ ಹಾಡ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


