ಪ್ರಧಾನ ಸುದ್ದಿ

ಜಂಗಮತ್ವ ಮರೆತು ಸ್ಥಾವರವಾದ ಕೂಡಲ ಸಂಗಮ

ಜಂಗಮತ್ವ ಮರೆತು ಸ್ಥಾವರವಾದ ಕೂಡಲ ಸಂಗಮ
Published On :

ಬಾಗಲಕೋಟೆ: ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದ ಕ್ರಿಯೆ ಮಾಡೆನು
ನಿಮ್ಮ ಸೊಮ್ಮ ನಿಮಗೆ ಸವೆಸುವೆನು ನಿಮ್ಮಾಣೆ ಕೂಡಲ ಸಂಗಮದೇವ.
ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಬಸವಣ್ಣ ತನ್ನೊಲವಿನ ದೈವ ಸಂಗಮದೇವನ ಮೇಲೆ ಆಣೆ ಮಾಡಿದ ಪರಿಯಿದು. ನೀ ಕೊಟ್ಟ ದ್ರವ್ಯ (ಹಣ) ಅದು ನಿಮಗಲ್ಲದೆ ಅದರಿಂದ ಬೇರೇನೂ ಮಾಡೆ. ನಿಮ್ಮಿಂದ ಬಂದ ಆದಾಯ ನಿಮಗೆ ಅರ್ಪಿಸುವೆನು ಎಂಬ ಈ ವಚನ ಸತ್ಯಶುದ್ಧ ಕಾಯಕದ ಸಾರ್ವಕಾಲಿಕ ಸಂದೇಶವೊಂದನ್ನು ರವಾನಿಸುತ್ತದೆ.
ರಾಜ್ಯದಲ್ಲಿ ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಬಜೆಟ್ ಭಾಷಣದಲ್ಲಿ ಬಸವಣ್ಣನ ವಚನಗಳ ಉಲ್ಲೇಖಗಳಿರುತ್ತವೆ. ವಚನ ಪಠಣೆ ಕೇವಲ ಭಾಷಣಕ್ಕೆ ಮಾತ್ರ ಸೀಮಿತ ಮಾಡಿಕೊಂಡು ಕಾಯಕ ಸಂಸ್ಕೃತಿ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂಬುದಕ್ಕೆ ಬಸವಣ್ಣನ ಐಕ್ಯ ಸ್ಥಳ ಕೂಡಲ ಸಂಗಮ ಅನಾದರಕ್ಕೆ ಒಳಗಾಗಿರುವುದು ತಾಜಾ ಉದಾಹರಣೆ.
ಬಿಸಿಲ ಬೇಗೆ ರಾಜ್ಯವನ್ನೇ ಬಾಧಿಸುತ್ತಿರುವ ಈ ವೇಳೆ ಕೃಷ್ಣೆ, ಘಟಪ್ರಭ, ಮಲಪ್ರಭ ನದಿಗಳು ಬತ್ತಿ ಹೋಗಿವೆ. ಈ ಮೂರು ನದಿಗಳ ಸಂಗಮದ ಪ್ರದೇಶದಲ್ಲಿ ಬಸವಣ್ಣನ ಐಕ್ಯ ಮಂಟಪವಿದೆ. ತೀರಾ ಅಧ್ವಾನಕ್ಕೆ ಒಳಗಾಗಿದ್ದ ಕೂಡಲ ಸಂಗಮದ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಕಾಳಜಿ ವಹಿಸಿ ಐಎಎಸ್ ಅಧಿಕಾರಿ ಜಾಮಾದಾರ್ ಕೈಗೆ 20 ಕೋಟಿ ಹಣ ಕೊಟ್ಟಿದ್ದರು. ಇದಕ್ಕಾಗಿ ಪ್ರತ್ಯೇಕ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿತ್ತು. ವಿಚಿತ್ರವೆಂದರೆ ಜಾಮದಾರ್ ಕಾಲದಲ್ಲಿ ಆಗಿದ್ದ ಕೆಲಸಗಳು ಬಿಟ್ಟರೆ ಹೊಸ ಕಾಮಗಾರಿಗಳು ಇದುವರೆಗೂ ಅಲ್ಲಿ ನಡೆದಿಲ್ಲ. ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ಹದಿನೈದು ವರ್ಷವಾದರೂ ಕೈಗೆತ್ತಿಕೊಳ್ಳುವ ಉಸಾಬರಿಗೆ ಯಾರೂ ಹೋಗಿಲ್ಲ.
ಬಣ್ಣ ಸ್ಪರ್ಶಿಸಿಲ್ಲ: ಬಸವಣ್ಣನ ಐಕ್ಯ ಸ್ಥಳವನ್ನು ತಡೆಗೋಡೆ ಮೂಲಕ ರಕ್ಷಣೆ ಮಾಡಿರುವುದು, ಆರು ಸಾವಿರ ಜನ ಏಕಕಾಲಕ್ಕೆ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ಬಸವ ವೇದಿಕೆ ಹಾಗೂ ಬಸವತತ್ವ ಅಧ್ಯಯನಕ್ಕಾಗಿ ಮೀಸಲಾದ ಏಳು ಅಂತಸ್ತಿನ ಕಟ್ಟಡ ಕೂಡಲ ಸಂಗಮದ ಪ್ರಮುಖ ಆಕರ್ಷಣೆ. ಐಕ್ಯ ಸ್ಥಳ ಹಾಗೂ ಬಸವ ವೇದಿಕೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆಯೇ ವಿನಃ ಅಂತಾರಾಷ್ಟ್ರೀಯ ಬಸವ ಕೇಂದ್ರ ಮಾತ್ರ ಕಳೆದ ಹದಿನೈದು ವರ್ಷದಿಂದ ಕಾಮಗಾರಿ ಪೂರ್ಣಗೊಳ್ಳದೆ ಹಾಗೆಯೇ ಉಳಿದಿದೆ. ಒಳ ಹಾಗೂ ಹೊರ ಭಾಗದಲ್ಲಿ ಸುಣ್ಣ ಬಣ್ಣ ಹೊಡೆಯುವ ಕೆಲಸ ಕೂಡಾ ಸಾಧ್ಯವಾಗಿಲ್ಲ.
ಯಾತ್ರಿ ನಿವಾಸ ದುಬಾರಿ: ಕೂಡಲ ಸಂಗಮಕ್ಕೆ ನಿತ್ಯ ಐದು ಸಾವಿರ ಯಾತ್ರಿಗಳು ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಹೇಗೋ ಹೊಳೆಯಲ್ಲಿ ಸ್ನಾನ ಮಾಡಿ ಸಂಗಮನಾಥನಿಗೆ ಅಡ್ಡ ಬಿದ್ದು ಧನ್ಯತಾಭಾವ ಪ್ರದರ್ಶಿಸುವ ಭಕ್ತಾದಿಗಳು ಬೇಸಗೆ ಬಂದಿತೆಂದರೆ ಸಾಕು ಯಾಕಪ್ಪಾ ಇಲ್ಲಿಗೆ ಬಂದೆವೆಂದು ಶಪಿಸಿಕೊಳ್ಳುತ್ತಾರೆ. ಸ್ನಾನ ಮಾಡಲು ಸರಿಯಾದ ವ್ಯವಸ್ಥೆಯಿಲ್ಲ. ಸಿಂಟೆಂಕ್ಸ್‌ಗಳಲ್ಲಿ ನೀರು ತುಂಬಿ ನಲ್ಲಿಗಳ ಮೂಲಕ ಪೂರೈಕೆ ಮಾಡುತ್ತಾರೆ. ಪುರುಷರು ಹೇಗೋ ನಿಭಾಯಿಸಿಕೊಳ್ಳುತ್ತಾರೆ. ಆದರೆ ಮಹಿಳೆಯರಿಗೆ ಸ್ನಾನ ಮಾಡಲು ಪ್ರತ್ಯೇಕ ವ್ಯವಸ್ಥೆಯಿಲ್ಲ. ಬಯಲಲ್ಲೇ ಸಂಗಮನಾಥ ಎನ್ನುವಂತಾಗಿದೆ ಅವರ ಪರಿಸ್ಥಿತಿ.
ದೂರದ ಊರುಗಳಿಂದ ಬರುವವರಿಗೆ ತಂಗಲು ಪ್ರಾಧಿಕಾರದ ವತಿಯಿಂದ ಸರಿಯಾದ ವ್ಯವಸ್ಥೆ ಇಲ್ಲಿಲ್ಲ. ಜೈನ್ ಸಂಸ್ಥೆ ನಿರ್ವಹಿಸುವ ಯಾತ್ರಿ ನಿವಾಸ ದುಬಾರಿಯಾಗಿದೆ. ಮಾತೆ ಮಹಾದೇವಿ ಒಂದಿಷ್ಟು ಮಂದಿ ಭಕ್ತರ ಸಂಪರ್ಕಿಸಿ ಐದು ನೂರು ಕೊಠಡಿಗಳನ್ನು ನಿರ್ಮಿಸಿದ್ದಾರೆ. ಅಲ್ಲಿಗೆ ಹೋಗಿ ತಂಗಲು ದುಬಾರಿ ಬಾಡಿಗೆ ಕೊಡಬೇಕು. ಡಾರ್ಮೆಟರಿ ಮಾದರಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವುದನ್ನೇ ಪ್ರಾಧಿಕಾರ ಮರೆತಿದೆ.


-ಚಿಕ್ಕಪ್ಪನಹಳ್ಳಿ ಷಣ್ಮುಖ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.