ಪ್ರಧಾನ ಸುದ್ದಿ

ಬಿಜೆಪಿಯಿಂದಲೂ ಸ್ಟ್ರಾಂಗ್ ರೂಂ ಭದ್ರತೆ!

ಬಿಜೆಪಿಯಿಂದಲೂ ಸ್ಟ್ರಾಂಗ್ ರೂಂ ಭದ್ರತೆ!
Published On :

ಕನ್ನಡಪ್ರಭ ವಾರ್ತೆ ಚಾಮರಾಜನಗರ ಮೇ 1
ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಇಟ್ಟಿರುವ ಕೊಠಡಿಗಳನ್ನು (ಸ್ಟ್ರಾಂಗ್ ರೂಂ) ಪೊಲೀಸರು ಸರ್ಪಗಾವಲಿನಲ್ಲಿ ಕಾಯುತ್ತಿದ್ದಾರೆ. ಆದರೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರ ಬೆಂಬಲಿಗರೂ ಸಹ 3 ಪಾಳಿಯಲ್ಲಿ ಕಾವಲು ಕಾಯುತ್ತಿದ್ದಾರೆ. ಇದಕ್ಕೆ ಕಾರಣ ಕೇವಲ ಒಂದು ಮತ!
ಹೌದು. 2004ರ ಸಂತೇಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಧ್ರುವನಾರಾಯಣ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಸೋತ ಹಾಲಿ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಈ ಬಾರಿ ಮುಂಜಾಗ್ರತೆಗಾಗಿ ಹೀಗೆ ಮಾಡಿದ್ದಾರೆ.
ಬಿಗಿ ಕಾವಲು: ಜಿಲ್ಲಾ ಕೇಂದ್ರದಿಂದ 6 ಕಿ.ಮೀ. ದೂರದಲ್ಲಿರುವ ಬೇಡರಪುರ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಇರಿಸಲಾಗಿದೆ. ಮತಯಂತ್ರಗಳ ಬಳಿ ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆ ಕಾವಲು ಕಾಯ್ದರೆ, ಕೆಎಸ್‌ಆರ್‌ಪಿ ತಂಡ, ಸ್ಥಳೀಯ ಪೊಲೀಸರು ಸಹ 24್ಢ7 ಮಾದರಿಯಲ್ಲಿ ಕಾವಲು ಕಾಯುತ್ತಿದ್ದಾರೆ. ಜೊತೆಗೆ 22 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಬಿಜೆಪಿಯವರು ಮಾತ್ರ: ಚುನಾವಣಾ ಆಯೋಗ ಅಭ್ಯರ್ಥಿ ಅಥವಾ ಅವರ ಬೆಂಬಲಿಗರಿಗೂ ಮತಯಂತ್ರ ಕಾಯಲು ಅವಕಾಶ ಕಲ್ಪಿಸಿದ್ದು, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಮಾತ್ರ ಕಾವಲು ಕಾಯುತ್ತಿದ್ದಾರೆ. ಕಣದಲ್ಲಿರುವ 14 ಅಭ್ಯರ್ಥಿಗಳ ಕಡೆಯವರಿಗೂ ಇಲ್ಲಿ ಉಳಿಯಲು ಅವಕಾಶವಿದೆ. ಆದರೆ, ಬಿಜೆಪಿಯವರು ಹೊರತುಪಡಿಸಿ ಬೇರೆಯವರು ಇಲ್ಲಿ ಉಳಿಯಲು ಮುಂದೆ ಬಂದಿಲ್ಲ.
ಮೂರು ಪಾಳಿ: ಹೀಗಾಗಿ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಬೆಂಬಲಿಗರಾದ ನಾಗವಳ್ಳಿ ಮಹೇಶ್ ಬೆಳಗ್ಗೆ 6ರಿಂದ ಮಧ್ಯಾಹ್ನ 2, ಕುಂಬೇಶ್ವರ ಕಾಲೋನಿಯ ಮಹದೇವ ಮಧ್ಯಾಹ್ನ 2ರಿಂದ ರಾತ್ರಿ 10, ಬದನಗುಪ್ಪೆ ಮಹೇಶ್ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ತನಕ ಮೂರು ಪಾಳಿಯಲ್ಲಿ ಕಾವಲು ಕಾಯುತ್ತಿದ್ದಾರೆ.
ಇವರಿಗೆ ಚುನಾವಣಾಧಿಕಾರಿಗಳು ಪಾಸ್ ನೀಡಿದ್ದು, ಎಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲೇ ಟೆಂಟ್ ಹಾಕಿ ಕೊಡಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಹೊಸದಾಗಿ ಶೌಚಾಲಯ ನಿರ್ಮಿಸಿ ಕೊಟ್ಟಿದೆ. ಆದರೆ, ಅಲ್ಲಿಗೆ ನೀರಿನ ವ್ಯವಸ್ಥೆ ಇನ್ನೂ ಮಾಡಿಲ್ಲ.
ಅಲ್ಲದೆ, ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತಯಂತ್ರ ಕೊಠಡಿ ಪಕ್ಕದಲ್ಲಿರುವ ಪ್ರಾಯೋಗಿಕ ತರಗತಿಗೆ ಹೋಗಿದ್ದರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಮುಗಿಯುವ ತನಕ ಪ್ರಾಯೋಗಿಕ ತರಗತಿಗಳನ್ನು ಮುಂದೂಡಲಾಗಿದೆ.
ಚಾಮರಾಜನಗರ ಮೀಸಲು ಲೋಕಸಭಾ
ಕ್ಷೇತ್ರದ ಮತಯಂತ್ರಗಳನ್ನು ಇಟ್ಟಿರುವ ಎಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ಬಿಜೆಪಿ
ಅಭ್ಯರ್ಥಿ ಬೆಂಬಲಿಗ ಮಹೇಶ್ ಎಂಬುವರು ಕಾವಲು ಕಾಯುತ್ತಿರುವುದು.     ಚಿತ್ರ: ಎಂ. ಲಿಂಗಪ್ಪ


 ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.