ಶರಾವತಿ ವಿದ್ಯುದಾಗಾರ; ಉತ್ಪಾದನೆ ಭಾರ!
ಶಿವಮೊಗ್ಗ: ರಾಯಚೂರು ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ 5ನೇ ಘಟಕ ಸ್ಥಗಿತವಾಗಿರುವುದು ಹಾಗೂ ಉಳಿದ ಏಳು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ನೇರ ಪರಿಣಾಮ ಶರಾವತಿ ಒಡಲಿನ ವಿದ್ಯುದಾಗಾರಗಳ ಮೇಲೆ ಬೀಳುತ್ತಿದೆ.
ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ 12- 13 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದ ಘಟಕಗಳಲ್ಲೀಗ 18-19 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಲಿಂಗನಮಕ್ಕಿ ಜಲಾಶಯವು ಅಪರೂಪಕ್ಕೆಂಬಂತೆ ಬಹುವರ್ಷಗಳ ನಂತರ ಭರ್ತಿಯಾಗಿತ್ತು. ಹಾಗಾಗಿ ಇದುವರೆಗೆ ವಿದ್ಯುತ್ ಉತ್ಪಾದನೆ ನಿರಾತಂಕವಾಗಿ ನಡೆಯುತ್ತಿತ್ತು. ಇದೇ ರೀತಿ ಮುಂದುವರಿದಿದ್ದರೆ ಜೂನ್ 20ರವರೆಗೆ ಮಳೆಯಾಗದಿದ್ದರೂ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಈ ಬಾರಿ ಮಳೆಗಾಲ ನಿಧಾನವಾಗಿ ಆರಂಭವಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ ಹಿನ್ನೆಲೆಯಲ್ಲಿ ಈಗ ಹೆಚ್ಚುತ್ತಿರುವ ಒತ್ತಡ ಆತಂಕಕಾರಿಯಾಗಿದೆ.
ವಾಸ್ತವವಿದು: ರಾಜ್ಯದ ಎಲ್ಲ ಜಲವಿದ್ಯುತ್ ಕೇಂದ್ರಗಳ ಒಟ್ಟು ಸಾಮರ್ಥ್ಯ 3637.35 ಮೆ.ವ್ಯಾ. ಇದರಲ್ಲಿ ಶರಾವತಿ ನದಿಯ ವಿದ್ಯುದಾಗಾರಗಳ ಒಟ್ಟು ಉತ್ಪಾದನೆ 1489.20 ಮೆ.ವ್ಯಾ. ಆಗಿದೆ. ರಾಜ್ಯದ ಎಲ್ಲ ಮೂಲಗಳ ಒಟ್ಟು ಉತ್ಪಾದನೆಯ ಸರಿಸುಮಾರು ಶೇ. 20ರಷ್ಟು ಪಾಲು ಶರಾವತಿ ನದಿಯಿಂದಲೇ ಸಿಗುತ್ತಿರುವುದು ಮಹತ್ವದ ವಿಷಯ.
ವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾಗಿರುವ ಜಲಾಶಯಗಳಲ್ಲಿ ಮಳೆಗಾಲದ ವೇಳೆ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತದೆ. ಉಷ್ಣವಿದ್ಯುತ್ ಸ್ಥಾವರಗಳ ಕೆಲಸ ಕಡಿಮೆ. ಕಳೆದ ಕೆಲ ವರ್ಷಗಳಿಂದ ಇದೇ ಪದ್ಧತಿ ಅನುಸರಿಸಲಾಗುತ್ತಿತ್ತು. ಈಗ ರಾಯಚೂರು ಸಮಸ್ಯೆಯಿಂದ ಬೇಸಿಗೆಯಲ್ಲೂ ಜಲವಿದ್ಯುತ್ ಉತ್ಪಾದನೆ ಹೆಚ್ಚಿಸಬೇಕಾಗದ ಅನಿವಾರ್ಯತೆ ಬಂದಿದೆ.
ಸದ್ಯ ಪರವಾಗಿಲ್ಲ: ಸದ್ಯ ಲಿಂಗನಮಕ್ಕಿ ಜಲಾಶಯ ಸಂಗ್ರಹ ಇಳಿಮುಖವಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ನೀರಿನ ಮಟ್ಟಕ್ಕಿಂತ 1 ಅಡಿ ಕಡಿಮೆ ನೀರು ಸಂಗ್ರಹವಾಗಿದೆ. ಗರಿಷ್ಠ 1,819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯದಲ್ಲಿ ಗುರುವಾರದ ಪರಿಸ್ಥಿತಿಯಂತೆ 1,763.40 ಅಡಿ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 1,764.45 ಸಂಗ್ರಹವಿತ್ತು.
ಆದರೆ, ಇಷ್ಟೇ ವಿದ್ಯುತ್ ಉತ್ಪಾದನೆಯ ಒತ್ತಡ ಶರಾವತಿ ಒಡಲಿನ ವಿದ್ಯುದಾಗಾರಗಳ ಮೇಲೆ ಬಿದ್ದರೆ ಅವಧಿಗಿಂತ ಮುಂಚೆ ನೀರು ಸಂಗ್ರಹ ಕ್ಷೀಣಿಸಲಿದ್ದು, ಕೊನೆಯ ದಿನಗಳಲ್ಲಿ ಕಷ್ಟವಾಗಲಿದೆ.
ಶರಾವತಿ ಸಾಮರ್ಥ್ಯ
ಲಿಂಗನಮಕ್ಕಿ ವಿದ್ಯುದಾಗಾರ 55 ಮೆ.ವ್ಯಾ.
ಮಹಾತ್ಮ ಗಾಂಧಿ ವಿದ್ಯುದಾಗಾರ 139.20 ಮೆ.ವ್ಯಾ.
ಶರಾವತಿ ವಿದ್ಯುದಾಗಾರ 1035 ಮೆ.ವ್ಯಾ.
ಗೇರುಸೊಪ್ಪ ವಿದ್ಯುದಾಗಾರ 240 ಮೆ.ವ್ಯಾ.
ಮಹಾತ್ಮಗಾಂಧಿ ಟೇಲರೇಸ್(ಖಾಸಗಿ) 20 ಮೆ.ವ್ಯಾ.
ನಾವು ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದಿಸುತ್ತೇವೆ. ನೀರಿನ ಸಂಗ್ರಹ ಗಮನದಲ್ಲಿಟ್ಟುಕೊಳ್ಳುತ್ತೇವೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಜೂನ್ ತಿಂಗಳಲ್ಲಿ ಮಳೆ ಆರಂಭವಾಗುವವರೆಗೆ ನಿಭಾಯಿಸಬಲ್ಲೆವು.
- ಕರ್ನಾಟಕ ವಿದ್ಯುತ್ ನಿಗಮದ ಉನ್ನತ ಅಧಿಕಾರಿ
ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

