ಪ್ರಧಾನ ಸುದ್ದಿ

1300 ಆದಿವಾಸಿ ಮಕ್ಕಳು ಮರಳಿ ಶಾಲೆಗೆ

Published On :

ಕ.ಪ್ರ. ವಾರ್ತೆ | ಮೈಸೂರು | ಮೇ 1
ಮೈಸೂರು ಹಾಗೂ ರಾಮನಗರ ಜಿಲ್ಲೆಗಳ 80 ಹಾಡಿಗಳಲ್ಲಿ ಶಾಲೆಯಿಂದ ಹೊರಗೆ ಉಳಿದಿದ್ದ 1,300 ಮಕ್ಕಳು ಮರಳಿ ಶಾಲೆ ಸೇರಿದ್ದಾರೆ.
ಹುಣಸೂರಿನ ಡೀಡ್, ಎಚ್.ಡಿ. ಕೋಟೆ ನಿಸರ್ಗ ಹಾಗೂ ಕನಕಪುರದ ಸಮೃದ್ಧಿ ಸ್ವಯಂ ಸೇವಾ ಸಂಸ್ಥೆಗಳು ಕಳೆದ ನಾಲ್ಕು ವರ್ಷಗಳಿಂದ ನಡೆಸಿದ ಪ್ರಯತ್ನದ ಫಲ ಇದು. ಜರ್ಮನಿಯಿಂದ ಆರ್ಥಿಕ ನೆರವು ಪಡೆಯುವ ಪುಣೆಯ ಟಿಡಿಎಚ್ ಸಂಸ್ಥೆಯ ಧನಸಹಾಯದಿಂದ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ 20 ಹಾಗೂ ಎಚ್.ಡಿ. ಕೋಟೆ ತಾಲೂಕಿನ 10 ಹಾಡಿಗಳಲ್ಲಿ ಡೀಡ್, ಎಚ್.ಡಿ. ಕೋಟೆ ತಾಲೂಕಿನ 30 ಹಾಡಿಗಳಲ್ಲಿ ನಿಸರ್ಗ, ರಾಮನಗರ ಜಿಲ್ಲೆ ರಾಮನಗರ ತಾಲೂಕಿನ 5, ಕನಕಪುರ ತಾಲೂಕಿನ 15 ಹಾಡಿಗಳಲ್ಲಿ ಸಮೃದ್ಧಿ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಆದಿವಾಸಿಗಳ ಬಡತನ ನಿವಾರಣೆ, ಅವರ ಮಕ್ಕಳ ಭವಿಷ್ಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದವು.
ಅದರಂತೆ ಈ 80 ಹಾಡಿಗಳಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬೇಕಾದ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದರು. ಕೈಯಲ್ಲಿ ಕೆಲಸ ಇಲ್ಲದಿದ್ದಲ್ಲಿ ಆದಿವಾಸಿಗಳು ಕೇರಳದ ವಯನಾಡು, ಕೊಡಗಿನ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ವಲಸೆ ಹೋಗುತ್ತಾರೆ. ಇದನ್ನು ತಪ್ಪಿಸಲು ಕಿರು ಉತ್ಪನ್ನಗಳ ಸಂಗ್ರಹಕ್ಕೆ ಪ್ರೋತ್ಸಾಹ, ಕೃಷಿಗೆ ಉತ್ತೇಜನ ನೀಡುವ ಮೂಲಕ ಆಹಾರ ಉತ್ಪಾದನೆಗೆ ಒತ್ತು ನೀಡಿದರು. ಆದಿವಾಸಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಡೆ ಒತ್ತು ನೀಡಿದರು.
80 ಹಾಡಿಗಳಲ್ಲಿ 1ರಿಂದ 10ನೇ ತರಗತಿವರೆಗೆ 3,228 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಿಶುಪಾಲನಾ ಕೇಂದ್ರಗಳಲ್ಲಿ 6 ವರ್ಷದೊಳಗಿನ 1,200 ಮಕ್ಕಳು ಪೌಷ್ಟಿಕ ಆಹಾರ ಮತ್ತಿತರ ಸೌಲಭ್ಯ ಪಡೆಯುತ್ತಿದ್ದಾರೆ. ಸಂಸ್ಥೆ ನಡೆಸುವ ಶಿಶುಪಾಲನಾ ಕೇಂದ್ರಗಳನ್ನು ಸೇರಿಸಿದರೆ ಈ ಸಂಖ್ಯೆ 2,000 ತಲುಪುತ್ತದೆ. ಈ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾಗ 1,300 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಪತ್ತೆಯಾಯಿತು. ನಿಸರ್ಗ ಸಂಸ್ಥೆ 642, ಡೀಡ್ ಸಂಸ್ಥೆ 678 ಮಂದಿಯನ್ನು ಪತ್ತೆ ಮಾಡಿತ್ತು. ಸಮೃದ್ಧಿ ಸಂಸ್ಥೆಯೂ 68 ಮಂದಿಯನ್ನು ಪತ್ತೆ ಮಾಡಿತ್ತು. ಒಟ್ಟಾರೆ 61 ಮಂದಿ ಮತ್ತೆ ಶಾಲೆ ಬಿಟ್ಟಿದ್ದು, ಉಳಿದ 1,300 ಮಂದಿ ಶಾಲೆಗೆ ಹೋಗುತ್ತಿದ್ದಾರೆ.
ವಿಶೇಷ ತರಗತಿ: 12 ಶಾಲೆಗಳಲ್ಲಿ 3 ತಿಂಗಳ ವಿಶೇಷ ತರಗತಿಗಳನ್ನು ನಡೆಸಿ, ಆ ಮಕ್ಕಳನ್ನು ಮರಳಿ ಸರ್ಕಾರಿ ಶಾಲೆಗಳಿಗೆ ಸೇರಿಸಲಾಗಿದೆ. 48 ಹಾಡಿಗಳಲ್ಲಿ ಶಾಲಾ ದಾಖಲಾತಿ ಆಂದೋಲನ ನಡೆಸಲಾಗಿದೆ. ಆದಿವಾಸಿ ಜನಾಂಗದ 100 ಮಂದಿ ಪಿಯುಸಿ ಹಾಗೂ ಪದವಿಯಲ್ಲಿ ಓದುತ್ತಿದ್ದಾರೆ. ಆರ್ಥಿಕ ಮಟ್ಟ ಸುಧಾರಿಸಲು ವಿವಿಧ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರವು ಜನರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವ ಪಡೆದಲ್ಲಿ ಆದಿವಾಸಿಗಳ ಜೀವನಮಟ್ಟ ಸುಧಾರಣೆಯಾಗುತ್ತದೆ ಎಂಬುದಕ್ಕೆ ಈ ಪ್ರಯೋಗವೇ ನಿದರ್ಶನ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು.  ಈಗಲಾದರೂ ಮನಸ್ಸು ಮಾಡಿ, ರಾಜ್ಯದ ಎಲ್ಲಾ ಆದಿವಾಸಿಗಳಿಗೆ ಅರಣ್ಯ ಹಕ್ಕು ಸೌಲಭ್ಯ ನೀಡಬೇಕು.
- ಎಸ್. ಶ್ರೀಕಾಂತ್, ನಿರ್ದೇಶಕರು, ಡೀಡ್, ಹುಣಸೂರು

 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.