ಆಗಸದಿಂದಲೇ ಹಂಪಿ ದರ್ಶನ!
ಕನ್ನಡಪ್ರಭ ವಾರ್ತೆ, ಬಳ್ಳಾರಿ,ಮೇ 2
ಆಕಾಶದಿಂದಲೇ ಐತಿಹಾಸಿಕ ಸ್ಥಳಗಳ ಸೊಬಗನ್ನು ವೀಕ್ಷಿಸುವ ಅವಕಾಶವನ್ನು ಮಧ್ಯಮ ವರ್ಗಕ್ಕೂ ಕಲ್ಪಿಸುವ ಹೊಸ ಪ್ರಸ್ತಾವನೆಯನ್ನು ಬಳ್ಳಾರಿ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿದೆ.
ಜನಾರ್ದನ ರೆಡ್ಡಿ ಪ್ರಯತ್ನದ ಫಲವಾಗಿ 2010-11ರಲ್ಲೇ ಹೆಲಿ ಟೂರಿಸಂಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಆದರೂ ಯೋಜನೆ ನೆನೆಗುದಿಗೆ ಬಿದ್ದಿತ್ತು. ಹೆಲಿಕಾಪ್ಟರ್ನಲ್ಲಿ ಹಾರಾಡ ಬಯಸುವ ಮಧ್ಯಮ ವರ್ಗಕ್ಕೆ ನಿರಾಸೆಯಾಗಿತ್ತು. ಈ ಬಾರಿಯ ಹಂಪಿ ಉತ್ಸವದಲ್ಲಿ ಹಂಪಿ ಬೈ ಸ್ಕೈ ವ್ಯವಸ್ಥೆ ಮಾಡಿತ್ತು. ಅದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ದಿನಗಳಲ್ಲಿ ಹೆಲಿ ಟೂರಿಸಂ ವ್ಯವಸ್ಥೆ ಕಲ್ಪಿಸಿದರೆ ಲಾಭದಾಯಕ ಎಂಬುದನ್ನು ಅಧಿಕಾರಿಗಳು ಮನಗಂಡಿದ್ದಾರೆ.
ಹಂಪಿಯಲ್ಲಿ ಬೇಸ್ ಸ್ಟೇಷನ್ ಕಾಮಗಾರಿ ಅನುಷ್ಠಾನಕ್ಕೆ 9.78 ಕೋಟಿ ಅಗತ್ಯವಿದೆ. ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೊಳ್ಳುತ್ತಿದ್ದು, ಮೊದಲನೇ ಹಂತದ ಕಾಮಗಾರಿಗೆ 4.98 ಕೋಟಿ, ಎರಡನೇ ಹಂತದಲ್ಲಿ 4.80 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಹೆಲಿಪ್ಯಾಡ್ ಮತ್ತಿತರ ಸೌಲಭ್ಯ ಒದಗಿಸಲು ಬಾದಾಮಿಗೆ 2.56 ಕೋಟಿ, ಬಿಜಾಪುರಕ್ಕೆ 4.06 ಕೋಟಿ ಎಂದು ಅಂದಾಜು ಮೊತ್ತ ತಯಾರಿಸಲಾಗಿತ್ತು.
- ಹೀಗೆ, ಹೆಲಿ ಟೂರಿಸಂಗೆ ಒಟ್ಟು 16.40 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಕರ್ನಾಟಕದಲ್ಲಿ ಇಂಥ ವಿಶಿಷ್ಟ ಯೋಜನೆ ಅನುಷ್ಠಾನ ಮಾಡಲು ನಿರ್ಧರಿಸಿದ ಸರ್ಕಾರ ಹಂಪಿಯಲ್ಲಿ ಬೇಸ್ ಸ್ಟೇಷನ್ ಕಾಮಗಾರಿ ಆರಂಭಿಸಲು ಫೆ.5, 2011ರಂದು ಪ್ರವಾಸೋದ್ಯಮ ಇಲಾಖೆ ಮೂಲಕ ಜಿಲ್ಲಾಧಿಕಾರಿಗೆ 1 ಕೋಟಿ ಅನುದಾನ ಬಿಡುಗಡೆ ಮಾಡಿತು.
1 ಕೋಟಿ ಬಿಡುಗಡೆ
ಮರು ಜೀವ
ಹೆಲಿ ಟೂರಿಸಂ ಯೋಜನೆ ಅದೇಕೋ ನೆನೆಗುದಿಗೆ ಬಿತ್ತು. ಅದನ್ನು ಕೈ ಬಿಡಲಾಗಿದೆ ಎಂದೂ ಹೇಳಲಾಗಿತ್ತು. ಈ ಬಾರಿ ಹಂಪಿ ಉತ್ಸವದಲ್ಲಿ ಹೆಲಿ ಟೂರಿಸಂಗೆ ಪೂರಕ ಎಂಬಂತೆ, ಮೂರು ದಿನಗಳ ಕಾಲ 'ಹಂಪಿ ಬೈ ಸ್ಕೈ' ಆಯೋಜಿಸಲಾಗಿತ್ತು. ಸಾರ್ವಜನಿಕರಿಗೆ ಹೆಲಿಕಾಪ್ಟರ್ನಲ್ಲಿ ಹಂಪಿಯನ್ನು ತೋರಿಸುವ ಈ ವ್ಯವಸ್ಥೆಗೆ ಭಾರಿ ಬೇಡಿಕೆ ಬಂದಿತ್ತು. 1200ಕ್ಕೂ ಹೆಚ್ಚು ಜನರು ತಲಾ 2000 ಕೊಟ್ಟು, ಹೆಲಿಕಾಪ್ಟರ್ ಏರಿ, ಹಂಪಿಯ ಪಕ್ಷಿನೋಟದಿಂದ ಸಂಭ್ರಮಪಟ್ಟಿದ್ದರು.
ಹಂಪಿಯಿಂದ ಸರ್ವದರ್ಶನ
ರಾಜ್ಯದಲ್ಲಿ ಹೆಲಿ ಟೂರಿಸಂನ್ನು ಒಂದು ಫ್ಲಾಗ್ಶಿಪ್ ಯೋಜನೆನ್ನಾಗಿ ಜಾರಿಗೊಳಿಸಲು ಹೆರಿಟೇಜ್ ಸರ್ಕ್ಯೂಟ್ ಅಡಿಯಲ್ಲಿ ಪ್ರಥಮ ಹಂತದಲ್ಲೇ 16.40 ಕೋಟಿ ಅನುದಾನಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದರಲ್ಲಿ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಬಿಜಾಪುರ ಪ್ರವಾಸಿ ತಾಣಗಳನ್ನು ತೋರಿಸುವ ಯೋಜನೆಯಿತ್ತು. ಈ ಸರ್ಕ್ಯೂಟ್ಗೆ ಹಂಪಿ ಬೇಸ್ ಸ್ಟೇಷನ್. ಪ್ರವಾಸಿಗರನ್ನು ಹಂಪಿಯಿಂದ ಹೆಲಿಕಾಪ್ಟರ್ನಲ್ಲಿ ಕರೆದೊಯ್ದು ಪ್ರವಾಸಿ ತಾಣಗಳನ್ನು ತೋರಿಸಿ, ಕರೆ ತರುವುದು ಇದರ ಯೋಜನೆ. ಹಂಪಿ ಸಮೀಪದ ಕಮಲಾಪುರದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಒದಗಿಸಲಾಗಿರುವ ಜಮೀನಿನಲ್ಲಿ ಬೇಸ್ ಸ್ಟೇಷನ್ ನಿರ್ಮಿಸಲು ನಿವೇಶನ ಗುರುತಿಸಲಾಗಿತ್ತು.
ಜಿಲ್ಲಾಡಳಿತದಿಂದ ಪತ್ರ
ಹಂಪಿ ಉತ್ಸವದಲ್ಲಿ ಹಂಪಿ ಬೈ ಸ್ಕೈಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಹಂಪಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುವುದರಿಂದ 2010-11ರಲ್ಲಿ ಆರಂಭಿಸಲು ಉದ್ದೇಶಸಿದ್ದ ಹೆಲಿ ಟೂರಿಸಂಗೆ ಮರುಜೀವ ಬಂದಿದೆ. ಪ್ರವಾಸಿಗರು ಜಾಸ್ತಿ ಇರುವ ಸಂದರ್ಭ ನೋಡಿಕೊಂಡು 'ಹಂಪಿ ಬೈ ಸ್ಕೈ' ನಡೆಸಲು ಜಿಲ್ಲಾಡಳಿತದಿಂದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತಾವನೆ ಓಕೆ ಆದರೆ, ಐತಿಹಾಸಿಕ ತಾಣಗಳ ಮೇಲೆ ಹೆಲಿಕಾಪ್ಟರ್ನಲ್ಲಿ ಹಾರುವ ಬಡ ಹಾಗೂ ಮಧ್ಯಮ ವರ್ಗದ ಜನರ ಕನಸೂ ಈಡೇರೀತು.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

