ಕತ್ತಲೆಯಲ್ಲಿ ಧ್ವನಿ-ಬೆಳಕು ಯೋಜನೆ
ಚಿತ್ರದುರ್ಗ: ಮೂರು ವರ್ಷದ ಹಿಂದೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೈಸೂರು ಅರಮನೆ ಮತ್ತು ಚಿತ್ರದುರ್ಗ ಕೋಟೆಯ ಧ್ವನಿ ಮತ್ತು ಬೆಳಕು ಸಂಯೋಜನೆ ಯೋಜನೆ ಜಾರಿಗೆ ಬಾರದೆ ನನೆಗುದಿಗೆ ಬಿದ್ದಿದೆ.
ಪ್ರವಾಸಿಗರನ್ನು ಆಕರ್ಷಿಸುವ ಮಹತ್ವದ ಯೋಜನೆ ಇದಾಗಿತ್ತು. ಹಿರಿಯ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಈ ಯೋಜನೆ ರೂಪುಗೊಂಡಿತು. ಇದರ ಅನುಷ್ಠಾನಕ್ಕಾಗಿ ಉಪ ಕಾರ್ಯದರ್ಶಿ ಶ್ರೀರಾಮಯ್ಯ ಚಿತ್ರದುರ್ಗದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು.
ಕೃಷ್ಣಕುಮಾರ್ ಹೊಣೆ: ಚಿತ್ರದುರ್ಗ ಕೋಟೆಯಲ್ಲಿನ ಮದ್ದು ಬೀಸುವ ಕಲ್ಲುಗಳು ಇರುವ ಸಮತಟ್ಟಾದ ಪ್ರದೇಶದಲ್ಲಿ ಮಾಡಿದರೆ ಚೆನ್ನಾಗಿ ಮೂಡಿಬರಬಹುದು ಎಂಬ ತೀರ್ಮಾನವಾಗಿತ್ತು. ಮೈಸೂರು ಮತ್ತು ಚಿತ್ರದುರ್ಗದ ಎರಡೂ ಯೋಜನೆಗಳನ್ನು ಹಿರಿಯ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅನುಷ್ಠಾನಗೊಳಿಸುವ ಹೊಣೆ ಹೊತ್ತಿದ್ದರು. ಅವರೊಂದಿಗೆ ಹಿರಿಯ ನಿರ್ದೇಶಕ ನಾಗಾಭರಣ ಅವರೂ ಕೈ ಜೋಡಿಸಿದ್ದರು.
ಮೈಸೂರು ಅರಮನೆ ಯೋಜನೆಗೆ ಲಿಂಗದೇವರು ಹಳೆಮನೆ ಮತ್ತು ಚಿತ್ರದುರ್ಗ ಕೋಟೆ ಯೋಜನೆಗೆ ಡಾ.ಬಿ. ರಾಜಶೇಖರಪ್ಪ ಸ್ಕ್ರಿಪ್ಟ್ ರಚಿಸಲು ಇಲಾಖೆ ಸೂಚನೆ ನೀಡಿತ್ತು. ಲಿಂಗದೇವರು ಹಳೆಮನೆಯವರು ರಚಿಸಿದ ಸ್ಕ್ರಿಪ್ಟ್ ಇಟ್ಟುಕೊಂಡು ಮೈಸೂರು ಅರಮನೆ ಧ್ವನಿ ಮತ್ತು ಬೆಳಕು ಸಂಯೋಜನೆ ಬಹುತೇಕ ಪೂರ್ಣಗೊಂಡಿತ್ತು. ಆದರೆ, ಮೈಸೂರು ಅರಸರ ವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಟಿಪ್ಪು ಸುಲ್ತಾನ್ಗೆ ಹೆಚ್ಚಿನ ಪ್ರಾಶಸ್ತ್ರ್ಯ ನೀಡಲಾಗಿದ್ದು, ಮೈಸೂರು ಅರಸರ ಬಗ್ಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂಬುದು ಅವರ ವಾದವಾಗಿತ್ತು. ಈ ಕಾರಣಕ್ಕಾಗಿ ಮೈಸೂರು ಅರಮನೆ ಯೋಜನೆ ತೆರೆಮರೆಗೆ ಸರಿಯಿತು.
ಚಿತ್ರದುರ್ಗ ಯೋಜನೆ ಅನುಷ್ಠಾನ ಸಂಬಂಧ ನಾಗಾಭರಣ, ಕೃಷ್ಣಕುಮಾರ್ ಆಗಿನ ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರೊಂದಿಗೆ ಸಭೆ ನಡೆಸಿದರು. ಸರ್ಕಾರದಿಂದ ಯಾವ ಅಧಿಕೃತ ಪತ್ರದ ಆಧಾರದ ಮೇಲೆ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೀರಿ ಎಂಬ ಪ್ರಶ್ನೆಯನ್ನು ಜಿಲ್ಲಾಧಿಕಾರಿ ಮುಂದಿಟ್ಟಾಗ ಕೃಷ್ಣಕುಮಾರ್ ಬಳಿ ಉತ್ತರ ಇರಲಿಲ್ಲ. ಈ ಮಧ್ಯೆ ಡಾ.ಬಿ. ರಾಜಶೇಖರಪ್ಪ ಅಗತ್ಯ ಸ್ಕ್ರಿಪ್ಟ್ ರಚನೆ ಬಹುತೇಕ ಪೂರ್ಣಗೊಳಿಸಿದ್ದರು.
ಸಹಸ್ರಾರು ಜನರ ಭೇಟಿ
ಅಂದಿನಿಂದ ಇಂದಿನವರೆಗೂ ಯೋಜನೆ ಅನುಷ್ಠಾನ ಕುರಿತು ಯಾರಿಂದಲೂ ಯಾವುದೇ ಪ್ರಸ್ತಾಪ ಲಭ್ಯವಾಗಿಲ್ಲ. ಹೀಗಾಗಿ ಯೋಜನೆ ಬಹುತೇಕ ನಿಧನವಾದಂತೆಯೇ ಸರಿ. ಮೈಸೂರು ಮತ್ತು ಚಿತ್ರದುರ್ಗದ ಐತಿಹಾಸಿಕ ಸ್ಥಳಗಳಿಗೆ ನಿತ್ಯ ಸಹಸ್ರಾರು ಜನರು ಭೇಟಿ ನೀಡುತ್ತಾರೆ. ಈ ಕ್ಷೇತ್ರಗಳ ಮಹತ್ವ, ಇಲ್ಲಿನ ಇನ್ನೂ ಹತ್ತಾರು ಅಪರೂಪದ ಸ್ಥಳಗಳ ವೀಕ್ಷಣೆ, ಅವುಗಳ ಪ್ರಾಮುಖ್ಯತೆ ಮುಂತಾದ ಯಾವುದೇ ವಿಷಯಗಳ ಅರಿವಿಲ್ಲದೆ ಹಾಗೇ ತೆರಳಿ ಹೋಗುವ ಪರಿಪಾಠ ನಡೆಯುತ್ತಿದೆ. ಈ ಸ್ಥಳದ ಇಂಚಿಂಚೂ ಮಹತ್ವಪೂರ್ಣ ಚಾರಿತ್ರಿಕ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಇವುಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಿ ಜನರನ್ನು ಆಕರ್ಷಿಸಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತಿಸುವವರೇ ಇಲ್ಲವಾಗಿದೆ.
-ಕ.ಮ. ರವಿಶಂಕರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

