ಪ್ರಧಾನ ಸುದ್ದಿ

ಬಿಜೆಪಿ ಹಣಿಯಲು ಹೊರಟ ಕೈಗೆ ಮುಖಭಂಗ...

ಬಿಜೆಪಿ ಹಣಿಯಲು ಹೊರಟ ಕೈಗೆ ಮುಖಭಂಗ...
Published On :

ನವದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಘಟ್ಟ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಹತಾಶೆ ಆವರಿಸಿದಂತೆ ಕಂಡುಬರುತ್ತಿದ್ದು, ಈ ವಾರವಿಡೀ ನಡೆದ ಬೆಳವಣಿಗೆಗಳಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿದೆ.
ಮೋದಿ ಸಂದರ್ಶನ ಪ್ರಕರಣ, ಗುಜರಾತ್ ಬೇಹುಗಾರಿಕೆ ತನಿಖೆ, ಭೂಸೇನಾ ಮುಖ್ಯಸ್ಥರ ನೇಮಕ ವಿಚಾರದಲ್ಲಿ ಕಾಂಗ್ರೆಸ್‌ನ ಹಿನ್ನಡೆ ಬಟಾಬಯಲಾಗಿದೆ. ಇನ್ನೊಂದೆಡೆ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅಕ್ರಮ ಪ್ರಣಯ ಪ್ರಕರಣ ಪಕ್ಷಕ್ಕೆ ತೀವ್ರ ಮುಜುಗರ ತಂದೊಡ್ಡಿದೆ. ಇದೇ ಸಂದರ್ಭದಲ್ಲಿ ಪಕ್ಷದ ಮುಂಚೂಣಿ ನಾಯಕನಾಗಿ ಬಿಂಬಿತವಾಗಿರುವ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ನಿರೀಕ್ಷಿತ ಪ್ರಭಾವ ಬೀರದಿರುವುದು ಮುಖಂಡರಿಗೆ ನಿರಾಸೆ ಮೂಡಿಸಿದೆ. ಹಾಗೆ ನೋಡಿದರೆ ಚುನಾವಣಾ ಕಣಕ್ಕೆ ತುಸು ರಂಗುಬಂದದ್ದೇ ಪ್ರಿಯಾಂಕಾ ವಾದ್ರಾ ಪ್ರಚಾರಕ್ಕೆ ಇಳಿದ ಮೇಲೆ. ಒಂದು ಹಂತದಲ್ಲಿ ರಾಹುಲ್‌ಗಿಂತ ಪ್ರಿಯಾಂಕಾರನ್ನೇ ಬಿಂಬಿಸಿದ್ದರೆ ಮೋದಿ ಅಲೆಯನ್ನು ತಡೆಯಬಹುದಿತ್ತು ಎಂಬುದು ಪಕ್ಷದ ಹಿರಿಯ ಮುಖಂಡರ  ಅಭಿಪ್ರಾಯವಾಗಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಂದರ್ಶನದಲ್ಲಂತೂ ಮೋದಿ ಅವರಿಗೆ ನೇರವಾಗಿ ಹಾಗೂ ಬಿಜೆಪಿಗೆ ಪರೋಕ್ಷವಾಗಿ ಕೆಟ್ಟ ಹೆಸರು ತರಬೇಕು ಎಂಬ ದುರಾಲೋಚನೆ ಇದ್ದದ್ದು ಸ್ಪಷ್ಟ.
* ರಾಹುಲ್ ವಿರುದ್ಧ ದೂರು
ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದಲ್ಲಿ 22 ಸಾವಿರ ಮಂದಿಯ ಕಗ್ಗೊಲೆಯಾಗುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಅನಂತಕುಮಾರ್ ನೇತೃತ್ವದ ನಿಯೋಗ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರನ್ನು ಭೇಟಿಯಾಗಿ ದೂರು ನೀಡಿದೆ. ಹಿಮಾಚಲಪ್ರದೇಶದ ಸೋಲನ್‌ನಲ್ಲಿ ರಾಹುಲ್ ಪ್ರಚಾರದ ವೇಳೆ ಈ ಮಾತುಗಳನ್ನಾಡಿದ್ದರು. ಅದು ಪ್ರಚೋದನಕಾರಿ ಎನ್ನುವುದು ಬಿಜೆಪಿ ಆರೋಪ. ದೂರು ಸ್ವೀಕರಿಸಿದ ಸಂಪತ್ ರಾಹುಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
* ಸಂದರ್ಶನ ರಾಜಕೀಯ
ಕಾಂಗ್ರೆಸ್, ಮೋದಿ ಸಂದರ್ಶನದಲ್ಲಿ  ರಾಜಕೀಯ ವಿವಾದ ಸೃಷ್ಟಿಸಿತು.  ಜಾಲತಾ ಣಗಳಲ್ಲಿ ಮೂಲ ಸಂದರ್ಶನ ಹರಿದಾಡುತ್ತಲೇ ಅದನ್ನು ಮುಚ್ಚಿಡಲು ಪ್ರಯತ್ನಿಸಿತು. ಎಲ್ಲಕ್ಕಿಂತ ಪ್ರಸಾರ ಭಾರತಿ ಸಿಇಒ ಜವಾಹರ್ ಸರ್ಕಾರ್ ಹರಿಹಾಯ್ದರು. ಇವೆ ಲ್ಲದರ ನಡುವೆ ವಾರ್ತಾ ಸಚಿವ ಮನೀಷ್ ತಿವಾರಿ ಪ್ರಸಾರ ಭಾರತಿಗೆ ಸಂಸತ್ ಸ್ವಾಯತ್ತೆ ನೀಡಿದೆ ಎಂದಿದ್ದು ಗಮನಾರ್ಹ.
* ಆಯೋಗಕ್ಕೆ ಸಿಕ್ಕಿಲ್ಲ ನಾಯಕ
ಮೋದಿ ಮಹಿಳೆಯೊಬ್ಬರ ಮೇಲೆ ಬೇಹುಗಾರಿಕೆ ನಡೆಸಿದ್ದಾರೆಂಬ ಆರೋಪ ತನಿಖೆಗೆ  ಯುಪಿಎ, ಆಯೋಗ ರಚನೆಗೆ ಮುಂದಾಗಿದೆ. ಆದರೆ ಮುಖ್ಯಸ್ಥರಾಗಲು ಯಾರೊಬ್ಬರೂ ಮುಂದಾಗದಿರುವುದು ನುಂಗಲಾರದ ತುತ್ತಾಗಿದೆ.  ಹಾಲಿ ನ್ಯಾಯಾಧೀಶರನ್ನು ನೇಮಿಸುವುದಕ್ಕೆ ಸುಪ್ರೀಂ ನಿಕಟಪೂರ್ವ ಮುಖ್ಯ ನ್ಯಾ. ಪಿ.ಸದಾಶಿವಂ ಆಕ್ಷೇಪಿಸಿದ್ದಾರೆ.
* ನೇಮಕ: ದೂರು ಪರಿಶೀಲನೆ
ಭೂಸೇನೆಗೆ ಹೊಸ ಮುಖ್ಯಸ್ಥರ ನೇಮಕದ ಬಗ್ಗೆ ಬಿಜೆಪಿ ದೂರನ್ನು ಚುನಾವಣಾ ಆಯೋಗ ಎತ್ತಿಕೊಂಡಿದೆ. ಈ ಬಗ್ಗೆ ಮುಂದಿನ ವಾರ ಚರ್ಚಿಸಲಾಗುತ್ತೆ. ರಕ್ಷಣಾ ಇಲಾಖೆಯ ಪ್ರಸ್ತಾವನೆಯನ್ನು ಆಯೋಗ ಪರಿಶೀಲಿಸಿಲ್ಲ.  ಆದರೆ  ಅಧಿಕಾರಿಯೊಬ್ಬರ ಪ್ರಕಾರ ನೇಮಕವನ್ನು ಹೊಸ ಸರ್ಕಾರವೇ ಕೈಗೊಳ್ಳಲಿ ಎಂದು ಯುಪಿಎಗೆ ಆಯೋಗ ಸೂಚಿಸುವ ಸಾಧ್ಯತೆ ಹೆಚ್ಚು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.