ಆಯುರ್ವೇದ ಕಾಲೇಜಿಗೆ ಮತ್ತೆ ವಿಘ್ನ
ಶಿವಮೊಗ್ಗ: ಮೂಲಸೌಲಭ್ಯ ಕೊರತೆಯಿಂದ ಬಳಲುತ್ತಿರುವ ಶಿವಮೊಗ್ಗದ ಸರ್ಕಾರಿ ಆಯುರ್ವೇದ ಕಾಲೇಜು ಸ್ಥಾಪನೆಯಾದ ಐದನೇ ವರ್ಷವೂ ಸಹ ಆರಂಭವಾಗದು. ಆರಂಭದಲ್ಲಿದ್ದ ಉತ್ಸಾಹ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಂತೂ ಈ ಬಗ್ಗೆ ಚಿಂತಿಸುವವರೇ ಇಲ್ಲದಂತಾಗಿದೆ.
ರಾಜ್ಯದಲ್ಲಿದ್ದುದು ಕೇವಲ ಮೂರು ಸರ್ಕಾರಿ ಆಯುರ್ವೇದ ಕಾಲೇಜುಗಳು ಮಾತ್ರ. ಇವು ಬೆಂಗಳೂರು, ಮೈಸೂರು ಹಾಗೂ ಬಳ್ಳಾರಿಯಲ್ಲಿವೆ. 41 ವರ್ಷಗಳ ನಂತರ ಸರ್ಕಾರಿ ಆಯುರ್ವೇದ ಕಾಲೇಜನ್ನು ಶಿವಮೊಗ್ಗದಲ್ಲಿ ಆರಂಭಿಸಲು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಕೈಗೊಂಡರು. 2009-10ನೇ ಸಾಲಿನಲ್ಲಿ ಕಾಲೇಜು ಆರಂಭಕ್ಕೆ ಅಗತ್ಯವಾದ ಆಸ್ಪತ್ರೆ, ತಾತ್ಕಾಲಿಕ ಕಾಲೇಜು ಕಟ್ಟಡ ಹಾಗೂ ಸಿಬ್ಬಂದಿಯನ್ನು ಸರ್ಕಾರ ಒದಗಿಸಿತು. ಆದರೆ ಬಹುಮುಖ್ಯವಾಗಿ ಬೇಕಾಗಿದ್ದ ಬೋಧಕ-ಬೋಧಕೇತರ ಸಿಬ್ಬಂದಿ, ಪ್ರತ್ಯೇಕ ಆಸ್ಪತ್ರೆ, ಪ್ರತ್ಯೇಕ ಕಾಲೇಜು ಕಟ್ಟಡ, ಔಷಧ ವನ ಒಳಗೊಂಡ ಕ್ಯಾಂಪಸ್ ಜಾಗ ಸಿಕ್ಕಲೇ ಇಲ್ಲ.
ರೈತರ ಅಡ್ಡಿ: ಕಾಲೇಜಿಗಾಗಿ ನರಸಿಂಹರಾಜಪುರ ರಸ್ತೆ ಬಳಿ 100 ಎಕರೆ ಜಾಗ ಗುರುತಿಸಲಾಗಿದೆ. ಇಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರು ಕೋರ್ಟ್ ಮೊರೆ ಹೋಗಿರುವುದರಿಂದ ತಡೆಯುಂಟಾಗಿದೆ.
ಕಳೆದ ವರ್ಷ ಕೇಂದ್ರ ಭಾರತೀಯ ವೈದ್ಯಕೀಯ ಪರಿಷತ್ ಸೆಂಟ್ರಲ್ ಕೌನ್ಸೆಲ್ ಆಫ್ ಇಂಡಿಯನ್ ಮೆಡಿಸಿನ್(ಸಿಸಿಐಎಂ) ಸಂಸ್ಥೆಯ ಪ್ರತಿನಿಧಿಗಳು ಕಾಲೇಜಿನ ಎಲ್ಲಾ ಸೌಲಭ್ಯವನ್ನೂ ಒಪ್ಪಿದ್ದಲ್ಲದೆ ಲೆಟರ್ ಆಫ್ ಇಂಟೆಂಟ್ ಕೊಟ್ಟಿದ್ದರು. ಪ್ರಾಧ್ಯಾಪಕರ ನೇಮಕವಾದ ಕೂಡಲೇ ಮತ್ತೆ ಪರಿಶೀಲಿಸಿ ತರಗತಿ ಆರಂಭಿಸಲು ಒಪ್ಪಿಗೆ ಪತ್ರ ಕೊಡುವುದಾಗಿಯೂ ಹೇಳಿದ್ದರು. ಆದರೆ ಈ ಅವಧಿಯೊಳಗೆ ಪ್ರಾಧ್ಯಾಪಕರನ್ನು ನೇಮಕ ಮಾಡುವುದಕ್ಕೆ, ಅಥವಾ ಬೇರೆ ಕಾಲೇಜುಗಳಿಂದ ವರ್ಗ ಮಾಡುವುದಕ್ಕೆ ಆಯುರ್ವೇದ ವಿಶ್ವವಿದ್ಯಾಲಯ ಮುಂದಾಗಲಿಲ್ಲ. ಈ ವರ್ಷವೂ ಅದೇ ಕತೆ ಪುನರಾವರ್ತನೆಯಾಗಿದೆ.
ಈಗಾಗಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ. ಶಿವಮೊಗ್ಗದ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಓದಬೇಕೆಂಬ ಬಹುತೇಕರ ಆಸೆ ಈ ವರ್ಷವೂ ಈಡೇರಿಸುವ ಸಾಧ್ಯತೆ ಕಡಿಮೆಯೇ.
ಏನೇನಿದೆ?
ಮೊದಲ ವರ್ಷದ ತರಗತಿ ಆರಂಭಿಸುವುದಕ್ಕೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನೂ ಕಾಲೇಜು ಹೊಂದಿದೆ. ಸರ್ಕಾರ 100 ಬೆಡ್‌ಗಳ ಆಸ್ಪತ್ರೆಗೆ ಮಾತ್ರ ಅನುಮೋದನೆ ನೀಡಿದ್ದರಿಂದ 60 ವಿದ್ಯಾರ್ಥಿಗಳ ಬದಲು 50 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಇವರಿಗಾಗಿ ಆಸ್ಪತ್ರೆ, ಗ್ರಂಥಾಲಯ, ತರಗತಿ ಕೊಠಡಿ, ಎಕ್ಸ್ ರೇ ಯಂತ್ರ, ಪ್ರಯೋಗಾಲಯಗಳು ಸಿದ್ಧ ಆಗಿವೆ. ಮೊದಲ ವರ್ಷಕ್ಕೆ ಅಗತ್ಯವಿರುವ ಮೂಲ ಸೌಕರ್ಯವಿದೆ. ಕಾಲೇಜು ಆರಂಭಕ್ಕೆ ಬೇಕಾಗಿರುವುದು 6 ಪ್ರಾಧ್ಯಾಪಕರ ಮಾತ್ರ. ಈ ಕೆಲಸ ಆಗಿಯೇ ಇಲ್ಲ. ಕಳೆದ ವರ್ಷ ಜೂನ್ ತಿಂಗಳಲ್ಲಿ ಸರ್ಕಾರ ಆದೇಶವೊಂದನ್ನು ಹೊರಡಿಸಿ ನಿವೃತ್ತ ಪ್ರಾಧ್ಯಾಪಕರ ಮರುನೇಮಕಕ್ಕೆ ಸೂಚನೆ ನೀಡಿತ್ತು. ಆದರೆ ನಿವೃತ್ತ ಪ್ರಾಧ್ಯಾಪಕರು ಬರಲಿಲ್ಲ. ಗುತ್ತಿಗೆ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸರ್ಕಾರ ಅವಕಾಶ ನೀಡಲಿಲ್ಲ. ಶಿವಮೊಗ್ಗದ ಸರ್ಕಾರಿ ಆಯುರ್ವೇದ ಕಾಲೇಜಿಗಾಗಿಯೇ ಪ್ರಾಧ್ಯಾಪಕರ ನೇಮಕಕ್ಕೆ ವಿಶೇಷ ಅನುಮತಿಯನ್ನು ಸರ್ಕಾರ ನೀಡಿದಲ್ಲಿ, ಸಂಪುಟ ಸಭೆ ಇದಕ್ಕೆ ಒಪ್ಪಿಗೆ ನೀಡಿದಲ್ಲಿ ಈ ವರ್ಷ ಕಾಲೇಜು ಆರಂಭಕ್ಕೆ ಅವಕಾಶವಿದೆ. ಇದನ್ನು ತೋರಲು ಇಚ್ಛಾಶಕ್ತಿ ಬೇಕಷ್ಟೆ.
ಇವರೇನಂತಾರೆ?
ಮೊದಲ ವರ್ಷದ ತರಗತಿಗೆ ಬೇಕಾದ ಎಲ್ಲಾ ಅಗತ್ಯ ಸೌಲಭ್ಯಗಳಿವೆ. ಕಾಲೇಜಿಗೆ 48 ಬೋಧಕೇತರ, 44 ಬೋಧಕ ಹುದ್ದೆಗಳು ಮಂಜೂರಾಗಿವೆ. ಆಸ್ಪತ್ರೆಯಲ್ಲೂ 30 ಹುದ್ದೆಗಳು ಖಾಲಿ ಇವೆ. 8 ತಜ್ಞ ವೈದ್ಯರನ್ನು ವರ್ಗಾವಣೆ ಮೂಲಕವೇ, ನೇಮಕಾತಿ ಮೂಲಕವೋ ಭರ್ತಿಮಾಡಿದರೆ ಸಾಕು, ಕಾಲೇಜು ಆರಂಭಿಸಬಹುದು.
- ಡಾ. ಸಿ.ಎ. ಹಿರೇಮಠ, ವಿಶೇಷಾಧಿಕಾರಿ
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

