ಪ್ರಧಾನ ಸುದ್ದಿ

ಬಸವಣ್ಣನ ತತ್ವಗಳು ಇಂದಿಗೂ ಅನುಕರಣೀಯ

Published On :

ಪರ್ತ್: 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಸಾರ್ವತ್ರಿಕ ತತ್ವಗಳು ಇಂದಿಗೂ ಜಗತ್ತಿನಾದ್ಯಂತ ಆದರ್ಶಣೀಯ ಹಾಗೂ ಅನುಕರಣೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಏ.26 ರಂದು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಆಸ್ಟ್ರೇಲೇಷ್ಯಾ ಬಸವ ಸಮಿತಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಶರಣ ಸಂಸ್ಕೃತಿ ಸಮ್ಮೇಳನದಲ್ಲಿ ಶರಣ ಸಂಗಮ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಇಂತಹ ಕ್ರಾಂತಿ ನಡೆದಿದ್ದರೂ ನಮ್ಮಲ್ಲಿಯೇ ಇಂದಿಗೂ ಎಲ್ಲ ಕ್ಷೇತ್ರಗಳಲ್ಲಿ ಅಸಮಾನತೆ, ತಾರತಮ್ಯಗಳಿರುವುದು ವಿಷಾದದ ಸಂಗತಿ. ಮೌಢ್ಯತೆ, ಅಂಧಶ್ರದ್ಧೆಗಳು ಆಚರಣೆಯಲ್ಲಿವೆ. ವೈಚಾರಿಕ ದೃಷ್ಟಿಯಿಂದ ಬದುಕನ್ನು ರೂಪಿಸಿಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.
ಬಸವೇಶ್ವರರ ಸಂದೇಶಗಳನ್ನು ಅನಿವಾಸಿ ಭಾರತೀಯರು ಆಚರಿಸುವುದಲ್ಲದೇ ಬಸವ ಸಮಿತಿ ಆಶ್ರಯದಲ್ಲಿ ಆಸ್ಟ್ರೇಲಿಯಾ ತುಂಬ ಪಸರಿಸುವ ಜವಾಬ್ದಾರಿಯೂ ಸಮಿತಿಯ ಮೇಲಿದೆ ಎಂದು ತಿಳಿಸಿ, ಸಾವಿರಾರು ಮೈಲಿಗಳ ದೂರ ಬಂದಿದ್ದರೂ ಸಂಘಟಿತರಾಗಿ ಸಮ್ಮೇಳನ ಆಯೋಜಿಸಿರುವುದನ್ನು ಶ್ಲಾಘಿಸಿದರು.
ಬಿಜಾಪುರದ ಜ್ಞಾನಯೋಗಾಶ್ರವುದ ಸಿದ್ದೇಶ್ವರ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಅಂತರಂಗದ ಸಂಪತ್ತನ್ನು ಗಳಿಸುವುದು ಅಗತ್ಯ. ಬಹಿರಂಗದ ಆಸ್ತಿ-ಐಶ್ವರ್ಯ ಮನುಷ್ಯನಿಗೆ ನೆಮ್ಮದಿ ಕೊಡಲು ಸಾಧ್ಯವಿಲ್ಲ. ಷೇಕ್ಸ್‌ಪಿಯರ್ ತಾನೊಬ್ಬ ಅಸಾಮಾನ್ಯ ಚಕ್ರವರ್ತಿ ಎಂದು ಹೇಳುತ್ತಾನೆ. ಅದು ಅವನು ಬಹಿರಂಗದಲ್ಲಿ ಶಿರದ ಮೇಲೆ ಧರಿಸಿದ ಕಿರೀಟದಿಂದಲ್ಲ. ಹೃದಯದಲ್ಲಿರುವುದರಿಂದ ಎನ್ನುತ್ತಾನೆ. ಬಹಿರಂಗದಲ್ಲಿ ಏನಿಲ್ಲದಿದ್ದರೂ ಅಂತರಂಗದಲ್ಲಿ ಶ್ರೀಮಂತಿಗೆ ಬೆಳೆಸಿಕೊಂಡವರೇ ನಿಜವಾದ ಶರಣರು ಎಂದು ಹೇಳಿದರು.
ಧ್ವನಿಸುರುಳಿ ಬಿಡುಗಡೆ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಚನಧಾರೆ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿ, ಬಸವಣ್ಣನವರು ತಿಳಿಸಿದಂತೆ ಅಂಧಶ್ರದ್ಧೆ, ಮೌಢ್ಯತೆಗಳನ್ನು ಬಿಡುತ್ತಾ ಸಾತ್ವಿಕ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯ ಎಂದರು.
ಶರಣ ಸಾಹಿತ್ಯ ಸಂಸ್ಕೃತಿ ಕುರಿತು ಹೆಚ್ಚಿನ ವ್ಯಾಸಂಗಕ್ಕೆ ಆಸಕ್ತರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಸಮಿತಿಯವರು ಕೋರಿದ್ದಕ್ಕೆ ಆ ಬಗ್ಗೆ ಪರಿಶೀಲಿಸಿ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಶರಣರ ಬರವೆನಗೆ ಪ್ರಾಣ ಜೀವಾಳವಯ್ಯ ಎಂಬಂತೆ ಅತಿಥಿಗಳು ಹಾಗೂ ಪ್ರತಿನಿಧಿಗಳನ್ನು ಬರಮಾಡಿಕೊಂಡಿರುವ ಪರ್ತ್‌ನ ಬಸವ ಸಮಿತಿ ಅವರನ್ನು ಅಭಿನಂದಿಸಿದರು.
ಪರ್ತ್‌ನಲ್ಲಿ ಭಾರತ ಕಾನ್ಸೊಲೇಟ್ ಜನರಲ್ ಎಂ.ಸುಬ್ಬರಾಯುಡು ಸಮಾರೋಪ ಭಾಷಣ ಮಾಡಿ ಬಸವಣ್ಣನವರು ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಕರಾಗಿದ್ದರು. ಅವುಗಳ ಆಚರಣೆ ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು. ಜೆಎಸ್‌ಎಸ್ ವಿವಿ ಕುಲಪತಿ ಡಾ.ಬಿ.ಸುರೇಶ್ ಮಾತನಾಡಿ, ಆಧ್ಯಾತ್ಮ ಮತ್ತು ವಿಜ್ಞಾನ ಎರಡರ ಉದ್ದೇಶವೂ ಸತ್ಯದ ಅನ್ವೇಷಣೆಯಾಗಿದೆ ಎಂದು ತಿಳಿಸಿದರು.
ಪಶ್ಚಿಮ ಆಸ್ಟ್ರೇಲಿಯಾದ ಇಂಡಿಯನ್ ಸೊಸೈಟಿಯ ಅಧ್ಯಕ್ಷ ಮುಖೇಶ್ ಜೈನ್, ವೈದಿಕ ತರಬೇತಿ ಮತ್ತು ಸಾಂಸ್ಕೃತಿಕ ಸೇವೆಗಳ ಸಂಸ್ಥೆಯ ಅಧ್ಯಕ್ಷ ಶ್ರೀಪಾದಭಟ್, ಪಶ್ಚಿಮ ಆಸ್ಟ್ರೇಲಿಯಾದ ಕನ್ನಡ ಸಂಘದ ಅಧ್ಯಕ್ಷ ಸತ್ಯಜಿತ್ ಸುವರ್ಣ, ಬೆಂಗಳೂರಿನ ಶಿವಾನಂದ ಮಹಾಶೆಟ್ಟಿ, ನ್ಯೂಜಿಲೆಂಡ್ ಬಸವಸಮಿತಿ ಅಧ್ಯಕ್ಷ ಡಾ. ಲಿಂಗಪ್ಪ ಕಲಬುರ್ಗಿ, ಸಿಡ್ನಿಯ ಹೇಮಂತರಾಜು, ಮೆಲ್ಬೊರ್ನ್‌ನ ಸುನೀತಾ ಕೋರೆ ಮತ್ತು ರವಿಶಂಕರ್ ಮಾತನಾಡಿದರು.
ಮಕ್ಕಳೊಡನೆ ನಡೆದ ಸಂವಾದದಲ್ಲಿ ಆಲಮಟ್ಟಿ ರುದ್ರಮುನಿ ಸ್ವಾಮೀಜಿ ಹಾಗೂ ಚುಂಚನಹಳ್ಳಿ ಹಾಗೂ ನವಿಲೂರು ಮಠಗಳ ಚನ್ನಬಸವ ಸ್ವಾಮೀಜಿ ಪಾಲ್ಗೊಂಡು ಪ್ರಶ್ನೆಗಳಿಗೆ ಉತ್ತರಿಸಿದರು. ಮಕ್ಕಳ ವಚನಗಾಯನ ಹಾಗೂ ಕಿರುನಾಟಕ ನಡೆಯಿತು. ಆಸ್ಟ್ರೇಲಿಯಾ ಬಸವ ಸಮಿತಿ ಅಧ್ಯಕ್ಷ ಡಾ.ಜಗದೀಶ್ ಸ್ವಾಗತಿಸಿದರು.  ಕಾರ್ಯದರ್ಶಿ ನೀಲಾ ಗುಬ್ಬಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.