ಪ್ರಧಾನ ಸುದ್ದಿ

'ಕಬ್ಬು ಬೆಂಬಲಿ'ಸದಿದ್ದರೆ ಬೆಲೆ ತೆರಿ

Published On :

ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ ನೀಡುವ ಪ್ರಕ್ರಿಯೆ ಆರಂಭಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸರ್ಕಾರ ಇನ್ನೆರಡು ದಿನಗಳ ಕಾಲಾವಕಾಶ ನೀಡಿದ್ದು, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಮಾಲೀಕರು ಸರ್ಕಾರದ ಸೂಚನೆಗೆ ಬೆಲೆ ಕೊಡದೆ, ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ ಎಂಬ ನಿಲುವು ತಳೆದಿದ್ದಾರೆ. ಸರ್ಕಾರದ ಕಾನೂನು ಕ್ರಮ, ಜೈಲಿಗೆ ಕಳುಹಿಸುವ ಎಚ್ಚರಿಕೆಯಿಂದ ಸ್ವಲ್ಪ ತಣ್ಣಗಾದ ಸಕ್ಕರೆ ಕಾರ್ಖಾನೆ ಮಾಲೀಕರು ನಿರ್ಧಾರ ತಿಳಿಸಲು ವಾರ ಸಮಯ ಕೇಳಿದ್ದಾರೆ. ಆದರೆ ಸರ್ಕಾರ, ಇನ್ನೆರಡು ದಿನದಲ್ಲಿ ರೈತರಿಗೆ ಬಾಕಿ ಪಾವತಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ನೋಟಿಸ್ ಜಾರಿ ಮಾಡುವ ತಾಕೀತು ಮಾಡಿದೆ.
ಕಾರ್ಖಾನೆ ಮಾಲೀಕರೊಂದಿಗೆ ಸಕ್ಕರೆ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ನೇತೃತ್ವದಲ್ಲಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ  ಸೋಮವಾರ ದೀರ್ಘ ಮಾತುಕತೆ ನಡೆಸಿದರೂ, ಅಂತಿಮ ನಿರ್ಧಾರ ಸಾಧ್ಯವಾಗಿಲ್ಲ.
ವಿಕಾಸಸೌಧದಲ್ಲಿ ಸೋಮವಾರ ಸಂಜೆ ಎರಡು ತಾಸಿಗೂ ಅಧಿಕ ಸಮಯ ನಡೆದ ಸಭೆಯಲ್ಲಿ ಸರ್ಕಾರ ಪ್ರತಿ ಟನ್ ಕಬ್ಬಿಗೆ 2500 ನಿಗದಿ ಮಾಡಿದ್ದು, ಇದನ್ನು ಜಾರಿ ಮಾಡಬೇಕೆಂದು ಸಕ್ಕರೆ ಕಾರ್ಖಾನೆ ಮಾಲೀಕರನ್ನು  ಒತ್ತಾಯಿಸಲಾಯಿತು. ಕಾರ್ಖಾನೆ ಮಾಲೀಕರು, ಬೆಂಬಲ ಬೆಲೆಗೆ ಸಮ್ಮತಿಸಲಿಲ್ಲ. ಅಂತಿಮವಾಗಿ ತಮ್ಮ ನಿರ್ಧಾರ ತಿಳಿಸಲು ಒಂದು ವಾರದ ಸಮಯ ಕೇಳಿದರು.
ಪ್ರಕಾಶ್ ಹುಕ್ಕೇರಿ: ಸರ್ಕಾರ ಹಾಗೂ ಹೈಕೋರ್ಟ್ ನೀಡಿರುವ ಸೂಚನೆಯಂತೆ ಬೆಂಬಲ ಬೆಲೆ ನೀಡಲೇಬೇಕು. ಸಿಎಂ ಸಲಹೆ ಮೇರೆಗೆ ಸಭೆ ನಡೆಸಿದ್ದು, ದರದಲ್ಲಿ ಯಾವುದೇ ರೀತಿ ಚೌಕಾಸಿ ಇಲ್ಲ.
ಟಿ.ಬಿ. ಜಯಚಂದ: ಸರ್ಕಾರದ 150 ಪ್ರೋತ್ಸಾಹ ಧನ ಸೇರಿ ಪ್ರತಿ ಟನ್‌ಗೆ 2650 ನೀಡಲು ಸರ್ಕಾರ ಬದ್ಧ. ಸರ್ಕಾರದ ಪ್ರೋತ್ಸಾಹ ಧನದ ಬಾಬ್ತು 350 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಉಳಿದ 150 ಕೋಟಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ.
ಸಕ್ಕರೆ ಕಾರ್ಖಾನೆ ಮಾಲೀಕರು 3, 391.17 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಮುಂದಿನ ಎರಡು ದಿನದಲ್ಲಿ ಈ ಹಣವನ್ನು ಬಿಡುಗಡೆ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟರೆ ಸರ್ಕಾರದ ಮುಂದೆ ಬೇರೆ ಮಾರ್ಗವೇ ಉಳಿಯುವುದಿಲ್ಲ. ಕರ್ನಾಟಕ ರಾಜ್ಯ ಕಬ್ಬು ಖರೀದಿ ಮತ್ತು ವಿತರಣೆ ನಿಯಂತ್ರಣ ಮಂಡಳಿ ಕಾಯಿದೆ 2013 ಮತ್ತು ಸಕ್ಕರೆ ನಿಯಂತ್ರಣ ಕಾಯಿದೆ 1967ರಂತೆ ಕ್ರಿಮಿನಲ್ ಪ್ರಕರಣ ದಾಖಲಿಸಬಹುದಾಗಿದೆ.
ಕೃಷ್ಣ ಬೈರೇಗೌಡ: ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಲೆವಿ ಪಡೆಯುವುದನ್ನು ನಿಲ್ಲಿಸಿದೆ. ಅಲ್ಲದೆ ತೆರಿಗೆ ವಿನಾಯಿತಿಯನ್ನೂ ನೀಡಿದ್ದು, ಮಾರುಕಟ್ಟೆ ದರದಲ್ಲಿ ಸಕ್ಕರೆ ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರ ಮೂರು ವರ್ಷದ ಅವಧಿಗೆ ಈ ಕಾರ್ಖಾನೆಗಳಿಗೆ 1,067 ಕೋಟಿ ಸಾಲ ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿ ಟನ್ ಕಬ್ಬಿಗೆ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ 26ರಿಂದ 31ಕ್ಕೆ ಹೆಚ್ಚಾಗಿದೆ. ಇಷ್ಟೆಲ್ಲ ಅನುಕೂಲ ಪಡೆದರೂ ಸಕ್ಕರೆ ಕಾರ್ಖಾನೆ ಮಾಲೀಕರು ಬೆಂಬಲ ಬೆಲೆ ನೀಡಲು ಹಿಂದೆ ಸರಿಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.