ಪ್ರಧಾನ ಸುದ್ದಿ

ಉಚ್ಚಂಗಿಪುರಕ್ಕೆ ಫ್ಲೋರೈಡ್ ಗಂಡಾಂತರ

ಉಚ್ಚಂಗಿಪುರಕ್ಕೆ ಫ್ಲೋರೈಡ್ ಗಂಡಾಂತರ
Published On :

ದಾವಣಗೆರೆ: ಕೈಕಾಲು ಗಟ್ಟಿ ಇದ್ದವರು ಕೆಲಸಕ್ಕಾಗಿ ಕಾಫಿ ಸೀಮೆಗೆ ಗುಳೆ ಹೋಗಿದ್ದಾರೆ. ಊರಲ್ಲುಳಿದವರಲ್ಲಿ ಶೇ.25ಕ್ಕಿಂತ ಹೆಚ್ಚು ಮಂದಿ ಅಂಗವೈಕಲ್ಯ ಮತ್ತಿತರ ದೈಹಿಕ ಸಮಸ್ಯೆಗೆ ತುತ್ತಾದವರು!
ಹೌದು. ಪದೇ ಪದೆ ಬರಗಾಲಕ್ಕೆ ತುತ್ತಾಗುತ್ತಿರುವ ಜಗಳೂರು ತಾಲೂಕಿನ ಉಚ್ಚಂಗಿಪುರ (ಹೊಸದುರ್ಗ ಕೋಟೆ) ಊರಿನ ಕಥೆ. ಫ್ಲೋರೈಡ್ ಸೇರಿದಂತೆ ಲವಣಾಂಶಯುಕ್ತ ಕಲುಷಿತ ನೀರನ್ನೇ ಕುಡಿದು, ಸಂಕಷ್ಟಕ್ಕೆ ಸಿಲುಕಿರುವ ಈ ಊರಿನ ಮಂದಿ ಹಲವು ವರ್ಷಗಳಿಂದ ಶುದ್ಧ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕೃಷಿಯೇ ಆಧಾರ: ಪರಿಶಿಷ್ಟರು, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ವರ್ಗದ ಜನರನ್ನು  ಹೊಂದಿರುವ ಗ್ರಾಮಕ್ಕೆ ಕೃಷಿಯೇ ಮೂಲಾಧಾರ. ಮಳೆಯಾಶ್ರಿತ ಪ್ರದೇಶವಾದ ಉಚ್ಚಂಗಿಪುರ ದಿದ್ದಿಗೆ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತದೆ. 2 ಸಾವಿರ ಜನಸಂಖ್ಯೆಯ ಈ ಊರಿನ ಶೇ.50 ಮಂದಿ ಪ್ರತಿವರ್ಷ ಘಟ್ಟ ಪ್ರದೇಶ, ಮಲೆನಾಡಿಗೆ ಕೆಲಸಕ್ಕೆ ಗುಳೆ ಹೋಗುತ್ತಾರೆ.
ಮಕ್ಕಳ ನೋಡಿಕೊಳ್ಳಲು ವೃದ್ಧರು, ಅಂಗವಿಕಲರ  ಬಿಟ್ಟು ಹೋಗುತ್ತಾರೆ. ದಶಕಗಳಿಂದ ಫ್ಲೋರೈಡ್ ನೀರು ತೀವ್ರವಾಗಿ ಕಾಡುತ್ತಿದೆ.
ಅಪಾಯಕಾರಿ: ಫ್ಲೋರೈಡ್ ಅಂಶ ಪ್ರತಿ ಲೀಟರ್ ನೀರಿನಲ್ಲಿ 0.8 ಮಿಲಿ ಗ್ರಾಂ.ನಿಂದ 1.5 ಮಿ.ಗ್ರಾಂ. ಇದ್ದರೆ ಅಪಾಯವಿಲ್ಲ. ಈ ಅಂಶ 1.5 ಮಿ.ಗ್ರಾಂ.ಗಿಂತ ಹೆಚ್ಚಾದರೆ ಜನರ ಆರೋಗ್ಯಕ್ಕೆ ಅಪಾಯಕಾರಿ. ಉಚ್ಚಂಗಿಪುರದ ಎಲ್ಲ 6 ಕೊಳವೆ ಬಾವಿಗಳಲ್ಲೂ ಫ್ಲೋರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಈ ನೀರನ್ನೇ ಕುಡಿಯಲು ಬಳಸುವ ಗ್ರಾಮಸ್ಥರು ಮೂಳೆ ಹಾಗೂ ಹಲ್ಲಿನ ಪ್ಲೋರೈಸಿಸ್ನಂಥ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಸ್ಕೆಲಿಟಲ್ ಫ್ಲೋರೈಸಿಸ್ ನಿಂದಾಗಿ ಮೂಳೆಗಳ ಶಕ್ತಿ ಕಳೆದುಬೆಂಡಾಗುವುದು, ಬೆನ್ನು ಬಾಗುವುದು, ಕೈ- ಕಾಲು ಸೊಟ್ಟಗಾಗುವುದು, ಹಲ್ಲು ಹುಳುಕಾಗುವ, ಹಳದಿ ಕಟ್ಟುವ ಸಮಸ್ಯೆ ಇಲ್ಲಿ ಸಾಮಾನ್ಯ.
ಅಂಗವೈಕಲ್ಯ: ಕಲುಷಿತ ನೀರಿನಿಂದಾಗಿ ನೂರಾರು ಮಂದಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಪ್ರತಿ 1- 2 ಮನೆಗಳಲ್ಲಿ ಒಬ್ಬರು ಅಂಗವಿಕಲರು, ದೈಹಿಕ ಸಮಸ್ಯೆಗೆ ತುತ್ತಾದವರು ಸಿಗುತ್ತಾರೆ. ಅಕಾಲಿಕ ಮುಪ್ಪು ಆವರಿಸಿದವರೂ ಇದ್ದಾರೆ.
ಗ್ರಾಮದಲ್ಲಿ 800- 900 ಮನೆಗಳಿದ್ದು, ಸುಮಾರು 4 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮ. ಇಡೀ ಗ್ರಾಮಕ್ಕೆ ನೀರು ಪೂರೈಸಲು ಇರುವುದು ಕೇವಲ 6 ಕೊಳವೆ ಬಾವಿ. ಎಲ್ಲ ಕೊಳವೆ ಬಾವಿಯಲ್ಲೂ ಫ್ಲೋರೈಡ್ ಸೇರಿದಂತೆ ಲವಣಾಂಶಯುಕ್ತ ನೀರಿನಿಂದಾಗಿ ಜನ ಕಂಗಾಲಾಗಿದ್ದಾರೆ. ಈಗಾಗಲೇ ಗ್ರಾಮದಲ್ಲಿ, ಅಕ್ಕ ಪಕ್ಕದಲ್ಲಿ ಕೊರೆಸಿದ್ದ ಸುಮಾರು 30- 40 ಕೊಳವೆ ಬಾವಿ ಕೈಕೊಟ್ಟಿದ್ದು, ಇರುವ ಫ್ಲೋರೈಡ್ ನೀರಿನ ಕೊಳವೆ ಬಾವಿಗಳೇ ಜನ, ಜಾನುವಾರಿಗೆ ಆಸರೆ.
ಗ್ರಾಮಕ್ಕೆ ಶಾಪ: ಕೇವಲ 8 ವರ್ಷದ ಬಾಲಕನೊಬ್ಬನ ದೇಹದ ಹಿಂಭಾಗ ವಕ್ರವಾಗಿದ್ದು, ಆತ ಶಾಶ್ವತ ಅಂಗವಿಕಲನಾಗಿದ್ದಾನೆ. ಫ್ಲೋರೈಡ್ಯುಕ್ತ ನೀರು ಇಡೀ ಗ್ರಾಮವನ್ನು ಶಾಪವಾಗಿ ಕಾಡುತ್ತಿದೆ. ದಿದ್ದಿಗೆ ಗ್ರಾಪಂ ಉಚ್ಚಂಗಿಪುರ ನೀರನ್ನು ಪರೀಕ್ಷೆ ಮಾಡಿಸಿದ್ದು, ನೀರಿನಲ್ಲಿ ಅಪಾಯಕಾರಿ ಮಟ್ಟವನ್ನೂ ಮೀರಿದ ಫ್ಲೋರೈಡ್ಯುಕ್ತ ನೀರು ಇರುವುದು ದೃಢಪಟ್ಟಿದೆ.




ಅತ್ತ ಸೊಕ್ಕೆ, ಇತ್ತ ಬಿಳಿಚೋಡು
ಉಚ್ಚಂಗಿಪುರ ಗ್ರಾಮಸ್ಥರು ಜಿಪಂ ಚುನಾವಣೆಯಲ್ಲಿ ಸೊಕ್ಕೆ ಹೋಬಳಿಯಲ್ಲಿ ಮತ ಚಲಾಯಿಸುತ್ತಾರೆ. ಸರ್ಕಾರಿ ಕಾರ್ಯಕ್ರಮ ನಡೆಸುವುದು ಮಾತ್ರ ಬಿಳಿಚೋಡು ಹೋಬಳಿಯಿಂದ. ತಾವು ಮತ ನೀಡಿದ ವ್ಯಕ್ತಿಯನ್ನು ಕೇಳಬೇಕೋ, ಕಾರ್ಯಕ್ರಮ ನಡೆಸುವ ಜನಪ್ರತಿನಿಧಿಯನ್ನು ಕೇಳಬೇಕೋ ಎಂಬ ಗೊಂದಲವಿದೆ. ಒಟ್ಟಾರೆ, ಇಲ್ಲಿಗೆ ಅಂಗವಿಕಲರ ಗ್ರಾಮ ಎಂಬ ಹಣೆಪಟ್ಟಿ ಶಾಶ್ವತವಾಗಿ ಬೀಳುವ ಮುನ್ನ ಇಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಹಾಡಬೇಕಿದೆ.

ನಾಗರಾಜ ಎಸ್. ಬಡದಾಳ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.