ಇನ್ನು ಪಡಿತರ ಚೀಟ್ ತಡೆಗೆ ಎಪಿಕ್ ಆಧಾರ

-ಅರ್ಜಿ ಸಲ್ಲಿಸಿದವರು, ನವೀಕರಣಕ್ಕೆ ಐಡಿ ಸಲ್ಲಿಕೆಗೆ ಜೂ.30 ಕೊನೆ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಮೇ 7
ಇನ್ನು ಪಡಿತರ ಚೀಟಿ ಬೇಕಿದ್ದರೆ ಮತದಾರರ ಗುರುತಿನ ಚೀಟಿ ಕಡ್ಡಾಯ!
ನಕಲಿ ಪಡಿತರ ಚೀಟಿ ತಡೆಗಟ್ಟಲು ಮತ್ತು ಆಯಾ ಮತಗಟ್ಟೆ ವ್ಯಾಪ್ತಿಯವರಿಗೆ ಆಯಾ ಪ್ರದೇಶದಲ್ಲೇ ಪಡಿತರ ವಿತರಿಸುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಎಪಿಕ್ ಸಂಖ್ಯೆಯನ್ನು ಎಸ್ಎಂಎಸ್ ಅಥವಾ ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿ ಇಲಾಖೆ ಕಚೇರಿಗೆ ಸಲ್ಲಿಸಬಹುದು. ಹೊಸ ಅರ್ಜಿ ಹಾಗೂ ನವೀಕರಣಕ್ಕೆ ಆಧಾರ್ ಸಂಖ್ಯೆಯನ್ನು ಎಸ್ಸೆಮ್ಮೆಸ್ ಮಾಡಿದರೆ ಬೆರಳಚ್ಚು, ಭಾವಚಿತ್ರ ನೀಡುವ ಅಗತ್ಯ ಇರುವುದಿಲ್ಲ.
2010ಕ್ಕೆ ಮೊದಲು ವಿತರಿಸಿದ ಚೀಟಿಗಳಿಗೆ ಭಾವಚಿತ್ರ ಮತ್ತು ಬೆರಳಚ್ಚು ನೀಡಿ ನವೀಕರಿಸಿಕೊಳ್ಳಲು ಜೂನ್ 30 ಅಂತಿಮ ದಿನ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಜ್ಯದಲ್ಲಿ 1.30 ಕೋಟಿ ಪಡಿತರ ಚೀಟಿಗಳಿವೆ. ಇದರಲ್ಲಿ 25 ಲಕ್ಷ ಬಿಪಿಎಲ್ ಹಾಗೂ 15 ಲಕ್ಷ ಎಪಿಎಲ್ ಕಾರ್ಡ್ದಾರರು ನವೀಕರಿಸಿಲ್ಲ. ಹೊಸ 35 ಲಕ್ಷ ಅರ್ಜಿ ಬಂದಿದ್ದು, 9.5 ಲಕ್ಷ ಕಾರ್ಡ್ ವಿತರಿಸಲಾಗಿದೆ. 4.5 ಲಕ್ಷ ಕಾರ್ಡ್ ಸಿದ್ಧವಾಗಿವೆ. ಎಪಿಕ್ ಸಂಖ್ಯೆ ನೀಡಿದರೆ ಅವುಗಳನ್ನೂ ಕೂಡಲೇ ವಿತರಿಸಲಾಗುತ್ತದೆ. ಮಾಹಿತಿ ಇಂದಿನಿಂದಲೇ ಕಳುಹಿಸಬೇಕು. ನವೀಕರಿಸಿದ ಹಾಗೂ ಹೊಸ ಕಾರ್ಡ್ಗಳನ್ನು ಜೂನ್ 1ರಿಂದ ವಿತರಿಸಲಾಗುತ್ತದೆ.
ಎಪಿಕ್ ಮಾಹಿತಿ, ಚುನಾವಣೆ ಆಯೋಗದ ಮಾಹಿತಿ ಜತೆ ತಾಳೆ ನೋಡಿ ಸರಿ ಇದ್ದರಷ್ಟೇ ಪರಿಗಣಿಸಲಾಗುತ್ತದೆ. ಮತಗಟ್ಟೆ ಆಧಾರದಲ್ಲಿ ರೇಷನ್ ಅಂಗಡಿಯನ್ನೂ ನಿಗದಿಪಡಿಸಲಾಗುತ್ತದೆ ಎಂದರು.
ಜೂನ್ 1ರಿಂದ ಪಡಿತರ ಚೀಟಿಗಾಗಿ ಅರ್ಜಿ ನೀಡಲಾಗುತ್ತದೆ. ಈ ಅರ್ಜಿಗಳು ಹೊಸ ರೂಪದಲ್ಲಿದ್ದು, ಎಪಿಕ್, ಆಧಾರ್ ಕಾರ್ಡ್ ಸಂಖ್ಯೆ, ಪಿನ್ಕೋಡ್ ಕಡ್ಡಾಯ. ಶಾಶ್ವತ ಹಾಗೂ ಪ್ರಸ್ತುತ ವಿಳಾಸವನ್ನೂ ನಮೂದಿಸಬೇಕು. ಈ ಅರ್ಜಿಗಳನ್ನು ಪರಿಷ್ಕರಿಸಿ ಅವರ ಮನೆಗೇ ಪಡಿತರ ಚೀಟಿ ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಮಾಹಿತಿ ಕೊಡೋದು ಹೇಗೆ?
- ಚಾಲ್ತಿ ಪಡಿತರ ಚೀಟಿದಾರರು ತಮ್ಮ ಮೊಬೈಲ್ ಸಂಖ್ಯೆಯಿಂದ RCMOBಎಂದು ಟೈಪ್ ಮಾಡಿ ಸ್ಪೇಸ್ಬಿಟ್ಟು ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ 9212357123ಗೆ ಎಸ್ಎಂಎಸ್ ಕಳುಹಿಸಿ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಸಿಕೊಳ್ಳಬೇಕು.
- ಕಾರ್ಡ್ಗಾಗಿ ಅರ್ಜಿ ಸಲ್ಲಿಸಿರುವವರು RCMOB ಎಂದು ಟೈಪ್ ಮಾಡಿ ಸ್ಪೇಸ್ಬಿಟ್ಟು ಅರ್ಜಿ ಸಂಖ್ಯೆಯನ್ನು ನಮೂದಿಸಿ 9212357123ಗೆ ಎಸ್ಎಂಎಸ್ ಕಳುಹಿಸಬೇಕು.
- ಮೊಬೈಲ್ ಮೂಲಕ ರೇಷನ್ಕಾರ್ಡ್ ಅಥವಾ ಅರ್ಜಿ ಸಂಖ್ಯೆಯನ್ನು ಎಸ್ಎಂಎಸ್ ಕಳುಹಿಸಿದ ಮೇಲೆ, ಅದೇ ಮೊಬೈಲ್ ಸಂಖ್ಯೆಯಿಂದ RCEPI ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ಎಪಿಕ್ ಸಂಖ್ಯೆಯನ್ನು ನಮೂದಿಸಿ 9212357123ಗೆ ಎಸ್ಎಂಎಸ್ ಕಳುಹಿಸಬೇಕು.
- ಕುಟುಂಬದ ಎಲ್ಲ ಸದಸ್ಯರ ಎಪಿಕ್ ಸಂಖ್ಯೆಯನ್ನು ಒಂದೊಂದಾಗಿ ಕಳುಹಿಸಬೇಕು.
- ಆಧಾರ್ ಕಾರ್ಡ್ ಸಂಖ್ಯೆಯನ್ನು ಇದೇ ಮೊಬೈಲ್ ಸಂಖ್ಯೆಯಿಂದ RCUID ಎಂದು ಟೈಪ್ ಮಾಡಿ, ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ 9212357123ಗೆ ಎಸ್ಎಂಎಸ್ ಕಳುಹಿಸಬೇಕು.
- ಮೊಬೈಲ್ನಲ್ಲಿ ಮಾಹಿತಿ ಕಳುಹಿಸಲು ಸಾಧ್ಯವಾಗದವರು ಈ ವಿವರಗಳನ್ನು ನಾಡಕಚೇರಿ ಅಥವಾ ಇಲಾಖೆಯ ಕಚೇರಿಗೆ ಹೋಗಿ ತಲುಪಿಸಬಹುದು.
- ಹೆಚ್ಚಿನ ಮಾಹಿತಿಗೆ 1967 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


