ಮತ್ತೊಮ್ಮೆ ವಕ್ಕರಿಸಿದ ಮಹಿಕೋ ಭೂತ

ಸರ್ಕಾರದ ನಿಷೇಧಕ್ಕೆ ಕೋರ್ಟ್ ತಡೆಯಾಜ್ಞೆ ತಂದ ಕಂಪನಿ
ಬೀಜ ಮಾರಾಟಕ್ಕೆ ನಿಷೇಧ ಹೇರಿದ್ದು ಚುನಾವಣೆ ಗಿಮಿಕ್?
ಹಾವೇರಿ: ರಾಜ್ಯದಲ್ಲಿ 2013ರ ಮುಂಗಾರು ಹಂಗಾಮಿನಲ್ಲಿ ಮಹಿಕೋ ಕಂಪನಿಯ ಕನಕ ಹಾಗೂ ನಿಕ್ಕಿ ಪ್ಲಸ್ ಬಿಟಿ ಹತ್ತಿ ತಳಿಯ ಬೆಳೆಗಳು ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರ ಮಹಿಕೋ ಕಂಪನಿಯ ಎಲ್ಲ ಬಿಟಿ ಹತ್ತಿ ತಳಿಗಳ ಬೀಜ ಮಾರಾಟಕ್ಕೆ ನಿಷೇಧ ಹೇರಿತ್ತು. ಆದರೆ, ಸರ್ಕಾರದ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದ್ದರಿಂದ ಮಾರುಕಟ್ಟೆಗೆ ಮಹಿಕೋ ಕಂಪನಿ ಬಿಟಿ ಭೂತ ಮತ್ತೆ ವಕ್ಕರಿಸಿದೆ.
ಲೋಕಸಭೆ ಚುನಾವಣೆಗೆ ಕೆಲವೇ ದಿನ ಇದ್ದಾಗ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸಿ ಮಹಿಕೋ ಕಂಪನಿ ಬಿಟಿ ಹತ್ತಿ ತಳಿಗಳನ್ನು ನಿಷೇಧಿಸಿತ್ತು. ರೈತರ ಮತಗಳ ಮೇಲೆ ಕಣ್ಣಿಟ್ಟು ಸರ್ಕಾರ ಈ ಆದೇಶ ಹೊರಡಿಸಿದೆ ಎಂಬ ಆರೋಪ ಈಗ ನಿಜವಾಗುತ್ತಿದೆ. ತರಾತುರಿಯಲ್ಲಿ ಮಹಿಕೋ ಕಂಪನಿ ಬೀಜ ಮಾರಟಕ್ಕೆ ನಿಷೇಧ ಆದೇಶ ಹೊರಡಿಸಿ, ಈಗ ಸುಮ್ಮನಿರುವುದನ್ನು ಗಮನಿಸಿದರೆ ನಿಷೇಧದ ಹಿಂದಿನ ಮರ್ಮ ಅರಿವಾಗುತ್ತದೆ. ಸರ್ಕಾರದ ಆದೇಶಕ್ಕೆ ಮಹಿಕೋ ಕಂಪನಿ ತಡೆಯಾಜ್ಞೆ ತಂದಿದ್ದು, ತನ್ನ ಉತ್ಪನ್ನಗಳಾದ ಕನಕ, ನಿಕ್ಕಿ ಪ್ಲಸ್ ತಳಿಗಳ ಹತ್ತಿ ಬೀಜಗಳನ್ನು ಮಾರಾಟ ಮಾಡುತ್ತಿದೆ. ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಜಿಲ್ಲೆಯ ಎಲ್ಲ ಕಡೆ ಮಹಿಕೋ ಕಂಪನಿ ಬೀಜ ಮಾರಾಟಕ್ಕೆ ಸಿದ್ಧವಾಗಿದೆ.
ರೈತರ ಹೋರಾಟ: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಬಂದರೂ ಕಳಪೆ ಬೀಜದಿಂದ ಉತ್ತಮ ಬೆಳೆ ಬಾರದೆ ರೈತರು ಸಂಕಷ್ಟಕ್ಕೀಡಾಗಿದ್ದರು. ಬೆಳೆ ಹಾನಿಗೊಳಗಾದ ಜಿಲ್ಲೆಗಳ ರೈತರ ಹೋರಾಟ ತೀವ್ರಗೊಂಡ ಮೇಲೆ ಸಮೀಕ್ಷೆಗೆ ಸರ್ಕಾರ ಮುಂದಾಯಿತು. ಹೆಕ್ಟೇರಿಗೆ ರು. 4,500 ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತು. ಆದರೆ, ರೈತರ ಪ್ರತಿಭಟನೆ ಹೆಚ್ಚಿದ್ದರಿಂದ ಅದು ರು. 6 ಸಾವಿರಕ್ಕೇರಿತು. ಈ ನಡುವೆ ರಾಣಿಬೆನ್ನೂರಿನಲ್ಲಿ ಮಹಿಕೋ ಕಂಪನಿ ಬೀಜ ಕೇಂದ್ರದ ಮೇಲೆ ರೈತರು ದಾಳಿ ನಡೆಸಿದ್ದರು. ಮಹಿಕೋ ಕಂಪನಿ ನಿಷೇಧಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಆದರೆ, ಈ ಬಗ್ಗೆ ಯಾವುದೇ ನಿಲುವು ಪ್ರಕಟಿಸದ ಸರ್ಕಾರ, ಚುನಾವಣೆಗೆ ಕೆಲವೇ ದಿನವಿರುವಾಗ ಮಹಿಕೋ ಕಂಪನಿ ಬಿಟಿ ಹತ್ತಿ ಬೀಜ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿತ್ತು.
ಸರ್ಕಾರದ ಮೌನವೇಕೆ?
ಮಹಿಕೋ ಕಂಪನಿ ಬಿಟಿ ಹತ್ತಿ ತಳಿ ಬೀಜ ಮಾರಾಟ ನಿಷೇಧಿಸಿದ್ದಕ್ಕೆ ರೈತರು ಸಂತಸಗೊಂಡಿದ್ದರು. ಆದರೆ, ಸರ್ಕಾರಕ್ಕೆ ಕಂಪನಿ ಉತ್ಪನ್ನ ನಿಷೇಧಿಸುವ ಅಧಿಕಾರವಿಲ್ಲ ಎಂದು ತಿಳಿಸಿ ಕಂಪನಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ. ಮತ್ತೆ ಕಂಪನಿಯ ಕನಕ, ನಿಕ್ಕಿಪ್ಲಸ್ ತಳಿ ಮಾರಾಟ ನಿರಾತಂಕವಾಗಿ ನಡೆದಿದೆ. ಆದರೆ ಸರ್ಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿದ್ದು, ತಡೆಯಾಜ್ಞೆ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಮುಖಂಡ ಶಿವಾನಂದ ಗುರುಮಠ ಆರೋಪಿಸಿದರು.
ರೈತರೇನು ಮಾಡಬೇಕು?
ಹಿಂದಿನ ವರ್ಷ ಆಗಿರುವ ಕಹಿ ಅನುಭವವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಮುಂಗಾರಿನಲ್ಲಿ ರೈತರು ಎಚ್ಚರಿಕೆ ಹೆಜ್ಜೆ ಇಡುವ ಅಗತ್ಯವಿದೆ. ಈ ಕುರಿತು ಜಂಟಿ ಕೃಷಿ ನಿರ್ದೇಶಕ ಗಣೇಶ ನಾಯಕ ಅವರನ್ನು ಕೇಳಿದಾಗ, ಮಹಿಕೋ ಕಂಪನಿ ಬಿಟಿ ತಳಿ ಮಾರಾಟಕ್ಕೆ ಸದ್ಯ ಯಾವುದೇ ತೊಂದರೆಯಿಲ್ಲ. ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ಹತ್ತಿ ಬೀಜಗಳು ಲಭ್ಯವಿದ್ದು, ರೈತರು ಯೋಚಿಸಿ, ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು. ಖರೀದಿಸಿದ ಬೀಜಕ್ಕೆ ರಸೀದಿ ಪಡೆಯುವಾಗ ಲಾಟ್ ಹಾಗೂ ಬ್ಯಾಚ್ ಸಂಖ್ಯೆ ನಮೂದಿಸಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಬೀಜದ ಪ್ಯಾಕೆಟ್ಗಳನ್ನು ಇಟ್ಟುಕೊಳ್ಳುವುದು ಸೂಕ್ತ ಎಂದು ರೈತರಿಗೆ ಸಲಹೆ ನೀಡಿದ್ದಾರೆ.
55000 ಹೆಕ್ಟೇರ್ ಹಾನಿ
ದಾವಣಗೆರೆ, ಬೆಳಗಾವಿ, ಧಾರವಾಡ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಮಹಿಕೋ ಕಂಪನಿ ನೀಡಿದ ಕಳಪೆ ಬಿಟಿ ಹತ್ತಿ ಬೀಜ ಬಿತ್ತಿ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಹಾವೇರಿ ಜಿಲ್ಲೆಯಲ್ಲಿ ಗರಿಷ್ಠ 22,628 ಹೆಕ್ಟೇರ್ ಪ್ರದೇಶದ ಹತ್ತಿ ಕಳಪೆಯಾಗಿ, 7 ತಾಲೂಕುಗಳ 593 ಗ್ರಾಮಗಳಲ್ಲಿ 25,122 ರೈತರಿಗೆ ನಷ್ಟವಾಗಿತ್ತು. ಇದರಲ್ಲಿ ಕನಕ ಬಿಟಿ 21708 ಹೆಕ್ಟೇರ್, ನಿಕ್ಕಿ ಪ್ಲಸ್ 1978 ಹೆಕ್ಟೇರ್, ಜಾಕ್ಪಾಟ್ ಹತ್ತಿ ಬೀಜ ಬಿತ್ತಿದ 704 ಹೆಕ್ಟೇರ್ ಪ್ರದೇಶಲ್ಲಿ ಬೆಳೆ ಹಾನಿಯಾಗಿತ್ತು.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


